(ಬೊಗಳೂರು ಸಂತ್ರಸ್ತ ಸ್ಥಳಾಂತರ ಬ್ಯುರೋದಿಂದ)
ಬೊಗಳೂರು, ಅ.13- ಪ್ರವಾಹದ ಭೀತಿ ಎದುರಿಸುತ್ತಿರುವ ಹಳ್ಳಿಗಳನ್ನೇ ಸ್ಥಳಾಂತರಿಸುವ ಸರಕಾರದ ಕಾರ್ಯಕ್ರಮಕ್ಕೆ ಬೊಗಳೂರು ಒಂದು ಕಡೆಯಿಂದ ಸ್ವಾಗತಿಸಿದೆ ಮತ್ತು ಇನ್ನೊಂದು ಕಡೆಯಿಂದ ವಿರೋಧಿಸುತ್ತಿದೆ ಎಂದು ವರದಿಯಾಗಿದೆ.

ಓಟು ಪಡೆದು ನಿಧಾನಸಭೆಗೆ ಆಯ್ಕೆಯಾಗಿ ಅಲ್ಲಿ ಐದು ವರ್ಷಗಳ ಕಾಲ ನಿಧಾನವಾಗಿಯೇ ನಿದ್ದೆ ಮಾಡಿದ ಬಳಿಕ, ಮತ್ತೆ ಓಟು ಬರುವ ಹೊತ್ತಿಗೆ ನಿಧಾನವಾಗಿ ಮೇಲೆದ್ದು, ಸಕಲ ಮಂತ್ರಿ ಗಡಣ, ಹಿಂಬಾಲಕರನ್ನು ಕರೆದುಕೊಂಡು ಪ್ರವಾಹದೋಪಾದಿಯಲ್ಲಿ ಕ್ಷೇತ್ರಗಳಿಗೆ ಮಂತ್ರಿ ಮಾಗಧರು ಆಗಮಿಸುವುದರಿಂದ ಬೊಗಳೂರು ಸೇರಿದಂತೆ ಕೆಲವು ಹಳ್ಳಿಗಳ ಜನರು ಭಯಭೀತರಾಗಿದ್ದಾರೆ.

ಈ ರೀತಿ ಜಾರಕಾರಣಿಗಳ ಪ್ರವಾಹ ಬರುವ ಹಳ್ಳಿಗಳನ್ನು ಸ್ಥಳಾಂತರ ಮಾಡಿದರೆ, ಅಥವಾ ಇಂತಹಾ ಪ್ರವಾಹಗಳು ಮತ್ತೆ ಬಾರದಂತೆ ತಡೆದರೆ ಪುಣ್ಯ ಕಟ್ಟಿಕೊಟ್ಟಂತಾಗುತ್ತದೆ ಎಂದು ಬೊಗಳೂರಿನ ಜಾರಕೀಯ ಪ್ರವಾಹ ಸಂತ್ರಸ್ತರಲ್ಲೊಬ್ಬರಾದ ಬೊಗಳೇದಾಸ ಅವರು ಪ್ರತಿಕ್ರಿಯಿಸಿದ್ದಾರೆ.

ಈ ಗ್ರಾಮಗಳನ್ನು ನಿಧಾನಸೌಧ ಪಕ್ಕದಲ್ಲೇ ಇರುವ ಬೆಂಗಳೂರಿಗೆ ಸ್ಥಳಾಂತರಿಸಿದರೆ ಮತ್ತೂ ಉತ್ತಮ. ಅಲ್ಲಿನ ರಸ್ತೆಗಳಲ್ಲೇ ಹೇಗೂ ಬೇಕಾದಷ್ಟು ಹೊಂಡಾ-ಗುಂಡಿಗಳಿವೆ. ಅದರಲ್ಲೇ ಒಂದಷ್ಟು ಬೀಜ ಬಿತ್ತಿ ಕೃಷಿ ಮಾಡಬಹುದು ಎಂಬುದು ಅವರ ಮುಂದಾಲೋಚನೆ.

