[ನಿರಂತರ ಹಗರಣ ನಿರತ ಬ್ಯುರೋದಿಂದ]
ಬೊಗಳೂರು, ಅ.10- ಕೇಂದ್ರ ಸರಕಾರದ ಮತ್ತೊಂದು ಹಗರಣ ಬಯಲಿಗೆ ಬಂದಿದೆ. ಕೋಲ್ಗೇಟ್, ಗ್ರಾನೈಟ್ ಗೇಟ್, 2ಜಿ ಗೇಟ್, ಕಾಮನ್ವೆಲ್ತ್ ಗೇಟ್ ಮುಂತಾದವುಗಳ ಭರಾಟೆಯ ಬಳಿಕ ಇದೀಗ ಬೆಳಕಿಗೆ ಬಂದಿರುವುದು ಗೋ-ಗೇಟ್!

ಬೊಗಳೂರು ಬ್ಯುರೋದ ಅನ್ವೇಷಕರು ಪತ್ತೆ ಹಚ್ಚಿದ ಪ್ರಕರಣ ಹೀಗಿದೆ:

ವಿದ್ಯಾವಿಹೀನಂ ಪಶು ಸಮಾನಂ ಎಂಬ ಮಾತನ್ನು ಕೇಳಿದ ಕೇಂದ್ರದ ಉಪ (UPA) ಸರಕಾರದ ಮುಖ್ಯಸ್ಥೆಯಾಗಿರುವ ಇಟಲಿ ಮೂಲದ ಸೋನಿಯಾ ಗಾಂಧಿ ಅವರು, ಈ ಸಂಸ್ಕೃತ ಶ್ಲೋಕವನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಹೋಗಿದ್ದು. ಪಶು ಎಂದರೆ ಪ್ರಾಣಿಗಳು ಎಂಬ ಅರ್ಥವಿರುವುದರಿಂದ ಇನ್ನು ಮುಂದೆ ವಿದ್ಯೆ ಇಲ್ಲದವರನ್ನು ನಾಯಿ-ನರಿ-ಹಸು-ಮಂಗ-ಕತ್ತೆ ಮುಂತಾಗಿ ಪ್ರಾಣಿಗಳ ಹೆಸರಿನಲ್ಲಿ ಕರೆಯದಂತಾಗಬೇಕು.

ಇದಕ್ಕೆ ರೂಪುಗೊಂಡಿರುವ ಯೋಜನೆಯೇ ನೆಹರೂ-ಗಾಂಧಿ ಪಶು ಶಿಕ್ಷಣ ಯೋಜನೆ (NGPSY). ಈ ಯೋಜನೆಯ ಉದ್ದೇಶವೆಂದರೆ, ಪಶುಗಳಿಗೇ ಶಿಕ್ಷಣ ಕೊಡಿಸಿಬಿಟ್ಟರೆ, ಯಾರು ಕೂಡ ವಿದ್ಯಾವಿಹೀನಂ ಪಶು ಸಮಾನಂ ಅಂತ ಲೇವಡಿ ಮಾಡುವಂತಿಲ್ಲ!

