(ಬೊಗಳೂರು ಅಸತ್ಯ ಬ್ಯುರೋದಿಂದ)
ಬೊಗಳೂರು, ಜ.14- ಸತ್ಯಂರಾಜು ಸತ್ಯ ಬಿಚ್ಚಿಟ್ಟು ಆರಾಮವಾಗಿರುವುದೇಕೆ ಎಂಬ ಅಂಶವನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ. ಅವರು ಬೊಗಳೂರಿನೆಲ್ಲೆಡೆ ತಮ್ಮ ಅಸಂಖ್ಯ ಉದ್ದಿಮೆಗಳ ಸಾಲಿಗೆ ಮತ್ತೊಂದು ಹೊಸ ಉದ್ದಿಮೆ ಸ್ಥಾಪಿಸಿದ್ದಾರೆ. ಇದಕ್ಕೆ ಭಾರೀ ಕೈವಾಡ ಕೋರರು, ಒಳಸಂಚುಕೋರರು ಬೆಂಬಲ ನೀಡಿದ್ದು, ಈಗಾಗಲೇ ಶೇರುದಾರರ ಹಣ ಗುಳುಂ ಮಾಡಿರುವ ಸತ್ಯಂರಾಜು ಅನುಭವಕ್ಕೆ ಪ್ರಾಶಸ್ತ್ಯ ನೀಡಿ, ಕಳ್ಳಸಾಗಣಿಕಾದಾರರು ಅವರನ್ನು ಉದ್ಯೋಗಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಐಟಿ ಬಿಟಿ ಎಂಬ ಸುಡುಗಾಡು, ಮಣ್ಣು-ಮಸಿ ಕೆಲಸಕ್ಕಿಂತ ಈ ದಂಧೆಯೇ ಭಾರೀ ವರಮಾನ ತರುತ್ತಿದೆ ಎಂಬ ನಿರ್ಧಾರಕ್ಕೆ ಅಸತ್ಯಲಿಂಗರಾಜು ಬಂದಿದ್ದೇ ಈ ಹೊಸ ಉದ್ಯೋಗದತ್ತ ಅವರು ಆಕರ್ಷಿತರಾಗಲು ಕಾರಣ.

ಐಟಿ-ಬಿಟಿಯಲ್ಲಿ ವಿದೇಶಗಳು ಬಿಸಾಕುವ ಔಟ್‌ಸೋರ್ಸಿಂಗ್ ಅನ್ನು ಇನ್‌ಸೋರ್ಸಿಂಗ್ ಮಾಡಿಕೊಳ್ಳುತ್ತಾ, ಅವುಗಳ ಕೆಲಸ ಮಾಡಿಸಿಕೊಡುತ್ತಾ, ನಮ್ಮದು ಬಲು ದೊಡ್ಡ ತಂತ್ರಜ್ಞಾನ ಕ್ರಾಂತಿಯ ಸಂಸ್ಥೆ ಎಂದು ಬೊಗಳೆ ಬಿಡುತ್ತಾ, ಶೇರು ಬೆಲೆ ಏರುವಂತೆ ನೋಡಿಕೊಳ್ಳುವುದು, ಈ ಜಾಗತಿಕ ಹಣಕಾಸು ಬಿಕ್ಕಟ್ಟಿನ ದಿನಗಳಲ್ಲೂ ಅದನ್ನೇ ಕಾಯ್ದುಕೊಳ್ಳುವುದು ತೀರಾ ಕಷ್ಟದ ಕೆಲಸ. ಐಟಿಯಲ್ಲಾದರೆ, ವಿದೇಶೀಯರು ಕೊಟ್ಟ ಕೆಲಸ ಮಾಡಿಕೊಡಬೇಕು, ಅದಕ್ಕಾಗಿ ತಂತ್ರಜ್ಞರಿಗೆ ಅಷ್ಟಿಷ್ಟು ಸುರಿಯಬೇಕು. ಇಲ್ಲಿ ಕೇವಲ ಹತ್ತಾರು ಗ್ರಾಂ ಮಾತ್ರೆ ನುಂಗಿದರಾಯಿತು. ಮತ್ತು ಈಗ ನುಂಗಿದಂತೆ ಸಾವಿರಾರು ಕೋಟಿ ರೂಪಾಯಿಗಳನ್ನೇನೂ ನುಂಗಬೇಕಿಲ್ಲ, ಒಂದೆರಡ್ಮೂರು ಮಾತ್ರೆಗಳನ್ನು ಮಾತ್ರ ನುಂಗಿಬಿಟ್ಟರಾಯಿತು ಎಂಬುದು ಅಸತ್ಯಂರಾಜು ಅವರು ಬೊಗಳೆ ರಗಳೆಗೆ ನೀಡಿರುವ ಸ್ಪಷ್ಟನೆ.

