ಬೊಗಳೆ ರಗಳೆ

header ads

ಸ್ವೈನ್ ಫ್ಲೂ ನಿಷೇಧಿಸಿದ್ದೇವೆ: ಕೇಂದ್ರ ಸ್ಪಷ್ಟನೆ

(ಬೊಗಳೂರು ಆರೋಗ್ಯಾತಂಕ ಬ್ಯುರೋದಿಂದ)
ಬೊಗಳೂರು, ಆ.17- ಐದಾರು ತಿಂಗಳ ಹಿಂದೆಯೇ ಕಾಣಿಸಿಕೊಂಡಿದ್ದರೂ, ಇದುವರೆಗೆ ಏನೂ ಮಾಡಲಿಲ್ಲ ಎಂಬ ಜನರ ಆಕ್ರೋಶವು ವಿರೋಧ ಪಕ್ಷಗಳ ತಂತ್ರ ಎಂದು ದೂರಿರುವ ಕೇಂದ್ರ ಸರಕಾರವು, ಸ್ವೈನ್ ಫ್ಲೂ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದು, ಒಬ್ಬರನ್ನೂ ಸಾಯಲು ಬಿಡುವುದಿಲ್ಲ ಎಂದು ಭರವಸೆ ನೀಡಿರುವುದಾಗಿ ನಮ್ಮ ಪ್ರತಿಸ್ಪರ್ಧಿ ಮತ್ತು ಎದುರಾಳಿ ಪತ್ರಿಕೆಗಳು ವರದ್ದಿ ಮಾಡಿವೆ.

ಸ್ವೈನ್ ಫ್ಲೂ ಬಗ್ಗೆ ಎಲ್ಲರಿಗೂ ಅರಿವು ಮತ್ತು ಆತಂಕ ಉಂಟಾಗಿದ್ದರೂ, ಒಂದು ಜೀವವನ್ನೇ ಅದು ಬಲಿ ತೆಗೆದುಕೊಂಡ ಬಳಿಕ ಎಚ್ಚೆತ್ತುಕೊಂಡ ಕೇಂದ್ರ ಸರಕಾರವು, ಸ್ವೈನ್ ಫ್ಲೂ ನಿಷೇಧಿಸಲು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ. ಮತ್ತು ಯಾರು ಕೂಡ ಆತಂಕ ಪಡಬೇಕಾಗಿಲ್ಲ, ಸರಕಾರದಲ್ಲಿರುವವರು, ಆಳುವವರು, ಅಧಿಕಾರದಲ್ಲಿರುವವರು, ಮಂತ್ರಿಗಳು, ಶಾಸಕರು ಮತ್ತು ಸಂಸದರು ಸುರಕ್ಷಿತರಾಗಿದ್ದಾರೆ. ನಿಮ್ಮನ್ನು ಆಳುವವರಿಗೆ ಏನೂ ಆಗಿಲ್ಲವಾದುದರಿಂದ ಯಾವುದೇ ರೀತಿಯಲ್ಲಿಯೂ ಯಾರೂ ಕೂಡ ಭಯಪಡಬೇಡುವ ಅಗತ್ಯವಿಲ್ಲ ಎಂದು ಸಾರಿ ಸಾರಿ ಹೇಳಲಾಗುತ್ತಿದೆ.

ಸ್ವೈನ್ ಫ್ಲೂ ಮೊದಲು ಸೊಳ್ಳೆಯಿಂದ ಹರಡುತ್ತದೆ ಎಂದು ಸರಕಾರವು ಸರ್ವಾನುಮತದ ನಿರ್ಣಯ ಕೈಗೊಂಡು ಕಾಯಿದೆ ರೂಪಿಸಿತ್ತು. ಆದರೆ, ಸಂವಿಧಾನ ತಿದ್ದುಪಡಿ ಮಾಡಿದ ಬಳಿಕ ಅದು ಹಂದಿಯಿಂದಲೇ ಬರುತ್ತದೆ ಎಂದು ಕೂಡ ತಿದ್ದುಪಡಿ ಕಾಯಿದೆಯನ್ನು ಜಾರಿಗೊಳಿಸಲಾಗಿತ್ತು. ಇದೀಗ ಸ್ವೈನ್ ಫ್ಲೂ ಉಸಿರಿನಿಂದಲೇ ಹರಡುತ್ತಿದೆ ಎಂದು ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವವರು ಮತ್ತು ಸರಕಾರವನ್ನು ಗಾಢ ನಿದ್ರೆಯಿಂದ ಎಬ್ಬಿಸಲು ಪ್ರಯತ್ನಿಸುವವರು ಅಪಪ್ರಚಾರ ಆರಂಭಿಸಿದ್ದಾರೆ. ಹೀಗಾಗಿ ಈ ಅಪಪ್ರಚಾರಕ್ಕೆ ಸ್ಪಂದಿಸಲೇಬೇಕಾಗಿದೆ ಎಂದು ಸರಕಾರದ ವಕ್ತಾರರು ಹೇಳಿದ್ದಾರೆ.

