(ಬೊಗಳೂರು ಬೆಲೆ ಏರಿಕೆ ಬ್ಯುರೋದಿಂದ)
ಬೊಗಳೂರು, ಜು.14- ಮಿತ್ರರೊಂದಿಗೆ ಆಗಸದಲ್ಲಿ ಹಾರಾಡುತ್ತಿದ್ದವರಲ್ಲಿ ಒಬ್ಬ ವ್ಯಕ್ತಿ ದಿಢೀರನೇ ಸಂಸಾರ ಸಾಗರಕ್ಕೆ ಧುಮುಕಿದ ಆತಂಕಕಾರಿ ಘಟನೆಯೊಂದು ಇಲ್ಲಿ ವರದಿಯಾಗಿದೆ. ಈ ಬಗ್ಗೆ ಬೊಗಳೆ ರಗಳೆ ಬ್ಯುರೋ ತೀವ್ರ ಸಂಶೋಧನೆ ನಡೆಸಿದ್ದು, ಕೆಲವು ಆಘಾತಕಾರಿ ವಿಷಯಗಳು ಸಂಸಾರ ಸಾಗರದಿಂದ ಬಯಲಿನ ಮೇಲೆ ಬಿದ್ದಿವೆ.ಈ ಮಿತ್ರರು ಆಕಾಶದಲ್ಲಿ ಹಾರಾಡುವುದಕ್ಕೆ ಕಾರಣಗಳೂ ಇದ್ದವು. ಯುಪಿಎ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಏರುತ್ತಿರುವ ಬೆಲೆಗಳಿಂದಾಗಿ, ಅಗತ್ಯ ವಸ್ತುಗಳು ಕೈಗೆಟುಕದಷ್ಟು ಎತ್ತರಕ್ಕೇರಿದ್ದವು. ಅವುಗಳನ್ನು ಹೇಗಾದರೂ ಮಾಡಿ ಹಿಡಿಯಲೆಂದು ಈ ಐವರು ಹಾರಾಟ ಮಾಡುತ್ತಿದ್ದರು. ಆದರೆ ಕೆಳಗೆ ಜನ ಜಂಗುಳಿಯ ಹಾಹಾಕಾರ, ಆಕ್ರಂದನ, 'ನಮಗೂ ಬೆಲೆಗಳನ್ನು ಕೆಳಗೆ ಇಳಿಸಿಕೊಡಿ' ಎಂಬ ಕೂಗಾಟವೆಲ್ಲಾ ಕೇಳಿ ಬೆದರಿದ ಅವರಲ್ಲೊಬ್ಬರು ಆಯತಪ್ಪಿ ಬಿದ್ದೇ ಬಿಟ್ಟರು.
ಬೆಲೆ ಏರಿಕೆಯ ಭರಾಟೆಯ ನಡುವೆಯೂ ಸಂತಸದಿಂದ ಓಡಾಟ ನಡೆಸುತ್ತಿರುವುದು ಕಂಡು ಬಂದ ಮದುವೆಯೊಂದು ಅದೇ ಸಂದರ್ಭ ಅಲ್ಲಿ ನಡೆಯುತ್ತಿತ್ತು. ನೇರವಾಗಿ ಮಂಟಪಕ್ಕೇ ಬಂದು ಬಿದ್ದ ಕಾರಣ, ಓಡಿ ಹೋಗಲೂ ಆಗದೆ ತಾಳಿ ಕಟ್ಟುವುದು ಅನಿವಾರ್ಯವಾಯಿತು ಎಂಬುದನ್ನು ಪತ್ತೆ ಹಚ್ಚಲಾಗಿದೆ.
