ಬೊಗಳೆ ರಗಳೆ

header ads

ಬೆಲೆ ಏರಿಕೆಗೆ 'ಆಟೋಮ್ಯಾಟಿಕ್' ಪ್ರತಿಭಟನೆ

(ಬೊಗಳೂರು ಅಪ್ರತಿಭ-ಟನೆ ಬ್ಯುರೋದಿಂದ)
ಬೊಗಳೂರು, ಸೆ.22- ಚೀಲ ತುಂಬಾ ನೋಟುಗಳನ್ನು ಹಾಕಿಕೊಂಡು ಜೇಬು ತುಂಬಾ ದಿನಸಿ ಸಾಮಾನು ಮತ್ತು ಒಂದು ಸಿಂಗಲ್ ತರಕಾರಿ ತುಂಡು ತರುವ ಸಾಧ್ಯತೆಯಿರುವ ಈ ಬೆಲೆ ಏರಿಕೆ ದಿನಗಳಲ್ಲಿ, ಕೇಂದ್ರದ ಪೀಪಿಏ ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಪ್ರತಿಭಟಿಸಿ ಬೊಗಳೂರು ನಾಗರಿಕರು ಸ್ವಯಂಚಾಲಿತವಾಗಿ ಪ್ರತಿಭಟಿಸತೊಡಗಿದ್ದಾರೆ.

ವಿಶೇಷವೆಂದರೆ, ಈ ಪ್ರತಿಭಟನಾ ಆಂದೋಲನಕ್ಕೆ ಯಾರ ಕುಮ್ಮಕ್ಕು ಕೂಡ ಇಲ್ಲದಿರುವುದು ಮತ್ತು ಯಾರದ್ದೇ ಒತ್ತಡ, ಸಲಹೆ ಇತ್ಯಾದಿಗಳು ಅನಗತ್ಯವಾಗಿರುವುದು.

ಈ ಮಧ್ಯೆ, ಬೆಲೆ ಏರಿಕೆ ನಿಯಂತ್ರಿಸುವ ಬದಲು ನಾವು ಕಡಿಮೆ ಖರ್ಚು ಮಾಡುತ್ತಿದ್ದೇವೆ, ನೀವೂ ಕಡಿಮೆ ಖರ್ಚು ಮಾಡಿ ಎಂಬ ಸಂದೇಶ ನೀಡಲು ಕೇಂದ್ರದ Unprecedented Price-rise Agenda ಸರಕಾರ ನಿರ್ಧರಿಸಿದೆ.

ಸಚಿವರು, ಸಂಸದರು ಮತ್ತು 'ಸೂಪರ್ ಪ್ರಧಾನಿನಿ'ಯರೆಲ್ಲರೂ ಇಕಾನಮಿ ಕ್ಲಾಸ್ ಎನ್ನುತ್ತಾ ಬೊಗಳೆ ರಗಳೆ ಬ್ಯುರೋಗಿಂತಲೂ ಜೋರಾಗಿ ಬೊಗಳೆ ಬಿಡತೊಡಗಿರುವುದು ನಮ್ಮ ಬ್ಯುರೋದ ಅಸ್ತಿತ್ವಕ್ಕೇ ಬಂದ ಸವಾಲು ಆಗಿದೆ. ಕೇಂದ್ರದಲ್ಲಂತೂ ಸಾಕಷ್ಟು ಬೊಗಳೆ ಬ್ಯುರೋಗಳು ಅಣಬೆಗಳಂತೆ ಮೇಲೇಳುತ್ತಿವೆ. ಈ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ದುಂದುವೆಚ್ಚದ ಮಿತವ್ಯಯ ಬೋಧಿಸುತ್ತಾ ಬೊಗಳೆ ಬ್ಯುರೋ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆಯಾದರೂ, ಅದನ್ನು ಎಲ್ಲಿಯೂ ತೋರ್ಪಡಿಸಿಕೊಳ್ಳುತ್ತಿಲ್ಲ. ಜಾನುವಾರು ದರ್ಜೆಯಲ್ಲಿ ಪ್ರಯಾಣ ಮಾಡುವ ಸಲಹೆ ನೀಡಿದ ಕೇಂದ್ರದ ವಿದೇಶದ ಅಂಗವಾಗಿರುವ ಸಚಿವ ತಶಿ ಶರೂರ್ ಅವರನ್ನು ಪಶುಸಂಗೋಪನಾ ಖಾತೆ ಸಚಿವರನ್ನಾಗಿಸಬೇಕು ಎಂದು ಬೊಗಳೂರು ಬ್ಯುರೋ ಬಾಯಿಬಿಟ್ಟು ಆಗ್ರಹಿಸತೊಡಗಿದೆ.