ಇಪ್ಪತ್ತೈದಕ್ಕೂ ಹೆಚ್ಚು ಮಂದಿ ದೇಶದಲ್ಲಿ ಹಂದಿಗೆ ಬಲಿಯಾಗಿದ್ದಾರೆ ಎಂಬುದನ್ನು ನಮಗೆ ಯಾರೂ ಹೇಳಿಲ್ಲ ಎಂದು ತಿಳಿಸಿರುವ ವಕ್ತಾರರು, ನೋಡೋಣ, ಮಂತ್ರಿ ಮಾಗಧರಿಗೇನಾದರೂ ಇದು ಬಂದರೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಜನರಿಗಾಗಿ ನಾವು ಈಗಾಗಲೇ ಹಂದಿ ಜ್ವರವನ್ನು ನಿಷೇಧಿಸಿದ್ದೇವೆ. ಈಗ ನಮಗೆ ಸಾಕಷ್ಟು ಬೇರೆ ವಿಷಯಗಳಿವೆ. ಅಂತಾರಾಷ್ಟ್ರೀಯ ಸಂಬಂಧಗಳನ್ನು ಸುಧಾರಿಸಬೇಕಿದೆ, ಅಣ್ವಸ್ತ್ರ ಒಪ್ಪಂದವು ಕಾರ್ಯಾನುಷ್ಠಾನವಾಗುವಂತೆ ನೋಡಿಕೊಳ್ಳಬೇಕಾಗಿದೆ. ಅಲ್ಲಲ್ಲಿ ರಾಜೀವ್ ಗಾಂಧಿ, ನೆಹರೂ ಹೆಸರಿನಲ್ಲಿ ಪ್ರತಿಮೆಗಳು, ಕ್ರೀಡಾಕೂಟಗಳು, ಸ್ಟೇಡಿಯಂಗಳು, ರಸ್ತೆಗಳು ಇತ್ಯಾದಿ ಸ್ಥಾಪನೆಯಾಗಬೇಕಿವೆ. ಈ ಜನಕಲ್ಯಾಣ ಕಾರ್ಯಕ್ರಮಗಳನ್ನು ಬಿಟ್ಟು ಯಃಕಶ್ಚಿತ್ ಹಂದಿಯ ಜ್ವರವನ್ನೇ ದೊಡ್ಡದು ಮಾಡುವುದು ಸರಿಯಲ್ಲ ಎಂಬ ನಿರ್ಧಾರ ನಮ್ಮದು ಎಂದು ಅವರು ಹೇಳಿದ್ದಾರೆ.

ಈಗಾಗಲೇ ಹಂದಿ ಜ್ವರವು ಹರಡದಂತೆ ನಾವು ಹಂದಿಗಳಿಗೆ ಸೂಚಿಸಿದ್ದೇವೆ. ಆದರೂ ಮುಂದುವರಿದರೆ ಕಠಿಣಾತಿಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಅವುಗಳಿಗೆ ಎಚ್ಚರಿಸಿದ್ದೇವೆ. ಎಲ್ಲೆ ಮೀರಿ ಹರಡುತ್ತಿರುವ ಹಂದಿಜ್ವರದಿಂದ ಕಂಗೆಟ್ಟು ಬಾಡಿ ಹೋದ ಮುಖಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ಮುಖವಾಡಗಳನ್ನು (ಮಾಸ್ಕ್) ಕಾಳಸಂತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆ ಮಾಡಿದ್ದೇವೆ ಎಂದು ವಕ್ತಾರರು ಒದರಿದ್ದಾರೆ.

ಆದರೆ ಅದನ್ನು ಧರಿಸಬಾರದು ಎಂದು ಸೂಚಿಸಿದ್ದೇವೆ. ಯಾಕೆಂದರೆ, ಅದನ್ನು ಧರಿಸಿದವರು ಉಗ್ರಗಾಮಿಗಳು ಎಂದು ಕರೆಸಿಕೊಳ್ಳುವ ಭಯವಿರುವುದರಿಂದ ಮತ್ತು ಇದು ನಮ್ಮ ಓಟಿನ ಬ್ಯಾಂಕುಗಳಿಗೂ ನೋವು ಉಂಟು ಮಾಡುವುದರಿಂದ ಮಾಸ್ಕ್‌ಗಳಿಗೆ ರಂಧ್ರ ಮಾಡಿ, ಮುಖ ಸಂಪೂರ್ಣವಾಗಿ ತೋರಿಸುವಂತಹ ಕಳಪೆ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.

