(ಬೊಗಳೂರು ಚುನಾವಣಾ ಬ್ಯುರೋದಿಂದ)
ಬೊಗಳೂರು, ಏ.17- ಆಕಸ್ಮಿಕವಾಗಿ ಬೊಗಳೂರು ಚುನಾವಣಾ ಬ್ಯುರೋದಿಂದ ಚುನಾವಣಾ ಪ್ರಣಾಳಶಿಶುವನ್ನು ಬೇರೆಯವರ ಮೊದಲೇ ಬಿಡುಗಡೆಗೊಳಿಸಲಾಗಿದ್ದು, ಬೊ.ರ. ವಿರೋಧಿಸುವ ಪತ್ರಿಕೆಗಳು ಪ್ರಕಟಿಸುವ ಮುನ್ನವೇ ಇದನ್ನು ಪ್ರಕಟಿಸುವಂತೆ ಸೊಂಪಾದಕರು ತಲೆಕೆಡಿಸಿಕೊಂಡಿರುವಂತೆಯೇ ಕಿರಿಕಿರಿಯ ಉಪಸಂಪಾದಕರು ಪಬ್ಲಿಷ್ ಮಾಡಿದ್ದಾರೆ.

ಸೂಚನೆ: ಆದರೆ ಕೆಲವು ಮಾಹಿತಿಗಳ ಪ್ರಕಾರ, ಇದು ನಮ್ಮ ವಿರೋಧಿ ಪತ್ರಿಕೆಗಳಿಗೆ, ಅಂದರೆ ನಮ್ಮನ್ನು ವಿರೋಧಿಸುವ ಪತ್ರಿಕೆಗಳಿಗೆ ನೀಡಲೆಂದು ಜಗತ್ತಿನ ಹೆಸರಾಂತ ಪಕ್ಷವು ಸಿದ್ಧಪಡಿಸಿರುವ ಜಾಹೀರಾತು. ಈ ಜಾಹೀರಾತನ್ನು ಅವರೆಲ್ಲರಿಗಿಂತ ಮುನ್ನವೇ ಪ್ರಕಟಿಸಬೇಕೆಂಬ ತರಾತುರಿಯಲ್ಲಿ ಬೊ.ರ. ಬ್ಯುರೋ ಕದ್ದು ತಂದು ಇಲ್ಲಿ ಪ್ರಕಟಿಸಿದೆ. ಕೆಲಸವಿಲ್ಲದ ಬ್ಯುರೋದ ಅಸಾಧ್ಯ ಶ್ರೀಮಾನ್ ಶ್ಶೀ ಶ್ಶೀ ಶ್ಶೀ ಅನ್ವೇಷಿಯೇ ಚುನಾವಣೆಗೆ ನಿಲ್ಲುತ್ತಿದ್ದಾರೆಯೇ ಎಂಬ ಬಗ್ಗೆ ತಪ್ಪು ತಿಳಿದುಕೊಳ್ಳಬೇಕಾಗಿಲ್ಲ.

ಪ್ರಣಾಳಿಕೆಯ ಪ್ರಣಾಳಶಿಶುವಿನ ಅಂಶಗಳು ಇಂತಿವೆ:

ಮಾನವ ಮತದಾರ ಬಂಧುಗಳೇ,

ಆದರದಿಂದಲೇ ಮತ ನೀಡುವ ಮತದಾರ ಬಂಧುಗಳ ಮತಗಳೇ ನಮಗೆ ಆಧಾರ.

ನಾವು ನಿಮಗೆ ಜುಷ್sssss ಎಂದು ಹೊಗೆ ಬಂದಂತೆ ಸದ್ದು ಮಾಡುವ, ಬಣ್ಣ ಬಣ್ಣದ ಟೀವಿ ಕೊಡುತ್ತೇವೆ, 2 ರೂಪಾಯಿಗೆ ಮೂರು ಕಾಸಿನ ಅಕ್ಕಿ ಕೊಡುತ್ತೇವೆ, ಹಚ್ಚ ಹಸಿರಾಗಿರೋ ಕೆಲಸಕ್ಕೆ ಬಾರದ ಕಾರ್ಡು ಕೊಡುತ್ತೇವೆ. ಇವೆಲ್ಲವೂ ನಿಮಗಾಗಿ ಉಚಿತ. ಇದು ಖಚಿತ. ನಮ್ಮನ್ನು ದಯವಿಟ್ಟು ನಂಬಿ. ಆದರೆ ನೀವು ನೀಡಬೇಕಿರುವುದು ಕೇವಲ ಒಂದು ಮತ ಮಾತ್ರ. ಏನೂ ಮಾಡ್ಬೇಕಾಗಿಲ್ಲ, ನಿಮ್ಮ ತೋರು ಬೆರಳನ್ನು ನಮ್ಮ ಪಕ್ಷದ ಚಿಹ್ನೆ ಇರುವ ಪಕ್ಕದ ಗುಂಡಿಗೆ ಒತ್ತಿದರಾಯಿತು. ಅಲ್ಲಿಗೆ ನೀವು ಗುಂಡಿಗೆ ಬಿದ್ದಂತೆಯೇ ಸೈ.

