(ಬೊಗಳೂರು ಕತ್ತೆ ಸಂರಕ್ಷಣಾ ಬ್ಯುರೋದಿಂದ)

ಬೊಗಳೂರು, ಏ.30- ಇಷ್ಟು ವರ್ಷ ಆರಿಸಿ ಬಂದರೂ ಕೂಡ, ಅಧಿಕಾರ ಹೊಂದಿದರೂ ಕೂಡ, ಕತ್ತೆಗಳು ಅಭಿವೃದ್ಧಿಯಾಗಲಿಲ್ಲ ಎಂದು ಸುಳ್ಳು ಸುಳ್ಳೇ ಅಪಪ್ರಚಾರ ಮಾಡುತ್ತಿರುವ ಪ್ರತಿಭಟನಾ ಪಕ್ಷವೊಂದರ ವಿರುದ್ಧ ಮತ ಚಲಾಯಿಸಲು ಮತದಾರರು ನಿರ್ಧರಿಸಿದ್ದಾರೆ.

ಯಾರ 'ಪರ'ವಾಗಿ ಮತ ಚಲಾಯಿಸದಿದ್ದರೂ ಪರವಾಗಿಲ್ಲ, ಆದರೆ 'ಕತ್ತೆಗಳ ಅಭಿವೃದ್ಧಿಯಾಗಿಲ್ಲ' ಎನ್ನುತ್ತಾ ಅದಕ್ಕಾಗಿಯೇ ಪ್ರಣಾಳಿಕೆ ಬಿಡುಗಡೆ ಮಾಡಿರುವ ಪಕ್ಷದ 'ವಿರುದ್ಧ' ಮತ ಚಲಾಯಿಸುವುದು ಗ್ಯಾರಂಟಿ ಎಂದು ಬೊಗಳೂರಿನ ಮಹಾ ಪ್ರಜೆಗಳು ತೀರ್ಮಾನಿಸಿದ್ದಾರೆ ಎಂಬುದಾಗಿ ನಮ್ಮ ವರದ್ದಿಗಾರರು ಅರಚಿದ್ದಾರೆ.

ರಾಜ್ಯದ ಖಜಾನೆಯು ಬರಿದಾಗಿರುವುದೇ ಇಂಥಹ ಕತ್ತೆಗಳಿಂದಾಗಿ. ರಾಜ್ಯದಲ್ಲಿ ಕತ್ತೆಗಳು ಭಯಂಕರ ಅನ್ನಿಸುವ ರೀತಿಯಲ್ಲಿ ಅಭಿವೃದ್ಧಿ ಸಾಧಿಸಿದ್ದು, ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಸಂತಾನಕ್ಕಾಗುವಷ್ಟು ಸಂಪತ್ತನ್ನು ಈಗಾಗಲೇ ಗುಡ್ಡೆ ಹಾಕಿಕೊಂಡಿವೆ. ಆದರೆ ಅಖಿಲ ಕರುನಾಟಕ ಪ್ರತಿಭಟನಾ ಪಕ್ಷವು ಮಾತ್ರ, 'ಕತ್ತೆಗಳು ಅಭಿವೃದ್ಧಿಯಾಗಿಲ್ಲ, ಅವುಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ' ಎಂದು ಸಾರಿರುವುದು ಅಸತ್ಯದ ಪರಮಾವಧಿ ಎಂದು ದೂರಿರುವ ಬೊಗಳೂರು ಮತದಾರರು, ಕತ್ತೆಗಳ ಅಭಿವೃದ್ಧಿಯಾಗದಬೇಕಿದೆ ಎಂದು ಹೇಳಿರುವುದು ಯಾವ ನಿಟ್ಟಿನಲ್ಲಿ? ಅದೇನು ಕತ್ತೆಗಳ ಸಂತಾನ ಅಭಿವೃದ್ಧಿಯೇ? ಈ ಮೂಲಕ ಮತ್ತಷ್ಟು ಓಟುಗಳನ್ನು ಪಡೆಯುವ ಸಂಚೇ? ಎಂದೂ ಪ್ರಶ್ನಿಸಿದ್ದಾರೆ.

