ಬೊಗಳೆ ರಗಳೆ

header ads

ಪಕ್ಷದಲ್ಲಿ ಕೀಳ್ಯಾವುದೋ... ಹುಚ್ಚಪ್ಪಾ...!

(ಬೊಗಳೂರು ಕುಲಗೆಡಿಸುವ ಬ್ಯುರೋದಿಂದ)

ಬೊಗಳೂರು, ಏ.29- ಯಾವ ಪರಿಯೆಲ್ಲಾ ಕುಲಗೆಡಿಸಬಹುದೋ, ಆ ಮಾದರಿಯಲ್ಲಿ ಗಬ್ಬೆದ್ದು ನಾದುತ್ತಾ ಇರುವ "ಕರುನಾಟಕ ರಾಜಕೀಯ"ವೆಂಬ ಹುಲುಸಾಗಿ ಬೆಳೆ ತೆಗೆಯಬಹುದಾದ ಕಾಳ ಸಂತೆಯಲ್ಲಿ ಟಿಕೆಟ್ ಮಾರುತ್ತಿದ್ದ ಬೊಗಳೂರಿನ ಬಹು ಗೌರವಾನ್ವಿತ ರಾವಣ, ರಾಸಂಧ, ಕೀಚಕ, ಮರಾಜರನ್ನು ಬಂಧಿಸಿದ್ದೇ ಅಸತ್ಯಾನ್ವೇಷಿ ಬೊಗಳೂರಿನಿಂದ ನಾಪತ್ತೆಯಾಗುವುದಕ್ಕೆ ಪ್ರಧಾನ ಕಾರಣ ಎಂದು ಪತ್ತೆಯಾಗಿದೆ.

ಇಲ್ಲಿ ಯಾವುದೇ ಪಕ್ಷದ ಹಾಗೂ ಯಾವುದೋ ಪಕ್ಷದ ಟಿಕೆಟ್‌ಗಳು ಕೂಡ ಸಿದ್ಧವಿದೆ. ಒಂದು ಕಂಡಿಷನ್ ಮತ್ತು ಏಕಮಾತ್ರ ಅರ್ಹತೆಯೆಂದರೆ ಐಪಿಎಲ್ ಪಾಲಿಸಿ. ಅಂದರೆ ಐಪಿಎಲ್ ಎಂಬ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಬೇಕೆಂದು ಅರ್ಥವಲ್ಲ. ಐಪಿಎಲ್ ನೀತಿ. ಏನೇ ಆಗಬೇಕಿದ್ದರೂ ಹಣ ಝಣ ಝಣ. ಕುಲದಲ್ಲಿ ಕೀಳ್ಯಾವುದೋ... ಹುಚ್ಚಪ್ಪ ಎಂಬ ಹಾಡು ನೆನಪಾಗಿದ್ದು ಇದೇ ಕಾರಣಕ್ಕೆ. ಹಣದ ಎದುರು ಪಕ್ಷನಿಷ್ಠೆ, ತತ್ವ, ಸಿದ್ಧಾಂತ, ಜನಸೇವಾ ತುಡಿತ ಇವೆಲ್ಲಾ ನಿರ್ದಾಕ್ಷಿಣ್ಯವಾಗಿ ಮಾಯವಾಗುವುದರಿಂದಾಗಿ ಪಕ್ಷದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಎಂಬ ಹಾಡು ಬೀದಿ ಬೀದಿಯಲ್ಲಿ ಕೇಳಿಬರುತ್ತಿದೆ. ಐಪಿಎಲ್‌ನ ತಂಡವೊಂದರ ಹೆಸರು ಹೇಳಲು ಹಣ, ಆ ತಂಡದಲ್ಲಿದ್ದ ಒಬ್ಬ ಕ್ರಿಕೆಟಿಗನ ಹೆಸರು ಹೇಳಬೇಕಿದ್ದರೆ ಹಣ, ಆ ಆಟಗಾರ ಒಂದು ರನ್ನು ತೆಗೆದರೆ ಹಣ, ಚೆಂಡು ಮುಟ್ಟಿದರೆ ಹಣ, ಅವರು ಏನು ಮಾಡಿದರು, ಎಷ್ಟು ಚಚ್ಚಿದರು, ಚಚ್ಚಿಸಿಕೊಂಡರು ಎಂಬುದನ್ನು ಬೊಗಳೆಯಂತಹಾ ಪತ್ರಿಕೆಗಳಲ್ಲಿ ಬರೆಯಬೇಕಿದ್ದರೂ ಹಣ.... ಝಣ... ಝಣ....

