ಬೊಗಳೆ ರಗಳೆ

header ads

ಆಗುಂಬೆ ಘಾಟಿಯಲ್ಲಿ ನೇರ ರಸ್ತೆ: ಪಾಕ್ ಕೈವಾಡ!

(ಬೊಗಳೂರು ತಿರುವು-ಮುರುವು ಬ್ಯುರೋದಿಂದ)
ಬೊಗಳೂರು, ಡಿ.22- ಶಿರಾಡಿ ಘಾಟಿ, ಆಗುಂಬೆ ಘಾಟಿ, ಬಿಸಿಲೆ ಘಾಟಿ ಮುಂತಾದ U turn ಗಳು ಹೆಚ್ಚಾಗುತ್ತಿರುವ ರಸ್ತೆಗಳೆಲ್ಲೆಲ್ಲಾ ಇದೀಗ ವಾಹನಗಳು ನೇರವಾಗಿ ಧಾವಿಸಬಹುದು ಎಂಬುದನ್ನು ರದ್ದಿಮನೆಯೊಳಗೆ ಕುಳಿತ ನಮ್ಮ ವರದ್ದಿಗಾರರು ಘಂಟಾಘೋಷವಾಗಿ ಸಾರಿಬಿಟ್ಟಿದ್ದಾರೆ.

ಅವರು ಸುದ್ದಿ ತಿಳಿದ ತಕ್ಷಣವೇ ಬ್ಯುರೋದ ತನಿಖಾ ತಂಡವನ್ನು ಅತ್ತ ಕಡೆ ಅಟ್ಟಿದಾಗ ಸಾಕಷ್ಟು ಸಂಗತಿಗಳು ಹೊರಬಿದ್ದವು. ಇತ್ತೀಚೆಗೆ ಮುಂಬಯಿ ಮೇಲಿನ ದಾಳಿ ಹಿನ್ನೆಲೆಯಲ್ಲಿ ಮುಂಬಯಿಗಿಂತಲೂ ಹೆಚ್ಚಾಗಿ ಪಾಕಿಸ್ತಾನವು ವಿಶ್ವಪ್ರಸಿದ್ಧವಾಗುತ್ತಿದೆ. ಪಾಕಿಸ್ತಾನದಲ್ಲಿರುವ ಜೈಷೆ, ಲಷ್ಕರ್, ಜಮಾತ್, ಅಲ್ ಖೈದಾ ಇತ್ಯಾದಿತ್ಯಾದಿ ಅಲ್ಲಿನ ಜನಸಂಖ್ಯೆಗಿಂತಲೂ ಹೆಚ್ಚು ಇರುವ ಉಗ್ರಗಾಮಿ ಸಂಘಟನೆಗಳು ಕೂಡ ಮುಂಬಯಿಗಿಂತ ಹೆಚ್ಚಾಗಿ ಪ್ರಸಿದ್ಧಿ ಪಡೆಯುತ್ತಿವೆ. ಹೀಗಾಗಿ ನಮ್ಮೂರಿನ ಘಾಟ್ ರಸ್ತೆಗಳು ನೇರವಾಗುವುದಕ್ಕೂ ಪಾಕಿಸ್ತಾನಕ್ಕೂ ಯಾವುದಾದರೂ ನಂಟಿದೆಯೇ ಎಂಬುದು ನಮ್ಮ ಬ್ಯುರೋದವರ ಇಲ್ಲದ ತಲೆಗೆ ಠಣ್ಣಂತ ಹೊಳೆದದ್ದೇ ತಡ, ಮೂರು ಎಣಿಸುವಷ್ಟರಲ್ಲಿ ಅವರು ಪಾತಕಿಗಳ ನಾಡಿನಲ್ಲಿ ಬಿದ್ದಿದ್ದರು!

