(ಬೊಗಳೂರು ಬಾಲ ಕರುಗಳ ಬ್ಯುರೋದಿಂದ)
ಬೊಗಳೂರು, ನ.15- ಕರ್ನಾಟಕ ರಾಜ್ಯೋತ್ಸವಕ್ಕೂ ಎಚ್ಚರವಾಗದ ಬೊಗಳೂರು ಬ್ಯುರೋ ವಿರುದ್ಧ ಕನ್ನಡ ವಿರೋಧಿ ಪತ್ರಿಕೆ ಎಂದು ಕನ್ನಡ ಹೋರಾಟಗಾರರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿರುವಂತೆಯೇ, ನಾವೇನೂ ಗಣಿ ಧಣಿಗಳೊಂದಿಗೆ ಸೇರಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿರುವ ಬೊಗಳೂರು ಸೊಂಪಾದಕರುಗಳು, ಇದೀಗ ಮಕ್ಕಳ ದಿನಾಚರಣೆಯ ದಿನ ಎಚ್ಚೆತ್ತುಕೊಳ್ಳಲು ನಿರ್ಧರಿಸಿದ್ದರಾದರೂ, ಅದು ಕೂಡ ಡೇಟ್ ಬಾರ್ ಆಗಿ ಹೋಗಿರುವುದಕ್ಕೆ ಯಾವುದೇ ಬಾರ್ ಕಾರಣವಲ್ಲ ಎಂದು ಸ್ಪಷ್ಟಪಡಿಸಲಾಗುತ್ತಿದೆ.

ಮಕ್ಕಳ ದಿನಾಚರಣೆ ಅದು ಕೂಡ ಎರಡನೇ ಶನಿವಾರ ಬಂದ ಕಾರಣದಿಂದಾಗಿ ಮಕ್ಕಳು ಮತ್ತು ಮರಿಗಳೆಲ್ಲಾ ಕೆಂಡಾಮಂಡಲವಾಗಿದ್ದುದು ಅವುಗಳ ಮುಖಾರವಿಂದ ನೋಡಿದಾಗಲೇ ಗೊತ್ತಾಗಿಬಿಟ್ಟಿತ್ತು ಬೊಗಳೂರು ಬ್ಯುರೋಗೆ. ಒಂದೊಂದೇ ಬಾಲದಕರುಗಳನ್ನು ವಿಚಾರಿಸುವುದು ಕಷ್ಟಕರ ಸಂಗತಿ ಎಂದು ತಿಳಿದ ಹಿನ್ನೆಲೆಯಲ್ಲಿ, ಅತ್ಯಂತ ಸುಲಭವಾದ ಬಾಲ-ಕರುಗಳ ಸಂಘವನ್ನು ಪ್ರವೇಶಿಸಲಾಯಿತು.

ಅವರು ಅದಾಗಲೇ ಬೊಗಳೂರು ಬ್ಯುರೋ ಸಿಬ್ಬಂದಿಗಾಗಿ ಕಾಯುತ್ತಿರುವಂತೆ ಕಂಡುಬಂದಿತ್ತು ಮತ್ತು ನಮ್ಮ ಸಿಬ್ಬಂದಿ ಹೊಕ್ಕ ತಕ್ಷಣ ಇದು ಪತ್ರಿಕಾಗೋಷ್ಠಿ ಎಂದು ಘೋಷಿಸಿ ಮಾತನಾಡತೊಡಗಿದರು.

ಮುಖ್ಯವಾಗಿ ಈ ಪತ್ರಿಕಾಗೋಷ್ಠಿ ಕರೆದಿರುವುದು ಮಕ್ಕಳಿಗೂ ಸಮಾನತೆ ಬೇಕು ಎಂಬುದನ್ನು ಹೇಳುವುದಕ್ಕಾಗಿ ಎಂದು ಬಾಲ-ಕರುಗಳ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಲ ಅವರು ಘೋಷಿಸಿದರು.

ನಮಗೆ ಅಂಗನವಾಡಿಗಳಲ್ಲಿ ನರ್ಸರಿ ರೈಮ್ ಹೇಳಿಕೊಡಲಾಗುತ್ತದೆ. ಹೇಳಿದ್ದನ್ನೇ ಹೇಳಿ ಹೇಳಿ ಸಾಕಾಗಿದೆ. ಆದರೆ, ಅದೇ ಬೆಳೆದುಬಿಟ್ಟ ಬಾಲಕರ ಬಾಯಲ್ಲಿ ಸಿನಿಮಾ ಪದಗಳು, ಮಚ್ಚು-ಗಿಚ್ಚು, ಹಳೇ ಪಾತ್ರೆ ಹಳೇ ಕಬ್ಣ ಮುಂತಾದ ಪದಗಳು ನಲಿದಾಡುತ್ತವೆ. ಆದರೆ ನಮಗೇಕೆ ಈ ಶಿಕ್ಷೆ ಎಂದು ಅವರು ಪ್ರಶ್ನಿಸಿದರು.