ಈ ಹಂದಿ ಜ್ವರಕ್ಕೆ ಎಷ್ಟೇ ಜನರು ಬಲಿಯಾದರೂ ಕೂಡ ಯಾರು ಕೂಡ ಒಂದಿನಿತೂ ಆತಂಕ ಪಡಬೇಕಾಗಿಲ್ಲ ಎಂದು ಸರಕಾರವು ಪದೇ ಪದೇ ಎಚ್ಚರಿಕೆ ಸಂದೇಶಗಳನ್ನು ನೀಡುತ್ತಿರುವುದಾಗಿ ಇಡೀ ದಿನ ವರದ್ದಿ ಮಾಡುವಂತೆ ಬೊಗಳೂರು ಬ್ಯುರೋಗೆ ಕೇಂದ್ರವು ನಿರ್ದೇಶಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಹಂದಿಜ್ವರ ನಿಷೇಧ ಮಾಡಿದರೆ ಪ್ರಾಣಿದಯಾಸಂಘದವರು ನ್ಯಾಯಾಲಯದ ಕಟ್ಟೆಯನ್ನು ಖಂಡಿತವಾಗಿಯೂ ಏರುವರು. ಲೋಕಸಭೆಯ ಹೊರಗೆ ಧರಣಿಯನ್ನೂ ಮಾಡಬಹುದು. ಅಷ್ಜೇ ಅಲ್ಲ, ಪರಲೋಕಸಭೆಯ ಸ್ಪೀಕರಳಿಗೆ ಮನವಿಯನ್ನೂ ಸಲ್ಲಿಸಬಹುದು: "ಹೊರಗಿನ ಹಂದಿಗಳ ನಿಷೇಧಿಸಿದರೆ ಸಾಕೆ? ಒಳಗಿರುವ ಹಂದಿಗಳು ok?"

    ಪ್ರತ್ಯುತ್ತರಅಳಿಸಿ
  2. ಸರಕಾರ ಹೇಳೋದೂ ಸರಿಯೇ! ಹಾಗಾದ್ರೂ ಜನಸಂಖ್ಯೆ ಕಡಿಮೆ ಆಗತ್ತೆ ಅಲ್ವಾ? ದೇಶದ ಪ್ರಗತಿಗೆ ಇಂತಹ ರೋಗಗಳು ಬರ್ತಿದ್ರೆ ಎಷ್ಟು ಚೆನ್ನಾಗಿರತ್ತೆ ಅಲ್ವಾ?
    ಅಂದ ಹಾಗೆ ವೈನ್ಸ್ ಕುಡಿಯೋವ್ರಿಗೂ ಸ್ವೈನ್ ಬರತ್ತಂತೆ ಹೌದಾ? ಅದೇನೋ ಎರಡೂ ಪದಗಳಿಗೆ ಬಳಸುವ ಅಕ್ಷರಗಳು ಅವುಗಳೇ, ಸ್ಪೆಲ್ಲಿಂಗ ಮಾತ್ರ ವ್ಯತ್ಯಾಸ ಅಂತ ನಮ್ಮ ಬೀರುವಿನವರು ಹೇಳ್ತಿದ್ರು. ನಿಮ್ಮನ್ನು ಒಂದು ಮಾತು ಕೇಳಿ, ನಾವು ಪ್ರಕಟಿಸೋಣ ಅಂತ ಕೇಳ್ತಿದ್ದೀವಿ.

    ಪ್ರತ್ಯುತ್ತರಅಳಿಸಿ
  3. ಸುನಾಥರೇ,
    ನೀವು ಹೇಳಿದ್ದರಲ್ಲಿಯೇ ಉತ್ತರವಿದೆ. ಹೊರಗಿನ ಹಂದಿಗಳನ್ನು ನಿಷೇಧಿಸದೇಹೋದರೆ, ಅವುಗಳು ನಮಗಿಂತಲೂ ಹೆಚ್ಚಾಗಿ ಸಖತ್ತಾಗಿ ತಿಂದು-ಉಂಡು ದೇಶದ ಖಜಾನೆ ಖಾಲಿ ಮಾಡಿಬಿಟ್ರೆ, ನಮಗೆ ಏನೂ ಉಳಿಯದು ಎಂಬ ಆತಂಕವೇ ಈ ಹಂದಿ ಜ್ವರದ ನಿಷೇಧಕ್ಕೆ ಕಾರಣ.

    ಪ್ರತ್ಯುತ್ತರಅಳಿಸಿ
  4. ತಿರುಕರೆ,
    ನಿಮ್ಮ ಬೀರುವಿನಲ್ಲಿಟ್ಟಿರುವ ವೈನಾದ ವೈನ್ ಶಿಖಾಮಣಿಗಳ ಸಂಶೋಧನೆಯನ್ನು ನೀವು ಒಂದಷ್ಟು ಮುಂದುವರಿಸಬಹುದು. ವೈನ್ ಕುಡಿದರೆ ಹೇಗಾಗುತ್ತದೆ, ಒಂದು ಹನಿ ಕುಡಿದರೆ ಏನಾಗುತ್ತದೆ, ಒಂದು ಪೀಪಾಯಿ ಸೇವಿಸಿದ್ರೆ ಯಾವ ರೀತಿ ಅನುಭವವಾಗುತ್ತದೆ.... ಎಂದಲ್ಲಾ ಸಂಚೋದನೆ ಮಾಡಿ, ಎಲ್ಲವೂ ಸರಿಯಾಗಿದ್ದರೆ ನಮಗೆ ವರದಿ ಒಪ್ಪಿಸಲು ನಿಮ್ಮ ಬೀರುಗಳಿಗೆ ಸೂಚಿಸಲಾಗಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D