ಇದೇ ಪಾಲಿಸಿಯನ್ನು ಈ ರಂಗು ರಂಗಿನ ಚುನಾವಣಾ ಕಣದಲ್ಲೂ ಅನುಸರಿಸಲು ನಿರ್ಧರಿಸಲಾಗಿದ್ದು, ಹೈಯೆಸ್ಟ್ ಬಿಡ್ಡು ಸಲ್ಲಿಸಿ ದುಡ್ಡು ಕಳೆದುಕೊಂಡವರಿಗೆ ಮಣೆ. ಈ ಪಕ್ಷದಲ್ಲಿ ಟಿಕೆಟ್ ಸಿಗದೆ ಬೇರೆ ಪಕ್ಷದ ಟಿಕೆಟ್ ಸಿಗಬೇಕಿದ್ದರೆ ಆ ಪಕ್ಷಕ್ಕೆ ದುಪ್ಪಟ್ಟು ಹಣ. ಈ ಪಕ್ಷಕ್ಕಾದರೆ ಇಂತಿಷ್ಟು, ಹೇಳ ಹೆಸರಿಲ್ಲದ ಪಕ್ಷಕ್ಕಾದರೆ ಅತಿ ಕಡಿಮೆ. ಎಲ್ಲಾ ಬಿಟ್ಟು ನಿಮ್ಮದೇ ಸ್ವಂತ ಪಕ್ಷ ಕಟ್ಟಿ ಚುನಾವಣೆಗೆ ಸ್ಪರ್ಧಿಸುತ್ತೀರೆಂದಾದರೆ, ಅದಕ್ಕೆ ನಾಮಿನಲ್ ಹಣ ಕೊಟ್ಟರಾಯಿತು.

ಕೊಟ್ಟ ಕೊನೆಗೆ, ನಮ್ಮ ಬ್ಯುರೋದಲ್ಲಿರುವ ಭಾವಚಿತ್ರವನ್ನು ಹೋಲುವವರಂತೆ ಟಿಕೆಟಿಗಾಗಿ ಮರದಿಂದ ಮರಕ್ಕೆ ಹಾರುವ ಪಂಗಡಕ್ಕೆ ಸೇರಿದವರು, ತಮ್ಮ ಕೈಯಲ್ಲಿರೋದು ಯಾವ ಪಕ್ಷದ ಟಿಕೆಟ್, ತಾವು ಯಾವ ಪಕ್ಷಗಳ ಬಾಗಿಲನ್ನೆಲ್ಲಾ ಬಡಿದೆವು, ನಿಜವಾಗಿ ತಾವು ಸ್ಪರ್ಧಿಸಬೇಕಿರುವ ಪಕ್ಷ ಯಾವುದು, ಯಾವ ಪಕ್ಷವನ್ನು ಸೋಲಿಸಬೇಕು ಎಂಬಿತ್ಯಾದಿಗಳನ್ನು ನೆನಪಿಸಿಕೊಳ್ಳಲು ಹತ್ತು ಹಲವಾರು ಸೆಕ್ರೆಟರಿಗಳನ್ನು ಇರಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿರುವುದಾಗಿ ನಮ್ಮ ವರದ್ದಿಗಾರರು ಒದರಿದ್ದಾರೆ.

ಒಟ್ಟಿನಲ್ಲಿ ಟಿಕೆಟ್ ಪಟ್ಟಿ ಬಿಡುಗಡೆ ಎಂಬುದು ಕಪ್ಪೆಗಳನ್ನು ತಕ್ಕಡಿಯಲ್ಲಿಟ್ಟು ತೂಗಿದಂತಹಾ ಸನ್ನಿವೇಶವನ್ನು ಸೃಷ್ಟಿಸಿದ್ದು, ಕರ್ನಾಟಕದ ಮತದಾರರಂತೂ ಟಿಕೆಟಿಲ್ಲದೆಯೇ ಮನರಂಜನೆ ಅನುಭವಿಸುತ್ತಿದ್ದಾರೆ.

