ಬೊಗಳೆ ರಗಳೆ

header ads

ರಾಜ್ಯಾದ್ಯಂತ ಭಯೋತ್ಪಾದನೆ, ಎಲ್ಲರಿಗೂ ಕೆಂಗಣ್ಣು!

(ಬೊಗಳೂರು ಭಯಭೀತ ಬ್ಯುರೋದಿಂದ)

ಬೊಗಳೂರು, ಮೇ 12- ಚುನಾವಣೆಯಲ್ಲಿ ಭಯೋತ್ಪಾದನೆಯ ಕರಿ ನೆರಳು ಕಾಣಿಸಿಕೊಂಡಿದ್ದು, ದುರ್ಬೀನಿನಲ್ಲಿ ನೋಡಿದಾಗ ಈ ನೆರಳು ಮತ್ತಷ್ಟು ಕಪ್ಪಾಗಿ ಕಂಡಿರುವುದು ಪತ್ತೆಯಾಗಿದೆ. ಇದಲ್ಲದೆ, ಎಲ್ಲೆಡೆ ಕೆಂಗಣ್ಣು ರೋಗ ಕಾಣಿಸಿಕೊಂಡಿದ್ದು, ಇದು ಮದ್ರಾಸ್ ಐ ಅಲ್ಲ ಎಂಬುದನ್ನೂ ಬೊಗಳೆ ಬ್ಯುರೋ ಖಚಿತಪಡಿಸಿಕೊಂಡಿದೆ.

ರಾಜ್ಯಾದ್ಯಂತ ಭಯೋತ್ಪಾದಕರು ಎಗ್ಗಿಲ್ಲದೆ ಓಡಾಡುತ್ತಿದ್ದು, ಅನೇಕ ಬಾಂಬುಗಳನ್ನು ಸಿಡಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರು ನಿದ್ದೆಯನ್ನು ಕಳೆದುಕೊಂಡು, ರಾತ್ರಿಯಂತೂ ಕೆಂಗಣ್ಣೇ, ಹಗಲಲ್ಲೂ ಸಹ ಕೆಂಗಣ್ಣು ಮಾಡಿಕೊಂಡು ಕುಳಿತುಕೊಳ್ಳತೊಡಗಿದ್ದಾರೆ ಎಂದು ನಮ್ಮ ಆತ್ಮೀದಾರರು ಕೆಂಗಣ್ಣು ತೇಲಾಡಿಸುತ್ತಾ ವರದ್ದಿ ಮಾಡಿದ್ದಾರೆ ಎಂದು ನಮ್ಮ ವಿರೋಧಿ ಪತ್ರಿಕೆಗಳು ಫ್ಲ್ಯಾಶ್ ನ್ಯೂಸ್ ಪ್ರಕಟಿಸಿವೆ.

ಭಯೋತ್ಪಾದಕರ ಹಾವಳಿಯಿಂದ ಜನರೆಲ್ಲಾ ಯಾಕೆ ಕೆಂಗಣ್ಣು ಮಾಡಿಕೊಂಡು ಕುಳಿತುಕೊಳ್ಳಬೇಕು? ಭಯೋತ್ಪಾದನೆ ಎಲ್ಲಿ? ಏನು? ಎತ್ತ? ಎಂದೆಲ್ಲಾ ಜನ ಸಾಮಾನ್ಯರನ್ನು ಕೇಳಿದಾಗ ಅವರ ಬಾಯಿಂದ ಬಂದ ಉತ್ತರ:

ನಾವು ಬಡತನ ನಿವಾರಿಸುತ್ತೇವೆ ಎಂದು ಈ ಉಗ್ರ-ಗಾಮಿಗಳು ನಮ್ಮನ್ನು ಹೆದರಿಸುತ್ತಿದ್ದಾರೆ. ಬಡತನ ನಿವಾರಿಸಿ ಬಿಟ್ಟರೆ ನಮಗೆ ಕೊಡುವ ಬಿಪಿಎಲ್ ಕಾರ್ಡನ್ನೇನು ಮಾಡುವುದು? ಎಂದು ಬೋರೇಗೌಡರೊಬ್ಬರು ಪ್ರಶ್ನಿಸಿದರೆ, ಕಲರ್ ಟೀವಿ, ಎರಡು ರೂಪಾಯಿಗೆ ಅಕ್ಕಿ ಕೊಡುತ್ತೇವೆ ಅಂತಲೂ ಹೇಳಿಕೆ ನೀಡಿ ಭಯ ಉತ್ಪಾದಿಸುತ್ತಿದ್ದಾರೆ. ಎರಡ್ರುಪಾಯಿಗೆ ಅಕ್ಕಿ ತಿಂದರೆ ನಾವು ಬಡವರಾಗಿ ಉಳಿಯುವುದಾದರೂ ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸೀರೆಗಳನ್ನೂ ತಂದುಕೊಡುತ್ತೇವೆ ಅಂತಾನೂ ಹೇಳಿದ್ದಾರೆ, ನಮ್ ಹೆಂಡಿರು ಮಕ್ಕಳೆಲ್ಲರೂ ಸೀರೆ ತೆಗೆದುಕೊಳ್ಳಲೆಂದು ಹೋದವರು ಯಾವ ಸೀರೆ ಆಯ್ದುಕೊಳ್ಳಬೇಕೆಂದು ತಿಳಿಯದೆ ಎಂದಿನಂತೆ ಗೊಂದಲದಲ್ಲಿ ಸಿಲುಕುತ್ತಾರೆ ಎಂಬ ಭೀತಿಯೂ ಮತ್ತೆ ಕೆಲವರದು.

ಹಾಗಿದ್ದರೆ ನಿಮ್ಮ ಕಣ್ಣು ಕೆಂಪಗೇಕಿದೆ? ಎಂದು ಪ್ರಶ್ನಿಸಿದಾಗ ಒಳ್ಳೆಯ ಉತ್ತರವೊಂದು ಅಲೆ ಅಲೆಯಾಗಿ 'ತೇಲಾಡುತ್ತಾ' ಬಂತು:

ನಿನ್ನೆ ರಾತ್ರಿ ಆ ಪಕ್ಷ ಈ ಪಕ್ಷ ಅಂತ ನಮ್ಮ ಮನೆಗೆ ಒಬ್ಬರ ಹಿಂದೊಬ್ಬರಂತೆ ಬಂದಿದ್ದೇ ಬಂದಿದ್ದು. ಅವರೇನೋ ಕೊಟ್ಟರು, ಇಲ್ಲ ಅನ್ನೋಕ್ಕಾಗುತ್ತದೆಯೇ ಅಂತ ಬಾಟ್ಲಿಯಲ್ಲೂ, ತೊಟ್ಟೆಯಲ್ಲೂ ಸೇರಿಸಿಕೊಂಡು ಹೊಟ್ಟೆಗೆ ಸುರಿದುಕೊಂಡಿದ್ದೆವು. ಅದೇನೋ... ನಮ್ಮದು ನಿಮಗೇ... ಆದ್ರೆ ನಿಮ್ಮದು (ಬಾಟ್ಲಿಯೆಲ್ಲಾ) ನಮಗೇ ಕೊಡಬೇಕು ಅಂತ ತಾಕೀತು ಮಾಡಿದ್ದೆವು ಎಲ್ಲರಿಗೂ ಎಂದು ಮತ್ತೊಂದು ಕೈಯ ಬಾಟಲಿಯನ್ನು ಸುರಿದುಕೊಳ್ಳುತ್ತಾ ಹೇಳಿದರು ಮತದಾರ ಮಹಾಪ್ರಭುಗಳು!

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು