ಬೊಗಳೆ ರಗಳೆ

header ads

ಬೊಗಳೆ ಹಾರ್ಟ್ ಬ್ರೇಕ್: ಇಂದಿನಿಂದ ಯುವತಿಯರ ಉಗುರು ಉದ್ದವಾಗಲಿದೆ!


[ಬೊಗಳೂರು ವಿಶೇಷ ಯುವ Some-ಚೋದನಾ ಬ್ಯುರೋದಿಂದ]
ಬೊಗಳೂರು, ಸೆ.27- ಇಂದಿನಿಂದ ಕಾಲೇಜು ಹುಡುಗಿಯರು ಮತ್ತು ಹುಡುಗರ ಉಗುರುಗಳು ತೀರಾ ಉದ್ದ ಬೆಳೆಯಲಿವೆ ಎಂದು ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ನಿಗೂಢವಾದ ರಹಸ್ಯವೊಂದನ್ನು ಪತ್ತೆ ಹಚ್ಚಿದ್ದಾರೆ.

ಹೀಗಯೇ ತಿರುಗಾಡುತ್ತಿದ್ದಾಗ ಕ್ಯೂಟ್ ಆಗಿರುವ ಎಸ್ಸೆಮ್ಮೆಸ್ಸುಗಳು ಬೊಗಳೂರು ಬ್ಯುರೋದ ವರದ್ದಿಗಾರರ ಇನ್‌ಬಾಕ್ಸ್‌ನಲ್ಲಿಯೂ ಅಪ್ಪಿ ತಪ್ಪಿ ಬಂದು ಬೀಳುತ್ತಿದ್ದವು. ಅವುಗಳನ್ನು ಓದಲಾಗದೆ, ಈ ಎಸ್ಸೆಮ್ಮೆಸ್ಸುಗಳೆಂಬ ನಿರ್ಭಾವುಕ ಸಂದೇಶಗಳ ಹಿಂದಿನ ಭಾವಾರ್ಥವನ್ನು ಅರ್ಥೈಸಿಕೊಳ್ಳಲಾಗದೆ ಚಡಪಡಿಸಿ, ಏನು ಮಾಡೋಣ ಎಂದು ಚಿಂತಾಕ್ರಾಂತವದನರಾಗಿ ಕುಳಿತಿದ್ದಾಗ ಆಗಲೇ ಒಂದು ವರದ್ದಿಯು ಸಿಡಿಲೆರಗಿದಂತೆ ಬಂದು ಬಿದ್ದು ನಮ್ಮ ವರದ್ದಿಗಾರರನ್ನು ಗಾಢ ನಿದ್ರೆಯಿಂದ ಎಬ್ಬಿಸಿತ್ತು.

ಬೇರೆಲ್ಲಾ ಅಗತ್ಯ ವಸ್ತುಗಳ ಬೆಲೆಗಳನ್ನು ಆಗಸದೆತ್ತರಕ್ಕೆ ಏರಿಸುತ್ತಲೇ ಇರುವ ಯುಪಿಎ ಸರಕಾರ ಒಂದಾದರೂ ಆವಶ್ಯ ವಸ್ತುಗಳನ್ನು ಇಳಿಸಬಹುದಲ್ಲಾ ಎಂದು ಆಲೋಚಿಸಿ ಈ ನಿರ್ಧಾರ ಕೈಗೊಂಡಿತ್ತು ಎನ್ನಲಾಗಿದೆ.

