(ಬೊಗಳೂರು ಬಾ-ಜೆಟ್ ಸಂಶ್ಲೇಷಣಾ ಬ್ಯುರೋದಿಂದ)
ಬೊಗಳೂರು, ಜು.8- ಮುಖ್ಯಮಂತ್ರಿ ಬಿ.ಎಸ್.ಒಡೆಯೋರಪ್ಪ ಮಂಡಿಸಿದ 2008-09ರ ನಾಲ್ಕುಕಾಸು ಸಾಲಿನ ಬಜೆಟ್ಟನ್ನು ಬೊಗಳೆ ರಗಳೆ ಬ್ಯುರೋದ ಸಮಸ್ತ ಮಂದಿ ಮಹೋದಯರು ಬಾಲವೆತ್ತಿ ಸ್ವಾ-ಗತಿಸಿದ್ದಾರೆ.

ಇದಕ್ಕೆ ಪ್ರಧಾನ ಕಾರಣಗಳಲ್ಲೊಂದು ಎಂದರೆ ಒಡೆಯೋರಪ್ಪ ಪ್ರಸ್ತಾಪಿಸಿದ ಬಾಲ ವಿಕಾಸ ಯೋಜನೆ. ಈಗಾಗಲೇ ಪರೀಕ್ಷಾ ಫಲಿತಾಂಶಗಳಲ್ಲಿ 'ಬಾಲ'ಕಿಯರ 'ಬಾಲ'ಕರು ಹಿಂದೆ ಬೀಳುತ್ತಿದ್ದಾರೆ. ಅಥವಾ ಬಾಲಕಿಯರೇ ಮುಂದೆ ಹೋಗುತ್ತಾರೆ. ಅವರನ್ನು ಸಮರ್ಥವಾಗಿ ಹಿಂಬಾಲಿಸಲು 'ಬಾಲ'ಕರಿಗೂ ಸೈಕಲ್ ನೀಡುವ ಯೋಜನೆ ಕೂಡ ವಿಫಲವಾದ ಹಿನ್ನೆಲೆಯಲ್ಲಿ, ಬಾಲವನ್ನೇ ವಿಕಾಸ ಮಾಡುವ ಯೋಜನೆಯನ್ನು ಜಾರಿಗೊಳಿಸಿರುವುದು ಬಾಲವಿರುವ ಬೊ.ರ. ಬ್ಯುರೋ ಸದಸ್ಯರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಇನ್ನೊಂದು ಕಾರಣವೆಂದರೆ, ಹಿರಿಯ ಪುತ್ರ ಕರ್ತರ ಕಲ್ಯಾಣ ನಿಧಿ ಸ್ಥಾಪಿಸಿರುವುದು. ಬೊಗಳೆ ರಗಳೆ ಬ್ಯುರೋ ಮಂದಿ ಕೂಡ ಆನ್‌ಲೈನ್ ಪುತ್ರಕರ್ತರ ಸಾಲಿಗೆ ಸೇರಿರುವುದರಿಂದಾಗಿ ಪುತ್ರಕರ್ತರಿಗೆಲ್ಲಾ ಕಲ್ಯಾಣ ಮಾಡಿಸಲು ನಿಧಿ ಮೀಸಲಿಟ್ಟಿರುವುದು ತುಂಬಾ ಸಂತಸದ ಸಂಗತಿ ಎಂದು ಅವರು ಅವಲತ್ತುಕೊಂಡಿದ್ದಾರೆ.

ಆದರೆ ಅವಶ್ಯಕತೆಯೇ ಇಲ್ಲದ ಒಂದು ಬಜ್ಜೆಟ್ಟು ಪ್ರಸ್ತಾಪದ ಬಗ್ಗೆ ಬೊಗಳೂರು ಮಂದಿ ಮತ್ತೇರಿಸಿದಷ್ಟರ ಎತ್ತರಕ್ಕೆ ಹುಬ್ಬೇರಿಸಿದ್ದಾರೆ. ಅದೆಂದರೆ ಮದ್ಯದಂಗಡಿಗಳ ಹೆಚ್ಚಳ. ಬೊಗಳೂರಿನಲ್ಲೆಲ್ಲಾ ಈಗಾಗಲೇ ಹೆಜ್ಜೆಗೊಂದರಂತೆ ಮದ್ಯದಂಗಡಿಗಳಿವೆ. ಅವುಗಳ ಮಧ್ಯ ಮತ್ತೆ ಹೇಗೆ ಅಂಗಡಿ ಸ್ಥಾಪಿಸುವುದು ಎಂಬುದು ತಿಳಿಯದೆ ಬೊಗಳೂರಿನ ಜನತೆ ಕಂಗಾಲಾಗಿ ಪಕ್ಕದ ಮದ್ಯದಂಗಡಿಗೆ ತೆರಳಿ ಸುಮ್ಮನಾಗತೊಡಗಿದ್ದಾರೆ.

