ಬೊಗಳೆ ರಗಳೆ

header ads

ಚಂದ್ರನಲ್ಲಿ ನೀರು: ಭೂಮಿಯಲ್ಲಿ ತಲ್ಲಣ!

(ಬೊಗಳೂರು ನೀರು ಪತ್ತೆ ಬ್ಯುರೋದಿಂದ)
ಬೊಗಳೂರು, ಸೆ.24- ಚಂದ್ರನಲ್ಲಿ ಸಾಕಷ್ಟು ನೀರು ಇದೆ ಎಂಬುದನ್ನು ತಿಳಿದುಕೊಂಡ ನಾಗರಿಕರು, ಇದೀಗ ಭೂಮಿಯ ಮೇಲಿರುವ ನೀರನ್ನೆಲ್ಲಾ ಬೇಕಾಬಿಟ್ಟಿ ಖರ್ಚು ಮಾಡಲಾರಂಭಿಸಿರುವುದು ಬೆಳಕಿಗೆ ಬಂದಿದೆ.

ಬೊಗಳೂರಿನ ಗಲ್ಲಿ ಗಲ್ಲಿಗಳ ಚರಂಡಿಯೆಲ್ಲಾ ಇದೀಗ ತುಂಬಿ ತುಳುಕಾಡುತ್ತಿದ್ದು, ಪ್ರವಾಹದ ಭೀತಿಯೂ ಉಂಟಾಗಿದೆ. ಬಹುಶಃ ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಮಳೆಯಾಗಿರುವುದು ಕೂಡ ಇದೇ ಕಾರಣಕ್ಕೆ ಎಂದು ಅಜ್ಞಾನಿಗಳು ಶಂಕಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣವೇ, ವರ್ಷಗಟ್ಟಲೆ ಸ್ನಾನ ಮಾಡದೇ ಇರುವವರೆಲ್ಲರೂ ಇದೀಗ ಸ್ನಾನ ಮಾಡಲು ಆರಂಭಿಸಿದ್ದಾರೆ ಎಂಬ ವರದಿಗಳು ರಾಜ್ಯದ ನಾನಾ ಕಡೆಗಳಿಂದ ಬರತೊಡಗಿವೆ.

ಚಂದ್ರನಲ್ಲಿ ಹೇಗಿದ್ದರೂ ಸಾಕಷ್ಟು ನೀರು ಇದೆಯಲ್ಲ, ಇನ್ನು ನಮಗೇತರ ಭಯ ಎಂದು ಬೊಗಳೂರಿನ ಪ್ರಜೆಯೊಬ್ಬರು ನೀರನ್ನೇ ಕುಡಿಯುತ್ತಾ, ನೀರಿನಲ್ಲೇ ಸ್ನಾನ ಮಾಡುತ್ತಾ, ನೀರನ್ನೇ ಹೊರಬಿಡುತ್ತಾ ಪ್ರಶ್ನಿಸಿದ್ದಾರೆ.

ಈ ವರದಿ ಪ್ರಕಟವಾಗತೊಡಗಿದಂತೆಯೇ, ದೇವಸ್ಥಾನದಲ್ಲಿ ಲೋಟೆಗಳಲ್ಲಿ ತೀರ್ಥ ಕೊಡಲು ಆರಂಭವಾಗಿರುವುದಾಗಿ ವರದಿಗಳು ತಿಳಿಸಿವೆ. ಮತ್ತೆ ಕೆಲವರು, ಚಂದ್ರನಲ್ಲಿ ನೀರಲ್ಲ, ಬೀರು ಲಭ್ಯವಾಗಿದೆ ಎಂದು ಅಪಾರ್ಥ ಮಾಡಿಕೊಂಡು, ಸಿಕ್ಕಾಪಟ್ಟೆ ಬೀರು ಕುಡಿದು ಕುಡಿದು ಸುಸ್ತಾಗಿ ಅಲ್ಲಲ್ಲಿ ಬಿದ್ದಿರುವ ವರದಿಗಳೂ ಬೊಗಳೂರು ಬ್ಯುರೋದ ಬಾಗಿಲಲ್ಲಿ ಬಂದು ಬೀಳತೊಡಗಿವೆ.

