Subscribe Us

ಜಾಹೀರಾತು
header ads

Barking News!: ಮಕ್ಕಳೆಲ್ಲಾ ನಿಗೂಢ ನಾಪತ್ತೆ!

[ಬೊಗಳೂರು ತನಿಖಾ ಬ್ಯುರೋದಿಂದ]
ಬೊಗಳೂರು, ಡಿ.2- ಬುಧವಾರದಿಂದೀಚೆಗೆ ಅಂಗನವಾಡಿಗಳಲ್ಲಿ, ಶಾಲೆಗಳಲ್ಲಿ ಮಕ್ಕಳು ದಿಢೀರ್ ನಾಪತ್ತೆಯಾಗುತ್ತಿರುವ ಘಟನೆ ಇಡೀ ಬೊಗಳೂರು ರಾಷ್ಟ್ರಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು, ಇದರ ತನಿಖೆಗೆ ಸಿಬಿಐ, ಸಿಐಡಿ, ಸೇನೆ, ಪೊಲೀಸ್ ಇಲಾಖೆಗಳೆಲ್ಲವೂ, ಜೊತೆಗೆ ಹೋಂ ಗಾರ್ಡ್ಸ್, ನಾಗರಿಕ ಪೊಲೀಸರು, ಮೋರಲ್ ಪೊಲೀಸರು ಕೂಡ ಹೊರಟಿದ್ದಾರೆ ಎಂದು ವರದಿಯಾಗಿದೆ.

ಈ ಎಲ್ಲಾ ತನಿಖಾ ಏಜೆನ್ಸಿಗಳು ತೀವ್ರ ತಪಾಸಣೆ, ತನಿಖೆ, ಸಂಶೋಧನೆ, ಪರಿಶೋಧನೆ, ಪರೀಕ್ಷೆ, ಪರಿಶೀಲನೆ, ತಪಾಸಣೆ ಎಲ್ಲವನ್ನೂ ನಡೆಸಿ ಇದಕ್ಕೆ ಕಾರಣವೇನೆಂಬುದನ್ನು ಪತ್ತೆ ಹಚ್ಚುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು 'ಮಕ್ಕಳೇ ರಾಜಕೀಯಕ್ಕೆ ಬನ್ನಿ' ಎಂದು ಇಲ್ಲಿ ಆಹ್ವಾನ ನೀಡಿರುವುದು.

ನೆಟ್ಟೋದುಗ ಅಂಗನವಾಡಿ ಮಕ್ಕಳೆಲ್ಲಾ ನೆಟ್ ಬಿಟ್ಟೋಡುಗರಾಗಿ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪತ್ತೆಯಾಗಿರುವುದನ್ನು ಇದೇ ಸಂದರ್ಭ ಬೊಗಳೆ ರಗಳೆ ಬ್ಯುರೋದ ಏಕ ಸದಸ್ಯ ತನಿಖಾ ತಂಡದ ಎಲ್ಲ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ.

ಆದರೆ, ಇದೇ ಸಂದರ್ಭ ಕೆಲವು ಮಕ್ಕಳು ಅದಾಗಲೇ ಅಳಲಾರಂಭಿಸಿದ್ದು, ತಮ್ಮ ತಮ್ಮ ಮನೆಗೆ ಜೋಲು ಮೋರೆ ಹಾಕಿಕೊಂಡು ಹಿಂತಿರುಗಲಾರಂಭಿಸಿದ್ದವು. ಅಲ್ಲೇ ಇದ್ದ ಮಕ್ಕಳ ರಾಶಿಯಲ್ಲಿ ಒಂದೆರಡು ಮಕ್ಕಳನ್ನು ಹೆಕ್ಕಿಕೊಂಡು ತಡೆದು ನಿಲ್ಲಿಸಿ ಮಾತನಾಡಿಸಿದಾಗ, ಯಾಕೆ ಆಳುತ್ತಿರುವುದು ಎಂಬ ಪ್ರಶ್ನೆಗೆ ತೊದಲು ನುಡಿಯ ಉತ್ತರವೂ ದೊರಕಿತು.

