(ಬೊಗಳೂರು ಟ್ರಾಫಿಕ್‌ನಲ್ಲಿ ಮೇಯೋರ ಬ್ಯುರೋದಿಂದ)
ಬೊಗಳೂರು, ಮೇ 9- ಟ್ರಾಫಿಕ್ ಪೊಲೀಸರು ಕೇವಲ 4 ಕೋಟಿ ರೂ. ಮಾತ್ರ ಸಂಪಾದನೆ ಮಾಡಿದ್ದಾರೆ ಎಂಬುದಾಗಿ ಸುಳ್ಳು ಸುಳ್ಳು ವರದಿ ಪ್ರಕಟಿಸುತ್ತಿರುವ ಟಾಯ್ ಪತ್ರಿಕೆ ವಿರುದ್ಧ ಬೊಗಳೆ ರಗಳೆ ಬ್ಯುರೋ ಅವಮಾನ ನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದೆ.

ಟ್ರಾಫಿಕ್ ಪೊಲೀಸರು ಬಡಜನರನ್ನು ಸುಲಿಯುವುದೇನು ಸಾಮಾನ್ಯವೇ? ಇಡೀ ಹಗಲು ಬಿಸಿಲಲ್ಲಿ ಬೆಂದು, ರಾತ್ರಿಯೆಲ್ಲಾ ಚಳಿಯಲ್ಲಿ ನೊಂದು ಅವರು ರಸ್ತೆಗಳ ಮೂಲೆ ಮೂಲೆಗಳಲ್ಲಿ ಸಂಪಾದನೆಗೆ ನಿಲ್ಲುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟು, ಬೆವರು ಸುರಿಸಿ (ಕೆಲವೊಮ್ಮೆ ಹಣೆಯಲ್ಲಿ ಮಾತ್ರ ಬೆವರು ಬರುತ್ತದೆ) ದುಡಿದ ಹಣವನ್ನು ಇಷ್ಟು ಅಲ್ಪ ಪ್ರಮಾಣದ್ದು ಎಂದು ಲೆಕ್ಕ ತೋರಿಸಿದ ಈ ಪತ್ರಿಕೆಯು ಬೊಗಳೆ ಪತ್ರಿಕೆಗಳ ಅನೀತಿಯನ್ನೇ ಉಲ್ಲಂಘಿಸಿದೆ ಎಂದು ನಮ್ಮ Someಪಾದ-ಕರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲಾ ದಾಖಲೆ ಪತ್ರಗಳಿದ್ದರೂ, ನೀನು ಅತಿವೇಗದ ಚಾಲನೆ ಮಾಡುತ್ತಿದ್ದೀ ಅಂತ ಹೇಳಿ ಎರಡ್ಮೂರು ಸಾವಿರ ರೂ. ದಂಡ ಕಟ್ಟುವಂತೆ, ದಂಡದಲ್ಲಿ 'ರಶೀದಿ ಬೇಡ ಎಂದಾದರೆ' ಕೇವಲ ಒಂದು ಸಾವಿರದೊಳಗೆ ಕೆಲಸ ಮುಗಿಸಿಕೊಡುವುದಾಗಿಯೂ ಹೇಳಬಲ್ಲ ಸಾಮರ್ಥ್ಯವಿರುವ ಏಕೈಕ ಉದ್ಯೋಗ ಎಂದರೆ ಸಂಚಾರಿ ಪೊಲೀಸರದು ಎಂಬುದನ್ನು ಪತ್ತೆ ಹಚ್ಚಲಾಗಿದೆ.

ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾದರೆ ಅದಕ್ಕೆ ಅನುಲೋಮ ಅನುಪಾತದಲ್ಲಿ ಈ ಟ್ರಾಫಿಕ್ ಪೊಲೀಸರ ಕಮಾಯಿ ಹೆಚ್ಚಾಗುತ್ತದೆ ಎಂದು ಐನ್‌ಸ್ಟೈನ್ ಅಥವಾ ಆರ್ಕಿಮಿಡಿಸ್‌ಗಳು ಈ ಹಿಂದೆಯೇ ದೊಡ್ಡ ದೊಡ್ಡ ಗಣಿತ ಸೂತ್ರಗಳನ್ನು ತಯಾರಿಸಿಕೊಟ್ಟಿದ್ದಾರೆ. ಅದರ ಅನುಸಾರವಾಗಿಯೇ ಕೆಲಸ ಮಾಡಬಲ್ಲ ಸಾಮರ್ಥ್ಯವಿರುವ ಈ ಬಿಳಿಯ ಪೊಲೀಸರು, ಮೊಬೈಕ್ ಸವಾರರಲ್ಲಿ ಏನೂ ದಕ್ಕದಿದ್ದರೆ, ಕನಿಷ್ಠ ಒಂದು ಲೋಟ ಚಹಾ ಕುಡಿಯಲಾರದೂ ಏನಾದರೂ 'ದಂಡ' ನೀಡು ಎಂದು ಹಲ್ಕಿರಿಯುತ್ತಾರೆ. ಹೀಗಾಗಿ ಅವರಿಗೂ ಹಲ್ಲುಗಳಿವೆ ಎಂಬುದನ್ನು ಪತ್ತೆ ಮಾಡುವುದು ಕೂಡ ಸುಲಭಸಾಧ್ಯವಾಗಿದೆ.

