ಬೊಗಳೆ ರಗಳೆ

header ads

ಸಂಸದರ ಬೆಲೆ ಏರಿಕೆ: ಅಣುಮೋಹನ್ ಸಿಂಗ್ ಕಂಗಾಲು

(ಬೊಗಳೂರು ಸಂಸದರ ಬೆಲೆ ಏರಿಕೆ ಬ್ಯುರೋದಿಂದ)
ಬೊಗಳೂರು, ಜು.21- Nuclear ಒಪ್ಪಂದದ ಬಗ್ಗೆ ಸರಕಾರದ ಅಳಿವು-ಉಳಿವು ಇನ್ನೂ Unclear ಆಗಿರುವ ಗೊಂದಲದಲ್ಲಿ ಸಿಲುಕಿದ ನಿಧಾನಿ ಅಣುಮೋಹನ ಸಿಂಗ್ ಅವರು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದಾಗಿ 'ಆಮ್ ಆದ್ಮಿ'ಯ ಸ್ಥಾನದಲ್ಲಿದ್ದರೆ ಯಾವ ರೀತಿಯ ಮಜಾ ಅನುಭವಿಸಬಹುದು ಎಂಬುದನ್ನು ಅಣುಭವಿಸುತ್ತಿದ್ದಾರೆ.

Un Principled Agreement ನಡೆಯುತ್ತಿರುವ ಈ ರಾಜಕೀಯ ಯುಗದಲ್ಲಿ ಸರಕಾರದ ಜೀವನಾವಶ್ಯಕ ವಸ್ತುಗಳ ಬೆಲೆ ಕೈಗೆಟುಕದಷ್ಟು ಎತ್ತರಕ್ಕೇರಿವೆ. ಒಂದೊಂದು ಕಿಲೋ ತರಕಾರಿ ಸಿಗಬೇಕಿದ್ದರೂ, ಇಪ್ಪತ್ತೈದು ಕೋಟಿ ಇದ್ದದ್ದು ನೂರು ಕೋಟಿಗೂ ತಲುಪಿದೆ. ಹೀಗಾಗಿ ಈಗ ಆಮ್ ಆದ್ಮಿಯ ಸ್ಥಾನದಲ್ಲಿರುವ ನಾವು ಬದುಕುವುದಾದರೂ ಹೇಗೆ ಎಂದು ಅಣುಮೋಹಕ ಸಿಂಗ್ ಅವರು ಬೊ.ರ. ಬ್ಯುರೋದೆದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಇದಲ್ಲದೆ, ಒಂದು ಕಡೆಯಿಂದ Non Developmental Agreement ಮಾಡಿಕೊಂಡಿರುವವರು ಕೂಡ ಅಗತ್ಯವಸ್ತುಗಳಿಗೆ ಗಾಳ ಹಾಕುವ ನಿಟ್ಟಿನಲ್ಲಿ ಬಾಡೂಟ ಏರ್ಪಡಿಸುತ್ತಿದ್ದಾರೆ. ಅದಕ್ಕಿಂತ ಮಿಗಿಲಾದ ಡಿನ್ನರ್ ಪಾರ್ಟಿ ಏರ್ಪಡಿಸುವುದು ನಮ್ಮ ಧರ್ಮ. ಹೀಗಿರುವಾಗ ಈ ರೀತಿ ಬೆಲೆ ಏರಿಸಿದರೆ ನಮ್ಮ ಪರಿಸ್ಥಿತಿ ಏನಾಗಬೇಡ ಎಂದು ಪ್ರಶ್ನಿಸಿರುವ ಅವರು, ಈ ಹಣದುಬ್ಬರದ ಕಾಲದಲ್ಲಿ ಈ ದೇಶದ ಜನ ಅದ್ಹೇಗೆ ಬದುಕುತ್ತಾರೋ ಎಂದು ತಲೆ ಚಚ್ಚಿಕೊಂಡರಾದರೂ, ತಮ್ಮದೇ ಸರಕಾರದ ನೀತಿಗಳು ಇದಕ್ಕೆ ಕಾರಣ ಎಂದು ಹೊಳೆದ ತಕ್ಷಣ, ಆ ವಾಕ್ಯದ ಕೊನೆಯಲ್ಲಿ 'ನೋಡೇಬಿಡ್ತೀನಿ' ಅಂತಾನೂ ಸೇರಿಸಿಬಿಟ್ಟಿದ್ದಾರೆ.