ಪಾತಕಿಸ್ತಾನಕ್ಕೆ ಹೊಕ್ಕಿದ್ದೇ ತಡ, ಅಲ್ಲಿ ಉಗ್ರರು ಯಾರು, ಮತ್ತು ಸರಕಾರ ನಡೆಸುತ್ತಿರುವ ಅಗ್ರರು ಯಾರು ಎಂಬುದೇ ತಿಳಿಯದೆ ಅತ್ತಿತ್ತ ಸುಳಿದಾಡುತ್ತಿದ್ದಾಗ, ಯು-ಟರ್ನ್‌ಗಳು ಹೆಚ್ಚಾಗಿರುವ ಸಂಗತಿ ದೃಢಪಟ್ಟಿತು. ಹಿಂದಿನ ದಿನ ಇದ್ದ ಬೋರ್ಡುಗಳು ಮರು ದಿನ ಬೇರೆಯೇ ರೀತಿಯಲ್ಲಿರುತ್ತಿದ್ದವು. ಹಿಂದಿನ ದಿನ ಜಮ್ಮುಕಾಶ್ಮೀರಕ್ಕೆ ರಸ್ತೆ ಮಾರ್ಗವನ್ನು ತೋರಿಸುವ ಬಾಣದ ಗುರುತು ಪೂರ್ವ ದಿಕ್ಕಿಗಿದ್ದರೆ, ಮರು ದಿನ ನೋಡಿದಾಗ ಅದು ಪಶ್ಚಿಮ ದಿಕ್ಕಿಗಿತ್ತು. ಎಲ್ಲಿ ಹೋದರಲ್ಲಿ ಯು-ಟರ್ನ್‌ಗಳೇ!

ಅಲ್ಲಿನ ಅಧ್ಯಕ್ಷ ಜಬರ್ದಾರಿಯೇ ಈ ಯು-ಟರ್ನ್‌ಗಳು, ತಿಪ್ಪರಲಾಗಗಳು, ಬಡಬಡಿಸುವಿಕೆಗಳ ರೂವಾರಿ ಎಂಬುದನ್ನು ಕಂಡುಕೊಳ್ಳಲಾಯಿತು. ಕ್ಷಣ ಕ್ಷಣಕ್ಕೂ ಅವರ ತಲೆ ಮತ್ತು ಕಾಲುಗಳು ಒಂದುಗೂಡುತ್ತಿದ್ದವು. ಇದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಂಡುಕೊಳ್ಳಲಾಯಿತು. ಅಕ್ಷರಶಃ Putting foot in his mouth!

ಈ ನಡುವೆ, "ಉಗ್ರರು ನಮ್ಮಲ್ಲಿಂದ ಭಾರತಕ್ಕೆ, ವಿಶೇಷವಾಗಿ ಮುಂಬಯಿಗೆ ಪ್ರವಾಸ ಹೋದವರಾಗಿದ್ದು, ಅವರ ಬಗ್ಗೆ ನಮ್ಮ ನೆಲದ ಕಾನೂನು ಪಾಲಿಸುತ್ತೇವೆ" ಎಂದು ಜಬರ್ದಾರಿ ಹೇಳಿಕೆ ನೀಡಿರುವುದು ಹಲವರ ಹುಬ್ಬನ್ನು ತಲೆಕೂದಲಿನೊಂದಿಗೆ ಬೆಸೆಯುವಷ್ಟರ ಮಟ್ಟಿಗೆ ಮೇಲೇರಿದೆ. ಪಾತಕಿಸ್ತಾನದಲ್ಲಿ ಕಾನೂನು ಎಂಬುದು ಇದೆಯೇ ಎಂಬ ಪ್ರಶ್ನೆಗೆ ಬೊಗಳೆ ರಗಳೆ ಬ್ಯುರೋದ ಅಸತ್ಯಾನ್ವೇಷಣೆ ಪ್ರವೀಣರಿಗೂ ಉತ್ತರ ಕಂಡುಕೊಳ್ಳಲಾಗಿಲ್ಲ. ಇದರ ತನಿಖೆಗೆ ಬಹುಶಃ ಇನ್ನೈದಾರುನೂರು ವರ್ಷಗಳು ತಗುಲಬಹುದು ಎಂದು ಒಂದು ಅಂದಾಜಿನ ಪ್ರಕಾರ ಹೇಳಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಪಾ(ತ)ಕಿಗಳಿಂದ ಆಗುಂಬೆ ರಸ್ತೆ ಸುಧಾರಣೆಯಾಗಿದ್ದನ್ನು
    ಬೊಗಳೂರು-ವರದ್ದಿಯಲ್ಲಿ ಓದಿ ರೋಮಾಂಚನವಾಯಿತು.