ಈ ಮೇಲೆ ಹೇಳಿದ್ದೆಲ್ಲವನ್ನೂ ನೀವು ಸಂಪಾದಿಸಬೇಕಿದ್ದರೆ, ನಮ್ಮವರಿಗೆ, ನಮ್ಮ ಪಕ್ಷದವರಿಗೆ, ಅಧಿಕಾರಿಗಳಿಗೆ ಒಂದಷ್ಟು ಆಗಾಗ್ಗೆ ಕೊಡಲೆಂದು ನೀವು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದರಾಯಿತು. ಬೇರೇನೂ ಕೆಲಸವೇ ಮಾಡಬೇಕಾಗಿಲ್ಲ.
ಈ ಎಲ್ಲಾ ಫ್ರೀ-ಬೀಗಳಿಗೆ ಒಂದೊಂದು ಕಂಡಿಷನ್ನನ್ನೂ ನಾವು ಇಡುತ್ತಿದ್ದೇವೆ. ನೀವು ನಮಗೇ ಓಟು ಹಾಕಿದ್ದೂಂತ ತೋರಿಸೋದಿಕ್ಕೆ ದಾಖಲೆ ಪತ್ರಗಳನ್ನು ತಾಲೂಕು ಕಚೇರಿಯಿಂದ ಪಡೆದುಕೊಳ್ಳಬೇಕು. ಅದಕ್ಕಾಗುವ ಖರ್ಚುವೆಚ್ಚಗಳನ್ನು ಬೇಕಿದ್ದರೆ ನೀವೇ ಭರಿಸಿಕೊಳ್ಳಿ. ಇಲ್ಲವಾದಲ್ಲಿ ನಮಗೆ ನಷ್ಟವಿಲ್ಲ.

ಇನ್ನು, ಇದು ಮಾತ್ರವೇ ಅಲ್ಲ. ನಾವು ಇನ್ನಷ್ಟು ಕೊಡುಗೆಗಳ ಆಮಿಷವನ್ನು ಕೂಡ ಒಡ್ಡುತ್ತೇವೆ. ಯಾಕೆಂದರೆ, ಈಗ ಒಡ್ಡದಿದ್ದರೆ ನಮ್ಮ ಎದುರಾಳಿ ಪಕ್ಷದವರು ಏನಾದರೂ ಘೋಷಿಸಿದರೆ? ಅದಕ್ಕಾಗಿ ಮುನ್ನೆಚ್ಚರಿಕೆಯಿದು.

ಮತದಾರನಿಗೆ ಲಂಚ ನೀಡುವ ಆಮಿಷವನ್ನಂತೂ ನಾವು ನೀಡುತ್ತಿಲ್ಲ. ಇದು ನಮ್ಮ ಉದ್ಧಾರಕ್ಕೆ ಉದಾರ ಕೊಡುಗೆ. ಅವುಗಳು ಇಂತಿವೆ:

* ಮತದಾರನಿಗೆ 12 ರೂ. ಬದಲು 11 ರೂಪಾಯಿಯಲ್ಲಿ ಬಾಟಲಿ ನೀರು.

* ನೀರು ಇಷ್ಟವಾಗದವರಿಗೆ (ನೀರಿನ ತೀವ್ರ ಅಭಾವವಿರುವುದರಿಂದ) ಚುನಾವಣೆ ಸಂದರ್ಭ ಹಿಂಬಾಗಿಲಲ್ಲಿ ಬಂದರೆ ಭರಪೂರ ಉಚಿತ ಸಾರಾಯಿ.

* ರಾಜ್ಯದ ಆರ್ಥಿಕತೆಗೆ ಧಕ್ಕೆಯಾಗುವ ಕಾರಣದಿಂದಾಗಿ ಸಾರಾಯಿ, ಲಾಟರಿ, ಜೂಜು ಇತ್ಯಾದಿಗಳ ಮೇಲಿನ ನಿರ್ಬಂಧ ಹಿಂತೆಗೆತ.

