ಬೊಗಳೆ ರಗಳೆ

header ads

ಟೀವಿ ನೋಡಿ ದಾಖಲೆ: ಧಾರಾವಾಹಿ ಸಂಘ ಚಕಮಕಿ

[ಬೊಗಳೂರು ಧಾರಾ(ಖಾರ)ವಾಹಿ ಬ್ಯುರೋದಿಂದ]
ಬೊಗಳೂರು, ಫೆ.11- ನಿರಂತರವಾಗಿ 72 ಗಂಟೆ ಟೀವಿ ನೋಡಿ ವಿಶ್ವದಾಖಲೆ ಸ್ಥಾಪಿಸಿದ ಸುದ್ದಿ ಇಲ್ಲಿ ಪ್ರಕಟವಾಗುತ್ತಿರುವಂತೆಯೇ, ಟಿವಿ ಧಾರಾವಾಹಿ ನಿರ್ಮಾಪಕರು ಇದೀಗ ಕೋರ್ಟು ಮೆಟ್ಟಲು ಹತ್ತಲೂ ಹಿಂಜರಿಯುವುದಿಲ್ಲ ಎಂದು ಘೋಷಿಸಿಬಿಟ್ಟಿದ್ದಾರೆ.

ಇದೇಕೆ ಈ ಟಿವಿ ನಿರ್ಮಾಪಕರು ಈ ರೀತಿ ಹೊಡೆದಾಡುತ್ತಿದ್ದಾರಲ್ಲ ಎಂದು ಅನ್ವೇಷಿಸಲು ಹೊರಟಾಗ ಏನು ಮಾಡಿದರೂ ಯಾರಿಗೂ ಗೊತ್ತಾಗಲಾರದ ಸಂಗತಿಗಳೆಲ್ಲವೂ ಬಯಲಿಗೆ ಬಂದವು.

ನೆವರ್ ಎಂಡಿಂಗು ಸೀರಿಯಲ್ಲುಗಳನ್ನು ನಿರ್ಮಿಸುವ ನಮಗೆ ಇದು ಅತಿದೊಡ್ಡ ಆಘಾತಕಾರಿ ಸುದ್ದಿ. ನಮ್ಮ ಸೀರಿಯಲ್ಲು ಕೇವಲ 72 ಗಂಟೆ ಮಾತ್ರದಲ್ಲೇ ಮುಗೀತಾ ಎಂಬುದು ತನಿಖೆಗೆ ಒಳಪಡಬೇಕಾದ ಸಂಗತಿ ಎಂದು ಚೂಯಿಂಗ್ ಗಂ ನಿರ್ಮಾಪಕರ ಒಕ್ಕೂಟದ ಅದಕ್ಷರು ಹೇಳಿಕೆ ನೀಡಿದ್ದಾರೆ.

ಹುಟ್ಟಿದಾಗಿನಿಂದ ನಮ್ಮ ಸೀರಿಯಲ್ಲುಗಳನ್ನು ನೋಡುತ್ತಿರುವ ಹೌಸ್‌ನಲ್ಲೇ ಇರುವ ವೈಫ್‌ಗಳಿಗೆ ಇಂಥದ್ದೊಂದು ಶ್ರೇಯಸ್ಸು ಸಲ್ಲಬೇಕಿತ್ತು. ಈ ಹೌಸುವೈಫುಗಳಿಗೆ ನಮ್ಮ ಸೀರಿಯಲ್ಲುಗಳಿಂದ ಎಷ್ಟೊಂದು ಉಪಕಾರವಾಗುತ್ತಿತ್ತು ಎಂದರೆ, ಅವರ ಮನೆಗೆ ನಾಲ್ಕು ದಿನ ಕಾರ್ಪೊರೇಶನ್ ನೀರು ಬಾರದಿದ್ದರೂ, ಮನೆ ಸುಸೂತ್ರವಾಗಿ ನಡೆಯುತ್ತಿತ್ತು. ಯಾಕೆಂದರೆ, ನಮ್ಮ ಸೀರಿಯಲ್ಲು ನೋಡುತ್ತಾ ಪಾತ್ರೆ ತೊಳೆಯುವ ಸಿಂಕ್ ಮುಂದೆ ನಿಂತುಕೊಂಡು ಬಿಟ್ಟರೆ, ಪಾತ್ರೆ ತೊಳೆಯಲು ಬೇಕಾದಷ್ಟು ನೀರು ತಮ್ಮ ತಮ್ಮ ಕಣ್ಣುಗಳಿಂದಲೇ ಬರುವಂತಾಗುತ್ತಿತ್ತು ಎಂದು ಕ್ಯೋಂಕೀ ಬಹು ಭೀ ಸಾಂಸ್ ಲೇತೀ ಥೀ ಸೀರಿಯಲ್‌ನ ಮಹಾನ್ ನಿರ್ಮಾಪಕರು, ನಿರ್ದೇಶಕರ ಸಂಘವೊಂದು ತಿಳಿಸಿದೆ.

