ಬೊಗಳೆ ರಗಳೆ

header ads

ಬೊಗಳೂರು ವಿಶೇಷ ವರದ್ದಿಗಾರರಾಗಿ ಭಾರರಾಜ್ ಹಂಸಧ್ವಜ!


[ಬೊಗಳೂರು ನೇಮಕಾತಿ ಬ್ಯುರೋದಿಂದ]
ಬೊಗಳೂರು, ಮೇ 23- ಬೊಗಳೂರಿಗೆ ಶೀಘ್ರದಲ್ಲೇ ಹೊಸ ವರದ್ದಿಗಾರರೊಬ್ಬರ ನೇಮಕವಾಗಲಿದೆ ಎಂದು ನಾವು ಈ ಮೂಲಕ ಘೋಷಿಸಲು ಬಯಸುತ್ತಿದ್ದೇವೆ. ಈ ರೀತಿಯ ಬದಲಾವಣೆಗೆ ಪ್ರಮುಖ ಕಾರಣವೆಂದರೆ ಬೊಗಳೂರು ದೇಶದ ದಕ್ಷಿಣ ಭಾಗದಲ್ಲಿರುವ ಕರ್‌ನಾಟಕ ಎಂಬ ರಾಜ್ಯದಲ್ಲಿ ನಡೆಯುತ್ತಿರುವ ಅರಾಜಕೀಯ ವಿದ್ಯಮಾನಗಳು.

ಹೇಗಿದ್ದರೂ ಬೊಗಳೆ ರಗಳೆ ಪತ್ರಿಕೆಗಿರುವುದು ಏಕ ಸದಸ್ಯ ಬ್ಯುರೋ. ಒಬ್ಬರೇ ವರದ್ದಿ ತರಬೇಕು, ಒಬ್ಬರೇ ಬರೆಯಬೇಕು, ಒಬ್ಬರೇ ತಿದ್ದಬೇಕು, ಒಬ್ಬರೇ ಪುಟಕ್ಕೆ ಹಾಕಬೇಕು, ಒಬ್ಬರೇ ಪ್ರಕಟಿಸಬೇಕು ಮತ್ತು ಕೊನೆಗೆ ಒಬ್ಬರೇ ಓದಬೇಕು! ಹೀಗಾಗಿ, ನಾಟಕ ರಾಜ್ಯದ ರಾಜಭವನದಲ್ಲಿ ಆಡಳಿತ ಪಕ್ಷದ ಶಾಸಕರ ಭೇಟಿಗೆ ಮತ್ತು ಅಧಿವೇಶನ ಕರೆಯುವ ಪ್ರಕ್ರಿಯೆಯನ್ನೆಲ್ಲಾ ಆರಂಭಿಸಲು 'ತೀವ್ರವಾದ ಸಿಬ್ಬಂದಿ ಕೊರತೆ' ಇದೆ ಎಂಬ ಸತ್ಯಾಂಶದ ಹೊರತಾಗಿಯೂ, ಸರಕಾರ ಸರಿ ಇಲ್ಲ, ಇಲ್ಲಿ Cong-stitutional ಬಿಕ್ಕಟ್ಟು ಉದ್ಭವವಾಗಿದೆ, ಹೀಗಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿ ಎಂಬ ಒಂದೇ ಒಂದು ಸಾಲಿನ "ವಿಶೇಷ ವರದ್ದಿ"ಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟಿರುವ ರಾಜ್ಯಪೌಲ್, ಶ್ರೀಯುತ ಭಾರರಾಜ ಹಂಸಧ್ವಜರನ್ನೇ ಬೊಗಳೂರಿನ ವಿಶೇಷ ವರದ್ದಿಗಾರರಾಗಿ ನೇಮಿಸಲು ಸೊಂಪಾದಕರು ತೀರ್ಮಾನಿಸಿದ್ದಾರೆ.

ಇದರ ಹಿಂದೆ ಇರುವ ಹಲವಾರು ಉದ್ದೇಶಗಳು, ಯಾಕೆ ನೇಮಿಸಲಾಯಿತು ಎಂಬ ಕುರಿತಾದ ನೆಪಗಳು, ಕಾರಣಗಳನ್ನು ಏಕಸದಸ್ಯ ಬ್ಯುರೋದ ಏಕೈಕ ಓದುಗ ಮಹಾಶಯರೆದುರು (ಯಾಕೆಂದರೆ, ಈ ವರದ್ದಿಯನ್ನು ಓದುತ್ತಿರುವುದು ನೀವು ಮಾತ್ರ ಅಲ್ಲವೇ???) ಇಡುವುದು ನಮ್ಮ ಬೊಗಳೂರು ಬೀರುವಿನ ಆದ್ಯ ಕರ್ತವ್ಯ.