ಇನ್ನೊಬ್ಬ ನಾಗರಿಕರು ಹೇಳುವಂತೆ, UPAವಾಸ (©ಸುನಾಥ) ಸರಕಾರವಂತೂ ತಿನ್ನುವ ವಸ್ತುಗಳ ಬೆಲೆ ಬೇಕಾಬಿಟ್ಟಿಯಾಗಿ ಏರಿಸಿಬಿಟ್ಟಿದೆ. ಇನ್ನು ಬದುಕುವುದು ಹೇಗೆಂಬ ಚಿಂತೆ ಆವರಿಸಿಬಿಟ್ಟಿತ್ತು. ಇದೀಗ ನೀರು ಸಿಕ್ಕಿರುವುದರಿಂದ ನೀರನ್ನೇ ಸಾಕಷ್ಟು ಬಾರಿ ಕುಡಿದು ಬದುಕಬಹುದು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಚಂದ್ರನಲ್ಲಿ ನೀರು ಪತ್ತೆಯಾಗಿರುವ ಸಂಭ್ರಮದ ಸಂಗತಿ ಕೇಳಿ, ಅಲ್ಲಲ್ಲಿ ಹಾಲಿನಲ್ಲಿ ನೀರಿನಂಶ ಹೆಚ್ಚಾಗಿರುವುದೂ ಕಂಡುಬಂದಿದೆ. ಇದು ಹಾಲಿನ ಸಾಂದ್ರತೆ ಪತ್ತೆ ಯಂತ್ರದಲ್ಲಿ ಶೇ.90ರಷ್ಟು ದಾಖಲಾಗಿದೆ ಎಂದು ಬೊಗಳೂರು ರದ್ದಿಗಾರರ ಮೂಲಗಳು ತಿಳಿಸಿವೆ.

ಈ ಮಧ್ಯೆ, ಕೊಳಚೆ ನೀರನ್ನು ಚೆನ್ನಾಗಿ ಸೋಪು ಹಾಕಿ ತೊಳೆದು ಶುದ್ಧವಾಗಿ ಕಾಣಿಸುವಂತೆ ಮಾಡಿ ಬಾಟಲಿಯಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಪೂರೈಸುವ ಕಂಪನಿಗಳು ಅಂಗಾತ ನೆಲಕಚ್ಚತೊಡಗಿವೆ ಎಂದು ಮೂಲಗಳು ವರದ್ದಿ ಸುರಿದಿವೆ. ತೀವ್ರ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ, ಈ ಕಂಪನಿಗಳು ನೀರನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿರುವ ವರದ್ದಿಗಳು ಅಲ್ಲಲ್ಲಿಂದ ಬೊಗಳೂರು ಬ್ಯುರೋಗೆ ಬಂದು ತಲುಪತೊಡಗಿವೆ.

ಇಷ್ಟು ಮಾತ್ರವಲ್ಲದೆ, ಅಮೆರಿಕದಲ್ಲಿ ಟಾಯ್ಲೆಟ್ ಪೇಪರ್ ಉದ್ಯಮವೂ ಮಕಾಡೆ ಮಲಗಿದ್ದು, ಎಲ್ಲರೂ ಇದೀಗ ನೀರು ಉಪಯೋಗಿಸಲಾರಂಭಿಸಿರುವುದಾಗಿ ನಮ್ಮ ಬಾತ್ಮೀದಾರರಾದ ಬರಾಕ್ ಹೋಗಾಕ್ ಒಬಾಮ ಅವರು ಬೊಗಳೂರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಇನ್ನೊಂದೆಡೆ, ಚಂದ್ರನಲ್ಲಿ ನೀರು ಪತ್ತೆ ಮಾಡಿರುವುದರ ಹಿಂದೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುವ ಸಂಚು ಇದೆ ಎಂದು ಕಾನ್guess ವಕ್ತಾರರು ಅವಸರದ ಪತ್ರಿಕಾಗೋಷ್ಠಿ ಕರೆದು ದೂರಿದ್ದಾರೆ. ರಮ್ಜಾನ್ ಮಾಸ ಮುಗಿದ ತಕ್ಷಣವೇ ಆ ಚಂದ್ರನಲ್ಲಿ ನೀರು ಇದೆ ಎಂದೆಲ್ಲಾ ವರದ್ದಿ ಮಾಡಿರುವುದು, ಚಂದ್ರನನ್ನು ಮುಂದೆಂದೂ ಕಾಣಿಸದಂತೆ ಮಾಡುವ ಸಂಚು ಎಂದು ಅವರು ದೂರಿದ್ದಾರೆ. ಮಾತ್ರವಲ್ಲದೆ, ಚಂದ್ರನ ಮೇಲೆ ನೀರು ಇರುವಿಕೆಯನ್ನು ಪತ್ತೆ ಹಚ್ಚಿದ ಇಸ್ರೋ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಚಂದ್ರನಲ್ಲಿರುವ ನೀರಿನಲ್ಲಿ ಅಲ್ಪಸಂಖ್ಯಾತರಿಗೆ, ದಲಿತರಿಗೆ ಮೀಸಲಾತಿ ಇರಬೇಕು. ಒಳಮೀಸಲಾತಿಯನ್ನೂ ನೀಡಬೇಕು ಎಂದು ಒತ್ತಾಯಿಸತೊಡಗಿದ್ದಾರೆ.