ತಾವು ಕೋಲಾ(ಹಲ)ಸಭೆಯಲ್ಲಿ ವಿಶ್ವಾಸಮತ ನಿರ್ಣಯವನ್ನು ಮಂಡಿಸುವ ಬದಲು, ಅವಿಶ್ವಾಸ ನಿರ್ಣಯ ಮಂಡಿಸಿದಲ್ಲಿ, ಅದಕ್ಕೆ ಜಯ ದೊರೆಯುವುದು ಖಚಿತ ಎಂಬ ವಿಶ್ವಾಸದಲ್ಲಿರುವ ಅಣುಮೋಹಕ ಸಿಂಗ್, ಯಾವ ಗೊತ್ತುವಳಿ ಮಂಡಿಸುವುದು ಎಂದು ತಲೆ ತುರಿಸಿಕೊಳ್ಳಲು ಕೈ ಮೇಲೆತ್ತಿದಾಗ, ಪೇಟ ಅಡ್ಡ ಬಂದ ಕಾರಣ ಕೈಕೆಳಗಿಳಿಸಿದರು.

ದೇಶದ ಜನರೆಲ್ಲಾ ಬೆಲೆ ಏರಿಕೆಗಾಗಿ ಹಾಹಾಕಾರ ಮಾಡುತ್ತಿರುವಾಗ ಕೇವಲ ಅಣು ಒಪ್ಪಂದಕ್ಕೆ ಸರಕಾರವೇ ಉರುಳುವಂತಾಗುವುದು ಈ ದೇಶದ ಮಹಾನ್ ದುರಂತ. ಈಗಲೂ ಬೆಲೆ ಇಳಿಸುವ ಬಗ್ಗೆ ಯೋಚಿಸದಿರುವ ಸರಕಾರ ಅಣು ಒಪ್ಪಂದದ ಜಪವನ್ನೇ ಮಾಡುತ್ತಿದೆ. ಅಂತೆಯೇ, ಎಡಬಿಡಂಗಿ ಪಕ್ಷಗಳು ಕೂಡ, ಬೆಲೆ ಇಳಿಸುವಲ್ಲಿ ವಿಫಲವಾದ ಸರಕಾರವನ್ನು ಉರುಳಿಸುವ ಬದಲು, ಅಣು ಒಪ್ಪಂದಕ್ಕೆ ಮುಂದಾದ ಕಾರಣಕ್ಕೆ ಸರಕಾರ ಉರುಳಿಸಲು ಆದ್ಯತೆ ನೀಡಿರುವುದು ಬೊಗಳೂರು ಮಂದಿಗೆ ತಲೆಗೆ ಹೊಳೆಯದ ಸಂಗತಿ ಎಂದು ನಮ್ಮ ಬಾತ್ಮೀದಾರರು ವರದ್ದಿ ನೀಡಿದ್ದಾರೆ.

