(ಈ ಸುದ್ದಿ ನಮ್ಮಲ್ಲಿ ಮಾತ್ರ)
ಬೊಗಳೂರು, ಮಾ.25- ಜನಸಾಮಾನ್ಯನಿಗೂ atleast ದನ ಸಾಮಾನ್ಯರಂತೆ ಬದುಕಲು ಅಗತ್ಯವಿರುವ ಆಹಾರ ಧಾನ್ಯಗಳ ಬೆಲೆ ಏರಿಕೆಗೆ ಕೇಂದ್ರ ಸರಕಾರವು ಕೈಗೊಳ್ಳುತ್ತಿರುವ ಕ್ರಮದ ಹಿಂದಿನ ರಹಸ್ಯ ಬಯಲಾಗಿದೆ.

ಇದು ಬಯಲಾಗಿದ್ದು, ನಮ್ಮ ರದ್ದಿಗಾರರು ತಲೆಮರೆಸಿಕೊಂಡು ನಿಧಾನಮಂತ್ರಿಯನ್ನು ಸಂದರ್ಶಿಸಿದ್ದರಿಂದಾಗಿ. ತರಕಾರಿ, ಅನ್ನಾಹಾರ ಬೆಲೆ ಏರಿಕೆ ಬಗ್ಗೆ ಆರಂಭಿಕ ಮಾಹಿತಿ ಕಲೆ ಹಾಕಿಯೇ ನಮ್ಮ ಒದರಿಗಾರರು ನಿಧಾನಿಕಚೇರಿಗೆ ನುಗ್ಗಿದ್ದರು.

ಆಗ ತಿಳಿದುಬಂದ ಅಂಶ: ಪೆಟ್ರೋಲ್, ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳದಂತಾಗಲು ಅವುಗಳ ಬೆಲೆ ಏರಿಕೆ ಮಾಡಲಾಗಿದೆ. ಅಂತೆಯೇ ನಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗಾಗಿ ಕೂಡಿಡುವ ಸಲುವಾಗಿಯೇ ಆಹಾರ ಪದಾರ್ಥಗಳನ್ನು ಕೂಡ ಕೈಗೆಟುಕದಷ್ಟು ಮೇಲಕ್ಕೆ ಇರಿಸಲಾಗಿದೆ. ರೈತರು ವಿಷ ಕುಡಿದು ಸಾಯದಂತಾಗಲು, ಔಷಧಗಳ ಬೆಲೆಯನ್ನೂ ಏರಿಸಲಾಗಿದೆ. ಹೆಚ್ಚು ಸಕ್ಕರೆ, ಬೆಲ್ಲ ಸೇವಿಸಿದರೆ ಸಿಹಿಮೂತ್ರ ಹೆಚ್ಚು ಪ್ರವಹಿಸಿ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಗಳಿರುವುದರಿಂದ ಅವುಗಳನ್ನು ಮೂಸಿಯೂ ನೋಡದಂತಾಗಲು ಬೆಲೆಗಳನ್ನು ಆಗಸಕ್ಕೆ ಏರಿಸಲಾಗಿದೆ ಎಂದು ನಿಧಾನಮಂತ್ರಿ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ಈ ಬಗ್ಗೆ ನಿಧಾನಮಂತ್ರಿಯವರನ್ನು ಸಂದರ್ಶನಕ್ಕೊಳಪಡಿಸಿದಾಗ ಅವರು ಮೊದಲಿಗೆ ಬೆದರುತ್ತಾ ನಿರುತ್ತರರಾದರೂ, ಹಣಗೊಬ್ಬರ ದರ ಹಣಗೊಬ್ಬರ ದರ ಎಂಬೆರಡು ಶಬ್ದಗಳು ಎರಡು ಬಾರಿ ತಡಬಡಿಸುತ್ತಾ ಅಚಾನಕ್ ಆಗಿ ಉದುರಿದರೂ, ಆ ಬಳಿಕ ಮೇಡಂ ಕಡೆಗೆ ದಯನೀಯವಾಗಿ ನೋಡಿದಾಗ, ಆಕೆ ಕ್ಯಾಕರಿಸಿ ನೋಡುತ್ತಲೇ... ಒಲ್ಲದ ಅನುಮತಿಯ ಸಂಜ್ಞೆ ನೀಡಿದಾಗ, ಕೊನೆಗೂ ಅವರು ವರದ್ದಿಗಾರರೆದುರು ಸ್ವಲ್ಪವೇ ಬಾಯಿ ತೆರೆಯುವಲ್ಲಿ ಸಫಲರಾದರು ಮತ್ತು ಪೂರ್ತಿ ಬಾಯಿ ತೆರೆಯಲು ವಿಫಲರೂ ಆದರು ಎಂಬುದನ್ನು ನಮ್ಮ ಪ್ರತಿನಿಧಿ ಪತ್ತೆ ಹಚ್ಚಿ ವರದಿ ಮಾಡಿದ್ದಾರೆ.