ಇಷ್ಟೆಲ್ಲದರ ನಡುವೆ, ಚಂದ್ರನಿಗೊಂದು ಕೊಳವೆ ಸಿಕ್ಕಿಸಿ, ಅಲ್ಲಿಂದ ನೀರು ತರುವ ಅಥವಾ ಕದಿಯುವ ಹುನ್ನಾರವೂ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

17 ಕಾಮೆಂಟ್‌ಗಳು

 1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 2. ಅನ್ವೇಷಿಯವರೆ,
  ಎಷ್ಟೆಲ್ಲಾ ಮೂಲ(ಲೆ)ಗಳಿಂದ ನೀರಿನ ಮೂಲ ಕಂಡು ಹಿಡಿದಿದ್ದೀರಿ! ಎಲ್ಲಾ ಮೂಳರಿಗೂ ಸಾಕಷ್ಟು ನೀರು ಕುಡಿಸೀರೆಪಾ!
  ಧಾರವಾಡದಲ್ಲಿ ಇದೀಗ ‘ಚಂದ್ರನಿಂದ ತಂದ ನೀರು’ ಎನ್ನುವ
  ಬಾ‌‍ಟಲ್ ಕೂಡ ಬಿಡುಗಡೆಯಾಗಿದೆ....ರಾಹು ಘಾಂದಿಯಿಂದ!

  ಪ್ರತ್ಯುತ್ತರಅಳಿಸಿ
 3. ನೀವು ಪದೇ ಪದೇ UPA ಸರಕಾರದ ಮೇಲೆ ಗೂಬೆ ಕುರಿಸುವುದು ಯಾಕೆ?

  ಪ್ರತ್ಯುತ್ತರಅಳಿಸಿ
 4. sakathagi bardidira, super sense of humor idhe nimge. must visit ur blog regularly.

  ಪ್ರತ್ಯುತ್ತರಅಳಿಸಿ
 5. ಭಾರೀ ಮಳೆ ಸುರಿದ ಬುಧವಾರ ಮಧ್ಯರಾತ್ರಿ ನಾನೂ-ನನ್ನ ರೂಮ್‌ಮೇಟೂ ಹೊರಬಂದು ಕಾಗದದ ದೋಣಿಗಳನ್ನು ಮಾಡಿ ತೇಲಿಬಿಟ್ಟದ್ದು ಇಲ್ಲಿ ವರದ್ದಿಯಾಗದೇ ಇರುವುದನ್ನು ನೋಡಿದರೆ ಆ ದೋಣಿಗಳು ಬೊಗಳೂರನ್ನು ತಲುಪದೇ ತೊಪ್ಪೆಯಾಗಿ ರದ್ದಿಯಾಗಿದೆಯೇ ಎಂದು ನನಗೆ ಆತಂಕವಾಗಿದೆ. ಈ ಬಗ್ಗೆ ತನಿಖೆ ನಡೆಸಿ ಒಂದು ವರದಿ ನೀಡಬೇಕೆಂದು ಬ್ಯೂರೋಗೆ ಈ ಮೂಲಕ ಅರ್ಜಿ ಸಲ್ಲಿಸುತ್ತಿದ್ದೇನೆ.