ಇದುವರೆಗೆ ತಿರುಪತಿ ನಾಮವನ್ನೇ ತಮ್ಮ ಲೋಗೋ ಆಗಿ ಮಾಡಿಕೊಂಡಿದ್ದ ಅಸತ್ಯಂ ರಾಜು ಈಗ ಮಾತ್ರೆಯ ರೂಪದಲ್ಲಿ ಲೋಗೋ ತಯಾರಿಸುತ್ತಿದ್ದಾರೆ. ಈಗಾಗಲೇ ಶೇರುದಾರರ ಹಣವನ್ನು ಮನಬಂದಂತೆ, ಯಾವಾಗ ಬೇಕಾದರಾವಾಗ, ಮತ್ತು ಚಿಟಿಕೆ ಹೊಡೆಯುವಷ್ಟರಲ್ಲಿ ನುಂಗಿ ಅನುಭವವಿರುವುದರಿಂದ, ಕಳ್ಳಸಾಗಾಟದಾರರು ಕೂಡ ಈ ಸತ್ಯಂರಾಜುವನ್ನೇ ತಮಗೆ ಸಮರ್ಥ ಎಂದು ಆರಿಸಿಕೊಂಡಿದ್ದಾರೆ. ಮಾತ್ರವಲ್ಲ, ಸತ್ಯಂರಾಜುವಿಗೆ "ಶ್ರೇಷ್ಠ ನುಂಗಣ್ಣ" ಪ್ರಶಸ್ತಿ ನೀಡಿ ತಿಲಾಂಜಲಿ ನೀಡಲಾಗುತ್ತದೆ ಎಂದೂ ತಿಳಿದುಬಂದಿದೆ. ಸತ್ಯಂನ ಸಿಇಒ ಆಗಿದ್ದ ಅವರನ್ನು ತಮ್ಮ ಕಂಪನಿಯ ಸಿಸಿಒ ಆಗಿ ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಳ್ಳಸಾಗಣಿಕಾ ಸಂಘದ ಉಪಾಧ್ಯಕ್ಷರು ತಿಳಿಸಿದ್ದಾರೆ.

ಸಿಸಿಒ ಎಂದರೇನು ಎಂದು ಕೇಳಿದಾಗ, ಅವರು ಆ ಮೂರಕ್ಷರವನ್ನು ವಿಸ್ತರಿಸಿದ್ದು ಹೀಗೆ: ಚೀಪ್ (cheap) ಚೀಟಿಂಗ್ ಆಫೀಸರ್.

6 Comments

ಏನಾದ್ರೂ ಹೇಳ್ರಪಾ :-D

 1. ಇಷ್ಟು ಒಳ್ಳೇ ಟೋಪಿ-ರಾಜನಿಗೆ ನಾವು ನಿಧಾನಮಂತ್ರಿ ಪದವಿ ಕೊಡೋದೇ ಒಳ್ಳೇದು.
  ಕಾಯ್ದು ನೋಡಿ, ಇವರಿಗೆ ಮೇಡಮ್ ಅವರಿಂದ ಕರೆ ಬಂದೀತು.

  ReplyDelete
 2. ಇಲ್ಲರೀ....ಅವ ನಾಲಾಯಕ್ ರಾಷ್ಟ್ರಪತಿ ಹುದ್ದೆಗೆ ಸೂಕ್ತ ವ್ಯಕ್ತಿ...ಏಕೆಂದರೆ ಈ ಭ್ರಷ್ಟಾಚಾರಿಣಿ ಮಹಿಳೆ ಪ್ರತಿಭಾ ಪಾಟಿಲ್ ಎಂಬ ಕುಳ ರಾಷ್ಟ್ರಪತಿಯಾಗಿ...ಆ ಹುದ್ದೆಗೆ ಒಂದು ಘನತೆ ತಂದುಕೊಟ್ಟಿದ್ದ ಕಲಾಂಗೆ ಅಪಖ್ಯಾತಿ ಬರುವ ಹಾಗಾಯಿತು. ಇನ್ನಂತೂ ಆ ಹುದ್ದೆ ಕೇವಲ ಭ್ರಷ್ಟಾಚಾರ ಪೋಷಣಾ ಹಾಗೂ ದೇಶದ್ರೋಹಿಗಳಿಗೆ ಸಹಾಯ ಮಾಡುವ ಸಂಘವಾಗಿದೆ.

  ReplyDelete
 3. ಸುನಾಥರೆ,
  ಪಕ್ಷದಲ್ಲಿ ಯಾರು ಕೂಡ ಸಮರ್ಥ, ತಲೆ ಇರುವ ನಾಯಕರಿಲ್ಲ. ತನಗೆ ಕೂಡ ನೇರವಾಗಿ ಧ್ವನಿಯೆತ್ತಲು ಬರುವುದಿಲ್ಲ, ಬೇರೆಯೋರು ಬರ್ದಿರೋದನ್ನು ಓದುವುದೊಂದೇ ಉಳಿದಿರುವುದು. ಸೋ...ಈ "ತಂತ್ರ"ಜ್ಞನನ್ನು ಸೇರಿಸಿಕೊಳ್ಳಲು ಮೇ-ಢಂ ಕಾಯ್ತಾ ಇದ್ದಾರೆ...

  ReplyDelete
 4. ಲಕ್ಷ್ಮಿ,
  ಜಿಲೇಬಿನಾಡಿನಲ್ಲಿ ಜಲ್ಲಿಕಟ್ಟು ಸಂಭ್ರಮ... ಆದ್ರೆ... ಗೂಳಿಗಳು ಈ ಥರಾನೂ ಗುಟುರು ಹಾಕುತ್ತವೆಯೇ? ನಮಗೆ ಗೊತ್ತೇ ಇರ್ಲಿಲ್ಲ!!! ;)

  ReplyDelete
 5. ಗುರುಗಳೇ,
  ನಾವು ಹುಟ್ಟಾ ಸತ್ಯ ವಿರೋಧಿಗಳು. ಈ ತಾಣದಲ್ಲಿ ಸತ್ಯ ನುಡಿಯುವುದು ನಿಷಿದ್ಧ. ಈಗ್ಲೇ ಆದೇಶ ಹೊರಡಿಸ್ತೀವಿ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post