ಬೊಗಳೆ ರಗಳೆ

header ads

ಪಾತಕಿಸ್ತಾನ ಜೊತೆ ಅನರ್ಥಪೂರ್ಣ ಮಾತುಕತೆಗೆ ಸಿದ್ಧ

(ಬೊಗಳೂರು ಬಂಬಡಾ ಬ್ಯುರೋದಿಂದ)
ಬೊಗಳೂರು, ಆ.25- ಪಾತಕಿಸ್ತಾನದ ಜೊತೆಗೆ ನಾವು ಟೂ ಬಿಡುತ್ತೇವೆ, ಕೋಪ.... ಮಾತನಾಡುವುದೇ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಆದರೂ ಈ ಹುಸಿಮುನಿಸು ಆಗಾಗ್ಗೆ ಶಮನವಾಗಿ, ಎಲ್ಲಾದರೂ ನಮ್ಮ ಕೈಮೀರಿ, ನಮಗರಿವಿಲ್ಲದಂಯೆತೇ ಮಾತುಕತೆ ನಡೆಸಿಬಿಟ್ಟರೆ...? ಎಂಬ ಆತಂಕವೂ ಭಾರತವನ್ನು ಆಳುತ್ತಿರುವವರಿಗಿದೆ. ಹೀಗಾಗಿ, ಪಾತಕಿಸ್ತಾನದೊಂದಿಗೆ "ಅರ್ಥಪೂರ್ಣ" ಮಾತುಕತೆ ಇಲ್ಲ ಎಂಬ ಪದಗುಚ್ಛವನ್ನು ಪತ್ರಿಕಾ ಹೇಳಿಕೆಯೊಳಗೆ ಸೇರಿಸಲಾಗಿದೆ.

ಈ ಮೂಲಕ, ಖಂಡಿತವಾಗಿಯೂ ಪಾತಕಿಸ್ತಾನದ ಜೊತೆಗೆ ಅನರ್ಥಪೂರ್ಣವಾದ ಮಾತುಕತೆ ನಡೆಸುತ್ತೇವೆ ಎಂದು ವಿದೇಶದಅಂಗಿ (ಹಾಕಿಕೊಳ್ಳುವ) ಸಚಿವರು ಸ್ಪಷ್ಟಪಡಿಸಿದ್ದಾರೆ.

ಪಾತಕಿಸ್ತಾನವು ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ, ಆದರೆ ಕ್ರಮ ಕೈಗೊಂಡಂತೆ ಆಗಾಗ್ಗೆ ಏನೇನೋ ಬಡಬಡಾಯಿಸುತ್ತಿರುತ್ತದೆ ಎಂಬುದನ್ನು ಮನಗಂಡಿರುವ ಬೊಗಳೂರು ಪ್ರಜೆಗಳು, ವಿದೇಶದ ಅಂಗವಾಗಿರುವ ಸಚಿವರ ವಿರುದ್ಧ ಪ್ರತಿಭಟನೆ ನಡೆಸದಿರಲು ತೀರ್ಮಾನಿಸಿದ್ದಾರೆ. ಪ್ರತಿಭಟನೆ ನಡೆಸಿದರೂ ಪ್ರಯೋಜನವಿಲ್ಲ ಎಂಬುದೇ ಅವರ ಈ ತೀರ್ಮಾನಕ್ಕೆ ಕಾರಣ.

ಭಾರತ-ಪಾತಕಿಸ್ತಾನಗಳ ನಡುವಣ ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ಎಲ್ಲಾದರೂ "ಧನಾ"ತ್ಮಕ ತಿರುವು ದೊರೆಯುತ್ತದೆಯೋ ಎಂದು ಎರಡೂ ದೇಶಗಳ ರಾಜಕಾರಣಿಗಳು ಕಾಯುತ್ತಿದ್ದಾರೆ. ಈ ಧನ ಲಭ್ಯವಾದಲ್ಲಿ, ಈಗಾಗಲೇ ಭ್ರಷ್ಟ ರಾಜಕಾರಣಿಗಳಿಂದಾಗಿ ಭ್ರಷ್ಟ ದೇಶಗಳ ಪಟ್ಟಿ ಸೇರಿಕೊಂಡುಬಿಟ್ಟಿರುವ ಎರಡು ದೇಶಗಳಿಗೂ ತಮ್ಮ ರ‌್ಯಾಂಕಿಂಗ್ ವೃದ್ಧಿಸಿಕೊಳ್ಳಲು ಸಹಾಯಕವಾಗುತ್ತದೆ ಎಂಬುದು ಅವರ ನಂಬಿಕೆ.