ಈ ನಡುವೆ, ಕೋಲಸಭೆಯೇ ದೊಡ್ಡ ವ್ಯಾಪಾರ ಮಂಡಿಯಾಗಿ ಪರಿವರ್ತಿತವಾಗಿದ್ದು, ಅಗತ್ಯ ವಸ್ತುಗಳೆಲ್ಲವೂ ಅತ್ತಿಂದಿತ್ತ ಓಲಾಡುತ್ತಿವೆ. ಈಗಾಗಲೇ ಕನಿಷ್ಠ ಬೆಂಬಲ ಬೆಲೆಯನ್ನು ಗರಿಷ್ಠಕ್ಕೇರಿಸಬೇಕೆಂದು ಆಗ್ರಹಿಸಿರುವ ಮತ್ತು ಒಮ್ಮೆ ಯುಪಿಎ ಬಣದಲ್ಲಿ ಕಾಣಿಸಿಕೊಳ್ಳುವ ಈ ಅಗತ್ಯ ವಸ್ತುಗಳು, ಮತ್ತೊಮ್ಮೆ ಎನ್‌ಡಿಎ ಬಣದಲ್ಲೂ, ಮಗದೊಮ್ಮೆ ಬಿಎಸ್ಪಿ ಹಣದಲ್ಲೂ.... ಅಲ್ಲಲ್ಲ... ಬಣದಲ್ಲೂ ಗೋಚರಿಸಿಕೊಳ್ಳುತ್ತಿದ್ದು, ಎಲ್ಲ ಕಡೆಯಿಂದ ಬಾಚಿ ಬಾಚಿಕೊಳ್ಳುತ್ತಿದ್ದಾರೆ ಎಂದು ಬೊ.ರ. ಪ್ರತಿನಿಧಿಗಳು ತನಿಖಾ ವರದ್ದಿ ಕಳುಹಿಸಿದ್ದಾರೆ.

ಈ ನಡುವೆ, ಪಕ್ಷಗಳೆಲ್ಲವೂ ಸಾಕಷ್ಟು ದೊಡ್ಡದಿದ್ದು, ಅವುಗಳನ್ನು ಸಾಕುವುದು ಕಷ್ಟ. ಈ ಕಾರಣಕ್ಕೆ, ಪರಸ್ಪರ ಎದುರು ಪಕ್ಷಗಳನ್ನು ಒಡೆಯುವ ಕಾರ್ಯ ನಡೆಯುತ್ತಿದೆ ಎಂದು ಎಲ್ಲಾ ಪಕ್ಷಗಳ ವಕ್ರತಾರರು ಬೊ.ರ. ಬ್ಯುರೋ ಎದುರು ಕೂಗಾಡಿದ್ದು, ಯಾರು ಕೂಡ ನೇರವಾಗಿ ಹಣದ ಆಮಿಷ ಒಡ್ಡುತ್ತಿಲ್ಲ, ಏನಿದ್ದರೂ ಗುಪ್ತವಾಗಿ ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಆಲೂಗಡ್ಡೆ ಯಾಕೆ ಗಡ್ಡಧಾರಿಯ ಪೇಟಾದಲ್ಲಿ ಭದ್ರವಾಗಿ ಕೂತಿದೆ?

    "ಜಬ್ ತಕ್ ಸಿಂಗಣ್ಣಾಕೆ ಪೇಟಮೆ ರಹೇಗಾ ಆಲೂ
    ತಬ್ ತಕ್ ಕೋಲಾ ಮೆ ಯುಪಿಏ ರಹೇಗಾ ಚಾಲೂ."

    ಪ್ರತ್ಯುತ್ತರಅಳಿಸಿ
  2. ಸುನಾಥರೆ,

    ಜಬ್ ತಕ್ ಸಿಂಗಣ್ಣಾ ಕೇ ಸಾಥ್ ರಹೇಗಾ ರುಪ್ಯಾ
    ತಬ್ ತಕ್ ಚಲ್ತಾ ರಹೇಗಾ ಡೆಮಾಕ್ರಸೀ ಕೀ ಹತ್ಯಾ

    ಪ್ರತ್ಯುತ್ತರಅಳಿಸಿ
  3. ಲೋಕೇಶರೇ,

    ಏನು? ನೀವೇನಾದರೂ ಎಂಪಿಯಾ? ಹಲೋ ಅಂತ ಬರೆಯೋಷ್ಟರಲ್ಲಿಯೇ ನಿಮ್ಮನ್ನು ಯಾರಾದ್ರೂ ಹೊತ್ತೊಯ್ದುಬಿಟ್ರೂಂತ ಕಾಣ್ಸುತ್ತೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D