(ಬೊಗಳೂರು ಪ್ರೇಮಿಗಳ ಬ್ಯುರೋದಿಂದ)
ಬೊಗಳೂರು, ಫೆ.9- ಡೇಟಿಂಗ್ ಮಾಡ್ತಾ ಇದ್ರೆ ಮದ್ವೆ ಮಾಡಿಸ್ತೀವಿ ಎಂಬ ಶ್ರೀರಾಮನ ಸೇನೆಯ ಅಮೂಲ್ಯ ಆಹ್ವಾನವನ್ನು ಒಳಗಿಂದೊಳಗೆ ಸ್ವಾಗತಿಸಿರುವ ಯುವ ಜೋಡಿಗಳು, ಆದರೆ ಪ್ರತಿಭಟನೆಗೂ ತಯಾರಿ ನಡೆಸಿವೆ ಎಂಬ ವಿಶೇಷ X-Looseವ್ ಸುದ್ದಿಯನ್ನು ಬೊಗಳೂರು ಬ್ಯುರೋ ಬಹಿರಂಗಪಡಿಸಿದೆ.
ಏನಾದ್ರೂ ಮಾಡಿ ಈ ಬಾರಿ ಡೇಟಿಂಗ್ ಮಾಡಿಯೇ ಸಿದ್ಧ ಎಂದು ಪಣ ತೊಟ್ಟಿರುವ ಕೆಲವರು ಈಗಾಗಲೇ ಎಂ.ಜಿ.ರೋಡ್‌ನಲ್ಲಿ ನಾಲ್ಕು ಕಾಲು ಊರುವಷ್ಟು ಸ್ಥಳವನ್ನು ಬುಕ್ ಮಾಡಿಸಿಕೊಂಡಿರುವುದಾಗಿ ನಮ್ಮ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ವರದ್ದಿಸಿದ್ದಾರೆ.
ಈ ರೀತಿ ನಾಲ್ಕು ಕಾಲೂರುವ ಜಾಗ ಬುಕ್ ಮಾಡಿಸಿಕೊಂಡವರಲ್ಲಿ ಪ್ರೇಮ ವಿರಹಿಗಳದ್ದೇ ಪಾತ್ರ ಹೆಚ್ಚಿದೆ ಎಂಬುದನ್ನು ಅಂಕಿ-ಶಂಕೆಗಳು ಸ್ಪಷ್ಟಪಡಿಸಿವೆ. ತಮ್ಮ ಪ್ರಿಯಕರನಿಂದ ತಿರಸ್ಕೃತಗೊಂಡವರು, ಪ್ರಿಯತಮೆಯಿಂದ no ಅನ್ನಿಸಿಕೊಂಡವರು ಎಲ್ಲರೂ ಇಲ್ಲಿ ಜಾಗ ಬುಕ್ ಮಾಡಿಸಿಕೊಂಡಿದ್ದು, ಅಲ್ಲಿಗೆ ತಮ್ಮನ್ನು ತಿರಸ್ಕರಿಸಿದವರು ಬಂದ ತಕ್ಷಣ ಅಪ್ಪಿಕೊಂಡು ಪ್ರೀತಿಯ ಮಳೆ ಸುರಿಸುವುದು ಅವರ ಸನ್ನಾಹ. ತಕ್ಷಣವೇ ಆಗಮಿಸುವ ರಾಮ ಸೈನಿಕರು ಮದುವೆ ಮಾಡಿಸಿಬಿಟ್ರೆ ಜೀವನ ಧನ್ಯವಾಗಿಬಿಡುತ್ತದೆ, ನಾ ಮೆಚ್ಚಿದವರನ್ನು ಸಂಗಾತಿಯಾಗಿ ಪಡೆದೆವೆಂಬ ಧನ್ಯತಾ ಭಾವವೂ ಮೂಡುತ್ತದೆ ಎಂಬುದು ಅವರ ದೂರಾಲೋಚನೆ.
ಒಟ್ಟಿನಲ್ಲಿ ಪ್ರೇಮದ ದಿನಾಚರಣೆಯು ದ್ವೇಷವನ್ನು ಮರೆತು ಪ್ರೇಮಿಗಳಾಗುವ ದಿನವನ್ನಾಗಿ ಮಾಡಿಸಲು ವಿರಹಿಗಳೆಲ್ಲರೂ ನಿರ್ಧರಿಸಿದ್ದಾರೆ. ಅಂದ್ರೆ ತಮಗೆ ಕೈಕೊಟ್ಟ ಹುಡುಗಿಗೆ ಪ್ರೇಮದ ಒಂದು ಪಾಠ ಕಲಿಸಲು ಮತ್ತು ಕಾಲು ಕೊಟ್ಟು ಓಡಿಹೋಗುವ ಹುಡುಗನಿಗೆ ಒಳ್ಳೆಯ ಬುದ್ಧಿಯನ್ನು ಕಲಿಸುವುದಕ್ಕಾಗಿ ಈ ಅಮೂಲ್ಯ ಅವಕಾಶವನ್ನು 'ಸರಿಯಾಗಿ' ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಅಂದರೆ, ಇದರಿಂದ ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿದಂತಾಗುತ್ತದೆ ಎಂಬುದು ಅವರ ಬಲವಾದ ನಂಬಿಕೆ!