ಪಾತಕಿಸ್ತಾನವು ಭರವಸೆಗಳನ್ನು ಪೂರೈಸುವುದಿಲ್ಲ ಎಂದು ಅಲ್ಲಿನ ಮಂಡೆಗಳ ಕಂಪ್ಯೂಟರುಗಳಲ್ಲಿ ಡೀಫಾಲ್ಟ್ ಪ್ರೋಗ್ರಾಂ ಆಗಿ ಫಿಕ್ಸ್ ಮಾಡಲಾಗಿದೆ. ಆದರೆ, ಅಲ್ಲಿನ ಎಲ್ಲ ಮಂಡೆಗಳು ಕೂಡ ಭರವಸೆಗಳನ್ನು ಧಂಡಿಯಾಗಿ ನೀಡುತ್ತವೆ. ಅಂತಾರಾಷ್ಟ್ರೀಯ ಸಮುದಾಯವನ್ನು ಸಂತುಷ್ಟಗೊಳಿಸಲು ಇದು ಸಾಕಾಗುತ್ತದೆ ಎಂದು ಭಾರತದ ಜಾರಕಾರಣಿಗಳು ಬಲವಾಗಿ ನಂಬಿದ್ದಾರೆ.

ಮುಂಬೈ ಮೇಲಿನ ದಾಳಿಗೆ ಸಂಬಂಧಿಸಿದಂತೆ ಅದೆಷ್ಟೋ ಸಾಕ್ಷ್ಯಾಧಾರಗಳ ಸಹಿತ ಅಜ್ಮಲ್ ಎಂಬ ಕಸ ಸಿಕ್ಕಿಬಿದ್ದಿದ್ದರೂ, ಆತನಿಗೆ ಏನೂ ಆಗದಂತೆ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಕ್ಷಣೆ ನೀಡುತ್ತಾ, ಬಿರಿಯಾನಿ, ಮಟನ್ ಎಲ್ಲ ನೀಡುತ್ತಾ ಆತನಿಗೆ ಐಷಾರಾಮದ ವ್ಯವಸ್ಥೆ ಮಾಡಿರುವುದು ಯಾಕೆ ಎಂಬುದರ ಕುರಿತು ಸ್ವತಃ ಪಾಕಿಸ್ತಾನವೇ ಅಚ್ಚರಿ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಉಗ್ರಗಾಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವ ಕುರಿತು ಭಾರತದಲ್ಲಿ ಜನಾಕ್ರೋಶವಿದ್ದರೂ, ನಮಗಿಂತ ಯಾರೂ ಮೇಲಲ್ಲ ಎಂದು ಸರಕಾರ ತೋರಿಸಿಕೊಡುತ್ತಿದೆ ಎಂಬುದನ್ನು ಬೊಗಳೂರು ಜನತೆ ಪತ್ತೆ ಹಚ್ಚಿಬಿಟ್ಟಿದ್ದಾರೆ. ಇದರ ಹಿಂದಿರುವ (ಓಟ್) ಬ್ಯಾಂಕಿನ ಕೈವಾಡವನ್ನು ಕೂಡ ತಳ್ಳಿ ಹಾಕಲು ಮೂಲಗಳು ನಿರಾಕರಿಸಿವೆ. ಸದ್ಯಕ್ಕೆ ಓಟುಗಳೆಲ್ಲವನ್ನೂ ಸ್ವಿಸ್ ಬ್ಯಾಂಕಿನಲ್ಲಿ ಭದ್ರ ಮಾಡಿ ಇರಿಸಲಾಗಿದೆ ಎಂಬುದನ್ನು ಕೂಡ ಮೂಲಗಳು ಪತ್ತೆ ಹಚ್ಚಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ಪಾತಕಿಸ್ತಾನದ ಪ್ರಜೆಗಳೆಲ್ಲರಿಗೆ ಈಗ ಒಂದೇ ಕನಸು: ಉಗ್ರಗಾಮಿಯಾಗಿ ಭಾರತಕ್ಕೆ ಹೋಗಿ ಸೆರೆ ಸಿಕ್ಕಿ ಬೀಳಬೇಕು ಎನ್ನುವದು. ಎಲ್ಲರೂ ತಾಲಿಬಾನ ಕಚೇರಿಯ ಎದುರು ದೊಡ್ಡ ಕ್ಯೂ ಹಚ್ಚಿದ್ದಾರೆ. ಯಾಕಪ್ಪಾ, ಹೀಗೆ? ಅಂತ ನಿಮ್ಮ ಗುಪ್ತ ವ-ರದ್ದಿಗಾರನು (ತಾನೂ ಸಹ ಕ್ಯೂದಲ್ಲಿ ಸೇರಿಕೊಂಡು) ಕೇಳಿದಾಗ, ಇವನ ಮುಂದಿನವನು," ಹಿಂದುಸ್ತಾನದಲ್ಲಿ ಸೆರೆ ಸಿಕ್ಕು, ಅಲ್ಲಿಯ ಸೆರೆಮನೆಯಲ್ಲಿ ಅರಮನೆಯ ಸುಖ ಅನುಭವಿಸಬಹುದು; ಈ ದರಿದ್ರ ಪಾತಕಿಸ್ತಾನದಲ್ಲಿ ಏನಿದೆ?" ಅಂತ ಕೇಳಿದನಂತೆ. ಅಷ್ಟೇ ಏಕೆ, ಈಗ ದೇಶಭ್ರಷ್ಟನಾದ ಮುಸುರೆಪ್ಪ ಅನ್ನುವ ಸರ್ವಾಧಿಕಾರಿಯೂ ಸಹ ಕ್ಯೂದಲ್ಲಿ ನಿಂತಿದ್ದು ಗೊತ್ತಯಿತಂತೆ!

