(ಬೊಗಳೂರು ಪ್ರಾಣಿಗಳ ಬ್ಯುರೋದಿಂದ)
ಬೊಗಳೂರು, ಡಿ.18- ಶ್ವಾನ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ 11ರ ಹರೆಯದ ಲ್ಯಾಬ್ರಡಾರ್ ಜಾತಿಗೆ ಸೇರಿದ ಶಿಮು ಅವರನ್ನು ಸರ್ವಾಸಮ್ಮತಿಯ (ಸರ್ವ+ಅಸಮ್ಮತಿ) ಮೂಲಕ ಆಯ್ಕೆ ಮಾಡಲಾಗಿದೆ.

ಈಗಾಗಲೇ ಲೈಕಾ ಎಂಬ ನಾಯಿಯೊಂದು ಬಾಹ್ಯಾಕಾಶಕ್ಕೇ ಹೋಗಿ ಸಾಧನೆ ಮಾಡಿ ಬಂದಿದೆ. ಹೀಗಿರುವಾಗ ಕೇವಲ ಐದನೇ ಮಹಡಿಯನ್ನೇರಲು ನಮಗೆ ಅಂತರಿಕ್ಷಕ್ಕೇರುವ ವಾಹನ "ಲಿಫ್ಟ್" ಏರಲು ಕೂಡ ಅವಕಾಶ ಮಾಡಿಕೊಡದಿರುವುದು ಮಾನವ ಅಲ್ಲಲ್ಲ ಶ್ವಾನವ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ ಎಂದು ಶಿಮು ಅವರು ನ್ಯಾಯಾಲಯದಲ್ಲಿ ವಾದಿಸಿ ವಿಜಯ ಗಳಿಸಿರುವ ವರದಿಯೊಂದು ಇಲ್ಲಿ ಪ್ರಕಟವಾಗಿರುವುದೇ ಅವರು ಈ ಹುದ್ದೆಗೆ ಅಪ್‌ಲಿಫ್ಟ್ ಆಗಲು ಪ್ರಧಾನ ಕಾರಣ.

ಇನ್ನೊಂದೆಡೆ ಬೆಕ್ಕುಗಳು, ಬೆಕ್ಕಿನ ಮರಿಗಳು ಕೂಡ, ನಮಗೂ ಲಿಫ್ಟ್ ಸೌಲಭ್ಯ ಬೇಕು ಎಂದು ಹೋರಾಟ ಮಾಡಲು ಸಿದ್ಧತೆ ನಡೆಸುತ್ತಿರುವುದಾಗಿ ನಮ್ಮ ಪ್ರಾಣಿಗಳ ಬ್ಯುರೋದ ವರದ್ದಿಗಾರರು ಸುದ್ದಿ ಕದ್ದು ತಂದು ಸುರಿದಿದ್ದಾರೆ.

ಈ ಕಾರಣದಿಂದಾಗಿ, ಎಲ್ಲ ಪ್ರಾಣಿಗಳು ತಮ್ಮ ತಮ್ಮ ಜನಾಂಗದ ಒಕ್ಕೂಟಗಳನ್ನು ರಚಿಸಿಕೊಂಡಿರುವುದರಿಂದ, ಜಾರಕಾರಣಿಗಳು ತೀವ್ರ ಕನಿಕರದಿಂದ ಕರಗಿ ನೀರಾಗುತ್ತಾ, ಇವರ ಸಂಖ್ಯೆ ತೀರಾ ಕಡಿಮೆ ಇದೆ, ಅತ್ತಕಡೆ ಅವರ ಬಾಲಕ್ಕೆ ಎಲ್ಲರೂ ತುಳಿಯುತ್ತಲೇ ಇರುತ್ತಾರೆ, ಮತ್ತೊಂದೆಡೆ ಇವರು ಬೀದಿನಾಯಿಗಳನ್ನು ನಾಯಿಗೆ ಬಂದಂತೆ ಅಲ್ಲಲ್ಲ ಬಾಯಿಗೆ ಬಂದಂತೆ ದುಡಿಸಿಕೊಳ್ಳುತ್ತಾರೆ, ದೌರ್ಜನ್ಯ ಎಸಗುತ್ತಾರೆ ಎಂದೆಲ್ಲಾ ಕಾರಣಗಳನ್ನು ಮುಂದಿಡುತ್ತಾ, ಅವುಗಳಿಗೂ ಪ್ರತ್ಯೇಕ ಮೀಸಲಾತಿ ಸೌಲಭ್ಯ ದೊರಕಿಸಿಕೊಡಬೇಕೆಂದು ಆಗ್ರಹಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂದು ತಿಳಿದುಬಂದಿದೆ.

