[ಬೊಗಳೂರು ಬೆಲೆ ಏರಿಕೆ ಸಂ-ಚೋದನಾ ಬ್ಯುರೋದಿಂದ]
ಬೊಗಳೂರು, ಜೂ.2- ಭ್ರಷ್ಟಾಚಾರಿಗಳನ್ನು ಮಟ್ಟ ಹಾಕಲು ಕಠಿಣ ಕಾಯ್ದೆ ಜಾರಿಗೆ ಮತ್ತು ವಿದೇಶದಲ್ಲಿ ರಾಶಿ ರಾಶಿಯಾಗಿ ಮೌಂಟ್ ಎವರೆಸ್ಟ್‌ಗಿಂತಲೂ ಎತ್ತರದ ಶಿಖರ ಎಂದು ಪ್ರಸಿದ್ಧಿ ಪಡೆದಿರುವ ಕಪ್ಪು ಹಣದ ಬೆಟ್ಟವನ್ನು ಅಗೆಯಲು ಹಿಂದು-ಮುಂದು ನೋಡುತ್ತಿರುವ ಬೊಗಳೂರು ಕೇಂದ್ರದ ಉಪ (UPA) ಸರಕಾರವು, ಇದೀಗ ದೇಶದ ಬಡತನ ನಿವಾರಣೆ ಹಾಗೂ ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಹೊಸ UPAಯವನ್ನು ಕಂಡುಕೊಂಡಿದೆ.

ಕೇಂದ್ರದ ಎಲ್ಲ ಸಚಿವರು ರಾಮದೇವ ಬಾಬಾ ಅವರ ಕಾಲಿಗೆ ಬಿದ್ದು, ಹೇಗಾದರೂ ಉಪವಾಸ ನಿಲ್ಲಿಸಿ ಅಂತ ಕೇಳಿಕೊಂಡಿರುವುದು ಕೇವಲ ನಾಟಕ ಎಂದು ತಿಳಿದುಬಂದಿದ್ದು, ಬಾಬಾ ರಾಮದೇವ್ ಮತ್ತು ಅಣ್ಣಾ ಹಜಾರೆ ಮುಂತಾದವರಿಗೆ ಬೆಂಬಲಿಗರ ದೊಡ್ಡ ಪಡೆಯೇ ಇದೆ. ಕೋಟಿ ಕೋಟಿ ಜನರು ಅವರು ಕರೆ ಕೊಟ್ಟರೆ ಉಪವಾಸ ಕೂರುತ್ತಾರೆ. ಅವರಿಗೆ ತಿನ್ನಲು ಏನೂ ಬೇಕಾಗಿಲ್ಲ. ಹೀಗಾಗಿ ದೇಶದಲ್ಲಿ ಬದುಕಲು ಅಗತ್ಯವಿರುವ ಅಕ್ಕಿ, ಬೇಳೆ, ಧಾನ್ಯ, ತರಕಾರಿ ಇತ್ಯಾದಿಗಳ ಅಗತ್ಯವೇ ಕಡಿಮೆಯಾಗಿ, ಅದು ಅನಗತ್ಯ ವಸ್ತುವಾಗಿಬಿಡುತ್ತದೆ. ತತ್ಪರಿಣಾಮವಾಗಿ ಅದರ ಬೆಲೆಯೂ ತನ್ನಿಂತಾನೇ ಇಳಿಯುತ್ತದೆ ಎಂದು ಬೊಗಳೂರು ಸರಕಾರವು ನಂಬಿಕೊಂಡು ಕೂತಿರುವುದಾಗಿ ವರದ್ದಿಯಾಗಿದೆ.

ಈಗಾಗಲೇ ದಾಸ್ತಾನು ಕೇಂದ್ರಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಹಾರ ಧಾನ್ಯಗಳು ಕೊಳೆಯುತ್ತಿವೆ. ಅದನ್ನು ರಿಲೀಸ್ ಮಾಡಿಬಿಟ್ಟರೆ ಬೆಲೆ ಇಳಿಯಬಹುದು. ಬೆಲೆ ಇಳಿದರೆ ಏನು ತೊಂದರೆ ಎಂಬುದು ಗೊತ್ತೇ? ಬೊಗಳೂರು ದೇಶದಲ್ಲಿರುವವರೆಲ್ಲರೂ ಕಡಿಮೆ ಬೆಲೆಯ ಆಹಾರ ತಿನ್ನುವವರು ಎಂದು ಜಾಗತಿಕ ಮಟ್ಟದಲ್ಲಿ ಅವಮಾನವಾಗುತ್ತದೆ. ಹೀಗಾಗಿ ಹೆಚ್ಚು ಬೆಲೆಯ ಆಹಾರವನ್ನೇ ಅವರು ಸೇವಿಸಬೇಕಾಗುತ್ತದೆ. ಹೀಗಾಗಿ ಬೆಲೆಗಳು ಏರಿಯೇ ಇರುವಂತೆ ನೋಡಿಕೊಳ್ಳಬೇಕಾಗಿದೆ ಎಂದು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