ಅಲ್ಲದೆ, ಈಗಾಗಲೇ ಬೀದಿ ಬೀದಿಗಳಲ್ಲಿ ಸಾಕಷ್ಟು ಕತ್ತೆಗಳು ಕಾರಿನ ಮೇಲೇರಿ, ಬೈಕಿನಲ್ಲಿ ಮೈಕು ಹಿಡಿದು ಅರಚಾಡುತ್ತಿವೆಯಲ್ಲ? ಇನ್ನೆಂತಕ್ಕೆ ಅವುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು? ಎಂದು ಏನೂ ಅರಿಯದ ಮುಗ್ಧರಂತಿರುವ ಬೊಗಳೂರಿನ ಮತಬಾಂಧವರು ಮತ್ತು ಮದಬಾಂಧವರು ಹಾಗೂ ಮತ-ದಾರ ಬಾಂಧವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಏನೇ ಸಂಭವಿಸಿದರೂ ಪ್ರತಿಭಟನೆ ಮಾಡಬೇಕಾಗುತ್ತದೆ. ಈ ಪ್ರತಿಭಟನಾ ಪ್ರದರ್ಶನದಲ್ಲಿ ಕೂರಲು, ಮೆರವಣಿಗೆಯಲ್ಲಿ ಸಾಗಲು ಸಾಕಷ್ಟು ಸಂಖ್ಯೆಯ ಕತ್ತೆಗಳ ಅವಶ್ಯಕತೆಯಿದೆ. ಈ ಏಕೈಕ ಉದ್ದೇಶವೇ ಈ ಪ್ರಣಾಳಿಕೆಯ ಹಿಂದಿರಬಹುದು ಎಂದು ಬಲವಾಗಿ ಶಂಕಿಸಲಾಗುತ್ತಿದೆ.

ಮನೆಮನೆಗೆ ಟೀವಿ: ರಾಜ್ಯಾದ್ಯಂತ ಪ್ರಣಾಳಿಕೆಗಳನ್ನು, ಪ್ರಣಾಳ ಶಿಶುಗಳನ್ನು ಬಿಡುಗಡೆ ಮಾಡುತ್ತಿರುವ ಪಕ್ಷಗಳ ಸಾಲಿಗೆ ಈ ಪಕ್ಷವೂ ತೂರಿಕೊಂಡಿದ್ದು, ಬೇರೆ ಪಕ್ಷಗಳು ಟೀವಿ, ಕರೆಂಟು, ರೋಡು, ನೀರು ಇತ್ಯಾದಿ ಕೊಡುವುದಾಗಿ ಘೋಷಿಸಿವೆ. ಆದರೆ ಪ್ರತಿಭಟನಾ ಪಕ್ಷವು ಪುಟ್ಟ ಪಕ್ಷವಾಗಿರುವುದರಿಂದ ಪಕ್ಷದ ಚಿಹ್ನೆಯಾಗಿ ಟೀವಿಯನ್ನೇ ಇಟ್ಟುಕೊಂಡಿದ್ದು, ರಾಜ್ಯದ ಎಲ್ಲ ಮತದಾರರ ಮನೆ ಮನೆಗೆ ಸಾಕು ಬೇಕಾಗುವಷ್ಟು ಟೀವಿಗಳನ್ನು ಠೀವಿಯಿಂದಲೇ ವಿತರಿಸಲು ಆ ಪಕ್ಷದ ಕಾರ್ಯಕರ್ತರು ಸಿದ್ಧತೆ ನಡೆಸುತ್ತಿರುವುದಾಗಿ ನಮ್ಮ ಬೇನಾಮಿ ಸುದ್ದಿ ಮೂಲಗಳು ವರದ್ದಿ ಹಾಕಿವೆ.

ಟೀವಿಯಿಲ್ಲದ ಮನೆಗಳಿಗೆ ಟೀವಿಯ ಚಿಹ್ನೆ ನೀಡಿ, ಪ್ರತಿಯೊಂದು ಮನೆಗೂ ಟೀವಿ ನೀಡುವ ಗುರಿಯನ್ನು ಆರಿಸಿಬರುವ ಮೊದಲೇ... ಅಷ್ಟೇಕೆ, ಚುನಾವಣೆಯಾಗುವ ಮೊದಲೇ ವಿತರಿಸಿ, ಆಶ್ವಾಸನೆ ಈಡೇರಿಸಿದ ಅಪಖ್ಯಾತಿಗೆ ಗುರಿಯಾಗುವ ಹುನ್ನಾರವಿದು ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.