ಇವರೆಲ್ಲಾ ಆಗಸದಲ್ಲಿ ಹಾರಾಡಲು ಮತ್ತೊಂದು ಕಾರಣವೂ ಇತ್ತು. ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂದು ಹಿರಿಯರು ಹೇಳಿದ್ದು ಅವರಿಗೆಲ್ಲ ನೆನಪಿತ್ತು. ಅದು ಹೇಗೆ ಎಂಬುದನ್ನು ಕಂಡುಕೊಳ್ಳಬೇಕಾಗಿತ್ತು. ಮದುವೆಯಾದರೆ ಸ್ವರ್ಗ ಸುಖಕ್ಕೆ ದಾರಿ ಅಂತಲೂ ಕೆಲವರು ಹೇಳುತ್ತಿದ್ದರು. ಹೀಗಾಗಿ ಮದುವೆಯಾದ ಮೇಲೆ ದಿಢೀರ್ ಮೇಲಕ್ಕೆ ಹೋಗುವುದಕ್ಕಿಂತ, ಮದುವೆಗೆ ಮೊದಲೇ ಮೇಲಕ್ಕೆ ಹಾರಾಡಿ ಹೋಗಿ ಬಂದರೆ ಅನುಭವ ದೊರೆಯುತ್ತದೆ ಎಂಬುದು ಅವರ ಸಿದ್ಧಾಂತ. ಸ್ವರ್ಗಕ್ಕೆ ಮೊದಲೇ ಭೇಟಿ ಕೊಟ್ಟು ಬಂದರೆ, ಹೇಗಿರುತ್ತದೆ, ಅಲ್ಲೇ ಉಳಿಯಬಹುದೇ? ಅಥವಾ ಅಲ್ಲಿಯ ಉದ್ಯೋಗಕ್ಕಿಂತ ಭೂಲೋಕದ ಉದ್ವೇಗದ ಉದ್ಯೋಗವೇ ಮಿಗಿಲೇ? ಎಂಬುದನ್ನೆಲ್ಲಾ ತಿಳಿದುಕೊಳ್ಳಬೇಕಿತ್ತು. ಇದಕ್ಕಾಗಿ ಈ ರೀತಿ ಮಾಡಿದೆ ಎಂದು, ಅವರಲ್ಲಿ ಯಾರು ಕೂಡ ತಪರಾಕಿ ನೀಡುವಂತಹ ಸ್ಥಿತಿಯಲ್ಲಿಲ್ಲದ್ದರಿಂದ, ಹಾವೆಂದು ಹೆದರಿದವರ ಮೇಲೆ ಹಗ್ಗ ಎಸೆದಂತೆ, ಜೋರಾಗಿಯೇ ಆರ್ಭಟಿಸಿ ಬೆದರಿಕೆಯೊಡ್ಡಿದ ಬೊ.ರ. ಬ್ಯುರೋ ಸದಸ್ಯರ ಬಳಿ ಆತ ತಪ್ಪೊಪ್ಪಿಕೊಂಡಿದ್ದಾನೆ.
ಲಾಸ್ಟ್ ಬಟ್ ಒನ್ ಕ್ವೆಶ್ಚನ್ನು - ಹಾಗಿದ್ದರೆ ಈಗ ಏನನಿಸುತ್ತದೆ ಎಂದು ಬೊ.ರ. ಸದಸ್ಯರು ಕೇಳಿದಾಗ, ಇದು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು ಎಂದು ಸಂತಸದಿಂದಲೇ ನುಡಿದಿದ್ದಾನೆ. ಏರುತ್ತಿರುವ ಬೆಲೆಗಳ ಉರಿ ಆ ಮೇಲಿನ ಲೋಕದಲ್ಲಿ ತಡೆಯಲಾಗುತ್ತಿಲ್ಲ. ಅದರ ಜತೆಗೆ ಸೂರ್ಯನ ಶಾಖವೂ ಒಂದಿಷ್ಟು ಸೇರಿಕೊಳ್ಳುತ್ತಿದೆ. ಆದರೆ ಧರೆಗಿಳಿದಾಗ, ಸೂರ್ಯನ ಪ್ರಖರತೆಯೇ ಗೊತ್ತಾಗದಷ್ಟು ಬೆಲೆ ಏರಿಕೆಯು ಬಿಸಿ ಬಿಸಿಯಾಗಿದೆ. ಚೀಲ ತುಂಬಾ ಹಣ ತೆಗೆದುಕೊಂಡು ಹೋದರೆ ಜೇಬು ತುಂಬಾ ಅಕ್ಕಿ ದೊರೆಯುತ್ತದೆ ಎಂದು ಅವರು ಕೇಂದ್ರ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಕ್ಯಾಕರಿಸಿ ಶ್ಲಾಘಿಸುತ್ತಾ ಹೇಳಿದರು.
ಅಂತಿಮವಾಗಿ, ಮುಂದಿನ ಹೆಜ್ಜೆ ಏನು ಎಂದು ಕೇಳಿದಾಗ, ಮುಂದೆ ಬೆಲೆ ಏರಿಕೆಯ ಬಿಸಿ ಗಾಳಿ ತುಂಬಿದ ಬೆಲೂನಿನಲ್ಲಿ ವಿಶ್ವ ಸುತ್ತುವ ಆಸೆಯಿದೆ ಎಂದಾತ ಅಲವತ್ತುಕೊಂಡಿದ್ದಾನೆ.