ಅವೇನು ಅಂತ ನಮ್ಮ ಯುವ ಓದುಗ ಬಳಗಕ್ಕೆ ಈಗಾಗಲೇ ಕುತೂಹಲ ಮೂಡಿರಲಿಕ್ಕಿಲ್ಲ. ಯಾಕೆಂದರೆ, ಕೆಲವರು ಈಗಾಗಲೇ ರೋದಿಸತೊಡಗಿದ್ದಾರೆ. ಬೆಲೆ ಏರಿಸುತ್ತಲೇ ಜನರನ್ನು ದುಃಖದಲ್ಲಿ ತೇಲಾಡುವಂತೆ ಮಾಡುತ್ತಿದ್ದ ಸರಕಾರ, ಈ ಬಾರಿ ಇಳಿಸೋಣ ಎಂದುಕೊಂಡು, ದಿನವೊಂಕ್ಕೆ ಕಳುಹಿಸಬಹುದಾದ ಗರಿಷ್ಠ ಎಸ್ಎಂಎಸ್‌ಗಳ ಸಂಖ್ಯೆಯನ್ನು ಕೇವಲ 100ಕ್ಕೆ ಸೀಮಿತಗೊಳಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ತಮಗೆ ಬಂದ ಎಸ್ಸೆಮ್ಮೆಸ್ಸುಗಳನ್ನು ಫಾರ್ವರ್ಡ್ ಮಾಡುತ್ತಲೇ ಹಲವಾರು ಯುವ ಹೃದಯಗಳನ್ನು ಕಲಕುತ್ತಾ, ಅವರನ್ನು ತತ್ವಜ್ಞಾನಿಗಳಂತೆ ಮಾಡುತ್ತಿದ್ದ, "ಈ ಸಂದೇಶ ನಿಜವಾಗಿರಬಹುದೇ?" ಎಂದೆಲ್ಲಾ ಆಲೋಚನೆಗೀಡಾಗುವಂತೆ ಮಾಡುತ್ತಿದ್ದ ಈ ಸಂದೇಶಗಳು ಇನ್ನು ಕಡಿಮೆ ಬರಬಹುದು ಎಂಬುದೇ ಈ ಯುವ ಜನಾಂಗದ ಗೋಳಾಟಗಳಿಗೆ ಕಾರಣ.

ಇದು ಒಂದೆಡೆಯಾದರೆ, ಯುವಕರು ಮತ್ತು ಯುವತಿಯರ ಉಗುರುಗಳು ಬೆಳೆಯಲಾರಂಭಿಸಿರುವುದನ್ನು ಕೂಡ ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಇದುವರೆಗೆ, ಮೊಬೈಲ್ ಫೋನಿನ ಕೀಪ್ಯಾಡುಗಳಲ್ಲಿನ ಅಕ್ಷರಗಳೆಲ್ಲವೂ ಮಾಸಿ ಹೋಗಿ, ಇದ್ಯಾವ ಡಬ್ಬಾ ಮೊಬೈಲ್ ಅಂತ ಗೋಚರಿಸಿರುವುದನ್ನು ನೀವು ಎಂದಾದರೂ ಮನಗಂಡಿರಬಹುದು. ಆದರೆ ಎರಡೂ ಕೈಗಳಿಂದ, ಒಂದು ಕೈಯಿಂದ ಮತ್ತು ಕೆಲವರಂತೂ ಒಂದೇ ಬೆರಳಿನಿಂದ ಎಸ್ಎಂಎಸ್ ಟೈಪ್ ಮಾಡುವ ಪ್ರವೀಣರುಗಳ ಮಹತ್ಸಾಧನೆಯ ಫಲವಿದು. ಇಂಟರ್ನೆಟ್ ಸಂಪರ್ಕವಿಲ್ಲದೆಯೇ ತಮ್ಮ ಪ್ರೀತಿಪಾತ್ರರ ಜೊತೆಗೆ ಸಂಭಾಷಣೆ ಮಾಡಬಲ್ಲ ಕಲೆ ಇವರಿಗೆ ಸಿದ್ಧಿಸಿರುತ್ತದೆ. ಮಸ್ತಕದಲ್ಲಿ ಮೂಡಿದ ಭಾವನೆಗಳನ್ನು ನೇರವಾಗಿಯೇ ಮೊಬೈಲು ಫೋನಿನ ಎಸ್ಎಂಎಸ್‌ನಗಳಗೆ ತುರುಕಿ, ಜಿಮೇಲ್ ಚಾಟಿಂಗಿಗಿಂತಲೂ ವೇಗವಾಗಿ ಟೈಪ್ ಮಾಡಿ ಮಾಡಿ, ಅವರ ಬೆರಳ ತುದಿಗಳೆಲ್ಲವೂ ಸವೆದಷ್ಟೇ ಈ ಕೀಪ್ಯಾಡ್ ಮೇಲಿನ ಅಕ್ಷರಗಳೂ ಸವೆದಿರುವುದನ್ನು ಬೊಗಳೆ ರಗಳೆ ಬ್ಯುರೋ ಕೂಡ ಗಮನಿಸಿದೆ.