ಈ ಮಧ್ಯೆ, ರಸ್ತೆಗಳಲ್ಲಿ ಭಿಕ್ಷೆ ಬೇಡುವವರನ್ನು ಈ "ಮದ್ವೆ ಮಾಡಿಸುವ" ಪ್ರಕ್ರಿಯೆಯಿಂದ ಹೊರಗಿರಿಸಬೇಕು ಎಂದು ಫಸ್ಟ್ ಲವ್ ಹುಡುಕಾಟದಲ್ಲಿರುವ ಪ್ರೇಮಿಗಳ ಸಂಘದವರು ಮನವಿ ಮಾಡಿದ್ದಾರೆ. ಯಾಕೆಂದರೆ, ಭಿಕ್ಷುಕರು ಯಾವಾಗ್ಲೂ ಮೈಮೇಲೆ ಬಿದ್ದೇ ಭಿಕ್ಷೆ ಎತ್ತುತ್ತಿರುತ್ತಾರೆ. ಅವರನ್ನು ತಪ್ಪಾಗಿ ತಿಳಿದುಕೊಂಡು ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಎಂಬ ಆತಂಕ ಅವರದು. ಇದರೊಂದಿಗೆ, ಪ್ರಾಣಿದಯಾ ಸಂಘಗಳವರು ಕೂಡ ಬೀದಿಗಿಳಿದಿದ್ದು, ಈ ಪ್ರಕ್ರಿಯೆಯಿಂದ ಬೆಕ್ಕು, ನಾಯಿ ಮುಂತಾದ ಮನುಷ್ಯ ಹೆಚ್ಚಾಗಿ ನೆಚ್ಚಿಕೊಳ್ಳುವ ಪ್ರಾಣಿಗಳನ್ನೂ ಹೊರಗಿರಿಸಬೇಕು ಎಂದು ತೀವ್ರವಾಗಿ ಒತ್ತಾಯಿಸತೊಡಗಿದ್ದಾರೆ!
ಆದರೆ, ಸೈನಿಕರಿಗೆ ಮತ್ತೊಂದು ತಲೆಬಿಸಿ ಆರಂಭವಾಗಿದೆ. ಅವರು ಕುಂಕುಮಭಾಗ್ಯ ನೀಡುತ್ತಾರಾದರೂ, ಭಾರತೀಯ ಸಂಪ್ರದಾಯ ಪ್ರಕಾರವೇ ಗಟ್ಟಿಯಾದ ಚಿನ್ನದ ಮಂಗಳಸೂತ್ರವನ್ನೇ ನೀಡಬೇಕು, ನೀವು ಕೊಡುವ ತಾಳಿ ತೀರಾ ಚಿಕ್ಕದು ಎಂದು ಪ್ರೇಮಿಗಳು ಇದೀಗಾಗಲೇ ಒತ್ತಾಯಿಸಲಾರಂಭಿಸಿದ್ದಾರೆ. ಹಾಗಿದ್ದರೆ ಮಾತ್ರ ನಾವು ಬೀದಿ ಬೀದಿಗಳಲ್ಲಿ ಪ್ರೇಮ ಪ್ರದರ್ಶನ ಮಾಡ್ತೀವಿ, ಇಲ್ಲಾಂದ್ರೆ ನಿಮ್ಮ ಮದ್ವೆ ಯೋಜನೆ ಫೇಲ್ ಆಗಿಸಲು ನಾವು ಬೀದಿಗಿಳಿಯೋದೇ ಇಲ್ಲ ಎಂದೂ ಬೆದರಿಸಿದ್ದಾರೆ.