ಹೀಗಾಗಿ, ಇನ್ನು ಮುಂದೆ ನರ್ಸರಿ ರೈಮ್‌ಗಳ ಬದಲಿಗೆ ಕನ್ನಡದ ಸಿನಿಮಾ ಹಾಡುಗಳನ್ನೇ ನಮಗೆ ಕಲಿಸಬೇಕು, ಮತ್ತು ಅದನ್ನು ಬಾಲವಾಡಿ ಎಂದು ಕರೆಯಬಾರದು. ಬಾಲಶಿಕ್ಷಣ ಕೇಂದ್ರ ಎಂದು ಕರೆಯಬೇಕು ಎಂಬ ಬೇಡಿಕೆಗಳನ್ನೂ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮುಂದಿಟ್ಟರು.

ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಮುಂತಾದ ಕ್ಲಿಷ್ಟಕರ ಪದಗಳ ಉಚ್ಚಾರಣೆ ಮಕ್ಕಳಾಗಿರುವುದರಿಂದ ನಮಗೆ ಕಷ್ಟವಾಗುತ್ತದೆ. ಅದೇ ರೀತಿ ಬಾ ಬಾ ಬ್ಲ್ಯಾಕ್ ಶೀಪ್, ರೈನ್ ರೈನೇ ಗೋ ಅವೇ ಮುಂತಾದ ಅರ್ಥ ಹೀನ ಹಾಡುಗಳು ನಮಗೆ ಭವಿಷ್ಯದಲ್ಲಿ ಅಗತ್ಯವೇ ಇರುವುದಿಲ್ಲ. ಆದರೆ ಕೊಡೇ ಕಿಸ್ಸು, ಬಂತು ಬಂತು ಕರೆಂಟು ಬಂತು, ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ ಪಾಠ ಹೇಳೀ ಬನ್ನೀ... ಮುಂತಾದ ಕನ್ನಡ ಸಿನಿಮಾ ಹಾಡುಗಳನ್ನು ಈಗಲೇ ಕಲಿತುಕೊಂಡರೆ, ಮುಂದೆ ಕುಣಿಯೋಣು ಬಾರಾ, ನಲಿಯೋಣು ಬಾರಾ, ಲಿಟ್ಲ್ ಸಿಂಗರ್, ಚಾಂಪಿಯನ್ ಡ್ಯಾನ್ಸರ್ ಮುಂತಾದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ ಎಂದು ಬಾಲ ಪ್ರತಿಪಾದಿಸಿದರು.

ನಾವು ಯಾವತ್ತೋ ಕರೆದ ಪತ್ರಿಕಾಗೋಷ್ಠಿಯ ವಿವರ ಇನ್ನೂ ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲವಲ್ಲ, ಎಂಥಾ ಪತ್ರಿಕೇರೀ ನಿಮ್ದು ಎಂದು ಬಾಲ-ಕರುಗಳೆಲ್ಲ ಜೋರು ಮಾಡಿ ಮಚ್ಚು-ಲಾಂಗು ಹಿಡಿದು ಬೆದರಿಕೆಯೊಡ್ಡಿದ ಬಳಿಕವಷ್ಟೇ ಈ ವರದ್ದಿಯನ್ನು ಇಲ್ಲಿ ಪ್ರಕಟಿಸಲಾಗಿದೆ ಎಂದು ಸೊಂಪಾದಕರು ಸ್ಪಷ್ಟಪಡಿಸಿದ್ದಾರೆ.

8 Comments

ಏನಾದ್ರೂ ಹೇಳ್ರಪಾ :-D

 1. ಅನ್ವೇಷಿಯವರೇ, ನಿಜ ನೋಡಿ ಮಕ್ಕಳ ಹಾಡುಗಾರಿಕೆ ಸ್ಪರ್ಧೆಗಳಲ್ಲಿ ಅವರ ಹಾಡುಗಳ ಆಯ್ಕೆ (ಅಥವಾ..ಮಾಡುವ ಅವರ ಪೋಷಕರ ಅಥವಾ ತರಬೇತುದಾರರ ಮನಸ್ಥಿತಿ) ಹೇಳುತ್ತೆ ನಮ್ಮ ಮಕ್ಕಳು ಈಗ ಯಾವ ದಿಕ್ಕಿಗೆ ಹೊರಟಿದ್ದಾರೆ ಅಥವಾ ನಾವು ಕೊಂಡೊಯ್ಯತ್ತಿದ್ದೇವೆ ಎನ್ನುವುದು ತಿಳಿಯುತ್ತೆ, ನಿಮ್ಮ ವ್ಯಂಗ್ಯ-ವಾಸ್ತವ ಭರಿತ ಲೇಖನ ಚನ್ನಾಗಿದೆ..

