(ಬೊಗಳೂರು ಅವಿಶ್ವಾಸ ಬ್ಯುರೋದಿಂದ)
ಬೊಗಳೂರು, ಜು.22- ಸಂಸತ್ತಿನಲ್ಲಿ ವಿಶ್ವಾಸ ಮತ ಕೋರಿ ನಿಧಾನಿ ಅಣುಮೋಹನ್ ಸಿಂಗ್ ಅವರು ಗೊತ್ತುವಳಿ ಮಂಡಿಸಿರುವಂತೆಯೇ, ಪ್ರತಿಪಕ್ಷಗಳ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸಿ, ಪ್ರತಿಪಕ್ಷವನ್ನು ಉರುಳಿಸುವ ಪ್ರಯತ್ನವೊಂದು ಸದ್ದಿಲ್ಲದೆ ನಡೆಯುತ್ತಿರುವುದನ್ನು ಬೊಗಳೂರು ಸಂಚೋದನಾ ಬ್ಯುರೋದ ಮಂದಿ ಪತ್ತೆ ಹಚ್ಚಿದ್ದಾರೆ. ಹೀಗಾಗಿ ನ್ಯೂಕ್ಲಿಯರ್ ಡೀಲ್‌ಗಿಂತಲೂ ಇನ್ನೂ ಕ್ಲಿಯರ್ ಆಗಿರುವ ಓಲ್ಡ್ ಕ್ಲಿಯರ್ ಡೀಲೇ ಇಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ ಎಂದು ಶಂಕಿಸಲಾಗಿದೆ.

ಇದಕ್ಕೆ ಕಾರಣವೆಂದರೆ, ತಕ್ಕಡಿಯಲ್ಲಿಟ್ಟ ಕಪ್ಪೆಗಳಂತೆ ಜಿಗಿಯುತ್ತಿರುವ ಸಂಸದರು. ಎಲ್ಲಿ ಎಷ್ಟು ಗಿಟ್ಟುತ್ತದೋ ಅಲ್ಲಿಗೆ ಹಾರುವ ಈ ತಳಿಗಳನ್ನು ಒಂದೆಡೆ ಕೂಡಿ ಹಾಕುವುದೇ ಭಾರೀ ತ್ರಾಸದ ಕಾರ್ಯ. ಆಡಳಿತ ಪಕ್ಷದವರು ಕೋಟಿ ಕೋಟಿ ಕೊಟ್ಟು ಪ್ರತಿಪಕ್ಷಗಳಿಂದಲೂ, ಪ್ರತಿಪಕ್ಷೀಯರು ದೇಶದ ಖಜಾನೆಯನ್ನು ಮುಟ್ಟುವಂತಿಲ್ಲವಾದ ಕಾರಣ, ಕೋಟಿ ಕೋಟಿ ಕೊಡಲಾರದೆ ಆಡಳಿತ ಬಣದಿಂದಲೂ, ಕಪ್ಪೆಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಆದರೆ ಹೆಣಗಳಿಗೂ ಹಣವೇ ಪ್ರಧಾನವಾಗಿರುವುದರಿಂದ, ಪ್ರತಿಪಕ್ಷದ ಮಂದಿ ಕೈಕೈ ಹಿಸುಕಿಕೊಳ್ಳುವಷ್ಟರಲ್ಲಿ, ಅವರ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಜಾರಿಯಾಗಿದ್ದು, ಬಲಾಬಲ ಪರೀಕ್ಷೆಯಲ್ಲಿ ಪ್ರತಿಪಕ್ಷದ ಬಲ ಕುಂದುವ ನಿರೀಕ್ಷೆಗಳು ಹೆಚ್ಚುತ್ತಿರುವುದರಿಂದಾಗಿ, ಅವುಗಳು ಪ್ರತಿಪಕ್ಷ ಸ್ಥಾನದಲ್ಲಿರಲು ಅನರ್ಹ ಎಂದು ಅವಿಶ್ವಾಸ ಗೊತ್ತುವಳಿ ಮಂಡಿಸಲಾಗುತ್ತಿದೆ.

ಇದರಲ್ಲಿ ಹಣ ಪಡೆದ ಕೆಲವು ಕಪ್ಪೆಗಳಂತೂ ಅಷ್ಟು ದೊಡ್ಡ ಮೊತ್ತವನ್ನು ಜೀವನದಲ್ಲೇ ಮೊದಲ ಬಾರಿಗೆ ನೋಡಿದ ಕಾರಣದಿಂದಾಗಿ, ಮತ್ತು ಇದನ್ನು ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ವಿನಿಯೋಗಿಸಲೇಬೇಕು ಎಂಬುದೇನೂ ಕಡ್ಡಾಯವಲ್ಲ ಎಂಬುದೆಲ್ಲಾ ನೆನಪಿಗೆ ಬಂದ ಕಾರಣ, ದಿಢೀರ್ ಹೃದಯಾಘಾತವೋ, ಸಂದು ನೋವೋ, ತಲೆ ಸುತ್ತು ಬಂದೋ... ಆಸ್ಪತ್ರೆಗಳನ್ನು ಸೇರಿಕೊಂಡಿದ್ದಾರೆ. ಸಂಸತ್ತಿನಲ್ಲಿ ಓಟು ಹಾಕಲು ಅಸಾಧ್ಯವಾಗುವಂತೆ (Absention) ಇವರು ವರ್ತಿಸುವುದರಿಂದ Un Principled Agreement ಸರಕಾರವು ಪಾರಾಗುವ ಎಲ್ಲ ಸಾಧ್ಯತೆಗಳೂ ಖಚಿತ ಎಂದು ಸಂಚೋದನಾ ಬ್ಯುರೋ ಸದಸ್ಯರು ವರದ್ದಿರದ್ದಿ ಮಾಡಿದ್ದಾರೆ.

ಸರಕಾರದ ವಿಶ್ವಾಸ ಮತ ನಿರ್ಧರಿಸುವ ಚರ್ಚೆ ನಡೆಯುತ್ತಿರುವಂತೆಯೇ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಉಚ್ಛ್ವಾಸ, ನಿಶ್ವಾಸ ಎಲ್ಲವೂ ಏರುಪೇರಾಗಿರುವ ಕಾರಣ ಅವರು ಆಸ್ಪತ್ರೆಗೆ ಸೇರಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

2 Comments

ಏನಾದ್ರೂ ಹೇಳ್ರಪಾ :-D

  1. ಕೋಲಾ(ಹಲ)ಸಭೆಯಲ್ಲಿ ಸಿಂಗಣ್ಣನಿಂದ ಅಣು ಬಾಂಬ್ ಸ್ಫೋಟ. ಪ್ರತಿಪಕ್ಷ ಭಸ್ಮ. ಬುಶ್‌ರಿಂದ ಪ್ರಶಂಸೆ.
    ಜುಲೈ ೨೨ನ್ನು ಪೋಖ್ರಾನ್-III ಎಂದು ಆಚರಿಸಲಾಗುವದು.

    ReplyDelete
  2. ಸುನಾಥರೆ,
    ಈಗಾಗ್ಲೇ ಪೋಖ್ರನ್ ಸ್ಫೋಟ ಬೆಂಗಳೂರು, ಗುಜರಾತುಗಳಲ್ಲಿ ಆಗಿಯೇ ಹೋಯ್ತಲ್ಲ...

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post