* ಯಾವುದೇ ಸೌಲಭ್ಯಲ್ಲದ, ತೀರಾ ಹಿಂದುಳಿದ ಹಳ್ಳಿಗಳಿಗೆ ಕಲರ್ ಟಿವಿ. ಇದನ್ನು ಕೊಡಲು ಪ್ರಮುಖ ಕಾರಣವೆಂದರೆ ಕಲರ್ ಟೀವಿ ತರಬೇಕಿದ್ದರೆ ಅಲ್ಲಿಗೆ ರಸ್ತೆಯಾಗಬೇಕು, ಅದನ್ನು ನೋಡಬೇಕಿದ್ದರೆ ಕರೆಂಟು ಬೇಕು. ನಾವು ಇಲ್ಲಿಂದ ಎಷ್ಟರವರೆಗೆ ಆರಿಸಿಬರುತ್ತೇವೋ ಅಷ್ಟರವರೆಗೆ ರಸ್ತೆ, ಕರೆಂಟು ಇತ್ಯಾದಿ ವ್ಯವಸ್ಥೆ ಆಗುವುದು ಸಾಧ್ಯವಿಲ್ಲ. ಹೀಗಾಗಿ ಕಲರ್ ಟೀವಿಯನ್ನು ಕೊಂಡು ರಾಶಿ ಹಾಕುತ್ತೇವೆ. ಹರಾಜು ಕೂಡ ಹಾಕುತ್ತೇವೆ.

* ಹಳ್ಳಿ ಹಳ್ಳಿಗೂ ಇಂಟರ್ನೆಟ್ ಪ್ರಸಾರವಾಗಬೇಕು, ಅಲ್ಲಿನವರೂ ಬೊಗಳೆ ರಗಳೆ ಓದಬೇಕು ಎಂಬ ಉದ್ದೇಶದೊಂದಿಗೆ ಮನೆಗೊಂದು ಇಂಟರ್ನೆಟ್ ಸೌಲಭ್ಯ.

* ಹಳ್ಳಿ ಹೈದರು ಕೂಡ ಪೇಟೆಗೆ ಹೋಗುವ ಮುನ್ನವೇ ಮೊಬೈಲ್‌ನಲ್ಲಿ ಎಸ್ಎಂಎಸ್ ಫಾರ್ವರ್ಡ್ ಮಾಡೋದು ಕಲಿತುಕೊಂಡು ಪೇಟೆ ಬದುಕಿಗೆ ಸರ್ವ ರೀತಿಯಲ್ಲೂ ಸಜ್ಜಾಗುವಂತಾಗಲು, ಮನೆಗೊಂದು ಮೊಬೈಲ್ ಫೋನ್. ಮೊಬೈಲ್ ಫೋನ್ ಸೆಟ್‌ಗಳ ಕೊರತೆಯಾದರೆ, ಈಗಾಗಲೇ ರಿಂಗ್ ಆಗದಿರುವ, ಹಾಳಾಗಿರುವ, ಕನೆಕ್ಷನ್ನೇ ಇಲ್ಲದ, ಪಿರಿಪಿರಿ ಸದ್ದು ಮಾಡುವ ಲ್ಯಾಂಡ್‌ಲೈನ್ ಫೋನ್‌ಗಳನ್ನೇ ಕೈಯಲ್ಲಿ ಹಿಡಿದುಕೊಂಡು ತಿರುಗಾಡಿದರೆ, ಅದು ಮೊಬೈಲ್ ಫೋನ್ ಅಂತ ಭಾವಿಸಬಹುದು.

* ಅಗ್ಗದ ದರದಲ್ಲಿ ಪೆಪ್ಸಿ ಕೋಲಾ ಪೂರೈಕೆ. ಮನೆಮನೆಗೂ ನೀರು ವಿತರಿಸುವ ಟ್ಯಾಂಕರಿನಲ್ಲಿ ಪೆಪ್ಸಿ ಕೋಲಾ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ನೀರು ಬಾರದಿದ್ದರೂ ಪೆಪ್ಸಿಯಲ್ಲೇ ಜೀವನ ಸಾಗಿಸುವುದು ಇದರಿಂದ ಸುಲಭವಾದೀತು.

