ಬೊಗಳೆ ರಗಳೆ

header ads

ನೆಟ್ ಸಂಚಾರ ನಿಯಮ ಉಲ್ಲಂಘನೆಗೆ ದಂಡ

(ಬೊಗಳೂರು ಉಂಡಾಡಿ ಗುಂಡ ಬ್ಯುರೋದಿಂದ)
ಬೊಗಳೂರು, ಜ.20- ಇಂಟರ್ನೆಟ್‌ನಲ್ಲಿ ಉಂಡಾಡಿ ಗುಂಡರ ಹಾಗೆ ಸಂಚಾರ ಮಾಡುತ್ತಿರುವವರ ಮೇಲೆ ದಂಡ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ ಎಂದು ಇಲ್ಲಿ ವರದಿಯಾಗಿರುವುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ..

ಬೆಂಗಳೂರಿನ ಸಂಚಾರಿ ಪೊಲೀಸರನ್ನು ಇಂಟರ್ನೆಟ್‌ನಲ್ಲಿಯೂ ಸಂಚರಿಸುವಂತೆ ಹೆಚ್ಚುವರಿ ಕೆಲಸವನ್ನು ಒಪ್ಪಿಸಲಾಗಿದೆ. ಇದಕ್ಕೆ ಲೇ-ಆಫ್ ವ್ಯವಸ್ಥೆಗಳೇ ಕಾರಣ ಎಂದೂ ಪತ್ತೆ ಹಚ್ಚಲಾಗಿದೆ. ಸಂಚಾರಿ ಪೊಲೀಸರು ಹೇಗೂ ಚಾಲಕರಿಂದ ಹಣ ಪಡೆದು ರಶೀದಿ ಕೊಡದೆ ಗುಳುಂಕರಿಸುತ್ತಿರುವುದು ನಮ್ಮ ಡೀಫಾಲ್ಟ್ ವ್ಯವಸ್ಥೆಯಾಗಿಹೋಗಿದೆ. ಇಂಟರ್ನೆಟ್ಟಿನಲ್ಲಿ ಬರುವವರಿಗೇನೂ ರಶೀದಿ ಕೊಡುವ ಅಗತ್ಯವಿಲ್ಲ. ಇದರಿಂದ ಕಾಗದದ ಉಳಿತಾಯವಾಯಿತು, ಪರಿಸರವೂ ಉಳಿತಾಯವಾದಂತೆ ಎಂದು ಅ ವ್ಯವಸ್ಥೆಯನ್ನು ಉದ್ಘಾಟಿಸಿದ ಉದ್ಘಾಟಕರು ಬೊಗಳೂರು ಬ್ಯುರೋಗೆ ಬಂದು ತಾವಾಗಿಯೇ ಹೇಳಿಹೋಗಿದ್ದಾರೆ.

ಬೆಂಗಳೂರಿನ ಅಡ್ಡ ರಸ್ತೆಗಳಲ್ಲಿ ಕೈಚಾಚಿ, ಕೆಲವೆಡೆ ಕಾಲುಗಳನ್ನೂ ಚಾಚಿ ಉದ್ದಕ್ಕೆ ನಿಂತಿರುವ ಸಂಚಾರಿ ಪೊಲೀಸರು, "ಏಯ್ ಲೈಸೆನ್ಸ್ ತಗಿ" ಅಂತ ಕೂಗುವ ಬದಲು, "ಏಯ್, ಪರ್ಸ್ ತೆಗಿ" ಎಂದು ಕೂಗುವ ಅಭ್ಯಾಸ ಮಾಡಿಕೊಂಡಿರುವುದು ಯಾರಿಗೂ ತಿಳಿಯದ ವಿಷಯವೇನಲ್ಲ ಎಂಬುದನ್ನೂ ನಮ್ಮ ಬ್ರೋಕಿಂಗ್ ನ್ಯೂಸ್ ಬ್ಯುರೋದ ವರದ್ದಿಗಾರರು ಪತ್ತೆ ಹಚ್ಚಿದ್ದಾರೆ.

ಆದರೆ, ಇಂಟರ್ನೆಟ್ಟಿನಲ್ಲಿ ಸಂಚಾರ ಮಾಡುವವರಿಗೂ ದಂಡ ಶುಲ್ಕ ಪಾವತಿಸುವ ವ್ಯವಸ್ಥೆ ಮಾಡಿರುವುದೇಕೆ ಎಂದು ಕೇಳಿದಾಗ, ಏನಿಲ್ಲಪ್ಪ, ಇತ್ತೀಚೆಗೆ ಕನ್ನಡದಲ್ಲಿಯೂ ಬ್ಲಾಗ್ ಪ್ರಪಂಚ ಬೆಳಗ್ತಾ ಇದೆ. ಅಲ್ಲಿಯೂ ಸಂಚಾರ ದಟ್ಟಣೆ ಹೆಚ್ಚಾಗತೊಡಗಿದೆ. ಅವುಗಳನ್ನೆಲ್ಲಾ ನಿಭಾಯಿಸೋದು ಕಷ್ಟವೇ ಆದ್ರೂ, ಕೆಲವೊಮ್ಮೆ, ಬ್ಲಾಗಿಗರು ಅಪ್ಪಿ ತಪ್ಪಿ ಬೇರೊಬ್ಬ ಬ್ಲಾಗಿಗರ ತಾಣಕ್ಕೆ ಡಿಕ್ಕಿ ಹೊಡೆದು, ಅವರ ಕಾಲೆಳೆದು ಬೀಳಿಸೋ ಪ್ರಸಂಗಗಳು ಕೂಡ ನಿಧಾನವಾಗಿ ಹೆಚ್ಚಾಗುತ್ತಿವೆ ಎಂಬ ಕಾರಣ ನೀಡಿದರು.

ಇಂಥದ್ದನ್ನು ತಪ್ಪಿಸುವ ಸಲುವಾಗಿ, ಅನವಶ್ಯವಾಗಿ ಬ್ಲಾಗು ಲೋಕದಲ್ಲಿ ಅಡ್ಡಾಡುತ್ತಾ ಕಾಲಹರಣವನ್ನೂ, ಕಾಲು ಹರಣವನ್ನೂ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲು ಈ ಇಂಟರ್ನೆಟ್ ಸಂಚಾರ ದಂಡ ಶುಲ್ಕ ವ್ಯವಸ್ಥೆ ಎಂದು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. neevu hushaaraagirbeku first-u. hegoo naavu nimma "himbaalakaru" alva ? neev kaal haakid haage and kaal haakidd kade naavu haaktivi. neevu sarige lead maadidre aaga kaal harana aagalla...enantiraa ? ;-)

    ಪ್ರತ್ಯುತ್ತರಅಳಿಸಿ
  2. ಈ ರೂಲ್ಸ್‌ಗಳ ಹಿಂದೆ ಒಂದು ರಾಜಕೀಯ ಪಕ್ಷದ 'ಕೈ'ವಾಡ ಇದೆ ಅಂತ ಯಾಕೋ ಅನ್ನಿಸ್ತಾ ಇದೆ!

    ಪ್ರತ್ಯುತ್ತರಅಳಿಸಿ
  3. ಲಕ್ಷ್ಮಿ ಎಸ್ ಅವರೆ,
    ನಾವು ಗಾಳಿ ಬಾರದಿದ್ದಾಗ ತೂರಿಕೊಳ್ಳುವವರಾಗಿದ್ದರಿಂದ, ನಮ್ಮ ಕರುಗಳ ಹಿಂ-ಬಾಲ ಹಿಡಿಯುವವರು ಜತೆಗೇ ಬರಬಹುದು. ಆದರೊಂದು ಕಂಡಿಷನ್ನು. ನಾವು ಕಾಲು ಹಾಕಿದಕಡೆ, ನೀವೆಲ್ಲರೂ ಕಾಳು (ಅಕ್ಕಿ ಕಾಳಲ್ಲ, ಧನಕನಕಾದಿ ಕಾಳುಗಳು) ಹಾಕ್ಬೇಕು.

