ಬೊಗಳೆ ರಗಳೆ

header ads

ಬೊಗಳೆ: ಕನಿಷ್ಠ 'ಬೆಂಬಲ' ಬೆಲೆ ನಿಗದಿಗೆ ಆಗ್ರಹ!

(ಬೊಗಳೂರು ಬೆಂಬಲದ 'ಬೆಲೆ' ಬ್ಯುರೋದಿಂದ)
ಬೊಗಳೂರು, ಜು.16- ಉರುಳುವ ಸ್ಥಿತಿಯಲ್ಲಿರುವ ಉಪ (UPA) ಸರಕಾರಕ್ಕೆ ಊರುಗೋಲಾಗಿ ನಿಂತು ಅದನ್ನು ರಕ್ಷಿಸುವ ಹವಣಿಕೆಯಲ್ಲಿರುವ ಏಕಸದಸ್ಯ, ಅರ್ಧ ಸದಸ್ಯ, ಕಾಲುಸದಸ್ಯ ಪಕ್ಷಗಳೆಲ್ಲ ಇದೀಗ ಒಂದೇ ಒಂದು ಬೇಡಿಕೆ ಈಡೇರಿಸುವಂತೆ ತೀವ್ರವಾಗಿ ಒತ್ತಾಯಿಸತೊಡಗಿವೆ.

ದೇಶಾದ್ಯಂತ ಬೆಳೆಗಾರರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಕೈಗೆ ಬಂದ ಫಸಲು ಬಾಯಿಗೆ ಬಾರದೆ ರಸ್ತೆಗೆ ಸುರಿದು ಪ್ರತಿಭಟನೆ ಮಾಡುತ್ತಿದ್ದಾರೆ. ಕಬ್ಬಿನ ಬೆಳೆಗಾರರ ಕೈಗೆ ಸಿಪ್ಪೆ ಮತ್ತು ಜಲ್ಲೆ ಮಾತ್ರ ಸಿಕ್ಕುತ್ತಿದೆ. ತೊಗರಿ ಬೆಳೆಗಾರರು, ಟೊಮೆಟೋ, ಮೆಣಸು ಇತ್ಯಾದಿ ರೈತರೆಲ್ಲರೂ ಅದನ್ನು ರಸ್ತೆಗೆ ಸುರಿದು ರಸ್ತೆಯಲ್ಲೇ ಸಾಂಬಾರು ಮಾಡುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಅವರಿಗೆಲ್ಲರಿಗೂ ಬೆಳೆಗೆ ಬೆಂಬಲ ಬೆಲೆ ಒದಗಿಸುವ ಪ್ರಯತ್ನದಂತೆಯೇ ನಮಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಈ ಸಂಸತ್ ರೈತರು ಆಗ್ರಹಿಸಿದ್ದಾರೆ.

ವಿಶ್ವಾಸ ಮತ ಕೋರುವ ಸರಕಾರಕ್ಕೆ ಬೆಂಬಲ ನೀಡಬೇಕಿದ್ದರೆ ಕೇವಲ 25 ಕೋಟಿ ರೂ. 'ಬೆಂಬಲ' ಬೆಲೆ ನಿಗದಿಪಡಿಸಿದ್ದು ಸಾಕಾಗುವುದಿಲ್ಲ. ಇದನ್ನು ಒಂದು ರೂಪಾಯಿಯಾದರೂ ಹೆಚ್ಚಿಸಬೇಕು ಎಂಬುದು ಈ ಮಿನಿ-ಮಿಡಿ ಪಕ್ಷಗಳ ಒಕ್ಕೊರಳ ಒತ್ತಾಯ.

ಒಂದಿಡೀ ಸರಕಾರದ ಜುಟ್ಟನ್ನು ನಾವು ಹಿಡಿದುಕೊಳ್ಳಲು ನಮಗೆ ಈ ನಿಕೃಷ್ಟ ಬೆಂಬಲ ಬೆಲೆಗಿಂತ ಕನಿಷ್ಠ ಬೆಂಬಲ ಬೆಲೆಯಾಗಿ 25 ಕೋಟಿ, ಒಂದು ರೂಪಾಯಿ ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸುತ್ತಿದ್ದು, ಈ ಬಗ್ಗೆ ಪ್ರತಿಭಟನೆಗಳನ್ನು ನಡೆಸಲು ಯಾವುದನ್ನು ರಸ್ತೆಗೆ ಸುರಿಯಲಿದ್ದಾರೆ ಎಂದು ಬೊ.ರ. ಬ್ಯುರೋ ತೀವ್ರ ಸಂಶೋಧನೆ ನಡೆಸಿತು.

ಈ ತನಿಖೆಯ ಪ್ರಕಾರ ತಿಳಿದುಬಂದಿದ್ದೇನೆಂದರೆ, ಅವರೆಲ್ಲರೂ ಅವಕಾಶವಾದಿತನವನ್ನೆಲ್ಲವನ್ನೂ ಬಯಲಿಗೆ ತಂದಿರಿಸಿ, ತಮ್ಮ ಇಲ್ಲದ ಮಾನವನ್ನೆಲ್ಲ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಲಿದ್ದಾರೆ!

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

 1. ಜಾರಕಾರಣದಲ್ಲಿ ಮೌಲ್ಯಾಧಾರಿತ ಬೆಲೆಯನ್ನು ನಿಗದಿಪಡಿಸುವದು
  ಹೀಗೆ:
  ನಿಷ್ಠರಿಗೆ ಕನಿಷ್ಠ ಬೆಲೆ;ಅನಿಷ್ಟರಿಗೆ ವರಿಷ್ಠ ಬೆಲೆ;ಬೆನ್ನು ತಿರುಗಿಸಿದವರಿಗೆ ಬೆಂಬಲ ಬೆಲೆ.
  ಆಸಕ್ತರು ಕರ್-ನಾಡಿನಲ್ಲಿ ಇದರ guidelineಗಳನ್ನು ಒಡೆಯೂರಪ್ಪನವರಿಂದಲೂ ಸಹ ಪಡೆಯಬಹುದು.

  ಪ್ರತ್ಯುತ್ತರಅಳಿಸಿ
 2. ಸುನಾಥರೆ,
  ಪಕ್ಷದೊಳಗೆ ಸಾಕಷ್ಟು ಮಂದಿ ಬೇರೆ ಪಕ್ಷ ಒಡೆಯೋರಪ್ಪನವರಿರುವಾಗ ಗೈಡುಗಳಿಗೆ ಲೈನ್ ಹಾಕೋದು ಯಾಕೆ ಅಂತ ನಮ್ಮ ಬ್ಯುರೋದ ಗುಪ್ತ ವರದ್ದಿಗಾರರು ಪ್ರಶ್ನಿಸುತ್ತಿದ್ದಾರೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D