ಹಾಗಿದ್ದರೆ ಕಾಂಕ್ರೀಟು ಕಾಡುಗಳ ಮಧ್ಯೆ, ಕೃಷಿಗಾಗಿ ಫಲವತ್ತಾದ ಮಣ್ಣು ಬೇಡವೇ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಗಳೇದಾಸ ಅವರು, ಸಿಕ್ಕೇ ಸಿಗುತ್ತದಲ್ಲ. ಹೇಗೂ ರಸ್ತೆಗಳ ಹೊಂಡಾಗುಂಡಿಗಳಿಂದ ಸಾಕಷ್ಟು ಧೂಳು ಅಥವಾ ಮಳೆ ಬಂದರೆ ಕೆಸರು ಮೇಲೇಳುತ್ತದೆ. ಪಕ್ಕದ ಕಟ್ಟಡಗಳಿಗೆ ರಾಚಿದ ಈ ಧೂಳು ಮತ್ತು ಕೆಸರನ್ನು ತೆಗೆದು ನಾವು ರಸ್ತೆಯಲ್ಲಿ ನೆಟ್ಟ ಗಿಡಗಳ ಬುಡಕ್ಕೆ ಹಾಕುತ್ತೇವೆ. ಇದು ಫಿಲ್ಟರ್ ಆದ ಮಣ್ಣು ಆಗಿದ್ದು, ಸಾಕಷ್ಟು ಫಲವತ್ತಾಗಿರುತ್ತದೆ ಎಂದವರು ಸ್ಪಷ್ಟನೆ ನೀಡಿದರು.

ಈಗ ಸ್ಥಳಾಂತರವನ್ನು ಸ್ವಾಗತಿಸುವವರು, ಅದನ್ನು ವಿರೋಧಿಸಲು ಏನು ಕಾರಣವಿದೆ ಎಂದು ಕೇಳಿದಾಗ, ತತ್ತರಿಸಿ ಉತ್ತರಿಸಿದ ಬೊಗಳೆದಾಸ, ಅವರು ಆ ಗ್ರಾಮಗಳನ್ನು ಏನಾದರೂ ಬೊಗಳೂರಿಗೆಯೇ ಸ್ಥಳಾಂತರಿಸಿದರೆ ಎಂಬುದೇ ನಮ್ಮ ಆತಂಕ ಎಂದರು.

ಇದಕ್ಕೇಕೆ ಆತಂಕಪಡಬೇಕು ಎಂದು ಪ್ರಶ್ನಿಸಿದಾಗ, ಎಲ್ಲ ಜಾರಕಾರಣಿಗಳ ಪ್ರವಾಹವು ಇಲ್ಲಿಗೆ ಬಂದರೆ ಅವರನ್ನು ಇಡಲು ಇಲ್ಲಿ ಜಾಗ ಇಲ್ಲ. ಅದಕ್ಕಾಗಿಯೇ ಶೋಕೇಸುಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಒಂದಷ್ಟು ಜನರನ್ನು ಒಟ್ಟುಗೂಡಿಸಿ ಕೈಗೊಂದು ಮೈಕು ನೀಡುವ ಅನಿವಾರ್ಯತೆ ಎದುರಾಗುತ್ತದೆ. ಹೀಗಾಗಿ ಇಲ್ಲಸಲ್ಲದ ಕೆಲಸಕ್ಕೆ ಬೊಗಳೂರಿಗರು ಆತಂಕಿತರಾಗಿದ್ದಾರೆ ಎಂದರವರು.

8 Comments

ಏನಾದ್ರೂ ಹೇಳ್ರಪಾ :-D

 1. ನಿಮ್ಮ ಕೆಲವು ಶಬ್ದಗಳು ;;ಜಾರಕಾರಣಿಗಳು;; ನಿಧಾನಸಭೆ;; ಇವೆಲ್ಲ ನಿಜಕ್ಕೂ ಒಪ್ಪುವನ್ತದ್ದೆ.
  ರಾಜಕೀಯ ದೇಶವನ್ನು ಹಾಳು ಮಾಡಿಬಿಟ್ಟಿದೆ.

  ReplyDelete
 2. ಅತ್ತ ನಿಸರ್ಗದ ನೆರೆಹಾವಳಿ ; ಇತ್ತ ಜಾರಕಾರಣಿಗಳ ನೊರೆಹಾವಳಿ! ಬೊಗಳೆದಾಸನ ಬೇಜಾನ್ ಬದುಕು ಕಣ್ಣೀರ
  ಹಾವಳಿಯಲ್ಲಿ ಮುಳುಗಿರುವದನ್ನು ಸಕತ್ತಾಗಿ ಬಣ್ಣಿಸಿದ್ದೀರಿ, ಅನ್ವೇಷಿ!

