ಬೊಗಳೆ ರಗಳೆ

header ads

ಕೇಂದ್ರದಲ್ಲಿ ಗಾಳ: ಗಣಿ ಧಣಿಗಳಿಗೆ ಭಾರಿ ಬೇಡಿಕೆ

(ಬೊಗಳೂರು ಗಣಿ-ಗಾಳ-ದಾಳ ಬ್ಯುರೋದಿಂದ)
ಬೊಗಳೂರು, ಜು.9- ದೇಶಾದ್ಯಂತ ಮಳೆಗಾಲ ಬಂದಿರುವಂತೆಯೇ, ಸಣ್ಣಪುಟ್ಟ ರಾಜಕೀಯ ಪಕ್ಷಗಳಿಗೂ ಇದು ಒಂದು ಕಾಲವಾಗಿ ಪರಿಣಮಿಸಿದ್ದು, ಯುಪಿಎ ನೇತೃತ್ವದ ಸರಕಾರವು ಬೃಹತ್ ಪ್ರಮಾಣದ ಬೀಸು ಬಲೆಗಳನ್ನು ಹಿಡಿದು ಮೀನು ಹಿಡಿಯಲು ಹಲವರನ್ನು ನೇಮಿಸಿರುವುದು ಬೊ.ರ. ಬ್ಯುರೋ ಗಮನಕ್ಕೆ ಬಂದಿದೆ.

ಇದೇ ವೇಳೆ, ಕರುನಾಟಕ ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಮೀನುಗಾರಿಕೆ ನಡೆಸಿ ಸಿದ್ಧ-ಪ್ರಸಿದ್ಧರಾಗಿದ್ದ ಗಣಿ ದೊರೆಗಳು ಕರುನಾಟಕ ರಂಗವೇದಿಕೆಯಿಂದ ದಿಢೀರ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಅವರೀಗ Unprecedented Price-raise Agenda ಸರಕಾರದ ಕಂಕುಳ ಕೆಳಗೆ ಬೆಚ್ಚನೆ ಆಶ್ರಯ ಪಡೆಯುವಂತೆ ಮಾಡಲಾಗಿದೆ ಎಂಬುದನ್ನು ಬೊ.ರ. ಬ್ಯುರೋ ಪತ್ತೆ ಹಚ್ಚಿದೆ.

ರಾಜ್ಯದಲ್ಲಿ ಸ್ವತಂತ್ರರ ಹಂಗಿನಿಂದ ಹಂಗೂ ಹಿಂಗೂ ಹೊರಬರುವಂತಾಗಲು ಭಾರಿ ಮನೆಹಾಳು/ಪ್ರಳಯಾಂತಕ ಕಾರ್ಯಾಚರಣೆ ನಡೆಸಿದ್ದ ಗಣಿ ಕುಳಗಳು, ಅದಿರುಗಳನ್ನು ಅಗೆದು ಬಗೆದು ಲೋಡುಗಟ್ಟಲೆ ತಂದು ಸುರಿಯುವಲ್ಲಿ ಎತ್ತಿದ ಕೈ ಎಂಬ ಕಾರಣಕ್ಕೆ ಯುಪಿಎ ಇವರ ಸೇವೆ ಬಯಸಿದ್ದು, ಅವರಿಗೀಗ ಡಿಮ್ಯಾಂಡಪ್ಪೋ ಡಿಮ್ಯಾಂಡು. ಎದುರು ಪಕ್ಷಗಳಿಂದ ಸಂಸದರನ್ನು ಲೋಡು ಲೋಡು ಗಣಿಯಂತೆ ಎತ್ತಿ ತಂದು 'ಇಷ್ಟು ಸಾಕಾ... ಇನ್ನೂ ಬೇಕಾ' ಅಂತ ಕೇಳುವ ಜಾಯಮಾನದ ಗಣಿ ದೊರೆಗಳು ಸದ್ಯಕ್ಕಂತೂ ತುಂಬಾ ತುಂಬಾ ಬ್ಯುಸಿಯಾಗಿಬಿಟ್ಟಿರುವುದಾಗಿ ಮೂಲಗಳು ವರದಿ ಮಾಡಿವೆ.

ಈ ಗಾಳ ವೀರರು ಗಾಳ ಹಾಕಲು ಹೊರಟಿರುವಂತೆಯೇ, ಅವರ ಬಲೆಗೆ ಮೊದಲು ಬಿದ್ದಿರುವುದು ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಪ ದಳ. ಸಮಜಾ ವಾದಿಗಳು ಈಗಾಗಲೇ ಬಲೆಯೊಳಗೆ ಬಿದ್ದಿದ್ದಾರೆ. (ಇದಕ್ಕೆ ಕಾರಣ ಮಾಯಾಂಗನೆಯ ಆನೆಯ ಭೀತಿ ಎಂಬುದನ್ನು ಕೂಡ ಪತ್ತೆ ಹಚ್ಚಲಾಗಿದೆ).