  ಪ್ರತ್ಯುತ್ತರಅಳಿಸಿ
 2. ಬೊಗಳೆಯವರೇ,

  ಇಷ್ಟು ದಿವಸ ಮಾರುವೇಷದಲ್ಲಿ ಎಲ್ಲಾ ಕಡೆ ತಿರುಗಿಬಂದೆ..ಅದರೆ ಎಲ್ಲೂ ಬೊಗಳೆ ರಗಳೆ ತರ ಎಕಸದಸ್ಯ ಬ್ಯೂರೋ ಕಾಣದೇ ಮರಳಿ ಇಲ್ಲಿಗೆ ಬರಬೇಕಾಯ್ತು :)

  ಇನ್ನೂ ಸ್ಪಲ್ಪ ದಿವಸ ನೋಡಿ, ಅವನಿಗೆ ಕ್ಷಮದಾನನೂ ಸಿಕ್ಕೂ ಯಾವುದಾದರೂ ಪಕ್ಷ ಅವನನ್ನು ಕರೆದುಕೊಳ್ಳಬಹುದು

  ಪ್ರತ್ಯುತ್ತರಅಳಿಸಿ
 3. ಸುನಾಥರೆ,
  ಹೌದು ಹೌದು. ನಮಗೂ ಇದು ಅರಿವಿಗೆ ಬಂದಿದೆ. ಜೈಲಲ್ಲಿದ್ದರೆ ಬಾಸ್ಮತಿ ಅಕ್ಕಿಯ ನೈಚೋರ್, ಬಿರ್ಯಾನಿ ಎಲ್ಲ ಸಿಗುತ್ತೆ ಅಂತೆ. ಇನ್ನು ಮುಸುರೆಪ್ಪನವರೂ ನಮಗೇ ಸೆರೆಸಿಕ್ಕಲಿದ್ದಾರೆ...

  ಪ್ರತ್ಯುತ್ತರಅಳಿಸಿ
 4. ಶಿವರೇ ಶಂಕರರೇ,
  ಮತ್ತೆ ಧುತ್ತನೇ ಎದ್ದು ಬಂದಿದ್ದೀರಿ, ಸ್ವಾಗತ. ನಿಮ್ಮ ಚಿಟ್ಟೆಯ ಲೋಕ ಸಿಕ್ಕಾಪಟ್ಟೆ ಬ್ಯುಸಿಯಾಗಿತ್ತೂಂತ ಕಾಣ್ಸುತ್ತೆ...

  ಕ್ಷಮಾದಾನದ ಅರ್ಜಿಯನ್ನು ರಾಷ್ಟ್ರಪತಿಗೆ ಕಳಿಸಿಕೊಟ್ಟರಾಯಿತಲ್ಲ... ಮತ್ತೇನೂ ಮಾಡಬೇಕಾಗಿಲ್ಲ...

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D