ಬೊಗಳೆ ರಗಳೆ

header ads

ಬೊಗಳೂರು ರಾಷ್ಟ್ರಪತಿ ಒಸಾಮ ಪದ"ಗ್ರಹಣ"

(ಬೊಗಳೂರು ಜೀವಂತ (ಲೈವ್) ಕವರೇಜ್ ಬ್ಯುರೋದಿಂದ)
ಬೊಗಳೂರು, ಜ.22- ಬೊಗಳೂರಿನ ನೂರಾ ಎಂಟನೇ ಅಧ್ಯಕ್ಷರಾಗಿ ಪರಾಕ್ ಒಸಾಮ ಬಿನ್ ಅವರು ಅದ್ದೂರಿ ಸಮಾರಂಭದ ಮಧ್ಯೆ ಪದವಿಗೆ ಗ್ರಹಣ ಮಾಡಿಬಿಟ್ಟರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯು ದೇಶ-ವಿದೇಶದಲ್ಲಿ ತೀವ್ರ ನಿಂದನೆಗೀಡಾಗುತ್ತಿದೆ. ಇದನ್ನು ತಡೆಯಲು ಪಣ ತೊಡುವುದಾಗಿ ಸಾರಿದರು.

ಇತ್ತೀಚೆಗೆ 'ಧರ್ಮ ಎಂದರೆ ಭಯೋತ್ಪಾದನೆ ಅಲ್ಲ, ಧರ್ಮ ಎಂದಿಗೂ ಭಯೋತ್ಪಾದಕತೆಯನ್ನು ಬೋಧಿಸುವುದಿಲ್ಲ' ಎಂಬ ಕುರಿತಾಗಿ ಜನರು ಎಚ್ಚೆತ್ತುಕೊಳ್ಳತೊಡಗಿದ್ದಾರೆ. ಇದೇ ರೀತಿಯಾಗಿ ಜನರಲ್ಲೂ ತಪ್ಪು ಕಲ್ಪನೆ ಮೂಡಿಸುವ ಪ್ರಯತ್ನವನ್ನು ಭಾರತದಲ್ಲಿ ಕೆಲಸವಿಲ್ಲದವರು ಮಾಡತೊಡಗಿದ್ದಾರೆ. ಇದು ಹೀಗಾಗಬಾರದು, ಅವರೆಂದಿಗೂ ಎಚ್ಚೆತ್ತುಕೊಳ್ಳಬಾರದು, ಅವರನ್ನು ಮಲಗಿಸುತ್ತಲೇ ಇರಬೇಕು ಎಂದು ಅವರು ಬೊಗಳೂರಿಗೆ ನೀಡದ ನಿಷೇಧಾತ್ಮಕ ಇಂಟರ್ವ್ಯೂನಲ್ಲಿ ತಿಳಿಸಿದರು.

ಇಡೀ ಜಗತ್ತೇ ಆರ್ಥಿಕ ಕುಸಿತದಿಂದ ಕಂಗೆಟ್ಟಿದ್ದರೂ, ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿದರೆ ಭಾರತದ ಆರ್ಥಿಕತೆ ಗಟ್ಟಿಯಾಗಿ ನಿಂತಿದೆ. ಇದು ಕೂಡ ತಪ್ಪು. ಇಡೀ ಜಗತ್ತೇ ಕಂಗೆಟ್ಟಿರುವಾಗ ಅದಕ್ಕೇನೂ ಆಗಿಲ್ಲವೆಂದರೆ, ನಮ್ಮ ಭಯೋತ್ಪಾದನೆಯ ಉದ್ದೇಶಕ್ಕೇ ಕೊಡಲಿಯೇಟು ಬಿದ್ದ ಹಾಗೆ. ಹೀಗಾಗಿ ನಾವು ನವೆಂಬರ್ 26, ಡಿಸೆಂಬರ್ 26ರಂದು ದಾಳಿ ಆಯ್ತು. ಮುಂದೆ ಜನವರಿ 26ಕ್ಕೂ ಏನಾದ್ರೂ ಮಾಡಲಿದ್ದೇವೆ ಎಂಬುದನ್ನು ಜನ ಸಾಮಾನ್ಯ, ದಾರಿಹೋಕನೂ ಅರಿತುಕೊಂಡಿದ್ದಾನೆ. ಆದರೆ ಈ ಬಗ್ಗೆ ಭಾರತದ ಆಡಳಿತಾರೂಢರು ಅರಿತುಕೊಳ್ಳದಂತೆ ಮಾಡುವುದು ನಮ್ಮ ಪ್ರಧಾನ ಉದ್ದೇಶ, ನಾವದರಲ್ಲಿ ಖಂಡಿತ ಯಶಸ್ವಿಯಾಗುತ್ತೇವೆ ಎಂಬ ಆಣಿಮುತ್ತುಗಳು ಬೊಗಳೂರಿಗೆ ನೀಡದಿರುವ ಕೀರ್ತಿಶೇಷ Some ದರ್ಶನದಲ್ಲಿ ಒಸಾಮನ ಬಾಯಿಂದ ಉದುರಿದೆ.