ಈ ಚಿಳ್ಳೆ ಪಿಳ್ಳೆಗಳು ಅಳುತ್ತಲೇ ಹೇಳಿದ ಉತ್ತರ: "ಅವರು ಹೇಳಿದ್ದು ಬರೇ ಮಕ್ಕಳ ಬಗ್ಗೆ ಅಲ್ಲ, ರಾಜಕಾರಣಿಗಳ ಮಕ್ಕಳ ಬಗ್ಗೆ ಮಾತ್ರ. ರಾಜಕಾರಣಿಗಳ ಮಕ್ಕಳಿಗೆ ಮಾತ್ರವೇ ಅವರು ಟಿಕೆಟ್ ನೀಡ್ತಾರಂತೆ. ಉಳಿದರೆ, ರಾಜಕಾರಣಿಗಳ ಪತ್ನಿಯರಿಗೂ ಟಿಕೆಟ್ ನೀಡ್ತಾರಂತೆ!"

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ನಿಮ್ಮ ಏಕ ಸದಸ್ಯ ತನಿಖಾ ತ೦ಡದ ಸದಸ್ಯರುಗಳ ಪರಿಚಯ ಓದುಗರಿಗೂ ಮಾಡಿಕೊಟ್ಟಲ್ಲಿ ತನಿಖಾ ಕಾರ್ಯಗಳಲ್ಲಿ ಉಚಿತವಾಗಿ ಅವರುಗಳನ್ನು ಬಳಸಿಕೊಳ್ಳಲು ಸಹಾಯವಾಗುವುದು. ಯಾವುದಕ್ಕೂ ವಿಚಾರ ಮಾಡಿ.

  ಪ್ರತ್ಯುತ್ತರಅಳಿಸಿ
 2. ಗಾಂಧೀವೇದದಾಗನ ಹೇಳ್ಯಾರಲ್ರೀ:
  "ಇಂದಿನ (ರಾಜಕಾರಣಿಗಳ) ಮಕ್ಕಳೇ ನಾಳಿನ ಶಾಸಕರು" ಅಂತ!

  ಪ್ರತ್ಯುತ್ತರಅಳಿಸಿ
 3. ಚುಕ್ಕಿಚಿತ್ತಾರ ಅವರೆ,
  ನಾವು ಈಗಾಗಲೇ ಬಯಲಲ್ಲೇ ನಿಂತಿರುವುದರಿಂದ ಬಯಲುಗೊಳಿಸುವುದಕ್ಕೆ ಏನೂ ಉಳಿದಿಲ್ಲ. ಆದರೂ ಯಾವುದಕ್ಕೂ ವಿಚಾರ ಮಾಡಿ ಎಂಬ ನಿಮ್ಮ ಮಾತಿನಲ್ಲಿ ಏನೋ ಉದ್ಯೋಗದಾತರ ಲಕ್ಷಣವು ಕಂಡು ಬಂದಿರುವುದರಿಂದಾಗಿ, ಡೀಲ್ ಕುದುರಿಸುವುದಕ್ಕೇ ಇರಬೇಕು ಎಂಬ ಆಶಾವಾದವೂ ನಮ್ಮಲ್ಲಿದೆ. ಡೀಲಾ ನೋಡೀಲಾ ಅಂತ ನಿರ್ಣಯ ಮಾಡಿ ಹೇಳ್ತೀವಿ.

  ಪ್ರತ್ಯುತ್ತರಅಳಿಸಿ
 4. ಸುನಾಥರೆ,
  ಗಾಂಧಿ (ಇಂದಿರಾ-ಫಿರೋಜ್ ಗಂದಿ) ಪ್ರಣೀತ ತತ್ವ ತಿಳಿಸಿಕೊಟ್ಟಿದ್ದಕ್ಕೆ ನಮ್ಮೆಲ್ಲಾ ಓಡುಗರು ಸಂತೋಷದಿಂದ ಕುಪ್ಪಳಿಸುತ್ತಿದ್ದಾರೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D