ಪಶುಗಳಿಗೆ ಬಾಲ ಅಲ್ಲಾಡಿಸುವುದು ಹೇಗೆ, ಹಿಂದೆ ಬಂದರೆ ಒದೆಯುವುದು ಹೇಗೆ, ಮುಂದೆ ಹೋದರೆ ಹಾಯುವುದು ಹೇಗೆ, ಪುಸ್ತಕ ಓದುವಂತೆ ನಟಿಸುವುದು ಹೇಗೆ, ಕಂಪ್ಯೂಟರುಗಳ ಬಳಿ ಇರುವ ಇಲಿಗಳನ್ನು ಬೆಕ್ಕಿನಿಂದ ಕಾಪಾಡುವುದು ಹೇಗೆ ಮುಂತಾದ ಪಠ್ಯ ಕ್ರಮಗಳನ್ನು ರೂಪಿಸಲು ಕೇಂದ್ರ ಸರಕಾರವು 1880 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ಇದು ಬಡ ತೆರಿಗೆದಾರರ ಹಣ. ಈ ಹಣ ಎಲ್ಲಿ ಹೋಗಿದೆ ಎಂದು ಯಾವುದೇ ಪಶುಗಳನ್ನು ಕೇಳಿದರೂ ಕೂಡ ಬಾಯಿ ಬಿಡುತ್ತಿಲ್ಲ. ಯಾಕೆಂದರೆ 'ಸುಶಿಕ್ಷಿತ' ಎನಿಸಿಕೊಂಡಿರುವ ಪಶುಗಳಿಗೆ ಬಾಯಿ ಮುಚ್ಚಲು ಮಾತ್ರವೇ ಕಲಿಸಲಾಗಿದೆ ಎಂಬುದು ಮೂಕಪ್ರಾಣಿಗಳ ಹೋರಾಟ ಸಂಘದ ಅಧ್ಯಕ್ಷ ವಟವಟಾಳ್ ಮೇಘರಾಜ್ ಅವರ ಅಭಿಮತ.

ಅವರೇ ಆರ್‌ಟಿಐ ಅರ್ಜಿಯ ಮೂಲಕ ಈ ಹಗರಣವನ್ನು ಬಯಲಿಗೆಳೆದಿದ್ದು, ಇಷ್ಟು ಮೊತ್ತ ಹಣ ಎಲ್ಲಿಗೆ ಹೋಗಿದೆಯೆಂಬುದೇ ತಿಳಿದುಬಂದಿಲ್ಲ. ಮಾಹಿತಿಹಕ್ಕು ಕಾಯಿದೆಯಡಿ ಅವರು ಸಲ್ಲಿಸಿದ್ದ ಅರ್ಜಿಯು ಹಲವಾರು ಇಲಾಖೆಯೊಳಗೆ ಹೋಗಿ ಬಂದಿದ್ದು, ಪಶು ಸಂಗೋಪನಾ ಇಲಾಖೆಯಿಂದ ಬಂದಿರುವ ಉತ್ತರದಲ್ಲಿ ಖಾಲಿ ಕಾಗದ ಮಾತ್ರವೇ ಇತ್ತು! ಈ ಬಗ್ಗೆ ವಿಚಾರಿಸಿದಾಗ, ಈ ಉತ್ತರ ಬರೆಯಲು ಬಳಸಿದ ಇಂಕ್ ಕಳಪೆ ಗುಣಮಟ್ಟದ್ದಾಗಿದ್ದು, ಇದರ ಹಗರಣವನ್ನೂ ಬಯಲಿಗೆಳೆಯಿರಿ ಎಂಬ ಮೌಖಿಕ ಉತ್ತರವೂ ದೊರೆಯಿತು ಎಂದು ವಟವಟಾಳ್ ಮೇಘರಾಜ್ ತಿಳಿಸಿದ್ದಾರೆ.

1 Comments

ಏನಾದ್ರೂ ಹೇಳ್ರಪಾ :-D

  1. ಅನ್ವೇಷಿಗಳೆ,
    ಪಸುಆಹಾರವನ್ನೇ ಬಕ್ಕರಿಸಿದ ಭೂಪರ ಹಗರಣದ ಬಗೆಗೆ ಕೇಳಿದ್ದೆ. ಇದೀಗ ಪಶುಗಳಿಗೆ ಶಿಕ್ಷಣ ಕೊಡುವ ಈ ಹೊಸ ಯೋಜನೆಯನ್ನು ತಿಳಿದು ತುಂಬ ಖುಶಿಯಾಗಿದೆ. ಇದಕ್ಕಾಗಿ ವಟವಟಾಳರಿಗೆ ಅಭಿನಂದನೆಗಳು.

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post