ಈ ಪದಗ್ರಹಣ ಸಮಾರಂಭವು ಪೂರ್ಣ (ಖಗ್ರಾಸ) ಸೂರ್ಯ ಗ್ರಹಣಕ್ಕಿಂತಲೂ ಹೆಚ್ಚು ಅಪ್ರಕಾಶಮಾನವಾಗಿತ್ತು. ದೇಶ-ವಿದೇಶಗಳಿಂದ ಬಂದಿದ್ದ ಮಿಲಿಯಾಂತರ ಶವಪೆಟ್ಟಿಗೆಗಳ ಮಧ್ಯೆ ಒಸಾಮ ಕಂಗೊಳಿಸುತ್ತಿದ್ದು, "ಮಾಡಿದ್ದೇ ಧರ್ಮ, ಅದುವೇ ನಮ್ಮ ಕರ್ಮ" ಎಂಬ ಘೋಷಾವಾಕ್ಯವೂ ಮೊಳಗುತ್ತಿತ್ತು. ಲಕ್ಷಾಂತರ ದೇಶ-ವಿದೇಶದ ಉಗ್ರಗಾಮಿಗಳ ಮಾರ್ಗಗಳೆಲ್ಲವೂ ಬೊಗಳೂರಿಗೇ converge ಆಗಿದ್ದವು. All roads leading to Bogalooru! ಎಲ್ಲಿ ನೋಡಿದರಲ್ಲಿ ಜನರ ಕೈಯಲ್ಲಿ ಬಂದೂಕು, ತುಪಾಕಿ, ಬಾಂಬು, ಗ್ರೆನೇಡುಗಳೇ ವಿಜೃಂಭಿಸುತ್ತಿದ್ದವು. ಒಸಾಮ ಗ್ರಹಣದ ಸಂದರ್ಭದಲ್ಲಿ ನಡೆದ ಪೆರೇಡ್‌ಗೋಸ್ಕರ ವಿಶೇಷವಾಗಿ ರಚಿಸಲಾಗಿದ್ದ ಮಾರ್ಗವನ್ನು ಸಂಪೂರ್ಣವಾಗಿ ಉಂಡೆ ಬಾಂಬುಗಳಿಂದಲೇ ಅಲಂಕರಿಸಲಾಗಿತ್ತು.