ಕನ್ನಡ ಸೀರಿಯಲ್ಲುಗಳ ಕಣ್-ನೀರು-ಮಾಪಕರ ಸಂಘದ ಪ್ರಕಾರ, ಬಹುಶಃ ದಾಖಲಾರ್ಹ (ಮೆಂಟಲ್ ಆಸ್ಪತ್ರೆಯಲ್ಲಿಯೋ ಅಥವಾ ಗಿನ್ನೆಸ್ ದಾಖಲೆ ಪುಸ್ತಕದಲ್ಲೊ ಇನ್ನೂ ಗೊತ್ತಾಗಿಲ್ಲ) ವ್ಯಕ್ತಿಯು ತಮ್ಮ ಸೀರಿಯಲ್ಲುಗಳನ್ನೆಲ್ಲಾದರೂ ನೋಡುತ್ತಿದ್ದರೆ ಮತ್ತಷ್ಟು ದೊಡ್ಡ, ಸುದೀರ್ಘ ದಾಖಲೆ ಮಾಡುತ್ತಿದ್ದ. ಒಂದರೆಕ್ಷಣ ಕಣ್ಣು ಟೀವಿಯಿಂದ ತೆಗೆಯದಂತೆ ಮಾಡುವ ನಮ್ಮ ಸೀರಿಯಲ್ಲುಗಳಂತೂ, ಎಳೆದಾಟದಲ್ಲಿ ಬೇರಾವುದೇ ಭಾಷೆಗಳ ಸೀರಿಯಲ್ಲುಗಳನ್ನು ಮೀರಿಸುತ್ತವೆ. ಎಳೆದು ಎಳೆದು ಆಡುವ ಈ ಸೀರಿಯಲ್ಲುಗಳನ್ನು ಯಾವುದರಿಂದ ತಯಾರಿಸಲಾಗುತ್ತದೆ ಎಂದು ಬೇರೆ ಭಾಷೆಗಳ ನಿರ್ಮಾಪಕರು ನಮ್ಮನ್ನು ಕೇಳತೊಡಗಿದ್ದಾರೆ.

ಧಾರಾವಾಹಿಗಳೇಕೆ ಧಾರಾಕಾರವಾಗಿ ಕಣ್ಣೀರಧಾರೆ ಸುರಿಯುವಂತಿರುತ್ತವೆ ಎಂಬ ಕೊಂಕು, ಅಪ್ರಸ್ತುತ, ಶುದ್ಧ ಬೆಪ್ಪುತಕ್ಕಡಿ ಪ್ರಶ್ನೆಯೊಂದನ್ನು ಎಸೆಯಲಾಯಿತು. ಅದಕ್ಕೆ ಅವರದ್ದು ಒಂದೇ ಉತ್ತರ: "ಅಲ್ಲಾ,,, ಹಾಗೆ ಮಾಡದೇ ಇದ್ದರೆ ಅದನ್ನು ಯಾರಾದರೂ 'ಧಾರಾ'ವಾಹಿ ಅಂತಾರೆಯೇ?!!!"

ಇಷ್ಟೆಲ್ಲದರ ಮಧ್ಯೆ, ಹತ್ತು ಹಲವು ಧಾರಾವಾಹಿ ಮಂಡಳಿಗಳನ್ನು ಸಂಪರ್ಕಿಸಲಾಗಿ, ಟೀವಿ ನೋಡುತ್ತಲೇ ಕಳೆದ ಆ ಭೂಪ ತಮ್ಮ ಧಾರಾವಾಹಿಯನ್ನು ನೋಡಿದ್ದು ಎಂದು ಕೊಂಡು, ಎಲ್ಲ ಭಾಷೆಗಳ ಧಾರಾವಾಹಿ ನಿರ್ಮಾಪಕರು ಪರಸ್ಪರರಿಗೆ ಚೂಯಿಂಗ್ ಗಮ್ ಎಸೆಯುತ್ತಾ ಕಚ್ಚಾಡುತ್ತಿದ್ದರು ಎಂಬುದೇ ತಗಾದೆಗೆ ಕಾರಣವಾದ ಸುದ್ದಿ ಎಂದು ತಿಳಿಯಿತು. ಏಕ ಎಂದರೆ ಸಹಸ್ರ ಕಂತು ಎಂದೇ ತಿಳಿದುಕೊಂಡಿರುವ ಏಕ ತಾಕ ಪೂರ್ ಕನ್ನಡ ನೆಲದಲ್ಲೇ ಸಕಲ ರೀತಿಯಲ್ಲೂ ಜಲೋತ್ಪತ್ತಿ ಮಾಡುತ್ತಿರುವುದರಿಂದ ಅವರಿಗೇ ಈ ಶ್ರೇಯಸ್ಸು ಸಲ್ಲಬೇಕು ಎಂಬ ವಾದ ಮಂಡಿಸಲಾಯಿತು.