    ಅದ್ಸರಿ, ನಾವು ಸಾರಿಗೆ ಲೀಡ್ ಮಾಡ್ಬೇಕೂಂತ ಅಂದ್ರಲ್ಲ. ಸಾರಿ, ಯಾವ ಸಾರು, ಹೇಗೆ? ;)

    ಪ್ರತ್ಯುತ್ತರಅಳಿಸಿ
  4. ಸುನಾಥರೆ,

    ಯಾವ ರೂಲ್ಸು? ಎಂತ ರೂಲ್ಸು ಅಂತೆಲ್ಲಾ ನಾವು ಕೇಳೋದು ಎಲ್ಲಾ ರೂಲ್ಸು ಮುರಿದ ನಂತ್ರ. ಸೋ. ಖಂಡಿತವಾಗಿಯೂ ಈ ರೂಲ್ಸಿನಲ್ಲಿಯೂ ಎಲ್ಲರ ಕೈವಾಡವೇ ಇರೋದು. ಯಾಕಂದ್ರೆ ಪರ್ಸ್ ತಗಿ ಅಂತ ಹೇಳಿದ್ರೂ, ಅದರಿಂದ ಉದುರುವ ಗರಿ ಗರಿ ಹಾಳೆಗಳನ್ನು ತೆಗೆದುಕೊಳ್ಳೋದು 'ಕೈ'ಯಿಂದನೇ ಅಲ್ವಾ?

    ಪ್ರತ್ಯುತ್ತರಅಳಿಸಿ
  5. ಈ ಟ್ರಾಫಿಕ್ ಪೋಲಿಗಳು ಕೇವಲ ಗಂಡಸರಿಗೆ ಮಾತ್ರ ಯಾಕೆ ಕಾಟ ಕೊಡುತ್ತಾರೆ?. ಹೆಣ್ಮಕ್ಕಳು ಶಿರಸ್ತ್ರಾಣ ಹಾಕಿಕೊಳ್ಳದೆನೇ ಹೋದರೂ ಕಣ್ಣು ಮುಚ್ಚಿರುರುತ್ತಾರೆ. ಆದರೆ ಗಂಡಸರು ಸ್ವಲ್ಪ ಎಡವಿದರೂ ಕೈ ಬಿಸಿ ಮಾಡಿಕೊಳ್ಳುತ್ತಾರಲ್ಲ?.

    ಪ್ರತ್ಯುತ್ತರಅಳಿಸಿ
  6. ಗುರುಗಳೆ,
    ಈ ಕಿರಿಕ್ಕು ಪೊಲೀಸರು ಕೇವಲ ಗಂಡ ಸರಿಗೆ ಮಾತ್ರವೇ ಅಲ್ಲ, ಹೆಂಡ-ಸರಿಗೂ ಕಾಟ ಕೊಡುತ್ತಾರೇಂತ ನಮಗೆ ಗೊತ್ತಾಗಿದೆ.

    ಪ್ರತ್ಯುತ್ತರಅಳಿಸಿ
  7. ಅನ್ವೇಷಿಗಳೇ, ನಾನು ನಿಮ್ಮ ಬೊಗಳೆ ಸೈಟಿಗೆ ಮಾತ್ರ ಆಗಾಗ ಸಂಚಾರ ಬರುತ್ತಿರುತ್ತೇನೆ. ಟ್ರಾಫಿಕ್ ಪೋಲಿಸರಿಗೆ ಹೇಳಬೇಡಿ.

    ಪ್ರತ್ಯುತ್ತರಅಳಿಸಿ
  8. ಶ್ರೀತ್ರೀಗಳೆ,
    ನೀವು ನಮ್ಮೂರಿನ ಸೈಟನ್ನು ಖರೀದಿ ಮಾಡದಿದ್ದರೆ ಮಾತ್ರ ನಾವು ಸಂಚಾರಿ ಪಿಳ್ಳೆಗಳಿಗೆ ಹೇಳುವುದಿಲ್ಲ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D