ಈಗ ದಿನವೊಂದಕ್ಕೆ ಬರೇ 100 ಎಸ್ಸೆಮ್ಮೆಸ್ಸುಗಳಿಗೆ ಮಾತ್ರವೇ ಅವಕಾಶವಿರುವುದರಿಂದ ದಿನಕ್ಕೆ ಸಾವಿರಗಟ್ಟಲೆ ಸಂದೇಶಗಳನ್ನು ಟೈಪು ಮಾಡುತ್ತಾ ಉಗುರು ಬೆಳೆಯದಂತೆ (ಅಂದರೆ ಕೈಯಲ್ಲಿರುವ ಉಗುರಿಗೆ ಬೆಳೆಯಲೂ ಅವಕಾಶವಿಲ್ಲದಂತೆ!) ಫಾಸ್ಟಾಗಿ ಟೈಪು ಮಾಡುತ್ತಾ, ಎಸ್ಎಂಎಸ್ ಚಾಟ್ ಮಾಡುತ್ತಿರುವವರು ಕಂಗಾಲಾಗಿದ್ದಾರೆ, ರೋದಿಸಲಾರಂಭಿಸಿದ್ದಾರೆ ಮತ್ತು ಇದುವರೆಗೆ ಹಾಸಿಗೆಯಲ್ಲೇ ಆರಾಮವಾಗಿ ಮಲಗಿಕೊಂಡು ರಾತ್ರಿಯಿಡೀ ಟೈಪು ಮಾಡುತ್ತಿದ್ದವರೆಲ್ಲ ನೆಲದ ಮೇಲೆ ಬಿದ್ದು ಹೊರಳಾಡಿ ನರಳಾಡತೊಗಿದ್ದಾರೆ.

ಸರಕಾರದ ಕೊಡುಗೆಯೆಂದರೆ ಇದೇ! ಬೇರೆಲ್ಲಾ ಬೆಲೆಗಳು ಏರಿದಂತೆಯೇ, ಎಸ್ಎಂಎಸ್‌ಗಳ ಸಂಖ್ಯೆಯನ್ನು ಇಳಿಸಿ ನೋಡೋಣ ಎಂದುಕೊಂಡರೆ, ಯುವಜನರ ಉಗುರಿನ ಉದ್ದವೂ ಏರಿಕೆಯಾಗತೊಡಗಿದೆ!

