ಬೊಗಳೆ ರಗಳೆ

header ads

ಪ್ರಾಣಿ ಹಕ್ಕು ಆಯೋಗ ರಚನೆಗೆ ಕೇಂದ್ರ ನಿರ್ಧಾರ!

(ಬೊಗಳೂರು ಅಮಾನವೀಯ-ಆಯೋಗ ಬ್ಯುರೋದಿಂದ)
ಬೊಗಳೂರು, ಫೆ.4- ಉಗ್ರಗಾಮಿಗಳು ಮಾನವ ಹಕ್ಕುಗಳಿಗೆ ಅರ್ಹರಲ್ಲ, ಅವರಿಗೆ ಪ್ರಾಣಿಗಳ ಹಕ್ಕುಗಳನ್ನೇ ಅಳವಡಿಸಬೇಕು ಎಂದು ನ್ಯಾಯಾಧೀಶರೇ ಹೇಳಿರುವುದರಿಂದ ತಕ್ಷಣವೇ ಕಾರ್ಯೋನ್ಮುಖವಾದ ಕೇಂದ್ರ ಸರಕಾರವು, ಪ್ರಾಣಿಗಳ ಹಕ್ಕು ಆಯೋಗ ರಚನೆಗೆ ನಿರ್ಧರಿಸಿದೆ.

ಈಗಾಗಲೇ ಈ ಪ್ರಸ್ತಾಪಿತ ಪ್ರಾಣಿಗಳ ಹಕ್ಕುಗಳ ಆಯೋಗಕ್ಕೆ ಖ್ಯಾತ ಪ್ರಾಣಿ ಹಕ್ಕುಗಳ ಅಥವಾ ಪ್ರಾಣಿ ಹಕ್ಕುಗಳ ಖ್ಯಾತ ಹೋರಾಟಗಾರ್ತಿ ಮೇನಕಾ ಗಾಂಧಿಯವರನ್ನು ಮುಖ್ಯಸ್ಥೆಯನ್ನಾಗಿ ಮಾಡಲು ಸರಕಾರ ನಿರ್ಧರಿಸಿದೆ. ಅದೇ ರೀತಿ, ಪ್ರಾಣಿಗಳ ಹಕ್ಕುಗಳ ಆಯೋಗದ ಕರ್ನಾಟಕದ ಅಧ್ಯಕ್ಷರನ್ನಾಗಿ ಮಾಜಿ ಶಾಸಕ, ಈಗಾಗಲೇ ಕತ್ತೆಗಳನ್ನು, ನಾಯಿಗಳನ್ು ವಿಧಾನಸೌಧದೆದುರು ನಿಲ್ಲಿಸಿ ಮಾನಹರಣ ಮಾಡಿ ಖ್ಯಾತರಾಗಿರುವ 'ಹೋರಾಟಗಾರ' ವಟವಟಾಳ್ ಗಾನರಾಜ್ ಅವರನ್ನು ನೇಮಿಸಲು ತೀರ್ಮಾನಿಸಲಾಗಿದೆ.