ಮೊದಲನೆಯದಾಗಿ, ಸಿಬ್ಬಂದಿ ಕೊರತೆಯಿದ್ದರೂ, ವಿರೋಧ ಪಕ್ಷಗಳ ಮುಖಂಡರಾದ ಸಿ. ಧರಾಮಯ್ಯ, ಡಾಕ್ಟರ್ಜೀಪರ ಮೇಶ್ವರ, ನಿದ್ರೇವೇಗೌಡ, ಕು.ಮರಸ್ವಾಮಿ ಮುಂತಾದವರ ಭೇಟಿಗೆ ಅದು ಹೇಗೋ ಅವಕಾಶಗಳನ್ನೆಲ್ಲಾ ಮಾಡಿಕೊಂಡು, ವಿಶೇಷ ವರದ್ದಿ ತಯಾರಿಸಿ ಕಳುಹಿಸಿರುವ ಅವರ ಕಾರ್ಯನಿಷ್ಠೆಯು ಬೊಗಳೂರು ಸೊಂಪಾದಕರಿಗೆ ನುಂಗಲಾರದ ಇಷ್ಟವಾಗಿದೆ.

ಎರಡನೇಯದು ಎಂದರೆ, ಈ ಮೊದಲು ಕೂಡ ಇಂತಹಾ ವಿಶೇಷ ವರದಿಯನ್ನು ಕಳುಹಿಸಿ, ರಾಜ್ಯದಲ್ಲಿ ಅರಾಜಕತೆಯ ವಾತಾವರಣ ಸೃಷ್ಟಿ ಮಾಡಿದ್ದಾಗಲೂ ಕೇಂದ್ರವು ಇಂಥದ್ದೇ ವರದ್ದಿಯನ್ನು ಕಸದಬುಟ್ಟಿಗೆ ಹಾಕಿತ್ತು. ಆದರೂ ಛಲಬಿಡದ ತ್ರಿವಿಕ್ರಮನಂತೆ, ಅಡಿಗೆ ಬಿದ್ದರೂ ಮೂಗು ಮೇಲೆಯೇ ಮಾಡಿಕೊಳ್ಳುತ್ತಾ, ಉಗಿಸಿಕೊಂಡರೂ ಧೈರ್ಯಗುಂದದೆ, ಈ ಬಾರಿ ಮೇಢಂರನ್ನು ಮೆಚ್ಚಿಸಿಯೇ ಸಿದ್ಧ ಎಂಬ ಕಾರಣಕ್ಕೆ 'ಮರಳಿ ಯತ್ನವ ಮಾಡಿ' ವರದ್ದಿ ಕಳುಹಿಸಿದ್ದಾರೆ.

ಹಳೆಯ ವರದಿಗೇ ಒಂದಿಷ್ಟು ಬಣ್ಣ ಹಚ್ಚಿ, ರೆಕ್ಕೆ ಪುಕ್ಕ ಜೋಡಿಸಿ, 'ಈ ಬಾರಿ ಗುರಿ ಮುಟ್ಟುತ್ತದೋ' ಎಂಬ ಕಾತರದಿಂದ ಚಾತಕ ಪಕ್ಷಿಯಂತೆ ಕುಳಿತ ಹಂಸಧ್ವಜ ಭಾರರಾಜರು, ಈಗ ರಾಜ್ಯದಲ್ಲಿ ಯಾವುದೇ ಸಮಸ್ಯೆಗಳಿಲ್ಲದಿದ್ದರೂ, ಸರಕಾರಕ್ಕೆ ಒಂದಷ್ಟು ಕೆಲಸ ಮಾಡಲು ಅವಕಾಶ ಸಿಕ್ಕಿತು ಎಂದಾಗುವಾಗ, ಮತ್ತದೇ ವರದ್ದಿಯನ್ನು ಕಳುಹಿಸುವ ಅವರ ಛಾತಿಯು ಕೂಡ ಬೊಗಳೂರು ಬ್ಯುರೋದ ಸೊಂಪಾದಕರಿಗೆ ಇಷ್ಟವಾಗಿದೆ ಎಂದು ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

 1. ಭಾರರಾಜರು ಒಂದಾನೊಂದು ಕಾಲದಲ್ಲಿ ಕೇಂದ್ರವಿಲ್ಲದ ಸರಕಾರದಲ್ಲಿ ಬೇಕಾಯದೇಶೀರ ಮಂತ್ರಿಗಳಾಗಿದ್ದರಂತೆ. ಹೀಗಾಗಿ ಅವರ ವರದ್ದಿಗಳೆಲ್ಲವೂ Cong-stitutional ಆಗಿರುವದರಲ್ಲಿ ಸಂದೇಹವಿಲ್ಲ. ಬೊಗಳೂರು ಪತ್ರಿಕೆಗೆ ಜಯವಾಗಲಿ!