ಕಾಮೆಂಟ್‌‌ ಪೋಸ್ಟ್‌ ಮಾಡಿ

5 ಕಾಮೆಂಟ್‌ಗಳು

 1. ವಾವ್..
  ಬೊಗಳೂರು ಸ೦ಚೋದಕರು ಮೇಲಿ೦ದ ಮೇಲೆಮೇಲೆ ಉಪ ಸರ್ಕಾರವನ್ನು ಬೈಯುವುದಕ್ಕೂ,ಇ೦ತಾ ಬೆಲೆ ಏರಿಕೆಯಲ್ಲೂ ಜಾತ್ರೆಯಲ್ಲಿ ಎಲ್ಲಾ ಬಣ್ಣದ ಕಾಗದ, ಬ್ಯಾಗಡೆಗಳನ್ನೂ ಖರೀದಿಸಿ ರೈತ ಸ೦ಘದ ಗೆಟಪ್ಪಿನಲ್ಲಿ ಲೇಔಟ್ ಸಿ೦ಗರಿಸಿ ನೋಡುಗರ ಹೊಟ್ಟೆ ಉರಿಸಿದ್ದಕ್ಕೂ, ಈಗ ಎಸ್ಸೆಮ್ಮೆಸ್ಸುಗಳ ಸ೦ಖ್ಯೆಯಲ್ಲಿ ಕಡಿತ ಮಾಡಿದ್ದಾರೆ೦ದು ಗೋಳಿಡುವುದಕ್ಕೂ ಏನೇನೋ ಕಾರಣಗಳಿವೆಯೆ೦ಬ ಇಲ್ಲಸಲ್ಲದ ಅನುಮಾನ ಬ೦ದಗಳಿಗೆಯಲ್ಲಿ ’ಅ’ಸತ್ಯ ವನ್ನು ಶೋಧಿಸಬೇಕೆ೦ದು ಮತ್ತೆ ಅವರಲ್ಲೇ ದೂರಿಕೊಳ್ಳಲಾಗಿದೆ..!!!
  :-))

  ಪ್ರತ್ಯುತ್ತರಅಳಿಸಿ
 2. ಅನ್ವೇಷಿ ಗಳೇ ನಮ್ಮಂತಹವರ ಹಾರ್ಟ್ ಬ್ರೇಕ್ ಮಾಡುವಂತ ಬ್ರೇಕಿಂಗ್ ನ್ಯೂಸ್ ಅನ್ನು ವರದ್ದಿ ಮಾಡಿರುತ್ತೀರ ... ಇದಕ್ಕಾಗಿ ದನ್ಯವಾದಗಳು ;)

  ಪ್ರತ್ಯುತ್ತರಅಳಿಸಿ
 3. ಇದು ೨-ಜಿ ಹಗರಣದ ಮುಂದುವರಿದ ಭಾಗವೆ?

  ಪ್ರತ್ಯುತ್ತರಅಳಿಸಿ
 4. ಚುಕ್ಕಿಚಿತ್ತಾರಶ್ರೀಯವರೇ,
  ನಿಮ್ಮದೇ ಉಪ ಸರಕಾರದ ಮೇಲೆ ಬೈಗುಳ ಬಿದ್ದಂತಾಗಿ ನೀವೇನೂ ಬೆಚ್ಚಿ ಬೀಳೋದು ಬೇಡ. ನಾವು ನಮ್ಮ ಮನೆಯಲ್ಲಿ ಬಣ್ಣದ ಕಾಗದ, ಬ್ಯಾಗಡೆ ಹಚ್ಚಿದ್ದಕ್ಕೂ, ಈ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಮ್ಮದೇ ವರದ್ದಿಗಾರರು ಪತ್ತೆ ಹಚ್ಚಿದ್ದಾರೆ.

  ಚೇತನಾ ಅವರೇ,
  ನೀವು ಚೆನ್ನಾಗಿದೆ ಅಂತ ಚೆನ್ನಾಗಿ ಬೈದಿದ್ದೀರಿ... ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇವೆ!!!!

  ನಿಮ್ಮ ಧನ್ಯವಾದಗಳನ್ನು ಎಸ್ಎಂಎಸ್ ಮೂಲಕವೇ ಕಳುಹಿಸಿಕೊಡಲು ಒತ್ತಾಯಿಸಲಾಗಿದೆ...

  ಸುನಾಥರೇ,
  ಹೌದು, ಶೀಘ್ರದಲ್ಲೇ ಹೊರಬರಲಿದೆ ನಿರೀಕ್ಷಿಸಿ... ಯುಪಿಎಯ ಮತ್ತೊಂದು ಮೆಸ್: ಎಸ್ಸೆಮ್ಮೆಸ್ಸು ಹಗರಣ

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D