* ಗ್ರಾಮ ಪ್ರದೇಶದಲ್ಲಿ ಗುಡಿಸಲು (hut) ವಾಸ ಮಾಡಬೇಕಾಗಿ ಬಂದಾಗ ಐಷಾರಾಮಿ ಜೀವನಕ್ಕೆ ಕೊರತೆಯಾಗುತ್ತದೆ ಎಂಬ ಕಾರಣಕ್ಕೆ ಅಲ್ಲಲ್ಲಿ ಪಿಜ್ಜಾ ಹಟ್‌ಗಳ ಸ್ಥಾಪನೆ. ರೊಟ್ಟಿ ಮಾಡಿ ಹೊಟ್ಟೆ ಗಟ್ಟಿ ಮಾಡಿಕೊಳ್ಳಲು ಜನರು ತೀರಾ ಬಡವರಾಗಿರುವುದರಿಂದ, ಸಿಟಿಗಳ ಮೂಲೆ ಮೂಲೆಗಳಲ್ಲಿ ನಾಯಿಕೊಡೆಯಂತೆ ಹುಟ್ಟಿಕೊಂಡಿರುವ ಪಿಜ್ಜಾ ಹಟ್ಟುಗಳನ್ನು ಗ್ರಾಮ ಪ್ರದೇಶದಲ್ಲಿ ಸ್ಥಾಪಿಸುವುದು.

* ಮೊನ್ನೆ ಯಾರೋ ಟೀವಿ ಕೊಡುವುದಾಗಿ ಠೀವಿಯಿಂದಲೇ ಘೋಷಿಸಿ, ತಮ್ಮ ಓಟಿನ ಬ್ಯಾಂಕನ್ನು ಪೋಷಿಸಿಕೊಂಡಿದ್ದಾರೆ. ನಾವು ಹಳಸಲು ತಿನ್ನುವಂತಾಗಲು ಫ್ರಿಜ್ಜು, ಬಟ್ಟೆ ಹರಿದುಹೋಗಲು ವಾಷಿಂಗುಮೆಷಿನು, ಪೆಟ್ರೋಲ್ ಬೆಲೆ ಏರುತ್ತಲೇ ಇರುವುದರಿಂದ ಕನಿಷ್ಠ ಪಕ್ಷ ತಳ್ಳಾಟಕ್ಕೂ ಸಹಾಯವಾಗುವ ಪುಟ್ಟ ನ್ಯಾನೋ ಕಾರು, ಕರೆಂಟಿಲ್ಲದೇ ಓಡದ ಮಿಕ್ಸಿ ಎಲ್ಲಾ ಕೊಡುತ್ತೇವೆ.

* ಗ್ರಾಮೀಣ ರಸ್ತೆಗಳು ಕುಲಗೆಟ್ಟು, ಅಲ್ಲಲ್ಲಿ ಹೊಂಡಾಗುಂಡಿ ಎದ್ದು, ಹೆಂಡ್ಕುಡುಕರಿಗೆ ಓಡಾಟಕ್ಕೂ ತಡೆಯಾಗಿದ್ದು, ಈಗ ಅದು ಬಹುತೇಕ ಪಟ್ಟಣದ ರಸ್ತೆಗಳನ್ನೇ ಹೋಲುತ್ತದೆ. ಹೀಗಾಗಿ ಈ ರಸ್ತೆಗಳಲ್ಲಿ ಓಡಾಡಿ ಕೈಕಾಲು ಮುರಿದುಕೊಳ್ಳುವ ಬದಲಿಗೆ ಎಲ್ಲರೂ ವಿಮಾನದಲ್ಲಿ, ರೈಲಿನಲ್ಲಿ ಓಡಾಡುವಂತಾಗಲು, ಹಳ್ಳಿ ಹಳ್ಳಿಯಲ್ಲಿ ಶಟ್ಲ್ ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣಗಳ ಸ್ಥಾಪನೆ.