  ಪ್ರತ್ಯುತ್ತರಅಳಿಸಿ
 6. ಯಪಾ ಯಪಾ ಯಪಾ! ಎಲ್ಲೆಲ್ಲಿ ನೀರು ಹುಡುಕ್ರೀಯಪಾ!
  ಇಲ್ಲೆಲ್ಲಾ ನೀರು ಸಿಗ್ತೈತಿ ಅಂತ ಗೊತ್ತಿದ್ರ ನಾ ಬೊಗಳೂರು ಬಿಟ್ಟ್ ಹೋಗ್ತಿರ್ಲಿಲ್ರೀ! ನೀರಿನ ಬಿಜೀನೆಸ್ ಶುರು ಮಾಡ್ತಿದ್ದೀ. ಅದಿರ್ಲಿ, ಕಾಕಾ ಅವ್ರ ಹೆಸ್ರು ಬರ್ದು ಅಲ್ಲೇನೋ ಸಿ ಅಂತ ಹಾಕೀರಲಾ ಅದೇನು? ಚಂದ್ರನ ಅಧಿಪತಿ ಅಂತಾನಾ? ಹಾಗಿದ್ರೆ ಚಂದ್ರನಿಂದ ನೀರು ತರೋಕ್ಕೆ ಅವ್ರು ಸಹಾಯ ಮಾಡ್ತಾರಾ? ಅವ್ರಿಗೇನು ಕೊಡ್ಬೇಕು, ಕೊಟ್ಮೇಲೆ, ನಮ್ಗಿಟ್ಗೊಂಡ್, ಇತರರಿಗೆ ಹಂಚಿದ್ಮೇಲೆ ನಮ್ಗೆ ದಕ್ಕೋದೇನು, ಸ್ವಲ್ಪ ಬಿಡಿಸಿ ಹೇಳ್ರಲಾ?

  ಇಂದಿನ ಬರವಣಿಗೆ ಬಹಳ ಬಹಳ ಸೊಗಸಾಗಿದೆ. ಅದಕ್ಕಾಗಿ ನನ್ನ ಟೋಪಿ ಕೆಳಗೆ, ನಾಲ್ಕಾಣೆ ಅದರೊಳಗೆ.

  ಪ್ರತ್ಯುತ್ತರಅಳಿಸಿ
 7. ಸುನಾಥರೆ,
  ಚಂದ್ರನ ನೀರಿಗೆ ರಾಹುಲ್ ಗಾಂಧೀಜಿ ವಾಟರ್ ಎಂದು ಮರುನಾಮಕರಣವನ್ನೂ ಮಾಡಲಾಗುತ್ತದೆಯಂತೆ.

  ಪ್ರತ್ಯುತ್ತರಅಳಿಸಿ
 8. ಅನಾನಿಮಸ್ 1 ಅವರೆ,
  ನಾವಂತೂ ಗೂಬೆಗಳನ್ನು ಕೂರಿಸ್ತಿಲ್ಲ. ಗೂಬೆಗಳೇ ಆ ಸರಕಾರದ ಮೇಲೆ ಹೋಗಿ ಕೂರ್ತಿವೆ ಕಣ್ರೀ...

  ಪ್ರತ್ಯುತ್ತರಅಳಿಸಿ
 9. ಅನಾನಿಮಸ್ 2 ಅವರೆ,
  ನಿಮಗೆ ನಮ್ಮ ಬೊಗಳೂರಿಗೆ ಸ್ವಾಗತ. ನಮಗೂ ಸೆನ್ಸ್ ಇದೆ ಅಂತ ಹೇಳಿ ನಮಗೆ ಎಚ್ಚರಿಕೆ ನೀಡಿದ್ದೀರಿ... ಧನ್ಯವಾದ. ಬರ್ತಾ ಇರಿ.

  ಪ್ರತ್ಯುತ್ತರಅಳಿಸಿ
 10. ಸುಶ್ರುತರೇ,
  ನೀವು ದೋಣಿ ಮಾಡಿದ್ದು ನಮ್ಮ ಬೊಗಳೆ ರಗಳೆ ರದ್ದಿ ಪತ್ರಿಕೆಯನ್ನೇ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ಹೀಗಾಗಿ ನಿಮ್ಮ ಮೇಲೆ ಕ್ರಿಮಿ-null ಕೋಡಿನ ತುದಿಯ ಪ್ರಕಾರ, ಅಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸುತ್ತಿದ್ದೇವೆ.

  ಪ್ರತ್ಯುತ್ತರಅಳಿಸಿ
 11. ಶ್ರೀನಿವಾಸರೇ,
  ನಿಮ್ಮ ಟೋಪಿಯನ್ನು ನಮ್ಮ ಬೊಗಳೂರಿನ ಬೊಗಳಿಗರು ನೀರಿನಲ್ಲಿ ತೇಲಿಬಿಟ್ಟು ದೋಣಿಯಾಟ ಆಡ್ತಾ ಇದ್ದಾರೆ. ನಾಲ್ಕಾಣೆಯಂತೂ ನಾಕಾಣದಾಗಿದೆ.