ಇದಕ್ಕಾಗಿ ದೇಶದ ಪ್ರಜೆಗಳೆಲ್ಲರನ್ನೂ ಜಾನುವಾರುಗಳೆಂದು ಪರಿಗಣಿಸಿ, ಅವರಿಗೆ ದಿನಸಿ ಆಹಾರದ ಅಗತ್ಯವಿಲ್ಲ, ಅಕ್ಕಿಯಂತೂ ತೀರಾ ಅನಗತ್ಯ (ಇದಕ್ಕಾಗಿ ಅದರ ಬೆಲೆ 35 ರೂಪಾಯಿಗೂ ಹೆಚ್ಚು ಮಾಡಲಾಗಿದೆ). ಈ ಎಲ್ಲ ದುಂದುವೆಚ್ಚವನ್ನು ನಿಲ್ಲಿಸಿ ಮಿತವ್ಯಯ ಮಾಡಬೇಕು ಎಂದು ಪರಿಗಣಿಸಿರುವ ಕೇಂದ್ರದ ಸರಕಾರದ ಪಕ್ಷೋದ್ಧಾರದ ಗಮನವನ್ನು ಇತ್ತ ಕಡೆ ಸೆಳೆಯುವುದಕ್ಕಾಗಿ ಸಕಲ ಜನ-ಜಾನುವಾರುಗಳೊಂದಿಗೆ ಅಪ್ರತಿಭ-ಟನೆ ಮಾಡಲು ನಿರ್ಧರಿಸಲಾಗಿದೆ.

ಈ ಪ್ರತಿಭಟನೆಯ ಅಂಗವೇ ಬಾಯ್ಮುಚ್ಚುವ ಅಂಗ. ಅಂದರೆ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರಿಗೆ ಯಾವುದೇ ಆಹಾರ ಪದಾರ್ಥ ಕೊಳ್ಳುವುದು ಅಸಾಧ್ಯವಾಗಿರುವುದರಿಂದ ಆಟೋಮ್ಯಾಟಿಕ್ ಆಗಿ ಉಪವಾಸ ಅನ್ನ ಸತ್ಯಾಗ್ರಹ ಕೈಗೊಳ್ಳಲಾಗುತ್ತದೆ. ಇದು ಬೊಗಳೂರು ಜನತೆಗೆ ಗಾಂಧೀಜಿಯೇ ಹೇಳಿಕೊಟ್ಟಿದ್ದು, ಈಗಿನ ಸಾನಿಯಾ ಗಾಂಧೀಜಿಗಳು ಕೂಡ ಅದನ್ನೇ ಅನುಸರಿಸುವಂತೆ ಜನತೆಗೆ ಕರೆ ನೀಡಿರುವುದನ್ನು ಬೊಗಳೂರು ಬ್ಯುರೋ ಮಾತ್ರವೇ ವರದಿ ಮಾಡಿದೆ.

ಇದನ್ನು ಕೇಳಿ ಮಾನ್ಯ ನಿಧಾನ ಮಂತ್ರಿಗಳು ಮತ್ತವರ ಸಚಿವರ ಬಳಗವು ಮಾಧ್ಯಮಗಳ ಕಣ್ಣಿಗೆ ಬೀಳದಂತೆ ನಾಪತ್ತೆಯಾಗಿ ಬೊಗಳೂರಿನಲ್ಲಿ ಅವಿತು ಕೂತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ಅನ್ವೇಷಿ,
  UPAvasa ಸರಕಾರದ ಮಂತ್ರಿಗೋಳು ಕೆಲವೊಮ್ಮೆ ಬಾಯಿ ತಪ್ಪಿ ಖರೇ ಮಾತಾಡತಾರ ನೋಡ್ರಿ.
  ನಮ್ಮ ರೇಲವೆ, ಬಸ್ಸುಗೋಳು, ವಿಮಾನ ಎಲ್ಲಾದರಾಗೂ ದನಗಳs ತುಂಬ್ಯಾವ. ಅದಕ್ಕಂತ ನಮ್ಮದು ದನಗಳ ಸರಕಾರ.
  ದೊಡ್ಡೆಮ್ಮಿsನ ನಮ್ಮ ಸರಕಾರದ ಖರೇ ಹೆಡ್ಡು; ಗೊಡ್ಡೆಮ್ಮಿ ಅಂತೂ ಹೆಸರಿಗೆ ಮಾತ್ರ ನಿಧಾನ ಮಂತ್ರಿ!