ಅಂತೆಯೇ, ವರದಕ್ಷಿಣೆ ಕೊಡುವುದು, ತೆಗೆದುಕೊಳ್ಳೋದು ಭಾರತೀಯ ಸಂಸ್ಕೃತಿಯಲ್ಲಿ ತಲೆತಲಾಂತರದಿಂದಲೂ ಇದೆ ಎಂದು ಕೂಡ ಹೇಳಿರುವ ಜೋಡಿಗಳು, ತಮಗೆ ವರದಕ್ಷಿಣೆಯನ್ನು ಮತ್ತು ಅದಕ್ಕೆ ಸರಿಸಾಟಿಯಾಗಿ ವಧು ದಕ್ಷಿಣೆಯನ್ನೂ (ಮೈನಸ್xಮೈನಸ್ = ಪ್ಲಸ್ ಎಂಬ ಸೂತ್ರಕ್ಕನುಗುಣವಾಗಿ) ನೀಡಬೇಕು ಎಂಬುದು ಮತ್ತೊಂದು ಪಂಗಡದ ಒತ್ತಾಯ.
ಇಷ್ಟೆಲ್ಲದರ ಮಧ್ಯೆ, ಮಕ್ಕಳಿಗೆ ಮದುವೆ ಮಾಡಲು ಹೆಣಗಾಡುತ್ತಿರುವ ಹೆತ್ತವರು, ತಮ್ಮ ಮಕ್ಕಳನ್ನು ಫೆಬ್ರವರಿ 14ರಂದು ಬೆಂಗಳೂರಿಗೆ ಓಡಿಸಲು ಸಂಚು ಹೂಡುತ್ತಿದ್ದಾರೆ ಎಂದೂ ಹೆಸರು ಹೇಳಲಿಚ್ಛಿಸದ ಮೂಲಗಳ ತಂದೆ ತಾಯಂದಿರು ತಿಳಿಸಿದ್ದಾರೆ.
10 ಕಾಮೆಂಟ್‌ಗಳು
ಛೇ, ಊರಿಗೆ ಟಿಕೆಟ್ ಬುಕ್ ಮಾಡಿದೆ. ಮೊದಲೇ ಗೊತ್ತಿದ್ದರೆ ನಾನೂ ಎಂ.ಜಿ.ರೋಡ್‌ನಲ್ಲಿ ಜಾಗ ಬುಕ್ ಮಾಡುತ್ತಿದ್ದೆ!
ಪ್ರತ್ಯುತ್ತರಅಳಿಸಿಡೈವೋರ್ಸ್ ಕೊಡಿಸೋ ಲಾಯರುಗಳೂ ಭಯ೦ಕರ ಬ್ಯುಸಿ ಅ೦ತೆ.. ಯಾವುದಕ್ಕೂ ಇರಲಿ ಎ೦ದು ಪ್ರೇಮಿಗಳು ವಕೀಲರನ್ನು standby ಇರಿಸಿಕೊ೦ಡೇ ಕಣಕ್ಕಿಳಿಯುತ್ತಿದ್ದಾರ೦ತೆ..
ಪ್ರತ್ಯುತ್ತರಅಳಿಸಿValentine Day ಅಂತ ಅನ್ಕೊಂಡು ಹೋದರೆ, ಇದು
ಪ್ರತ್ಯುತ್ತರಅಳಿಸಿLamentine Day ಆಗುತ್ತಲ್ರೀ!
ಜ್ಯೋತಿ ಅವರೆ,
ಪ್ರತ್ಯುತ್ತರಅಳಿಸಿಟಿಕೆಟ್ ಬುಕ್ಕಾಗಿದ್ರೂ ಪರವಾಗಿಲ್ಲ, ಊರಿಗೆ ನಾವು ಹೋಗ್ತೀವಿ, ನಮಗೆ ಟಿಕೆಟ್ ಕೊಡಿ...:)
ಶ್ರೀನಿಧಿಯವರೆ,
ಪ್ರತ್ಯುತ್ತರಅಳಿಸಿಈಗೇನಿದ್ದರೂ ಫಟಾಫಟ್ ಯುಗವಲ್ವಾ... ಹಾಗಾಗಿ ನಿಮ್ಮ ಅಮೂಲ್ಯ ಸಂಶೋಧನೆ ಫಲ ಕೊಡುತ್ತೆ... ಆಮೇಲೆ ಪಕ್ಕದಲ್ಲೇ ಮೆಟರ್ನಿಟಿ ಆಸ್ಪತ್ರೇನೂ ಕಟ್ಟಿಸ್ತಾರಂತೆ...
ಸುನಾಥರೆ,
ಪ್ರತ್ಯುತ್ತರಅಳಿಸಿಹಳ್ಳಿಯಲ್ಲಿ ಮಗ ಒಬ್ಬ ನಂಗೂ ವ್ಯಾಲೆಂಟೈನ್ ಬೇಕೂ ಅಂತ ಹಠ ಹಿಡೀತಿದ್ನಂತೆ.. ಏನೂ ತಿಳಿಯದ ಅಪ್ಪ ಟರ್ಪೆಂಟೈನ್ ತಂದು ಕೊಟ್ನಂತೆ...