ಈ ಆಯೋಗಕ್ಕೆ ಆಯುಕ್ತರನ್ನಾಗಿ ಕೇಂದ್ರದ ಸಂಪತ್ತಿನ ಮೂಲ ಸಚಿವ ದುರ್ಜನ ಸಿಂಗರ ಹೆಸರನ್ನು ಆಲೂ ಪ್ರಸಾದ ದಾನವರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಾಣಿಗಳ ಹಕ್ಕುಗಳ ಆಯೋಗ ರಚಿಸಿರುವ ಕೇಂದ್ರದ ಕ್ರಮವನ್ನು ಮಾಜಿ ಕೇಂದ್ರದ ಮತ್ತು ಕೇಂದ್ರದ ಮಾಜಿ ಸಚಿವ ಜನರಧನ ಜೂಜಾರಿ ಅವರು ಸ್ವಾಗತಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಅವ್ಯವಸ್ಥೆ ತೀರಾ ಕೆಟ್ಟು ಹೋಗುತ್ತಿದೆ. ನಮ್ಮ ಅಲ್ಪ ಸಂಖ್ಯಾತರಿಗೆ ರಕ್ಷಣೆಯೇ ಇಲ್ಲ. ಇತ್ತೀಚೆಗೆ ನಡೆದ ಪಬ್ ದಾಳಿಯಲ್ಲಿಯೂ ಅಲ್ಪಸಂಖ್ಯಾತರು ಬಲಿಪಶುವಾಗಿದ್ದಾರೆಯೇ ಎಂಬುದರ ಬಗ್ಗೆ ನಮ್ಮ ಪಕ್ಷವು ತೀವ್ರವಾಗಿ ತನಿಖೆ ನಡೆಸುತ್ತಿದ್ದು, ಸೂಕ್ತ ಸಾಕ್ಷ್ಯಾಧಾರಗಳು ದೊರೆತ ತಕ್ಷಣವೇ ಅದನ್ನು ಸಮರ್ಪಕವಾಗಿ ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತದೆ ಎಂದು ತಿಳಿಸಿರುವ ಅವರು, ಹೇಗಿದ್ದರೂ ಚುನಾವಣೆ ಸಮೀಪಿಸುತ್ತಿದೆ. ಪ್ರಾಣಿಗಳ ಹಕ್ಕುಗಳ ಆಯೋಗವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, ಈ ಬಗ್ಗೆ ಚಕಾರವೆತ್ತಿರುವ ತಮಿಳುಕಾಡು ಮುಖ್ಯಮಂತ್ರಿ ಇದನ್ನು ಕರ್ನಾಟಕದಲ್ಲಿ ಮಾತ್ರವೇ ಚುನಾವಣೆಗೆ ಬಳಸಿಕೊಳ್ಳದೆ, ತಮಿಳುಕಾಡಿಗೂ ಇದರಲ್ಲಿ ಪಾಲು ಬೇಕು ಎಂದು ಒತ್ತಾಯಿಸಿದ್ದಾರೆ. ಶ್ರೀಲಂಕಾದಲ್ಲಿಯೂ ತಮಿಳು ಉಗ್ರರು ಸಾಯುತ್ತಿದ್ದಾರೆ. ಅವರ ಪ್ರಾಣಗಳು ಮತ್ತು ಪ್ರಾಣಿಗಳ ಹಕ್ಕು ಉಲ್ಲಂಘನೆಯಾಗುತ್ತಿದೆ. ಇದರ ತಡೆಗೂ ಈ ಆಯೋಗವನ್ನು ನಾವು ಕೂಡ ಹರಿದುಹಂಚಿಕೊಂಡು ಸಮರ್ಪಕವಾಗಿ ಬಳಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಈ ನಡುವೆ, ಉಗ್ರರು ಮಾನವರಲ್ಲ ಎಂದು ಹೇಳಿರುವ ಜನರ ವಿರುದ್ಧ ಕಾಂgueಸ್ ಧ್ವನಿ ಎತ್ತಲು ನಿರ್ಧರಿಸಿದೆ. ಉಗ್ರಗಾಮಿಗಳು, ಭಯೋತ್ಪಾದಕರು ಪ್ರಾಣಿಗಳಾಗಿದ್ದರೆ ಮುಂಬಯಿಯಲ್ಲಿ ನಡೆದಂತೆ ಯೋಜಿತ ದಾಳಿ ನಡೆಸಲು ಅವರಿಗೆ ಬರುತ್ತಿತ್ತೇ? ಮನುಷ್ಯರಿಗೆ ಮಾತ್ರವೇ ಈ ರೀತಿಯ ಬುದ್ಧಿ ಬರುವುದಲ್ಲವೇ? ಪ್ರಾಣಿಗಳಿಗೇನಾದರೂ ಈ ರೀತಿ ತಲೆ ಉಪಯೋಗಿಸುವುದು ತಿಳಿಯುತ್ತದೆಯೇ ಎಂದು ಕಾಂgueಸ್ ವಕ್ತಾರ, ಕಫೀಲ್ ಸೈಬಲ್, ಅವರಿಗೆ ಮೀಸಲಾತಿಯನ್ನೇ ನೀಡಬೇಕು. ನ್ಯಾಯದಾನ ವ್ಯವಸ್ಥೆಯಲ್ಲಿ ವಿಶೇಷವಾಗಿ ಮೀಸಲಾತಿ ಬೇಕಾಗಿದೆ. ಇಲ್ಲವಾದಲ್ಲಿ ನಮ್ಮ ದೇಶದ ಬ್ಯಾಂಕುಗಳಿಗೆ ತೀವ್ರ ತೊಂದರೆಯಿದೆ ಎಂದು ಹೇಳಿಕೆ ನೀಡಿದ್ದಾರೆ.

ಆದರೆ, ಯಾವ ಬ್ಯಾಂಕು ಎಂದು ಕೇಳಿದಾಗ ಅವರು, ಓಟು ಬ್ಯಾಂಕ್ ಎಂದು ಉತ್ತರ ನೀಡಿ ತತ್ತರಿಸಿದ್ದಾರೆ.

ಅಂತೆಯೇ, ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸಿ ಮಾನವರನ್ನು ಕೊಲ್ಲುವವರು ಮಾನವರಲ್ಲ ಎಂಬ ವಾಕ್ಯವನ್ನು ತನಿಖೆಗೊಳಪಡಿಸಿದಾಗ, ಇದಕ್ಕೆ 'ಹೌದು' ಎನ್ನಬೇಕೆನಿಸುತ್ತದೆ. ಯಾಕೆಂದರೆ, ಮಾನವರಿಗೆ ಕೈಕಾಲುಗಳಿವೆ. ಅವರಿಗೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳೇಕೆ ಬೇಕು. ಹಸ್ತಚಾಲಿತ ಶಸ್ತ್ರಾಸ್ತ್ರಗಳು ಮಾತ್ರವೇ ಸಾಕಲ್ಲವೇ ಎಂಬ ಪ್ರಶ್ನೆಯು ಪ್ರಶ್ನೆಗೆ ಉತ್ತರವಾಗಿ ದೊರೆತಿರುವುದನ್ನು ಬೊಗಳೂರು ಬ್ಯುರೋ ಕೂಲಂಕಷವಾಗಿ ಪತ್ತೆ ಹಚ್ಚಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಪ್ರಾಣಿಗಳಿಗೂ ಮತದಾನದ ಹಕ್ಕು ದೊರೆಯುವದೆ?

    ಪ್ರತ್ಯುತ್ತರಅಳಿಸಿ
  2. ಸುನಾಥರೆ,
    ದೊರೆಯದೇ ಇದ್ದರೆ ಸಂಸತ್ತಿನಲ್ಲಿ ಬಾಯಿಗೆ, ಕಿವಿಗೆ ಮತ್ತು ಕಣ್ಣಿಗೆ ಕೈ ಅಡ್ಡ ಹಿಡಿದು ಕೂತಿರುವವರೆಲ್ಲರೂ ತೀವ್ರ ಪ್ರತಿಭಟನೆ ಮಾಡಲಿದ್ದಾರೆ ಎಂದು ಪತ್ತೆ ಹಚ್ಚಲಾಗಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D