4 ಕಾಮೆಂಟ್‌ಗಳು
ಗಗನಕ್ಕೆ ಏರಿದ್ದ ಬೆಲೆಗಳನ್ನು ಕೆಳಗೆ ಎಳೆಯಲೆಂದೇ ವಿ(ನಿ)ರೋಧ ಪಕ್ಷದ ಕೆಲವು ಕುತಂತ್ರಿಗಳು ಈ ಹಾರಾಟಿಗನನ್ನು ಮೇಲೆ ಹಾರಿಸಿದ್ದರೆಂದೂ, ಇದರಿಂದ ಚಿಂತಿತರಾದ ಅನರ್ಥ ಮಂತ್ರಿ ದಿಗಂಬರಮ್ ಈತನ ಕಾಲೆಳೆಯಲು ಒಬ್ಬ ಗೂಢಚಾರಿಣಿಯನ್ನು ಕೆಳಗೆ ನಿಲ್ಲಿಸಿದ್ದರೆಂದೂ, ಅವಳೇ ಈತನ ಕಾಲೆಳೆದು ಕೊರಳಿಗೆ ಮಾಲೆ ಹಾಕಿದಳೆಂದೂ, ಗೋಳಾಡುತ್ತಿದ್ದ ಆ ಹಾರಾಟಿಗ ತನ್ನ ಗೆಳೆಯರೆದುರಿಗೆ ಹೇಳುತ್ತಿದ್ದುದನ್ನು, ಬೊ.ರ.ದ ಪರವಾಗಿ ನಾವು ಕದ್ದು ಕೇಳುತ್ತಿದ್ದಾಗ ಒದೆ ತಿಂದುಕೊಂಡು ಬಂದು ನಿಮಗೆ ವರದ್ದಿ ಒಪ್ಪಿಸುತ್ತಿದ್ದೇವೆ.
ಪ್ರತ್ಯುತ್ತರಅಳಿಸಿಅಯ್ಯಯ್ಯೋ! ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಅಂದ ಹಾಗೆ
ಪ್ರತ್ಯುತ್ತರಅಳಿಸಿಸಂಸಾರ ಸುಖದ ಬಗ್ಗೆ ಸಂಸಾರಸ್ಥರಲ್ಲದವರಿಗೇನು ಗೊತ್ತು - ಅದಕ್ಕೇ ನಾನು ಹೇಳೋದು
ಅಸಾರೇ ಸಂಸಾರೇ
ಪತಿ ಏಕಃ ಕಿತಾಪತಿಃ
ಸಂಸಾರವಿಲ್ಲದ ಜೀವನ
ನಿಸ್ಸಾರ
ಸಾಗುವುದಿಲ್ಲ ಸಸಾರ
ಸಂಸಾರ ಸಾಗರದೊಳಗೆ ಕಾಲಿಟ್ಟವನು ಅಲ್ಲಿಯೇ ವಿಶ್ವವನ್ನೆಲ್ಲಾ ಕಾಣಬಲ್ಲ (ಯಾಕೆ ಅಂದ್ರೆ ಅವನ ಕಣ್ಣು ಐಬಾಗಿ, ಕತ್ತಲಾಗುವುದು - ಆತನಿಗೆ ಗೋಚರವಾಗುವುದೊಂದೇ - ಹೆಂಡತಿಯ ದಬ್ಬಾಳಿಕೆ, ಮಕ್ಕಳ ರೋದನ - ಗದ್ದಲ, ತಳವಿಲ್ಲದ ಜೇಬು - ದೀಪವಿಲ್ಲದ ಕಂಬ :P)
ಸುನಾಥರೆ,
ಪ್ರತ್ಯುತ್ತರಅಳಿಸಿನೀವು ಒಪ್ಪಿಸಿದ ರದ್ದಿ ಬಂದಿದೆ. ಆದರೆ ಅದನ್ನು ಎಡಿಟ್ ಮಾಡಲು ಮೂರ್ನಾಲ್ಕು ದಿನ ತಗುಲುತ್ತದೆ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ. ಅದಕ್ಕೆ ಕಾರಣವೂ ಇರಬಹುದು. ಕದ್ದುಕೇಳುತ್ತಿದ್ದಾಗ ಒದೆ ತಿಂದ ಪರಿಣಾಮವಾಗಿ ಈ ವ-ರದ್ದಿಯು ಬಿಡಿಸಲಾರದಷ್ಟು ಅಪ್ಪಚ್ಚಿಯಾಗಿತ್ತು.
ತಿರು-ಕರುಗಳೇ (ಅಂದರೆ ಶ್ರೀ ಕರುಗಳೇ?) (ತಿರು=ಶ್ರೀ)
ಪ್ರತ್ಯುತ್ತರಅಳಿಸಿನಮ್ಮ ಬ್ಯುರೋದಲ್ಲೂ ಕಸ್ತೂರಿ ಪರಿಮಳ ಗೊತ್ತಿರೋರು ಇದ್ದಾರೆ ಎಂಬುದನ್ನು ಮರೆಯದಿರಿ.
ನೀವು ಹೇಳಿದ್ದು ನೋಡಿದ್ರೆ ನಮಗೂ ನಮ್ಮ ಬ್ಯುರೋದ ಆಚಾರ್ಯರು ಹೇಳಿದ ಪಚಕೋವಿಂದ ಶ್ಲೋಕ ನೆನಪಾಗುತ್ತದೆ. "ಅತಿ ಸಂಸಾರೇ
ಬಲು ದುಃಖಾರೇ" ಅಂತ ಮಾತ್ರ ನೆನಪಿದೆ.
ಏನಾದ್ರೂ ಹೇಳ್ರಪಾ :-D