ಒಟ್ನಲ್ಲಿ ರಾಮಸೇನೆಯೀಗ ಲ್ಯಾಮೆಂಟೈನ್ ಆಗ್ತಾ ಇರೋದಂತೂ ನಿಜ.
ಹಹಹ...ಸಿಕ್ಕಾಪಟ್ಟೆ ನಗುಬಂತು....
ಪ್ರತ್ಯುತ್ತರಅಳಿಸಿನನ್ನ ದಿನಪತ್ರಿಕೆಯ ಹುಡುಗರು ಲಂಗು ಲಗಾಮಿಲ್ಲದೇ ಓಡಾಡುತ್ತಿದ್ದಾರೆ...ಅವರನ್ನು ಎಂ.ಜಿ. ರೋಡಿಗೆ ಕಳಿಸುವ ಆಲೋಚನೆಯಲ್ಲಿದ್ದೇನೆ....
ಫೆಬ್ರವರಿ ೧೪ರಂದು ಸ್ವಲ್ಪ ಜಾಗ್ರತೆಯಗಿ ಓಡಾಡಿ...ಅಥವಾ ಓಡಾಡಲೂ ಬರಬೇಡಿ...ಏಕೆಂದರೆ ಸುಮಾರು ಭಿಕ್ಷುಕಿಯರು, ಮದುವೆ ಮಾಡಿಕೊಳ್ಳಬೇಕೆಂಬ ಹಂಬಲದಲ್ಲಿರುವ ವೇಶ್ಯೆಯರು, ಕೆಲ ಶಿಖಂಡಿಗಳು ಅಂದು ನಿಮ್ಮನ್ನು ಪ್ರೇಮಿಗಳ ದಿನದ ನೆಪದಲ್ಲಿ ಅಪ್ಪಿಕೊಳ್ಳಬಹುದು. ಆಗ ಶ್ರೀರಾಮ ಸೈನಿಕರು ಘಂಟೆಗೆ ನೂರುಯ್ ಕಿ.ಮೀ. ವೇಗದಲ್ಲಿ ಓಡಿಬಂದು ಕಣ್ಣೆವೆ ಮುಚ್ಚುವುದರೊಳಗೆ ಮದುವೆ ಮಾಡಿಬಿಡುತ್ತಾರೆ. ಆಮೇಲೆ ಎಮ್.ಜಿ.ರಸ್ತೆಯ ತುಂಬೆಲ್ಲ ಬಾಯಿಬಾಯಿ ಬಡಿದುಕೊಳ್ಳುವವರು ಸಾವಿರ ಜನ ಸಿಕ್ಕುತ್ತಾರೆಂಬ ಪೊರ್ಕಿ ನ್ಯೂಸ್ ನಮ್ಮ ಶ್ರೀ ಕಾಮ ಸೈನಿಕರಿಂದ ಬಂದಿದೆ.
ಪ್ರತ್ಯುತ್ತರಅಳಿಸಿಶಿವು ಅವರೆ, ಬೊಗಳೂರಿಗೆ ಸ್ವಾಗತ.
ಪ್ರತ್ಯುತ್ತರಅಳಿಸಿನೀವು ನಗಬಾರದೆಂದೇ ನಾವು ಹೆಣಗಾಡುತ್ತಿರುವುದು. ಆದರೂ ನಕ್ಕದ್ದು ಕೇಳಿ ಆಘಾತವಾಗಿದೆ. ಹೀಗೇ ಮುಂದುವರಿಯಲಿ.
ನಿಮ್ಮ ಹುಡುಗರಿಗಾದ್ರೂ ಲಗಾಮು ತೊಡಿಸಿಯೇ ಕಳುಹಿಸಿಬಿಡಿ. ಇಲ್ಲವಾದರೆ, ಪರಿಸ್ಥಿತಿ ನೆಟ್ಟಗಿರಲಾರದು. ;)
ಗುರುಗಳೇ,
ಪ್ರತ್ಯುತ್ತರಅಳಿಸಿನಾವು ಓಡಾಡುವುದಿಲ್ಲ. ನಿಧಾನ ಅತ್ತಿಂದಿತ್ತ ನೋಡುತ್ತಲೇ ನಡೆದಾಡುತ್ತೇವೆ. ಯಾರ ಕಣ್ಣು ನಮ್ಮ ಮೇಲೆ ಬೀಳಬೇಕು, ಯಾರಕ ಕಣ್ಣು ಬೀಳಬಾರದು ಅಂತ ನೋಡಿಕೊಂಡೇ ನಡೆದಾಡುತ್ತೇವೆ. ನೀವೂ ಬರ್ತೀರಾ ತಾನೇ...;)
ಏನಾದ್ರೂ ಹೇಳ್ರಪಾ :-D