  ReplyDelete
 3. ತಡ ಮಾಡಿದೆ ನಿಮ್ಮ ಬ್ಲಾಗಿಗೆ ಬರಲು..ಹೋಗ್ಲಿ ಬಿಡಿ ದೇರ್ ಆಯೇ ಪರ್ ದುರುಸ್ತ್ ಆಯೆ ಅನ್ನೋಹಾಗಾದ್ರೂ ಆಯ್ತಲ್ಲ ನಮ್ಮ ಬೊಗಳೂರಿನ ಅರಾಜಕಾರಣಿಗಳ ತರಹೆ ಅಲ್ಲವಲ್ಲಾ..ದೇರ್ ಆಯೆ ಪರ್ ದುರಸ್ತೀ ಕೆ ಲಿಯೆ ಆಯೆ ಅನ್ನೋಹಾಗೆ
  ತುಂಬಾ ಚನ್ನಾಗಿ ಛಡಿ ಏಟು ಕೊಡ್ತೀರಿ ನೀವು..ಮುಟ್ಕೊಂಡ್ ನೋಡ್ಕೊಬೇಕು...ಕುಂಬಳಕಾಯಿ ಕಳ್ಳರೆಲ್ಲ...ಚನ್ನಾಗಿದೆ..ಒಪ್ಪಿದೆ...

  ReplyDelete
 4. ದೀಪಕ್ ಕುಮಾರ್November 08, 2009 4:21 PM

  ಹಲೋ ಈಗ ಬಿ.ಜೆ.ಪಿ ಸರಕಾರ ಅಲ್ಲಾಡತ ಇದೆ ಅದರ ಬಗ್ಗೆ ಬರೆಯಿರಿ.. ಆಯ್ತಾ

  ReplyDelete
 5. ಇಂಚರರೇ,
  ಈ ಎಲ್ಲ ಶಬ್ದಗಳು ನಮ್ಮ ಜಾರಕಾರಣಿಗಳೇ ಹುಟ್ಟು ಹಾಕಿದ್ದು, ತಮ್ಮದೇ ಆದ ಕೆಲಸ ಕಾರ್ಯಗಳಿಂದ!

  ReplyDelete
 6. ಸುನಾಥರೆ,
  ಜನರ ಬದುಕಿನ ಕಣ್ಣೀರ ನಡುವೆ ಕರ್ನಾಟಕ ರಾಜಕಾರಣಕ್ಕೆ ಹಿಡಿದ ಸುನಾಮಿ ಇನ್ನೂ ಬಿಟ್ಟಿಲ್ಲ.... ಪರಿಹಾರದಲ್ಲಿ ಬಂದ ಹಣಾನ ಹೇಗೆ ಹಂಚಿಕೊಳ್ಳೋದು ಎಂಬುದೇ ಈ ಎಲ್ಲ ಆಟಾಟೋಪಗಳಿಗೆ ಕಾರಣವಿರಬಹುದೆಂದು ಶಂಕಿಸಲಾಗಿದೆ.

  ReplyDelete
 7. ಜಲನಯನ ಅವರೆ,
  ನಮ್ಮ ಬೊಗಳೂರಿಗೆ ಸ್ವಾಗತ.

  ದೇರ್ ಸೇ ಆಯೇ, ಪರ್ ಜೋ ಪೈಸಾ ಕಲೆಕ್ಟ್ ಹೋಗಯಾ, ಉಸೇ ಅಪ್ನೇ ಸೇ ಬಾಂಟ್ನೇ ಕೇ ಲಿಯೇ ಭೀ ಟೈಮ್ ನಹೀ ಹೈ...

  ReplyDelete
 8. ದೀಪಕ ಕುಮಾರರೇ,

  ನಾವಂತೂ ಈ ಜಾರಕಾರಣದಲ್ಲೇ ಮುಳುಗಿದ್ದರಿಂದ, ಮತ್ತು ಎಲ್ಲವನ್ನೂ ನಮ್ಮ ಪ್ರತಿಸ್ಪರ್ಧಿ ಪತ್ರಿಕೆಗಳಾದ ವಿಜಯ ಕರ್ನಾಟಕ, ಕನ್ನಡ ಪ್ರಭ, ಪ್ರಜಾವಾಣಿಗಳು ಬರೆದಿವೆ. ಅದಕ್ಕೂ ಹೆಚ್ಚು ರಂಜನೆ ನೀಡುವಂತಹ ಸುದ್ದಿಗಳು ಹಾಯ್ ಬೊಗಳೂರಿನಲ್ಲಿಯೂ ಬಂದಿವೆ! ಉಫ್... ಎಷ್ಟು ಹಣ ಕೈಬದಲಾಯಿಸಿವೆಯೋ....

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post