ಇನ್ನು ಚಾಣಕ್ಯ ತಂತ್ರಗಳಿಗೆ ಹೆಸರಾದ, ಕರ್ನಾಟಕದಲ್ಲಿ ತಾರಾಮಾರಾ ಪ್ರಸಿದ್ಧಿ ಪಡೆದಿರುವ, ಎಲ್ಲರಿಂದಲೂ ಕ್ಯಾಕರಿಸಿ ಹೊಗಳಿಸಿಕೊಂಡಿರುವ ಪಕ್ಷದ ಎರಡು ಮೀನುಗಳನ್ನು ಸ್ವತಃ ವೇದೇಗೌಡರೇ ಕೇಂದ್ರದ ಗಾಳಕ್ಕೆ ಸಿಕ್ಕಿಸಿಬಿಟ್ಟಿದ್ದಾರೆ. ಅವರು ಅದರಲ್ಲಿ ಸಿಕ್ಕಿಬಿದ್ದರೆ, ಕೇಂದ್ರದ ಬೆಂಬಲ ಪಡೆದು ಅಧಿಕಾರಯುತವಾಗಿ ಕರುನಾಟಕದಲ್ಲಿ ಹೊಸ ನಾಟಕ ಶುರು ಮಾಡಬಹುದು ಮತ್ತು ತಮ್ಮ ಪಕ್ಷಕ್ಕೆ ಹಾಕಲಾಗುತ್ತಿರುವ ಗಾಳದಿಂದ ಪಾರಾಗಬಹುದು ಎಂಬುದು ಚಾಣಾಕ್ಷ ಚಾಣಕ್ಯನ ಲೆಕ್ಕಾಚಾರ.

ಸದ್ಯಕ್ಕೆ ಚುನಾವಣೆ ನಡೆದರೆ ಈಗಾಗಲೇ ಬೆಲೆ ಏರಿಕೆಯಿಂದಾಗಿ ಎಲ್ಲೆಡೆಯೂ ಸುಣ್ಣ ಬಳಿಸಿಕೊಂಡಿರುವ ಕಾಂಗ್ರೆಸ್‌ಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇರುವುದರಿಂದ, ಉಳಿದಿರುವ ಏಳೆಂಟು ತಿಂಗಳನ್ನು ಹೇಗಾದರೂ ದೂಡಬೇಕು. ಇದಕ್ಕಾಗಿ ತಮಗೆ ದೊಡ್ಡ ತಿಮಿಂಗಿಲಗಳೇ ಬೇಕಿಲ್ಲ. ಮೀನು, ಕಪ್ಪೆ, ಆಮೆ ಇತ್ಯಾದಿಗಳು ಕೂಡ ಸಾಕಾಗುತ್ತವೆ ಎಂದು ಕೇಂದ್ರದಿಂದ ಗಾಳ ವೀರರಿಗೆ ಸ್ಪಷ್ಟ ಸೂಚನೆ ದೊರೆತಿದೆ ಎನ್ನಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ತಾನು ಹಿಡಿದ ಮೀನುಗಳ ಸಹಿತವಾಗಿ ಗಣಿ-ಬಲೆಗಾರನನ್ನು
    Un-Principled-Agenda ಅನ್ನುವ ತಿಮಿಂಗಿಲು ನುಂಗಿದೆಯೆ? ಒದಿಯೊಗೌಡನೆನ್ನುವ ಕುತಂತ್ರಿ ಬಲೆಗಾರ ಈ ತಿಮಿಂಗಿಲಿನ ಹೊಟ್ಟೆಯಲ್ಲಿ ಏನು ಹುಡುಕುತ್ತಿದ್ದಾನೊ?

    ಪ್ರತ್ಯುತ್ತರಅಳಿಸಿ
  2. ಸುನಾಥರೆ,

    ಚಾಣಾಕ್ಷ ಚಾಣಕ್ಯ ಏನು ಬೇಕಾದರೂ ಹೊರಗೆಳೆಯುವ ಸಾಮರ್ಥ್ಯ ಉಳ್ಳವರು. ಬಲ್ಲವನೇ ಬಲ್ಲ ಬೆಲ್ಲದ ಕಹಿಯ!!!!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D