ಬೊಗಳೆ ರಗಳೆ

header ads

ಮೇಯೋರನ್ನೇ ಕತ್ತೆ ಮಾಡಬೇಕೋ, ಕತ್ತೆಯನ್ನೇ ಮೇಯೋರ್ ಮಾಡ್ಬೇಕೋ?


[ಬೊಗಳೂರು ಮೇಯೋರ ಬ್ಯುರೋದಿಂದ]
ಬೊಗಳೂರು, ಅ.4- ಈ ದೇಶದಲ್ಲಿ ವಂಚನೆ ಮಾಡದವರು, ಧಗಾಕೋರರಲ್ಲದವರು, ಭ್ರಷ್ಟಾಚಾರ ಮಾಡದವರಿಗೆ ಅಧಿಕಾರ, ಹಣ, ಅಂತಸ್ತು ಯಾವುದೂ ಇರುವುದಿಲ್ಲ ಎಂಬುದನ್ನು ಮನಗಂಡ ಹೊರತಾಗಿಯೂ ಬೊಗಳೂರಿನ ಮಂದಿ ವಿಶೇಷವಾದ ಪ್ರಯೋಗವೊಂದನ್ನು ಮಾಡಲು ಹೊರಟಿದ್ದಾರೆ.

ಮುಂಬರುವ ಮಹಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಪ್ರಯೋಗವನ್ನು ಮಾಡಲಾಗುತ್ತಿದ್ದು, ಆರಂಭಿಕ ಹಂತದಲ್ಲಿ, ನಗರ ಸಭೆಗಳಿಗೆ ಈ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಅದರ ಪ್ರಕಾರ, ಬೊಗಳೂರು ಮಹಾನರಕ ಪಾಲಿಕೆಯ ಮುಂದಿನ ಮೇಯೋರ್ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಶ್ರೀಶ್ರೀಮಾನ್‌ಮಾನ್ ಗಾರ್ದಭೇಶ್ ಅವರನ್ನು ನಿಲ್ಲಿಸಲು ನಿರ್ಧರಿಸಲಾಗಿದೆ.

ಗಾರ್ದಭೇಶ್‌ಗೆ ವಂಚನೆ ಮಾಡುವುದು, ಮೋಸ ಮಾಡುವುದು, ಧಗಾ ಎಸಗುವುದು, ಭ್ರಷ್ಟಾಚಾರ ಮಾಡುವುದು, ವಿದೇಶೀ ಬ್ಯಾಂಕುಗಳಲ್ಲಿ ಕಪ್ಪು ಹಣ ಇರಿಸುವುದು, ಓಟು ಬ್ಯಾಂಕ್ ರಾಜಕಾರಣ ಮಾಡುವುದು ಇತ್ಯಾದಿಗಳೆಲ್ಲವೂ ಗೊತ್ತಿಲ್ಲ ಎಂಬುದು ಈ ಮೇಯೋರ್ ಅಭ್ಯರ್ಥನಕ್ಕೆ ಅರ್ಹತೆಯಾಗಿದ್ದರೂ ಒಂದೇ ಒಂದು ಶಂಕೆಯ ಸುಳಿಯೊಂದು ಕೂಡ ಕೇಳಿಬರುತ್ತಿದೆ.

ಅದೇನು ಗೊತ್ತೇ? ಈ ಗಾರ್ದಭ ಮಹಾಶಯರು ಕಸ, ಕಡ್ಡಿ ಇತ್ಯಾದಿಯಾಗಿ ಸಿಕ್ಕಿದ್ದೆಲ್ಲವನ್ನೂ ನುಂಗುವ ಛಾತಿ ಉಳ್ಳವರಾಗಿರುವುದರಿಂದ ಊರಿನ ಖಜಾನೆಯಲ್ಲಿರುವ ಹಣ, ವಿವಿಧ ಕಾಮಗಾರಿಗಳಿಗೆ ಮಂಜೂರಾಣ ಹಣ, ಸಂತ್ರಸ್ತರಿಗೆ ಪರಿಹಾರ ವಿತರಣೆಗಾಗಿ ಮೀಸಲಾಗಿರುವ ಹಣವನ್ನೆಲ್ಲಾ ನುಂಗಿದರೆ ಏನು ಮಾಡುವುದು ಎಂಬ ಒಂದೇ ಒಂದು ಚಿಂತೆಯನ್ನು ಗಾರ್ದಭೇಶ್ ಅವರ ಪಕ್ಷೀಯರು ತೋಡಿಕೊಂಡಿದ್ದು, ಈ ಬಗ್ಗೆ ಅಸತ್ಯಾನ್ವೇಷಿಯ ಸಲಹೆ ಕೇಳಿದ್ದಾರೆ ಮತ್ತು ಗಾರ್ದಭೇಶ್ ಮೇಲೆ ಹದ್ದಿನ ಕಣ್ಣು ಅಲ್ಲದಿದ್ದರೂ, ಕತ್ತೆಯ ಕಣ್ಣನ್ನಾದರೂ ಇರಿಸುವಂತೆ ಕೋರಿಕೊಂಡಿದ್ದಾರೆ.

