ಬೊಗಳೆ ರಗಳೆ

header ads

ಬೊಗಳೆ ಬ್ರೇಕ್: ಮಾರ್ಕೆಟ್ಟಲ್ಲಿ ನಕಲಿ ಈರುಳ್ಳಿ ಹಾವಳಿ

[ಬೊಗಳೂರು ಕಣ್ಣೀರುಳ್ಳಿ ತನಿಖಾ ಬ್ಯುರೋದಿಂದ]
ಬೊಗಳೂರು, ಜ.10- ನೂರಿನ್ನೂರು ಗ್ರಾಂ ಈರುಳ್ಳಿ ಖರೀದಿಸಿದವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಗಲಿಬಿಲಿಗೊಂಡಿರುವ ಈರುಳ್ಳಿ ದಾಸ್ತಾನುಗಾರರು, ಇದೀಗ ನಕಲಿ ಈರುಳ್ಳಿಗಳನ್ನು ತಯಾರಿಸಿ ಮಾರುಕಟ್ಟೆಗೆ ಇಳಿಸಿರುವುದಾಗಿ ವರದ್ದಿಗಳು ತಿಳಿಸಿವೆ.

ಇತ್ತೀಚೆಗೆ ಬೊಗಳೂರು ಬ್ಯುರೋದ ಏಕೈಕ ಸದಸ್ಯರನೇಕರು ಖರೀದಿಸಿದ ಈರುಳ್ಳಿಗಳನ್ನು ಎಷ್ಟೇ ಕೊಯ್ದರೂ ಕಣ್ಣಲ್ಲಿ ನೀರು ಬರುತ್ತಿರಲಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗಿ, ವರ್ತಕರು ಮಾರುತ್ತಿದ್ದುದು ನಕಲಿ ಈರುಳ್ಳಿ ಎಂದು ಸ್ಪಷ್ಟಗೊಂಡಿದೆ. ಆದರೆ ಅವರಲ್ಲಿ ಬೆಲೆ ಹೇಳಿದ ನಂತರವಷ್ಟೇ ಕಣ್ಣಲ್ಲಿ ನೀರುಬರುತ್ತಿತ್ತು.

ಈಗ ಉಳ್ಳಾಗಡ್ಡಿ ನಕಲಿ ಎಂಬೊಂದು ಶಂಕೆ ಬರುವುದಕ್ಕೂ ಕಾರಣವಿದೆ. ಉಳ್ಳವರಿಗೆ ಮಾತ್ರವೇ ಆಗಿಬಿಟ್ಟಿರುವ ಉಳ್ಳಾಗಡ್ಡಿಯನ್ನು ರಾಜಕಾರಣಿಗಳ ಮನೆಯಲ್ಲಿ ಗಾಡಿ ಗಾಡಿ ಪ್ರಮಾಣದಲ್ಲಿ ಕೊಂಡು ತಂದು ಮನೆಯಲ್ಲಿ ಕತ್ತರಿಸುತ್ತಿದ್ದಾಗ ಯಾರ ಕಣ್ಣಲ್ಲಿಯೂ ಒಂದಿನಿತೂ ನೀರು ಬರುತ್ತಿರಲಿಲ್ಲ. ಇದಕ್ಕೆ ಕಾರಣವೆಂದರೆ, ಜನ ಸಾಮಾನ್ಯರು ತೆರಿಗೆ ಕಟ್ಟಿದ ಹಣ ಸರಕಾರದ ಖಜಾನೆಯಲ್ಲಿ ಕೊಳೆಯುತ್ತಿದೆ ಎಂಬ ಕಾರಣಕ್ಕೆ ಈ ಮಂತ್ರಿಗಳು, ಮಾಗಧರು, ರಾಜಕಾರಣಿಗಳೆಲ್ಲರೂ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಖರೀದಿಸಿಟ್ಟುಕೊಳ್ಳುತ್ತಿದ್ದರು. ಸಂಸತ್ತಿನಲ್ಲಿ, ಶಾಸನ ಸಭೆಗಳಲ್ಲಿ ಕೂಡ ಬೇಕಾದಷ್ಟು ಬಿಟ್ಟೀರುಳ್ಳಿ ದೊರೆಯುತ್ತಿತ್ತು. ಹೇಗಿದ್ದರೂ Unprecedented Price Agenda ಸರಕಾರವಲ್ಲವೇ! ಈರುಳ್ಳಿ ಏನಾಯಿತು ಎಂಬುದನ್ನು ನೋಡಲು ಕೃಷಿ ಮಂತ್ರಿಗೆ ಪುರುಸೊತ್ತಿರಲಿಲ್ಲ.