ಆದರೆ, ಇದಕ್ಕೆ ತಕರಾರು ತೆಗೆದಿರುವ ಧಾರಾವಾಹಿ ಸಂಗೀತ ನೀರ್-ದೇಶಕರು, ನಾವು ಕೊಟ್ಟ ಝಾಂ... ಧೂಂ... ಬ್ಲಾಂ... ಎಂಬಿತ್ಯಾದಿ ಮ್ಯೂಸಿಕ್ ಸ್ಟ್ರೋಕ್‌ಗಳಿಂದಲೇ ಆ ವ್ಯಕ್ತಿ ಹೃದಯಾಘಾತವಾಗಿ 72 ಗಂಟೆಗಳ ಕಾಲ ಎಚ್ಚರ ತಪ್ಪಿ ಬಿದ್ದಿದ್ದ. ಅದನ್ನೇ ದಾಖಲೆ ಎಂದು ಗುರುತಿಸಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತ ವಾದ-ವಿವಾದದ ಸರಣಿಯು ಒಂದೇ ದಿನದಲ್ಲಿ 125ನೇ ಕಂತಿಗೆ ಮುಂದುವರಿಯುತ್ತಿದೆ...

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ಕನ್ನಡದ ಸಂಗೀತ ನೀವು ಹೇಳಿದಷ್ಟೇನೂ ಹಳಸಿಲ್ಲ, ಬೇರೆ ಭಾಷೆಗಳಿಗೆ ತುಲನೆ ಮಾಡಿದರೆ. ಒಂದು ಸಲ ತಮಿಳು, ತೆಲುಗು, ಹಿಂದಿ ಭಾಷೆಗಳ ಹಾಡುಗಳನ್ನು ಕೇಳಿ....ಅದರಲ್ಲಿ ಹಾಡು ಎನ್ನುವುದೇ ಇರುವುದಿಲ್ಲ, ಕೇವಲ ವಾದ್ಯಗಳ ಬೊಬ್ಬಿರಿತ, ಕರ್ಕಶ ಚೀತ್ಕಾರ ಮೊದಲಾದವು ಸಹಜ. ಅದಕ್ಕೆ ಉತ್ತಮ ಉದಾಹರಣೆ...ತಮಿಳಿನ ಎ.ಆರ್. ರೆಹಮಾನ್ (ಬರೀ ವಿದೇಶೀ ಸಂಗೀತಗಳನ್ನು ಕದ್ದು ಭಾರತೀಯ ಚಿತ್ರಗಳಲ್ಲಿ ಅಳವಡಿಸುವುದು---ಕದಿಯುವುದೂ ಒಂದು ಕಲೆ).

  ಪ್ರತ್ಯುತ್ತರಅಳಿಸಿ
 2. ಗಿರೀಶ್ ಪಟೇಲರೇ, ಬೊಗಳೆತಾಣಕ್ಕೆ ಸ್ವಾಗತ.

  ಇದನ್ನು ಕೂಡ ನೀವು ಲೇಖನ ಎಂದು ಪರಿಗಣಿಸಿದ್ದೇ ಮಾತ್ರವಲ್ಲದೆ, ಅದ್ಭುತ ಎಂದು ಕೇಳಿ ಮನಸ್ಸಿಗೆ ಅಚ್ಚರಿಯಾಗಿದೆ.

  ಬರ್ತಾ ಇರಿ,

  ಪ್ರತ್ಯುತ್ತರಅಳಿಸಿ
 3. ಗುರುಗಳೇ,

  ಕನ್ನಡದಲ್ಲಿ ಓಕೆಯೇ. ಆದ್ರೆ ಕೆಲ ಧಾರಾವಾಹಿಗಳು ಮಾತ್ರ ಈ ರೀತಿ ಭಯಂಕರ ಸದ್ದಿನೊಂದಿಗೆ ಭಯೋತ್ಪಾದನೆ ಸೃಷ್ಟಿಸಿ, ಹಾರ್ಟ್ ಬೀಟ್ ನಿಲ್ಲಿಸಿಬಿಡುವಷ್ಟರ ಮಟ್ಟಿಗೆ ಬೆಳೆದಿದೆ. ಇವುಗಳಿಗೆ ಭಾಷಾ ಭೇದವಿಲ್ಲ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D