  ReplyDelete
 2. ಬೊಗಳೂರು ಪತ್ರಿಕೆಯ ಸೊಂಪಾದಕರುವಿಗೆ ಏನಾಗಿಬಿಟ್ಟಿದೆ ಅಂತ ಆತಂಕವಾಗಿತ್ತು. ಈವತ್ತಿನ ಸಂತಾನ(issue)ವನ್ನು ನೋಡಿದ ಮೇಲೆ, ‘ಓಹೋ, ಕನ್ನಡ ಸಿನೆಮಾ ಹಾಡು ಕಲಿಯಲು ಹೋಗಿದ್ದರೋ’ ಅಂತ ನಿರಾಳವಾಯ್ತು. ತಪ್ಪಿಸ್ಕೋಬೇಡಿ, ಗುರೂ!

  ReplyDelete
 3. ಅನ್ವೇಷಿಗಳು ಈ ಸಲ ಬಡಿಸಿರಿ... ಕ್ಷಮಿಸಿ ನುಡಿಸಿರಿ ಗೆ ಹೋಗಲಿಲ್ಲವೆ?

  ReplyDelete
 4. ಜಲನಯನ ಅವರೆ,
  ಇದುವರೆಗೆ ನಮ್ಮ ಓದುಗರು ನಾವು ವ-ರದ್ದಿ ಮಾಡಿದ್ದನ್ನು ನಿಜವೆಂದೇ ನಂಬುತ್ತಿದ್ದರು. ನೀವಾದರೂ ವ್ಯಂಗ್ಯ ಅಂತ ವ್ಯಂಗ್ಯವಾಡಿದಿರಲ್ಲಾ... ಅಷ್ಟೇ ಸಾಕು. ಆದರೆ ಇದು 'ನಿಜ' ಅಂತ ಹೇಳಿದ್ದು ಸರಿ ಬರಲಿಲ್ಲ... ;)

  ReplyDelete
 5. ಸುನಾಥರೆ,
  ನಮ್ಮ ಸೊಂಪಾದ ಕರು ತಪ್ಪಿಸಿಕೊಂಡು ಹೋಗಿದ್ದು ಹೌದು. ಮತ್ತೆ ಇನ್ನು ಮುಂದೆ ತಪ್ಪಿಸಿಕೊಂಡು ಹೋಗಲ್ಲ ಅಂತ ಅಸತ್ಯವಾಗಿಯೂ ಭಾಷೆ ಕೊಡುತ್ತಿದ್ದೇವೆ.

  ReplyDelete
 6. ಶ್ರೀನಿಧಿಯವರೆ,
  ಕಳೆದ ಬಾರಿ ಬಡಿಸಿದ್ದೇ ಅರಗಿರಲಿಲ್ಲ. ಮತ್ತು ಆವತ್ತು ನುಡಿಸಿರಿಯನ್ನು ನಾವು ಕುಡಿಸಿರಿ ಅಂತ ತಪ್ಪಾಗಿ ತಿಳಿದುಕೊಂಡಿದ್ದರಿಂದ, ನಾವು ಈ ಬಾರಿ ಗುಡಿಸಿರಿಗೆ ಒಳಗಾಗಿದ್ದೆವು. ಹೀಗಾಗಿ ಬಡಿಸಿದ್ದನ್ನು ಕಬಳಿಸಲು ನಾವು ಹೋಗಿಲ್ಲ.

  ReplyDelete
 7. ಅಪ್ಪರೆ೦ಟ್ಲೀ ಫೇಕಿ೦ಗ್ ನ್ಯೂಸ್ ಡಾಟ್ ಕಾಮ್ ನ ಬ್ರೇಕಿ೦ಗ್ ನ್ಯೂಸ್ ಇದೇ ಆಗಿತ್ತು.
  http://www.fakingnews.com/2009/11/childrens-group-ban-all-nursery-rhymes-demand-better-treatment/

  ReplyDelete
 8. ಪ್ರಮೋದರೆ,
  ಫೇಕಿಂಗ್ ನ್ಯೂಸ್ ಬರ್ತಿರೋದು ನಮ್ಮ ಬ್ಯುರೋದಿಂದ ಅಲ್ಲ... ಮತ್ತು ನಮಗಿಂತಲೂ ಚೆನ್ನಾಗಿ ರದ್ದಿ ಬಡಿಸುತ್ತಿರುವ ಆ ಬ್ಯುರೋಗೆ ಸರಿಗಟ್ಟುವುದು ಸಾಧ್ಯವಿಲ್ಲ... ಭಾಗಶಃ ಟೈಟಲ್ ಕದ್ದಿದ್ದೇವೆ ಅಂತ ನಾವು ಯಾರಿಗೂ ಹೇಳುವುದಿಲ್ಲ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post