ಈ ಎಲ್ಲ ಕಾರಣಕ್ಕಾಗಿ, ರಾಜಕಾರಣಿಗಳು ಇವನ್ನು ತಂದು ಕತ್ತರಿಸಿದಾಗ ಅವರೆಲ್ಲರಿಗೂ ಒಂದಿನಿತೂ ನೀರು ಬರುತ್ತಿರಲಿಲ್ಲ. ಆದರೆ, ಜನ ಸಾಮಾನ್ಯರು ಮಾತ್ರವೇ ಈ ಈರುಳ್ಳಿಯ ಬೆಲೆಯನ್ನು ಕೇಳಿದ ತಕ್ಷಣವೇ ಕಣ್ಣಲ್ಲಿ ನೀರು ಹೊಸಸೂಸುತ್ತಿತ್ತು. ಹೀಗಾಗಿ, ಖಂಡಿತವಾಗಿಯೂ ಇದು ನಕಲಿ ಈರುಳ್ಳಿ ಎಂಬುದು ದೃಢಪಟ್ಟಿದೆ. ಇದು ಜನ ಸಾಮಾನ್ಯರ ಕಣ್ಣಲ್ಲಿ ರಕ್ತ ಕಣ್ಣೀರು ಸುರಿಸುತ್ತಿರುವುದರಿಂದಾಗಿ ಬೊಗಳೂರು ಬ್ಯುರೋ ಇದಕ್ಕೆ ರಕ್ತ ಕಣ್ಣೀರುಳ್ಳಿ ಎಂದೂ ನಾಮಕರಣ ಮಾಡಿ ಉತ್ಸವಾಚರಣೆ ಮಾಡಿದೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಅನ್ವೇಷಿಯವರೆ,
    ನಿಮ್ಮ ವಿವರಣೆ ಓದಿದ ಮೇಲೆ,ಬಸವಣ್ಣನವರ ವಚನದ ಅರ್ಥ ಹೊಳೆಯಿತು ನೋಡಿ:
    "ಉಳ್ಳವರು ಗಡ್ಡಿಯನು ಕೊಚ್ಚುವರಯ್ಯಾ, ನಾನೇನು ಕೊಚ್ಚಲಿ ಬಡವನಯ್ಯಾ!
    ಕಣ್ಣಲ್ಲಿ ನೀರು, ಮನದಲ್ಲಿ ನೀರುಳ್ಳಿ, ಇದೇ ಮಹಾಪ್ರಸಾದ ಎನ್ನುವೆನಯ್ಯಾ!
    ಕೂಡಲ ಸಂಗಯ್ಯಾ, ನಿನಗೆ ಬಾನವನಿಕ್ಕುವದು ನನ್ನ ಅಳವಲ್ಲವಯ್ಯಾ!"

    ಪ್ರತ್ಯುತ್ತರಅಳಿಸಿ
  2. ಈರುಳ್ಳಿಯ ಹೆಚ್ಚುವಾಗ ಬರುತ್ತಿದ್ದ ಕಣ್ಣೀರು ಈಗ ಈರುಳ್ಳಯನ್ನು ನೆನೆಸಿದರೇ ಬರುತ್ತಿದೆ, ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು !

    ಪ್ರತ್ಯುತ್ತರಅಳಿಸಿ
  3. ಗುರುವೇ,
    ನಾವು ದುಬಾರಿ ಈರುಳ್ಳಿ-ಬೆಳ್ಳುಳ್ಳಿ ಖರೀದಿಸುತ್ತೇವೆಂದು http://shaanidesk.blogspot.com/2011/01/blog-post.html ಇಲ್ಲಿ ಬಟಾಂಬಯಲು ಮಾಡಿದ್ದರೂ ನಮ್ಮ ಮನೆ ಮೇಲೆ IT ದಾಳಿ ಆಗಲೇ ಇಲ್ಲ. ಹಾಗಾದರೂ ಸುದ್ದಿಗೆ ಬೀಳುತ್ತೇವೋ ಎಂದು ಆಸೆಯಿಂದ ಕಾಯ್ದಿದ್ದೆ. ನಿಮ್ಮ ಬೊಗಳೆ ಬೀರೋದ ವರದ್ಧಿಗಾರರಿಗೆ ದಮ್ಮಿದ್ದರೆ ಈ ಕುರಿತು ತನಿಖಾ ವರದ್ಧಿ ನೀಡಲಿ! ಇದು ಈರುಳ್ಳಿ ಸವಾಲು

    ಪ್ರತ್ಯುತ್ತರಅಳಿಸಿ
  4. ರಜನೀಕಾಂತ್ ಜೋಕ್ಸ್ ಅವರೇ,
    ನೀವೇ ಚೆನ್ನಾಗಿದೆ ಎಂದ್ಮೇಲೆ ನಾವಿನ್ನು ಬದುಕುಳಿಯೋದುಂಟೆ? ರಜನೀಕಾಂತ್ ಚೆನ್ನೈಯಾಗೆ ಅಲ್ಲವೇ ಇರೋದು?

    ನಿಮಗೆ ಬೊಗಳೂರಿಗೆ ಸ್ವಾಗತ.

    ಪ್ರತ್ಯುತ್ತರಅಳಿಸಿ
  5. ಸುನಾಥರೇ,
    ನಿಮಗೆ ಬಸವಣ್ಣ ವಚನ ಹೊಳೆದಿದ್ದಕ್ಕೂ ಒಂದು ಕಾರಣವಿದೆ. ಈರುಳ್ಳಿ ಒಂದು bulb ಅಲ್ವೇ? ಅದರ ರೇಟು ಜೋರಾಗಿ, ಈ ಬಲ್ಬು ಉರಿದು ಪ್ರಕಾಶ ಹೆಚ್ಚಾಗಿದ್ದೇ, ನಿಮಗೆ ವಚನ ಫಳಫಳನೆ ಹೊಳೆಯುವುದಕ್ಕೆ ಕಾರಣವಾಗಿದೆ ಅಂತಲೂ ಪತ್ತೆ ಹಚ್ಚಿದ್ದೇವೆ.

    ಪ್ರತ್ಯುತ್ತರಅಳಿಸಿ
  6. ವಿ.ಆರ್.ಭಟ್ಟರೇ,
    ಈಗಿನ ಪರಿಸ್ಥಿತಿಯಲ್ಲಿ, ಸತ್ಯ ಹೇಳದವನೇ ಕಡು ಜಾಣ ಎಂಬಂತಾಗಿರುವುದರಿಂದ ಮತ್ತು ಏನೇ ಅಸತ್ಯ ಹೇಳಿದರೂ ಅದು ಸತ್ಯವೇ ಆಗಿರುವುದರಿಂದ ದಾರಿ ಕಾಣದಾಗಿದೇ ರಾಘವೇಂದ್ರರೇ...

    ಪ್ರತ್ಯುತ್ತರಅಳಿಸಿ
  7. ಶನಿ ಶಿಷ್ಯೋತ್ತಮರೇ,
    ನೀವು ಹಾಕಿದ ಈರುಳ್ಳಿ ಸವಾಲಿನಲ್ಲಿ ಅಮೂಲ್ಯವಾಗಿರುವ ಈರುಳ್ಳಿಯನ್ನು ಮಾತ್ರವೇ ತೆಗೆದುಕೊಂಡಿದ್ದೇವೆ. ಸವಾಲು ನಿಮ್ಮಲ್ಲೇ ಇರಲಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D