ಹೀಗಾಗಿಯೇ ಶೀರ್ಷಿಕೆಯಲ್ಲಿನ ಜಿಜ್ಞಾಸೆ ಎಲ್ಲ ಜಾರಕೀಯ ಪಕ್ಷಗಳನ್ನೂ ಕಾಡುತ್ತಿರುವುದು ಸ್ಪಷ್ಟವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

5 ಕಾಮೆಂಟ್‌ಗಳು

  1. ಅನ್ವೇಷಿಗಳೆ,ಮೇಯರ್ ಸ್ಥಾನಕ್ಕೆ ಕತ್ತೆಯನ್ನು ಸೂಚಿಸುವದರ ಮೂಲಕ ನೀವು ಕತ್ತೆಗಳಿಗೆ
    ಅವಮಾನ ಮಾಡುತ್ತಿದ್ದೀರಿ ಎಂದು ಅಖಿಲ ಕರ್ನಾಟಕ ಗಾರ್ದಭ ಸಂಘವು ಪ್ರತಿಭಟಿಸುತ್ತಿದೆ. ವಿಜಯದಶಮಿಯಂದು ಪರಪ್ಪನ ಅಗ್ರಹಾರದಲ್ಲಿ ಉಪವಾಸ ಸತ್ಯಾಗ್ರಹ
    ನಡೆಸಲಾಗುವದು ಎಂದು ಈ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ!

    ಪ್ರತ್ಯುತ್ತರಅಳಿಸಿ
  2. ಆಲ್ ದಿ ಬೆಸ್ಟ್.. ಗಾರ್ಧ’ಭೇಶ್’ ಅ೦ತ ನಮ್ಮ ಮೆಸೇಜನ್ನು ಅವರಿಗೆ ತಲುಪಿಸಿಬಿಡಿ.

    ಪ್ರತ್ಯುತ್ತರಅಳಿಸಿ
  3. ಸುನಾಥರೇ,
    ನಮಗಿಂತಲೂ ಅವಮಾನಿತರಾಗುವವರು ಇದ್ದಾರೆಂದಾದಾಗ ನಮಗೂ ಒಳಗೊಳಗೇ ಖುಷಿ...

    ಇದೇ ವೇಳೆ, ಪರಪ್ಪನ ಅಗ್ರಹಾರದಲ್ಲಿ ತಲೆಯನ್ನೂ ಪರಪರನೇ ಕೆರೆದುಕೊಳ್ಳುವವರು ಜಾಸ್ತಿಯಾಗುತ್ತಿದ್ದಾರೆ.

    ಪ್ರತ್ಯುತ್ತರಅಳಿಸಿ
  4. ಚುಕ್ಕಿಗಳೇ, ಚಿತ್ತಾರರೇ,
    ನಿಮ್ಮ ಮೆಸೇಜನ್ನು ಕತ್ತರಿಪ್ರಯೋಗ ಮಾಡಿ ಕಳುಹಿಸಿದ್ದರೂ, ದಿನಕ್ಕೆ ನೂರೇ ಎಸ್ಎಂಎಸ್ ಅಂತ ಲಿಮಿಟ್ ಮಾಡಿರೋದ್ರಿಂದ, ತುಂಬಾ ಕಷ್ಟವಾಗಿಬಿಟ್ಟಿದೆ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D