ಅಲ್ಲದೆ, ಏನೂ ತಪ್ಪು ಮಾಡದಿದ್ದರೂ ನೀನು ತಪ್ಪು ಮಾಡಿದ್ದೀ ಅಂತ ಕೋರ್ಟುಗಳು ಕೂಡ ಸಾಬೀತು ಮಾಡಲಾಗದ ಪ್ರಕರಣಗಳನ್ನು ಈ ಬಿಳಿಯರು ಮಾಡಿ ತೋರಿಸುತ್ತಿರುವುದು ವಿಶ್ವದಾಖಲೆಯೇ ಆಗಿದೆ. ಎಲ್ಲಾ ದಾಖಲೆ ಪತ್ರ ಸರಿಯಾಗಿದ್ದರೆ, ತಲೆ ಕೆರೆದುಕೊಂಡ ತಕ್ಷಣ ಅವರಿಗೆ ಹಲವು ತಪ್ಪುಗಳು ತಲೆಯೊಳಗಿಂದಲೇ 'ಹೊಳೆಯುತ್ತವೆ'. ಅವುಗಳಲ್ಲಿ, ಓವರ್‌ಸ್ಪೀಡ್, ರಾಂಗ್ ಸೈಡ್, ಒನ್ ವೇ, ಇಂಡಿಕೇಟರ್ ಹಾಕಿಲ್ಲ, ಹಾರ್ನ್ ವರ್ಕ್ ಆಗುತ್ತಿಲ್ಲ ಎಂಬಿತ್ಯಾದಿಗಳು ಬಹುತೇಕ ಹೆಚ್ಚು.

ಇಂಥ ದಂಧೆಯವರು ಕೇವಲ ನಾಲ್ಕು ಕೋಟಿ ಸಂಪಾದಿಸಿದ್ದಾರೆ ಎಂಬುದನ್ನು ಪ್ರಜ್ಞಾವಂತರು ಯಾರು ಕೂಡ ಒಪ್ಪುವುದಿಲ್ಲ ಎಂದು ಅಖಿಲ ಭಾರತ ಟ್ರಾಫಿಕ್ ಪೊಲೀಸ್ ಪೀಡಿತ ಸಂಘದ ಅಧ್ಯಕ್ಷರು ಘಂಟಾಘೋಷವಾಗಿ ಸಾರಿದ್ದು, ಕನಿಷ್ಠಪಕ್ಷ ಅದರಲ್ಲಿ 4 ಎಂಬ ಅಂಕಿಯ ಬಳಿಕ ಒಂದೆರಡ್ಮೂರ್ನಾಲ್ಕೈದಾರೇಳೆಂಟೊಂಭತ್ಹತ್ತು ಸೊನ್ನೆಗಳು ಬಿಟ್ಟು ಹೋಗಿರಬಹುದು ಎಂದು ಹೇಳಿದ್ದಾರೆ.

2 Comments

ಏನಾದ್ರೂ ಹೇಳ್ರಪಾ :-D

  1. ಒಬ್ಬೊಬ್ಬ ಪೋಲೀಸನ someಪಾದನೆ ನಾಲ್ಕು ಕೋಟಿ ಎಂದರೆ ಸತ್ಯಕ್ಕೆ ಹತ್ತಿರವಾದೀತಾ?

    ReplyDelete
  2. ಸುನಾಥರೆ,

    ಇಂಥಾ ವಿಷ(ಯ)ಗಳೆಲ್ಲಾ ಮೆಲ್ಲ ಮೆಲ್ಲ ಹೇಳುವಂಥದ್ದು... ಇದಕ್ಕೆ ಟೆರಿಫಿಕ್ ಪೊಲೀಸರದ್ದು ಮೌನಂ ಸಮ್ಮತಿ ಲಕ್ಷಣಂ...

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post