ಆ ಬಳಿಕ, ಭಾರತದಲ್ಲಿ, ಅಮೆರಿಕದಲ್ಲಿ ಆಗುತ್ತಿರುವ ದಾಳಿಗಳಿಗೆ ಜಿಹಾದ್ ಅನ್ನು ದೂರಲಾಗುತ್ತಿದೆ. ಇವರಿಗೆ ಜಿಹಾದ್‌ನ ಅರ್ಥ ಕೂಡ ಅರಿವಿಗೆ ಬರುತ್ತಿದೆ. ಹಾಗಾಗದಂತೆ ತಡೆಯಬೇಕಾಗಿದೆ. ನಾವು ಮಾಡುತ್ತಿರುವುದೇ ಜಿಹಾದ್ ಎಂದು ಮನದಟ್ಟು ಮಾಡಿಸಬೇಕಾಗಿದೆ ಎಂದು ಒಸಾಮ ಎಲ್ಲರೆದುರು ಕಾಣಿಸಿಕೊಂಡು, ವಿಶೇಷ ಪತ್ರಿಕಾಗೋಷ್ಠಿ ಕರೆದು ಒದರಿದರು. ನಾವು ಭಯೋತ್ಪಾದನೆಯನ್ನು ಬಿಟ್ಟರೆ ದೇವರಿಗೆ ತೊಂದರೆ ಕೊಟ್ಟಂತೆ. ಯಾಕೆಂದರೆ ಭಯೋತ್ಪಾದನೆಯನ್ನು ನಾವು ಭೂಲೋಕದಿಂದ ಬಿಟ್ಟ ತಕ್ಷಣವೇ ಅದು ದೇವರ ಲೋಕವನ್ನು ಬಾಧಿಸತೊಡಗುತ್ತದೆ. ಹಾಗಾಗಲು ಬಿಡಬಾರದು ಎಂದವರು ಭೀಕರ ಪತ್ರಿಕಾಗೋಷ್ಠಿಯಲ್ಲಿ ಸಾರಿರುವುದಾಗಿ ನಮ್ಮ ವರದ್ದಿಗಾರರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. oho...namma suryana grahaNakkU osaamana padavi grahaNakku sikkaapaTTe sambamdha ide anta aaytu..

    ಪ್ರತ್ಯುತ್ತರಅಳಿಸಿ
  2. ಜೋಕುಮಾರ ಸ್ವಾಮಿ ಹಾಗೂ ರಾಡ್ಯೂರಪ್ಪ ಇವರ ಜಗಳದ ನಡುವೆ ಒಸಾಮಾನಿಗೆ ಲಾಭವಾಯಿತೆ?
    ಇದಕ್ಕೆ ಅನ್ನೊದು ಸ್ವಾಮಿ: "ಇಬ್ಬರ ದೋಸ್ತಿ, ಮೂರನೆಯವನಿಗೆ ಹಾನಿ" ಅಂತ

    ಪ್ರತ್ಯುತ್ತರಅಳಿಸಿ
  3. ಲಕ್ಷ್ಮೀಸ್ ಅವರೆ,
    ಹೌದು, ಸೂರ್ಯನ ಮತ್ತು ಚಂದ್ರ ಮತ್ತು ಭೂಮಿಯ ಮಧ್ಯೆ ಒಸಾಮ ಬಂದಾಗ ಜಗತ್ತಿನಲ್ಲಿ ಕತ್ತಲೆಯುಂಟಾಗುತ್ತದೆ ಅಂತ ನಿಮ್ಮ ಫಿಸಿಸಿಸ್ಟ್ ಬ್ಯುರೋದ ವರದಿಗಳು ಹೇಳಿವೆ.

    ಅದಿರ್ಲಿ, ಯಾವುದ್ರಲ್ಲೂ ಸಾಹಸ ಮಾಡೋ ನೀವು, ಜ.26ರಂದು ನಡೆಯೋ ಸೂರ್ಯಗ್ರಹಣವನ್ನು ನಿಮ್ಮ ಒಂದು ಕಣ್ಣಿನಿಂದ ನೋಡದಿರಲು ತಾಕೀತು ಮಾಡಲಾಗಿದೆ.

    ಪ್ರತ್ಯುತ್ತರಅಳಿಸಿ
  4. ಸುನಾಥರೆ,

    ಜೋಕುಮಾರ ಮತ್ತು ರಾಡ್ಯೂರಪ್ಪ ನಡುವೆ ಗಣಿ ಅಡ್ಡ ಬಂದಾಗಲೇ ಅಧಿಕಾರ-ಗ್ರಹಣ ಆಗಿದ್ದು!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D