ಆದರೆ, ಇನ್ನೊಂದೆಡೆ ಗಾರ್ದಭ ಸಮುದಾಯವಂತೂ ಆನಂದತುಂದಿಲವಾಗಿದ್ದು, ಈಗಾಗಲೇ ರಾಜ್ಯ ರಾಜಕೀಯದಲ್ಲಿ ಮೆರೆಯುತ್ತಿರುವ ತಮ್ಮ ಕುಟುಂಬದವರ ಸಂಖ್ಯೆಗೆ ಹೊಸ ಹೊಸ ತಳಿಗಳು ಸೇರ್ಪಡೆಯಾಗಲಿವೆ, ಇದೂ ಅಲ್ಲದೆ, ಟೀವಿ ಜಾಹೀರಾತುಗಳ ಮಧ್ಯೆ ಮಧ್ಯೆ ಆಗಾಗ್ಗೆ ಇಣುಕುತ್ತಿರುವ ಧಾರಾವಾಹಿಗಳಂತೆ ದಿನಕ್ಕೆ ನೂರಾರು ಬಾರಿ ಟೀವಿಯಲ್ಲಿ ಕಾಣಿಸಿಕೊಳ್ಳಲೂ ಬಹುದು ಎಂದು ಹರ್ಷಚಿತ್ತರಾಗಿ ನುಡಿದಿದ್ದಾರೆ ಅಖಿಲ ಭಾರತ ಗಾರ್ದಭ ಸಂಘದ ಅತಿಹಿರಿಯ ಕಾರ್ಯನಿರ್ವಾಹಕ ಆಡಳಿತ ನಿರ್ದೇಶಕ ಶ್ರೀಮಾನ್ ಕ.ಕುಮಾರ್ ಅವರು.

4 Comments

ಏನಾದ್ರೂ ಹೇಳ್ರಪಾ :-D

 1. ಕತ್ತೆಗಳಲ್ಲೆ ಎರಡು ಮಟ್ಟಗಳಿವೆ. ವೋಟು ನೀಡುವ ಕತ್ತೆಗಳು ಕೆಳಮಟ್ಟದ ಕತ್ತೆಗಳು;ಕುರ್ಚಿ ಏರಿ, ಬೂಸಾ ತಿನ್ನುವ ಕತ್ತೆಗಳು ಮೇಲ್ಮಟ್ಟದ ಕತ್ತೆಗಳು. ಕೆಳಮಟ್ಟದ ಕತ್ತೆಗಳೆಲ್ಲ ಮೇಲ್ಮಟ್ಟಕ್ಕೆ ಏರುವವರೆಗೆ ಸರ್ವ ಕತ್ತೆಗಳ ಅಭಿವೃದ್ಧಿಯಾಗಿಲ್ಲ ಎನ್ನುವದು ಕತ್ತೆಪಕ್ಷದವರ ಅಭಿಪ್ರಾಯ. ಅದಕ್ಕೆಂದೆ ಹೊಸ ಹೊಸ ’ಕತ್ತೆ ಅಭಿಮಾನಿ’ ಪಕ್ಷಗಳು ಹುಟ್ಟಿಕೊಂಡಿದ್ದು, "ಕತ್ತೆಗಳೆ, ನಿಮ್ಮ ವೋಟನ್ನು ಕತ್ತೆಗೇ ಕೊಡಿ" ಎಂದು ಹೇಷಾರವ ಮಾಡುತ್ತಿವೆ.

  ReplyDelete
 2. ಕತ್ತೆಗಳಲ್ಲಿ 2 ಮಟ್ಟಗಳಿದ್ದಂತೆ ಪ್ರಣಾಳಿಕೆಗಳಲ್ಲೂ 2 ವಿಧಗಳಿರುವುದು ಭಾರಿ ಮಳೆಯಿಂದ ಕರೆಂಟ್ ಇಲ್ಲದಿದ್ದರೂ ಬೆಳಕಿಗೆ ಬಂದಿದೆ. ಸಾರ್ವಜನಿಕವಾದ ಪ್ರಣಾಳ ಶಿಶು ಮತ್ತು ಖಾಸಗಿ(!!??) ಪ್ರಣಾಳ ಶಿಶು. ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಏಳಿಗೆಗಾಗಿ ಈ ಖಾಸಗಿ ಪ್ರಣಾಳ ಶಿಶು.

  ReplyDelete
 3. ಸುನಾಥರೆ,

  ಕೆಳಮಟ್ಟದ ಕತ್ತೆಗಳು ಒದೆಸಿಕೊಳ್ಳುವವುಗಳಾದರೆ, ಮೇಲ್ಮಟ್ಟದ ಕತ್ತೆಗಳು ಲತ್ತೆ ನೀಡುವಂಥವುಗಳೇ ಆಗಿರುತ್ತವೆ. ಇದು ಮತದಾರ ಪ್ರಜೆಗಳ ಹಣೆಬರಹವೂ ಹೌದು, ಮತಪಡೆವ ಪ್ರಭುಗಳ ಆಜನ್ಮಸಿದ್ಧ ಹಕ್ಕೂ ಹೌದು.

  ReplyDelete
 4. ಗಿರೀಶ್ ಭಟ್ ಅವರೆ,

  ನಿಮ್ಮ ಪ್ರಳಯಾಂತಕ ಪ್ರಣಾಳಶಿಶು ಬಂದು ತಲುಪಿದೆ. ಅದಕ್ಕೊಂದು ಗುದ್ದು ನೀಡಲಾಗಿದೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post