10 Comments

ಏನಾದ್ರೂ ಹೇಳ್ರಪಾ :-D

 1. bhari nagistiri neevu, thanks nimma commentige

  ReplyDelete
 2. ರೀ ಅಸತ್ಯಿಗಳೆ,
  ಎಷ್ಟು ಕಣ್ಣು ಕುಕ್ಕುವಂತಹ ಪ್ರಣಾಳಶಿಶುವನ್ನು ಹೆತ್ತಿದ್ದೀರಲ್ಲ! ಬಾಯಿ ತೆರೆದರೆ ಪೂರಾ ಬೊಗಳೇನೆ ಬಿಡುತ್ತದಲ್ರೀ, ಈಗಿಂದನೇ!
  ನಮ್ಮ ವಾರ್ಡಿನಲ್ಲಿರುವ ಒಂದುಸಾವಿರ ಮತದಾರರ ಎರಡು ಸಾವಿರ ಮತಗಳನ್ನು ನಿಮಗೇ ಹಾಕಿಸುವದಾಗಿ ಈ ಮೂಲಕ ಸುಳ್ಳು ಆಶ್ವಾಸನೆಯೊಂದನ್ನು ನಿಮಗೆ ನೀಡುತ್ತಿದ್ದೇನೆ.

  ReplyDelete
 3. ಅಖಿಲ ಭಾರತ ಕಳ್ಳ ಖದೀಮರ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಕದ್ದು, ಕೆಲವನ್ನು ಇಲ್ಲಿ ತುರುಕಿದ್ದೀರಿ. ಇದಕ್ಕೆ ಸ್ಪೂರ್ತಿ ಡಿ.ಎಂ.ಕೆ(ದರಿದ್ರ ಮಹಾ ಕೊಂಗ) ಪಕ್ಷದ ಕಚಡಾನಿಧಿಯೇ? ಅಥವಾ "ಗೂಬಾ" ಚಿತ್ರದ ನಾಯಕ ಮಜನೀಕಾಂತನೇ?

  ReplyDelete
 4. ನಂ ಓಟೂ ನಿಮ್ಗೆ!

  ReplyDelete
 5. ಅನ್ವೇಶಿಗಳೇ, ನನ್ನನ್ನು ನಿಮ್ಮ ಬುಟ್ಟಿಗೆ ಅಲ್ಲ, ಪಟ್ಟಿಗೆ ಹಾಕಿಕೊಳ್ಳಿ

  ReplyDelete
 6. ಆಟೋ ರಾಣಿಯವರೆ,

  ಸ್ವಾಗತ
  ನಿಮ್ಮ ಆಟೋ ಬೊಗಳೂರಿಗೂ ಬಂದಿದ್ದು ಕೇಳಿ ಹೆದರಿಕೆಯಾಗಿದೆ. ಬರ್ತಾ ಇರಿ.

  ReplyDelete
 7. ಸುನಾಥರೆ,
  ಬಾಯಿ ತೆರೆದರೆ ಪೂರಾ ಬೊಗಳೆ ಬಿಡೋ ಸಾವಿರಾರು ಪ್ರಣಾಳಶಿಶುಗಳು ಈಗಾಗಲೇ ಕರುನಾಟಕದ ಬೀದಿ ಬೀದಿಯಲ್ಲಿ, ಓಣಿ ಓಣಿಯಲ್ಲಿ ಓಡಾಡುತ್ತಿವೆ.

  ನಿಮ್ಮ ಆಶ್ವಾಸನೆಯಿಂದ ತೃಪ್ತಿಯಾಗಲಿಲ್ಲ. ಒಂದು ಸಾವಿರ ಮತದಾರರ ಮುಕ್ಕೋಟಿ ಮತಗಳನ್ನು ಕೊಟ್ಟರೆ ಮಾತ್ರವೇ ನಾವು ಖಜಾನೆ ಮುಕ್ಕುತ್ತೇವೆ.

  ReplyDelete
 8. ಗುರುಪ್ರಸಾದ್ ಅವರೆ,

  ನಮಗೆಲ್ಲಾ ಸ್ಫೂರ್ತಿ ಎಂದರೆ ಸತ್ತರೂ ರಾಜಕೀಯ ಬಿಡದ ಕೇಡಿಯೇ ಪಕ್ಷದ ಮಾನಹರಣ ನಿಧಿ ಅಂತ ಸ್ಪಷ್ಟಪಡಿಸುತ್ತಿದ್ದೇವೆ.

  ReplyDelete
 9. ನೀಲಗಿರಿಯವರೆ,

  ನಿಮ್ಮ ಒಂದು ಓಟು ಬಂತು... ನೋಟು ಎಲ್ಲಿ?

  ReplyDelete
 10. ಮೂಕ ಹಕ್ಕಿ,

  ನಿಮ್ಮನ್ನು ಹಿಡಿದು ನಮ್ಮ ಪಂಜರದಲ್ಲಿ ಇಟ್ಟುಕೊಂಡಿದ್ದೇವೆ.

  ಬರುತ್ತಾ ಇರಿ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post