ಬೊಗಳೆ ರಗಳೆ

header ads

ಬ್ರೇಕಿಂಗ್: ಬಂದ್‌ನಿಂದಾಗಿ ತಮಿಳುಕಾಡಿಗೆ ಹೆಚ್ಚು ಹರಿದ ಕಾವೇರಿ!


[ಧಾssssssssssರಾವಾಹಿ ಪ್ರಸಾರ ಬ್ಯುರೋದಿಂದ]
ಬೊಗಳೂರು, ಅ.8- ಮೊನ್ನೆ ಬೆಂಗಳೂರು ಬಂದ್ ಮಾಡಿದ್ದರಿಂದ ಏನೂ ಪ್ರಯೋಜನವಾಗಿಲ್ಲ, ಆದರೆ ಇಡೀ ಕರ್ನಾಟಕವನ್ನೇ ಬಂದ್ ಮಾಡಿದ ಪರಿಣಾಮವಾಗಿ ಬೊಗಳೂರು ಇರುವ ತಮಿಳುನಾಡಿಗೆ ಭಾರೀ ಪ್ರಮಾಣದಲ್ಲಿ ಕಾವೇರಿ ನೀರು ಹರಿದಿದೆ.

ಭಾರೀ ಬರದ ಭರಾಟೆಯ ನಡುವೆಯೂ ತಮಿಳುನಾಡಿಗೆ ಹೆಚ್ಚು ನೀರು ಹರಿಯಲು ಕಾರಣವೇನೆಂಬುದನ್ನು ಬೊಗಳೆ ಬ್ಯುರೋ ಮೊನ್ನೆಯಷ್ಟೇ ಬಿತ್ತರಿಸಿ ವಿಶ್ವಾದ್ಯಂತ ಹರಡಿಕೊಂಡಿರುವ ಕೋಟ್ಯಂತರ ಲಕ್ಷಾಂತರ ಮಂದಿಯಲ್ಲಿ ಒಂದೆರಡು ಓದುಗರಲ್ಲಿ ಆಕ್ರೋಶವನ್ನೂ ಮೂಡಿಸಿತ್ತು.

ಈಗ ಮತ್ತೊಂದು ನಿಜವಾದ ಬ್ರೇಕಿಂಗ್ ನ್ಯೂಸ್ ದೊರೆತಿದೆ. ಶನಿವಾರ ನಡೆಸಿದ ಕರ್ನಾಟಕ ಬಂದ್‌ನಿಂದಾಗಿ ತಮಿಳುನಾಡಿಗೆ ಹೆಚ್ಚು ಹೆಚ್ಚು ನೀರು ಪ್ರವಾಹದೋಪಾದಿಯಲ್ಲಿ ಹರಿದಿದೆ.

ಇದಕ್ಕೆ ಕಾರಣವೆಂದರೆ, ಕೇಬಲ್ ಮಾಲೀಕರು ಮನರಂಜನಾ ಚಾನೆಲ್‌ಗಳನ್ನು ಬಂದ್ ಮಾಡಿರುವುದು. ಮನೆಯಲ್ಲಿ ಧಾರಾವಾಹಿಗಳಿಗಾಗಿಯೇ ತಮ್ಮೆಲ್ಲಾ ಕಣ್ಣೀರನ್ನು ಕಟ್ಟಿಟ್ಟುಕೊಂಡು ಕುಳಿತಿದ್ದ ನಾರೀಮಣಿಯರು, ಮನರಂಜನಾ ಚಾನೆಲುಗಳು ಬಂದ್ ಆಗಿದ್ದರಿಂದಾಗಿ ಧಾರಾವಾಹಿಯಿಲ್ಲದೆ ಕಂಗಾಲಾಗಿದ್ದರು.

ಅವರು ಧಾರಾವಾಹಿಯಲ್ಲಿ ಬರುವ ಸನ್ನಿವೇಶಗಳಿಗಾಗಿ ಕಣ್ಣಲ್ಲಿ ಕಟ್ಟಿಟ್ಟುಕೊಂಡ ನೀರನ್ನೆಲ್ಲಾ, ಧಾರಾವಾಹಿಗಳು ಇಲ್ಲದಂತೆ ಮಾಡಿದ ಜಯಲಲಿತಾಗೆ ಹಿಡಿಶಾಪ ಹಾಕುತ್ತಾ, ಕಾವೇರಿಗಾಗಿ ಹರಿಸಿಯೇಬಿಟ್ಟರು. ಅವರ ಕನ್ನಂಬಾಡಿ ಕಟ್ಟೆ ಒಡೆದು ಭಾರೀ ಪ್ರಮಾಣದಲ್ಲಿ ಬೊಗಳೂರಿಗೆ ನೀರು ಹರಿಯಿತು. ತಾನೀಗ ಫುಲ್ ಖುಷ್ ಆಗಿರುವುದಾಗಿ ಸ್ವತಃ ಜಯಲಲಿತಾ ಅವರೇ ಫೋನ್ ಮಾಡಿ ಬೊಗಳೆ ರಗಳೆ ಬ್ಯುರೋಗೆ ತಿಳಿಸಿ, ಅಭಿನಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

  1. ಅಲ್ಲಾ,(ಓ ಖುದಾ!)ಯಾರ್ಯಾರ ಕಣ್ಣೀರೆಲ್ಲಾ ಹರಿದು ಕಾವೇರಿಯನ್ನು ತುಂಬಿಸ್ತಾ ಇದೆಯಲ್ಲ! ಇದನ್ನೆಲ್ಲಾ ನಮ್ಮ ನಜರಿಗೆ ತರುತ್ತಿರುವ ನಿಮಗೆ ಧನ್ಯವಾದಗಳು. ಆದರೆ, ಜೋಕೆ! ಜಯಲೊಲಿಟಾ ಅವರ ‘ಬುರೀ ನಜರ’ ಬಿದ್ದೀತು!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D