ವಿ.ಸೂ.: ಇಂಥದ್ದೇ ಸಾಕಷ್ಟು ಮನರಂಜನಾ ಚಟುವಟಿಕೆಗಳನ್ನು ಸವಿಯುವುದಕ್ಕಾಗಿ ಬೊಗಳೂರಿನ ಕೆಲಸವಿಲ್ಲದ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು, ರಜಾ ಕಾಲದ ಪ್ರವಾಸಕ್ಕಾಗಿ ಬೊಗಳೂರಿಗೇ ರಜೆ ಸಾರಿದ್ದು, ಬೊಗಳೂರಿನಲ್ಲಿ ಶೋಕಾಚರಣೆ ನಡೆದಿತ್ತು. ಇಷ್ಟು ದಿನಗಳ ಕಾಲ ದುಡ್ಡು ಕೊಟ್ಟವರಿಗೆ ಮಾತ್ರವೇ ಪತ್ರಿಕೆ ಸರಬರಾಜು ಮಾಡಲಾಗುತ್ತಿತ್ತು ಎಂಬುದನ್ನು ನಾವು ಯಾರಿಗೂ ಜ್ಞಾಪಿಸಲು ಇಚ್ಛಿಸುವುದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಅನ್ವೇಷಿಗಳೇ! ಎಲ್ಲಿ ಹೋಗ್ಬಿಟ್ಟಿದ್ರಿ. ನಿಮ್ಮಂತಹ ನಾಯಕರುಗಳಿಲ್ಲದೇ ದೇಶ ಅತಂತ್ರವಾಗುತ್ತಿದೆ ಎಂದು ಹೇಳಲು ನಾಚಿಕೊಳ್ಳುತ್ತಿದ್ದೇವೆ

    ನೋಡಿ, ನೀವು ಗೇಟಿನ ಮುಂದೆ ಇರ್ಲಿಲ್ವಾ? ಇಲ್ಲಿ ನಾಯಿ ನರಿ ಬೆಕ್ಕು ಕಾಗೆ ಮತ್ತಿತರೇ ಚಿತ್ರ ವಿಚಿತ್ರ ಪ್ರಾಣಿಗಳೆಲ್ಲಾ ಬಂದು ಕೂಗಾಡಿ, ಹೊಲಸು ಮಾಡಿ ಹೋಗಿವೆ. ಬೇಗ ಶುಚಿ ಮಾಡಿಸಿ (ನಾನು ಬರ್ತಿದ್ದೀನಿ :P)

    ಅಂದ ಹಾಗೆ ನಿಮ್ಮ ಪತ್ರಿಕೆ ಒಂದು ವಾರ ನಿಂತು ಹೋಗಿದ್ದರಿಂದ, ನಮ್ಮ ಪತ್ರಿಕೆಗೆ ಬೆಲೆ ಹೆಚ್ಚಾಗಿತ್ತು ಅಂತ ಹೇಳಿಕೊಳ್ಳಲು ನಾನು ಇಚ್ಛಿಸೋಲ್ಲ. ಏನೋ ಬರೋ ವನಮಾರದಲ್ಲಿ ಅರ್ಧ ನಿಮ್ಮವರಿಗೆ ತಲುಪಿಸುವೆ

    ಇರಲಿ, ಮತ್ತೆ ಹೀಗೆಲ್ಲಾ ಹೇಳದೇ ಕೇಳದೇ ಓಡಿ ಹೋಗಬೇಡಿ - ಆಯ್ತಾ?

    ಪ್ರತ್ಯುತ್ತರಅಳಿಸಿ
  2. ಶ್ರೀನಿವಾಸರೆ,
    ನಮ್ಮಂತಹ ನಾಯಿ-ಕರುಗಳಿಂದಾಗಿಯೇ ದೇಶವು ಅಲ್ಲಲ್ಲ... ಸ್ವಂತ ಕಿಸೆಗಳು ಇಷ್ಟೊಂದು ಸುಭಿಕ್ಷವಾಗಿರೋದು. ಅದಕ್ಕಾಗಿಯೇ ಒಂದಷ್ಟು ಸಂಪಾದನೆ ಮಾಡೋಣಾಂತ ಹೊರಟಿದ್ದು...

    ಗೇಟೆಲ್ಲಾ ಹೊಲಸಾಗಿದೆ... ಗಬ್ಬೆದ್ದು ಹೋಗಿದೆ... ಅಲ್ಲಿಂದಲೇ ನೀರು ಹಾಕಿ ಗುಡಿಸಿ ಸಾರಿಸಿಬಿಡಿ....

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D