  ಪ್ರತ್ಯುತ್ತರಅಳಿಸಿ
 2. ಸುನಾಥರೆ,
  ನಿಮ್ಮ ಹೇಳಿಕೆಯು ಟ್ವಿಟ್ಟರಿನ 140 ಅಕ್ಷರ ಮಿತಿಯಲ್ಲಿದೆಯೇ ಎಂದು ಪರಿಶೀಲಿಸಿ, ಅದನ್ನು ದೊಡ್ಡೆಮ್ಮಿಯ ಪರಿಶೀಲನೆಗೆ ಕಳುಹಿಸಿ ನಂತರ ಪ್ರಕಟಿಸಲಾಗುತ್ತದೆ ಎಂದು ಡಾ.ತಶಿ ಶರೂರ್ ಅವರ ಟ್ವಿಟ್ಟರ್ ಪ್ರತಿನಿಧಿಗಳು ಹೇಳಿದ್ದಾರೆ.

  ಪ್ರತ್ಯುತ್ತರಅಳಿಸಿ
 3. ಸಾಗರದಾಚೆಯಿರೋರೆ,
  ಏನೇ ವಿಚಾರ ಮಾಡಿದ್ರೂ 140 ಅಕ್ಷರ ಮಿತಿ ಎಂಬುದಿದೆಯಲ್ಲಾ... (Twitter)ಗೆ... :)

  ಪ್ರತ್ಯುತ್ತರಅಳಿಸಿ
 4. ನೋಡಿ ಇದು ಜನ ನೀಡಿದ ಜನಾದೇಶ ನೀವೋಬ್ಬರು ವೀರೋದಿಸೂದು ಸರಿಯಲ್ಲ.
  ಇನ್ನು ಮುಂದಾದರು ಧನಾತ್ಮಕವಾಗಿ ಯೋಚಿಸುವುದು ಕಲಿಯಿರಿ.
  ಬೆಲೆ ಏರಿಕೆ ಭಾರತದ ಸಮಸ್ಯೆ ಮಾತ್ರವಲ್ಲ ಇದು ವಿಶ್ವದ ಸಮಸ್ಯೆ so think positivly

  ಪ್ರತ್ಯುತ್ತರಅಳಿಸಿ
 5. ದೀಪಕ್ ಅವರೆ, ನಮ್ಮ ಬೊಗಳೂರಿಗೆ ಸ್ವಾಗತ.
  ಯುಪಿಎ ಸರ್ಕಾರಕ್ಕೆ ಜನಾದೇಶದ ಜೊತೆಗೆ ಬೆಲೆ ಏರಿಕೆ ತಡೀಬೇಕೆಂಬ ಜನಾಗ್ರಹವೂ ಇದೆ. ಅಕ್ರಮವಾಗಿ ಅಕ್ಕಿ, ಧಾನ್ಯ, ಸಕ್ಕರೆ ದಾಸ್ತಾನಿರಿಸಿ ಬೆಲೆ ಏರಿಸೋ ಮಂದಿ ವಿರುದ್ಧ ಕ್ರಮ ಕೈಗೊಳ್ಳೋಕೆ ಅವರಿಗೆ ಅಧಿಕಾರವಿದ್ರೂ ಚಲಾಯಿಸ್ತಾ ಇಲ್ಲ ಎಂಬುದು ಬೊಗಳೂರಿನ ಜನಾಕ್ರೋಶವೂ ಹೌದು

  ಆದ್ರೂ B +ve ಅಂತ ಸಲಹೆ ಕೊಟ್ಟಿದ್ದಕ್ಕೆ ಧನ್ಯವಾದ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D