  ಪ್ರತ್ಯುತ್ತರಅಳಿಸಿ
 2. ಸೊಂಪಾದಕರೆ, ಹೊಸ ವಿಶೇಷ ವರದ್ದಿಗಾರರು ಬಂದಿರೋದ್ರಿಂದ ಇನ್ನು ಮೇಲೆ ನಿಮ್ಮ ಮೇಲಿನ ಕೆಲಸದ ಒತ್ತಡ ತಗ್ಗಿ ಹೆಚ್ಚಿನ ವರದ್ದಿಗಳು ಬರುತ್ತವೆ ಅಂತ ಆಶಿಸ್ತೀನಿ ;)

  ಪ್ರತ್ಯುತ್ತರಅಳಿಸಿ
 3. ಸುನಾಥರೇ,
  ನೀವು ಜಯಕಾರ ಹಾಕಿದ್ದು ಅರಾಜಕಭವನಕ್ಕೇ ತಲುಪಿ, ಅದರೊಳಗಿರುವವರು ಯಾಕೋ ಸುಮ್ಮನಾಗಿದ್ದರೇಂತ ತಿಳಿದುಬಂದಿದೆ.

  ಪ್ರತ್ಯುತ್ತರಅಳಿಸಿ
 4. ಕೃತ್ತಿವಾಸಪ್ರಿಯರೇ,
  ಊರಿಗೆ ಹೋಗಿ ನಮಗೇನೂ ತಾರದೆ ತಲೆ ಮರೆಸಿಕೊಂಡಿರುವ ನಿಮ್ಮಿಂದಾಗಿಯೇ ಒತ್ತಡ ಹೆಚ್ಚಿ, ವರದ್ದಿಗಳು ತಗ್ಗಿವೆ ಅಂತ ತಿಳಿದುಬಂದಿದ್ದು, ಈಗ ವರದ್ದಿಗಾರರು ಮೌನವಾಗಬೇಕಾಗಿ ಬಂದಿದೆ ಎಂದೂ ತಿಳಿಸಲು ಇಚ್ಛೆ ಪಡುವುದಿಲ್ಲ.

  ಪ್ರತ್ಯುತ್ತರಅಳಿಸಿ
 5. ವಿ.ಆರ್.ಭಟ್ಟರೇ,
  ಬೊಗಳೂರಿಗೆ ಸುಸ್ವಾಗತ.
  ನೀವು ರಿಪೀಟ್ ಮಾಡ್ತೀರಾದರೆ, ಬೊಗಳೂರಿಗೆ ಅರ್ಜಿ ಸಲ್ಲಿಸಬಹುದು. ಹಂಸಧ್ವಜ ಭಾರರಾಜರೂ ರಾಷ್ಟ್ರಪತಿ ಆಳ್ವಿಕೆಯ ವರದ್ದಿಯನ್ನು ರಿಪೀಟ್ ಮಾಡಿ ಕೇಂದ್ರಕ್ಕೆ ಕಳುಹಿಸಿದ್ದರು. ಗೊತ್ತಲ್ವಾ????

  ಪ್ರತ್ಯುತ್ತರಅಳಿಸಿ
 6. Nimma blog ge idu nanna modala bheti, tumba chenaagi moodi bandide :)

  ಪ್ರತ್ಯುತ್ತರಅಳಿಸಿ
 7. ಅನಾನಿಮಸ್ಸರೇ,
  ನಿಮ್ಮ ಬೊಗಳೆಗೆ ನಿಮ್ಮ ಪಾದಸ್ಪರ್ಶದಿಂದ ಪರಮ ಪಾವನವಾಗಿದೆ. ಆದರೆ ತುಂಬಾ ಚೆನ್ನಾಗಿದೆ ಅಂತೆಲ್ಲಾ ತೆಗಳಿ ತೆಗಳಿ ಮರ್ಯಾದೆ ತೆಗೆಯಬೇಡಿ. ಬರುತ್ತಾ ಇರಿ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D