    ಅವರನ್ನ ಧಾರವಾಡಕ್ಕಷ್ಟು ಕಳಸ್ರೆಪಾ, ನಮ್ಮಲ್ಲೀ ರಸ್ತೆಗಳೂ ಸ್ವಲ್ಪ ಸುಧಾರಣಾ ಕಂಡಾವು!

    ಪ್ರತ್ಯುತ್ತರಅಳಿಸಿ
  2. ಅನ್ವೇಷಿಗಳೆ...ಆಗುಂಬೆ ಯಾಕೆ...ನಮ್ಮ ಬೆಂಗಳೂರಿಗೆ ಬಂದು ನೋಡಿ ..ಎಲ್ಲಿ ನೋಡಿದರೂ One Way....ತಪ್ಪಿ ಹೋದರೆ ಮತ್ತೆ U Turn ಮಾಡಿಕೊಂಡು ಒಂದು ಲೀಟರ್ ಪೆಟ್ರೋಲ್ ಹೆಚ್ಚೇ ಸುಡಬೇಕಾಗುತ್ತದೆ. ನಮ್ಮ ಬೆಂಗಳೂರು ರಸ್ತೆಗಿಂತ ಆಗುಂಬೆ ಘಾಟಿಯ ರಸ್ತೆ ಚೆನ್ನಾಗಿದೆ ಮಾರಾಯ್ರೆ...ಇಲ್ಲಿ ಗಾಡಿ ಓಡಿಸಿದರೆ ವರ್ಷಕ್ಕೊಂದು ಹೊಸ ಗಾಡಿ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಿನ ರಸ್ತೆಯ ಪೆಟ್ಟಿಗೆ...ಗುಜರಿಯವರೂ ಗಾಡಿ ಮುಟ್ಟಲು ಹಿಂಜರಿಯುತ್ತಾರೆ.
    http://kannadaputhra.blogspot.com

    ಪ್ರತ್ಯುತ್ತರಅಳಿಸಿ
  3. ಲಕ್ಷ್ಮಿ,
    ಹೌದು... ಯಾವಾಗ ಅಡ್ಡ ರಸ್ತೆಯಲ್ಲಿ ಹೋಗೋ ಅಲ್ಲಿನ ಯುವಜನಾಂಗಕ್ಕೆ ಅನುಕೂಲವಾಗಲಿ ಅಂತಾನೂ ಇರಬಹುದು.

    ಪ್ರತ್ಯುತ್ತರಅಳಿಸಿ
  4. ಸುನಾಥರೆ,
    ನಿಮಗೆ ಅಡ್ಡರಸ್ತೆ ಬೇಕಿದ್ರೆ ಮಾತ್ರವೇ ಧಾರವಾಡಕ್ಕೆ ಕಳಿಸ್ತೀವಿ... ಒಪ್ಗೆ ತಾನೇ?

    ಪ್ರತ್ಯುತ್ತರಅಳಿಸಿ
  5. ಗುರುಗಳೆ,
    ಬೆಂಗಳೂರಿನ ರಸ್ತೆಗಳನ್ನು ಹಾಗೆ ಮಾಡಿರೋ ರಾಜಕಾರಣಿಗಳಿಗೆ ದಿನಕ್ಕೊಂದು ಲೀಟರ್ ಪೆಟ್ರೋಲ್ ಕುಡಿಸಿ... ಸರಿಯಾಗುತ್ತೆ...

    ಪ್ರತ್ಯುತ್ತರಅಳಿಸಿ
  6. http://kannadaputhra.blogspot.com/2008/12/blog-post_20.html

    ಇಲ್ಲಿ ಬಹು ಬಿಸಿಬಿಸಿ ಚರ್ಚೆ ಶುರುವಾಗಿದೆ ಮಾರಾಯ್ರೆ....

    ಪ್ರತ್ಯುತ್ತರಅಳಿಸಿ
  7. ಹೌದು, ಅದ್ರ ಬಿಸಿ ನಿಜವಾದ ಕೋಮುಜಾರಕಾರಣಿಗಳನ್ನು ತಟ್ಟುತ್ತಾ ಇದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D