ನಾಯಿ-ಬೆಕ್ಕು-ಮಂಗ ಇತ್ಯಾದಿಗಳ ಪರವಾಗಿ ಈ ಹಿಂದೆಯೂ ಇಲ್ಲಿ , ಇಲ್ಲಿ ಮತ್ತು ಇಲ್ಲಿ ಮುಂತಾದೆಡೆ ಹೋರಾಡುತ್ತಲೇ ಬಂದಿರುವ ಬೊಗಳೆ ರಗಳೆ ಬ್ಯುರೋ, ಈ ಬಾರಿಯೂ ಹೋರಾಟಕ್ಕೆ ಹೊರಟಿರುವ ಹಿಂದೆ, ಮುಂದೆ ಚುನಾವಣೆಗೆ ನಿಲ್ಲುವ ಯೋಜನೆ ಇಲ್ಲ ಎಂಬುದನ್ನು ಬೊ.ರ. ಸಂತಾಪಕರು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ, ಲಿಫ್ಟ್‌ನೊಳಗೆ ತೂರಿಕೊಳ್ಳುವ ಪ್ರಾಣಿಗಳ ಮೈಯ ಪರಿಮಳವು ಉಳಿದ ಲಿಫ್ಟ್ ಪ್ರಯಾಣಿಕರ ಮೂಗಿಗೆ ಯಾವುದೇ ತೊಂದರೆಯುಂಟು ಮಾಡದಂತಿರಲು ಉಚಿತ ಪರ್ಫ್ಯೂಮ್ ಒದಗಿಸುವುದಾಗಿ ಅಮಾನವೀಯ ಹಕ್ಕುಗಳ ಓರಾಟಗಾರ ಸಂಸ್ಥೆಯೊಂದು ಘೋಷಣೆ ಮಾಡಿದೆ ಎಂದೂ ತಿಳಿದುಬಂದಿದೆ.

ಇವೆಲ್ಲದರ ನಡುವೆ, ಬೈಕಿನಲ್ಲಿ ಧಾವಿಸುವ ಕಾಲೇಜು ಯುವಕ-ಯುವತಿಯರಲ್ಲಿ ಲಿಫ್ಟ್ ಕೇಳುವುದಕ್ಕೆ ಕೂಡ ಶ್ವಾನ ಸಂಘದ ಪದಾಧಿಕಾರಿಗಳು ಗಂಭೀರವಾಗಿ ಯೋಚನೆ ಮಾಡಿದ್ದು, ಇನ್ನು ಮುಂದೆ ಶ್ವಾನಗಳು ಕೂರಲಿಕ್ಕಾಗಿಯೇ ವಿಶೇಷವಾದ ಸೀಟೊಂದನ್ನು ಪಿಲಿಯನ್ ಭಾಗದಲ್ಲಿ ಇರಿಸಿಕೊಳ್ಳಬೇಕು ಎಂಬ ಆಗ್ರಹವೂ ಕೇಳಿಬರತೊಡಗಿದೆ. ಜಾರಕಾರಣಿಗಳು ಇದರ ಹಿಂದೆಯೂ ಬಿದ್ದಿದ್ದು, ಬೈಕು-ಕಾರುಗಳಲ್ಲಿ ಶ್ವಾನ-ಮಾರ್ಜಾಲ ಜನಾಂಗೀಯರಿಗೆ ಲಿಫ್ಟ್ ನೀಡುವುದು ಕಡ್ಡಾಯ ಎಂಬೊಂದು ಶಾಸನ ಜಾರಿಗೆ ತರಲು ಒಕ್ಕೊರಲಿನಿಂದ ಸಜ್ಜಾಗುತ್ತಿದ್ದಾರೆ.