ಇನ್ನೊಂದು ಅಸಮಾಧಾನವೆಂದರೆ, ಶಾಸಕರನ್ನು, ನಾಯಕರನ್ನು ಬೇರೆ ಪಕ್ಷಗಳಿಂದ ಗಣಿಗಾರಿಕೆ ನಡೆಸಿ ಎತ್ತಿಕೊಂಡು ಬಂದು ಲೋಡುಗಟ್ಟಲೆ ಬಿಜೆಪಿ ಮನೆಯೆದುರು ಸುರಿಯಲಾಗುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಇದೇ ಕಾರಣಕ್ಕೆ ಗಣಿಗಾರಿಕೆಗೆ ನೂರಲ್ಲ, ನೂರಾರು ಕೋಟಿ ರೂ. ಮೀಸಲಿಡಬೇಕು ಎಂಬುದು ಎಲ್ಲಾ ಪಕ್ಷಗಳ ನಾಯಿಕರುಗಳ, ಮುಖಂಡರುಗಳ ಒಕ್ಕೊರಳ ಆಗ್ರಹ.

6 Comments

ಏನಾದ್ರೂ ಹೇಳ್ರಪಾ :-D

 1. ಒಡೆಯೋರಪ್ನೋರ್ ಬಜಟ್ಟಿಂದ ನಮ್ಗೇನೂ ಆಮ್ದನಿ ಇಲ್ರೀ? ಹೆಂಡದಂಗಡಿ ಜಾಸ್ತಿ ಮಾಡ್ದ್ರೆ ನಮ್ಗೇನ್ ಸಿಗತ್ತಿ - ಜೇಬು ಖಾಲಿ ಆಗ್ತೈತಿ - ಕಳ್ತನ ದರೋಡಿ ಜಾಸ್ತಿ ಆಗ್ತೈತಿ - ಇದ್ರಿಂದ ರೌಡಿ, ಗೂಂಡಾ, ಪೊಲೀಸು, ಜಾರಕಾರ್ಣಿ, ಅನಿಷ್ಟ್ರು ಡುಮ್ಮ ಆಗ್ತಾರೀ ಹೊರ್ತೂ, ನಾವ್ಗಳು ನರ್ಪೇತ್ಲ ಆಗಿ ಗೋಡೆಗಂಟ್ಕೋಬೇಕಷ್ಟೆ. ಒಡೆಯೋರಪ್ನೋರ್ ಬಗ್ಗೆ ಸ್ವಲ್ಪ ಅನ್ವೇಷಿ ಮಾಡ್ರಲಾ ಮತ್ತಿ? ಎಲ್ಲೆಲ್ಲಿ ಎಷ್ಟೆಷ್ಟು ಇಟ್ಟವ್ರೆ, ಅದೆಲ್ಲೋ ಯಶ್ವಂತಪೋರ್ದಲ್ಲಿ ಅದ್ಯಾರ ಮನೇಲೋ ಅದೇನನ್ನೋ ಇಟ್ಟಿದ್ದಾರಂತಲ್ಲ - ಅದ್ನೂ ಇಚಾರ್ಸಿ ಸೋಮಿ (ನೀವು ಸೋಮಿನೋ ಅತ್ವಾ ಸೋಮಕ್ನೋ!) :D

  ReplyDelete
 2. ಮದ್ಯದಂಗಡಿ ಜಾಸ್ತ ಆದರ ಉಪಯೋಗ ಇಲ್ಲ. ಮದ್ಯದ ಮ್ಯಾಲ ಸಬ್ಸಿಡಿ ಕೊಟ್ಟರ ಛಲೊ ಆಗ್ತಿತ್ತು. ಅಥವಾ ಹೊಡತನದ ರೇಖೆಯ ಮ್ಯಾಲ ಇರೋರಿಗೆಲ್ಲಾ ವಾರಕ್ಕೊಂದು ಬಾಟಲಿ ಮದ್ಯವನ್ನ ಉಚಿತವಾಗಿ ಕೊಟ್ಟರ ಬೆಸ್ಟ್ ಆಗತಿತ್ತು.
  ಬೊ.ರ.ದವರು ಇದಕ್ಕಾಗಿ ಬಡದಾಡಲಿ ಅಂತ ವಿನಂತಿ ಮಾಡ್ಕೋತೇನಿ. ಅವರಿಗೂ ಇದರಿಂದ ಲಾಭ ಆಗ್ತದ.