  ನೀವು ನೀರು ಬೇಕಿದ್ರೆ ಮತ್ತು ಭೂಮಿಯಲ್ಲಿ ಬದುಕ್ಬೇಕಿದ್ರೆ ಖಂಡಿತವಾಗಿಯೂ ಕಾಕಾ ಅವರಿಂದ ಅನುಮತಿ ಪಡೆಯಲೇಬೇಕು. ಅವ್ರು ನಿಮ್ಮಂಗೇ ಬ್ಲಾಗಿಗರಿಗೆಲ್ಲಾ ನೀರುಣಿಸೋವ್ರು.

  ಪ್ರತ್ಯುತ್ತರಅಳಿಸಿ
 12. ನೆರೆಯಿ೦ದ ಮುಳುಗಿದ ಕರ್ನಾಟಕದಿ೦ದ ಒ೦ದಿಷ್ಟು ನೀರನ್ನು ತೆಗೆದುಕೊ೦ಡು ಹೋಗಿ ಚ೦ದ್ರನಲ್ಲಿಟ್ಟು ಮು೦ದೆ ಬರಗಾಲ ಬ೦ದಾಗ ತರಿಸಲು ಸಾಧ್ಯವೇ ನೋಡಿ

  ಪ್ರತ್ಯುತ್ತರಅಳಿಸಿ
 13. ಶ್ರೀನಿಧಿಯವರೆ,
  ನೀವು ಹೇಳಿದ ಯೋಜನೆಗೆ ಪೈಪ್ ಲೈನು ಯೋಜನೆಯೆಂಬ ಹೊಸದಾಗಿ ಬಾಚಿಕೊಳ್ಳುವ ಅವಕಾಶವೂ ದೊರೆತಿದೆ. ಬಾಚುವ ಭರದಲ್ಲಿ, ಪೈಪಿನ ಉದ್ದ ಅಷ್ಟೇ ಇರುವ ಅನಿವಾರ್ಯತೆ ಇದೆ, ಆದರೆ ಅಗಲ ಕಿರಿದಾಗಿ ದುಡ್ಡು ಮಾಡಬಹುದಲ್ಲ... ಕೊನೆಯಲ್ಲಿ ಹನಿ ಹನಿ ನೀರು ಮಾತ್ರವೇ ದೊರೆಯುವ ಸಾಧ್ಯತೆಗಳೂ ಇಲ್ಲದಿಲ್ಲ. ಸಲಹೆಯನ್ನು ಜಾರಕಾರಣಿಗಳ ಸಂಘಕ್ಕೆ ರವಾನಿಸಿದ್ದೇವೆ.

  ಪ್ರತ್ಯುತ್ತರಅಳಿಸಿ
 14. ಶರತ್ ಹೆಗಡೆಯವರೇ, ಬೊಗಳೂರಿಗೆ ಸ್ವಾಗತ.
  ಬರ್ತಾ ಇರಿ.

  ಪ್ರತ್ಯುತ್ತರಅಳಿಸಿ
 15. ಕ್ಯಾಮರೂನ್ 'ಅವತಾರ್' ಸೄಷ್ಟಿಸಿ ಮೋಸ ಹೋದ. ಅಷ್ಟು ದೂರ 'ಪ೦ಡೋರ'ಕ್ಕೆ ಹೋಗೋ ಬದ್ಲು, ಸುಮ್ನೆ ಚ೦ದ್ರನತ್ತ ಮುಖ ಹಾಕಿದ್ರೆ, ರಿಯಾಲಿಟಿ ಶೊ ಮತ್ತೆ, ಟೆಲಿಸ್ಕೋಪ್ ಶೊ ಶುರು ಮಾಡ್ಬೊದಿತ್ತು.....

  ಪ್ರತ್ಯುತ್ತರಅಳಿಸಿ
 16. ರಾಜ್ ಅವರೆ,
  ಬೊಗಳೂರಿಗೆ ಸ್ವಾಗತ.
  ಇಷ್ಟೆಲ್ಲಾ 'ಅವತಾರ' ಬೇಕಾಗಿತ್ತಾ? ನಮ್ಮ ಕರ್ನಾಟಕದಲ್ಲಿ ಆಗ್ತಿರೋ ಅವಾಂತರಗಳನ್ನೇ ಚಿತ್ರ ಮಾಡೀದ್ರೆ ಭರ್ಜರಿ ಹಿಟ್ ಆಗ್ತಿತ್ತು!

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D