7 Comments

ಏನಾದ್ರೂ ಹೇಳ್ರಪಾ :-D

 1. bow bow :) bow ! mewow!!!!!!!!!!!!!!!!!!!!!!meeeeeeeeeeeeeeeeeeeeeeeeeeeeeeeeeeoooooooooooooooooooooooooooooowwwwwwwwwwwwwwwwwwwwwwwwwwwww!

  ReplyDelete
 2. ನಮ್ಮ ನಾಯಿಗೆ ಅರ್ಜೆ೦ಟ್ ಜಾತಿ ಸರ್ಟಿಫಿಕೇಟ್ ಮಾಡಿಸಬೇಕಾಗಿದೆ- ಎಲ್ಲಿ ಸಿಗತ್ತೆ ಸಾರ್?

  ReplyDelete
 3. ಉಗ್ರವಾದಿ ಶ್ವಾನಗಳಿಗೆ ಸ್ಪೆಶಲ್ ಸವಲತ್ತೆ ಕೊಡಬೇಕಲ್ಲ!

  ReplyDelete
 4. ಲಕ್ಷ್ಮೀ ಅವರೆ,
  ನೀವು ಮಿಯಾಂವ್ ಅಂದಿದ್ದಕ್ಕೆ ಬೊಗಳೂರಿನ cats and dogs ಎಲ್ಲಾ ಪಲಾಯನ ಮಾಡಿವೆ. ಆದುದರಿಂದ ನಿಮ್ಮ ವಿರುದ್ಧ ಪ್ರಾಣಿನಷ್ಟ ಮೊಕದ್ದಮೆ ಹೂಡಿ, ಕಳೆದು ಹೋದ ಪ್ರಾಣಿಗಳ ಹತ್ತು ಪಟ್ಟು ತರುವಂತೆ ಸೂಚಿಸಲಾಗುತ್ತದೆ.

  ReplyDelete
 5. ಶ್ರೀನಿಧಿ ಅವರೆ,
  ಜಾತಿ ಸರ್ಟಿಫಿಕೆಟ್ ಮಾಡಿಸಬೇಕಿದ್ದರೆ ಬೊಗಳೂರಿನಲ್ಲಿ ಉಚಿತವಾಗಿಯೇ ಸಿಗುತ್ತವೆ.ಆದರೆ ಅದಕ್ಕೆ ದಲ್ಲಾಳಿಗಳಿಗೆ ಒಂದಷ್ಟು ಸಾವಿರವೋ-ಲಕ್ಷವೋ ತಳ್ಳಬೇಕಾಗುತ್ತದೆ.

  ReplyDelete
 6. ಸುನಾಥರೆ,
  ನಿಮ್ಮ ಪ್ರಾಣಿಗಳ ಬಗೆಗಿನ ಕಾಳಜಿ ನೋಡಿ ಶ್ವಾನ ಸಂಘದ ಅಧ್ಯಕ್ಷರು ಹೆದರಿ ಹೋಗಿದ್ದಾರೆ. ನೀವು ಈ ರೀತಿ ಅವುಗಳ ಬಗ್ಗೆ ಕಾಳಜಿ ತೋರುತ್ತಿರುವುದು, ಚುನಾವಣೆಯೇನಾದರೂ ಸಮೀಪಿಸಿದೆಯೇ, ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ತೊಲಗಿಸಿ ಬದಲಾಯಿಸುವ ಇರಾದೆಯಿಂದಲೇ ಈ ಆಶ್ವಾ"ನ"ನೆ ನೀಡಲಾಯಿತೇ ಎಂದೆಲ್ಲಾ ಅವರು ಗುಣುಗುಣಿಸುತ್ತಿದ್ದಾರೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post