ಇದಲ್ಲದೆ, ಗೋದಾಮುಗಳಲ್ಲಿ ಆಹಾರ ಧಾನ್ಯಗಳನ್ನು ಪೇರಿಸಿಟ್ಟು ಕೃತಕ ಕೊರತೆ ಸೃಷ್ಟಿಸುವುದರಿಂದ ದೇಶದ ಬೆನ್ನೆಲುಬಾಗಿರುವ ರೈತರಿಗೂ ಸಾಕಷ್ಟು ಉಪಕಾರವಾಗುತ್ತದೆ. ಜನರಿಗೆ ಸರಿಯಾಗಿ ವಿತರಣೆ ಮಾಡದೆ ಗೋದಾಮುಗಳಲ್ಲಿ ಹೆಚ್ಚು ಹೆಚ್ಚು ಆಹಾರಗಳನ್ನು ಸೇರಿಸಿದರೆ, ಅವುಗಳು ಕೊಳೆತು ಹೋಗುತ್ತವೆ. ಈ ಕೊಳೆತ ವಸ್ತುಗಳನ್ನೆಲ್ಲಾ ಉತ್ತಮ ಗೊಬ್ಬರವಾಗಿ ಬಳಸಿ, ಮತ್ತಷ್ಟು ಆಹಾರ ಧಾನ್ಯಗಳನ್ನು ಬೆಳೆಯಬಹುದು. ಗೊಬ್ಬರ ಕೊರತೆಯಿಂದ ಬಳಲುತ್ತಿರುವ ರೈತರೂ ಸುಖಿಯಾಗಿರುತ್ತಾರೆ ಎಂದು ಬೊಗಳೂರು ಸರಕಾರದ ಮಂತ್ರಿಗಳೆಲ್ಲರೂ ಗಂಭೀರವಾದ ತುರ್ತು ಸಮಾಲೋಚನೆ, ಗೂಢಾಲೋಚನೆ ಇತ್ಯಾದಿಗಳನ್ನೆಲ್ಲಾ ಕೈಗೊಂಡು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ಹೇಳಿಯೇ ಇಲ್ಲವೆಂಬುದನ್ನು ನಮ್ಮ ವರದ್ದಿಗಾರರು ವರದ್ದಿ ಮಾಡಿಲ್ಲ.

6 Comments

ಏನಾದ್ರೂ ಹೇಳ್ರಪಾ :-D

 1. ಅನ್ವೇಶಿಗಳೇ..
  ನಿಮ್ಮ ವರದ್ದಿಗಾರರು ಮಾಡಿರದ ವರದ್ದಿ ಓದಿ ತು೦ಬಾ ಖುಶಿಯಾಯಿತು..!!!!

  ReplyDelete
 2. ಅನ್ವೇಷಿಗಳೆ,
  ಶರದ್ದಿ ಪವಾರರು ಒಂದು ದಿನ ಉಪವಾಸ ಮಾಡಿದರೆ, inflation ಕಡಿಮೆ ಆಗಬಹುದು!

  ReplyDelete
 3. Kapil saahebru diet shuru maadidaarante :)

  ReplyDelete
 4. ಚುಕ್ಕಿಗಳೇ ಮತ್ತು ಚಿತ್ತಾರರೇ,
  ಪುಣ್ಯಕ್ಕೆ ಅಕ್ಷರ ತಪ್ಪಿನಿಂದಲಾದರೂ, "ವ" ಬಿಟ್ಟುಹೋಗಲಿಲ್ಲವಲ್ಲಾ ಎಂಬುದೇ ಸಂತೋಷ.

  ReplyDelete
 5. ಸುನಾಥರೇ,
  ಓಹ್, Inflate ಆಗಬಹುದೂಂತ ನಿಮ್ಮ ವಾದವೋ? ತಡೀರಿ, ಗಡ್ಕರಿ, ಧರ್ಮಸಿಂಗ್ ಮುಂತಾದವರಿಗೆಲ್ಲಾ ಸಲಹೆ ನೀಡಬೇಕು, ಈಗಲೇ ಬರ್ತೀನಿ.

  ReplyDelete
 6. ಅನಾನಿಮಸ್ಸರೇ,
  ಕಪಿಲು ಸಾಹೇಬ್ರು ಡಯಟ್ ಶುರು ಮಾಡಿ ಮಾಡಿ, ಝೀರೋ ಸೈಜ್ ಮಾಡಿಕೊಳ್ಳಲು ಹೊರಟಿದ್ದಾರಂತೆ. (2ಜಿ ಹಗರಣದಲ್ಲಿ ಜೀರೋ ಲಾಸ್ ಅಂತ ಹೇಳಿದ್ದಾರಲ್ಲ!)

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post