  ReplyDelete
 3. ಏನ್ರೀಯಪ್ಪಾ...ಈ ಮುದಿ ಸರಕಾರಿ ನೌಕರರ ನಿವೃತ್ತಿ ವಯಸ್ಸು ಏರಿಸಿ , ಈಗಾಗಲೇ ವೇಸ್ಟ್‌ಬಾಡಿಗಳಾಗಿರುವವರನ್ನು ಮತ್ತೆ "ಅದೇ" ತರ ಆಗಲು ಬಿಟ್ಟು...ನಿರುದ್ಯೋಗ ಹೆಚ್ಚುವಂತೆ ಮಾಡಿ ಈ ಎಡ್ಯೂರಪ್ಪ ತಾನೊಬ್ಬ "ಅದೇ" ಅಂತ ಪ್ರೂವ್ ಮಾಡ್ಯಾನಲ್ಲೋ...ಸಿವನೇ..ಈ ಮಲ್ಲಿಕಾರ್ಜುನ ಕೊರ್ಗೆ, ಧ-ರಂ ಸಿಂಗ್‌ರಂಥ ಖದೀಮರು ಕೂಡ ಇದನ್ನು ಸ್ವಾಗತಿಸಿ ತಾವೂ "ಅದೇ" ಅಂತ ಪ್ರೂವ್ ಮಾಡ್ತಾರಲ್ಲಪ್ಪೋ....

  ReplyDelete
 4. ತಿರುಕಪ್ನೋರೆ,
  ಯಶ್ವಂತಪುರ್ದ ಬಂಡ್ವಾಳಾನ ಈಗ ಹೊರ ಹಾಕಬ್ಯಾಡ್ರೀ... ಅದಂತೂ ಸಾಕಷ್ಟು ದೊಡ್ಡದಿರೋದ್ರಿಂದ ಅದನ್ನು ಇಡಲು ಜಾಗ ಸಾಲಲೊಲ್ದು...

  ReplyDelete
 5. ಸುನಾಥರೆ,
  ಒಡೆಯೋರಪ್ನೋರು ಮದ್ಯದಂಗಡಿಗಳ್ನ ಯಾವ ಹೆಂಡದಂಗಡಿಗಳ ಮಧ್ಯೆ ಇಡೋದು ಅಂತ ತೊಂದ್ರೇಲಿ ಸಿಲುಕ್ಯಾರೆ. ಸೋ... ರೇಷನ್ ಅಂಗಡಿಗಳಲ್ಲೇ ಮದ್ಯ ಪೂರೈಕೆ ವ್ಯವಸ್ಥೆ ಮಾಡೋ ಯೋಚ್ನೆ ಮಾಡ್ತಿದ್ದಾರೇಂತ ಕೇಳಿಬಲ್ಲೆವು.

  ReplyDelete
 6. ಗುರುಗಳೇ,

  ಏನ್ ಜನಾನಪ್ಪ ನೀವ್... ಮುದಿ ಅಂದ್ರೆ ಸಾಕಷ್ಟು ಅನುಭವ ಇರೋರು... ಅವ್ರಿಗೆ ಎಲ್ಲಿ ಯಾವಾಗ ಹೇಗೆ ಒಳಗೆ ಹಾಕ್ಬೇಕು ಅಂತ ಒಳ್ಳೇ ತರಬೇತಿ ಆಗಿರ್ತದೆ. ಹೊಸಬ್ರು ಬಂದ್ರೆ ಈ ದಂಧೆ ಕೈಕೊಡೋ ಸಾಧ್ಯತೆಗಳೂ ಇವೆ. ಸೋ... ಅವರ 58 ಇದ್ದ ವಯಸ್ಸನ್ನು 90 ಮಾಡೋಕೂ ಶಿಫಾರಸು ಮಾಡಲಾಗಿದೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post