ಇಷ್ಟು ವರ್ಷಗಳಿಂದ ಆಳ್ವಿಕೆ ನಡೆಸುತ್ತಿದ್ದೇವೆ, ಪ್ರತಿವರ್ಷ ಬೆಲೆ ಏರಿಸುತ್ತಲೇ ಇದ್ದೇವೆ. ಯಾರು ಕೂಡ ಬೆಲೆ ಏರಿಕೆಯನ್ನು ಹೊಗಳಲಿಲ್ಲ. ಎಡಚರು ಕೂಡ ಬೆಂಬಲ ಹಿಂತೆಗೆತ... ಹಿಂತೆಗೆತ... ಹಿಂತೆಗೆ... ಹಿಂತೆ... ಹಿಂ...ಹ್... ಎನ್ನುತ್ತಾ ತಮ್ಮ ಸದ್ದಡಗಿಸಿಕೊಳ್ಳುತ್ತಿದ್ದಾರೆ. ಆದರೂ ನಾವು ಮಾಡೋ ಈ ಸಾಧನೆಯನ್ನು ಯಾರೂ ಗುರುತಿಸುತ್ತಿಲ್ಲ ಎಂದು ತತ್ತರಿಸುತ್ತಲೇ ಉತ್ತರಿಸಿದ ಅವರು, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಎಷ್ಟು ಮುಂದುವರಿಯುತ್ತಿದೆ ಅಂತ ತಿಳಿದುಕೊಳ್ಳುವುದಕ್ಕಾಗಿಯೇ ನಾವಿದನ್ನು ಮಾಡುತ್ತಿದ್ದೇವೆ ಎಂದು ಸ್ಪಷ್ಟೀಕರಿಸಿದರು.

'ಹೇಗೆ' ಎಂದು ಮೂಗಿಗೆ ಬೆರಳಿಟ್ಟುಕೊಂಡೇ ಪ್ರಶ್ನಿಸಿದ ರದ್ದಿಗಾರರಿಗೆ ದೊರೆತ ಉತ್ತರ ಹೀಗಿತ್ತು:

'ನಾವು ಅಗ್ನಿ, ಪೃಥ್ವಿ ಮುಂತಾದ ಕ್ಷಿಪಣಿಗಳನ್ನು ಹಾಗೂ ಇನ್ಸಾಟ್ ಜಾತಿಯ ಉಪದ್ರವಗಳನ್ನು ಆಗಸಕ್ಕೆ ಹಾರಿಸಿ ಪ್ರಯೋಗ ಪರೀಕ್ಷೆ ಮಾಡಬೇಕಾಗುತ್ತದೆ. ಹೀಗಾಗಿ ದೇಶದ ಜನತೆಗೆ ಅತ್ಯಂತ ಭಾರ ಎಂದು ಕಂಡುಬರುವ ಬೆಲೆಗಳನ್ನೇ ಅದಕ್ಕೆ ಕಟ್ಟಿ ಹಾರಿಸಿ ಪ್ರಯೋಗ-ಪರೀಕ್ಷೆ ಮಾಡುತ್ತಿದ್ದೇವೆ. ಬೆಲೆ ಏರಿಕೆಯಿಂದ ಬಡತನದ ಜತೆಗೆ ಬಡವರೂ ನಿವಾರಣೆಯಾಗುತ್ತಾರೆ. ಇದರಿಂದ ಖರ್ಚು ಕಡಿಮೆಯಾಗಿ ನಮ್ಮ ದೇಶ ಸಮೃದ್ಧಿಯಾಗುತ್ತದೆ'!

2 Comments

ಏನಾದ್ರೂ ಹೇಳ್ರಪಾ :-D

  1. ತಮ್ಮ ಮಾನ್ಯ ಅತ್ತೆಮ್ಮನವರಾದ ಹಿಂದ್ರಾ ಗಾಂಧಿಯವರ ಧ್ಯೇಯವಾಗಿದ್ದ ‘ಗರೀಬಿ ಹಠಾವೋ’ವನ್ನು ಈಗಿನ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ‘ಗರೀಬೋಂಕೊ ಹಠಾವೋ’ ಎಂದು ಘೋಷಿಸಿರುವ ಸೋಯಾ ಗಾಂಧೀಜಿಯವರು ನಮ್ಮ ದೇಶದ ಬೆಲೆಯನ್ನು ಈ ಮೂಲಕ ಏರಿಕೆ ಮಾಡುತ್ತಿದ್ದೇವೆ, ನಮ್ಮ ದೇಶ ಇಟಲಿಯಾಗುವುದು ಯಾವಾಗ ಎಂದು ನಮ್ಮ ವರದ್ದಿ ಗಾರರಿಗೆ ನೀಡಿದ ದಿಡೀರ್ ಸಂದರ್ಶನದಲ್ಲಿ ಬಾಯ್ಬಿಟ್ಟಿದ್ದಾರೆ. ನಿಧಾನ ಮಂತ್ರಿಯವರ ಹಿಂದೆ ಅಲೆಯುತ್ತಿದ್ದ ನಿಮ್ಮ ನಿಧಾನ ಮತಿ ರದ್ದಿಗಾರನಿಗೆ ಈ ಸುದ್ದಿ ಸಿಕ್ಕಿಲ್ಲವೆಂದು ತಿಳಿಸಲು ಹರ್ಷಿಸುತ್ತೇವೆ.

    ReplyDelete
  2. ಸುಪ್ರೀತರೆ,
    ಕಲರವದಲ್ಲಿ ಗದ್ದಲ ಮೂಡಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂಬ ಕಾರಣಕ್ಕೆ ಅಮಾನ್ಯ ತ್ತೆಮ್ಮನನ್ನು ಕರೆತಂದ ನಮ್ಮ ನಿಧಾನಮತಿ ರದ್ದಿಗಾರನಿಗೆ ಕೊಕ್ ನೀಡಿದ್ದೇವೆ. ಇನ್ನು ಮುಂದೆ ಆ ರದ್ದಿಗಾರರನ್ನು ನೀವೇ ಇಟ್ಕೊಳಿ ಅಂತ ಆದೇಶಿಸುತ್ತಿದ್ದೇವೆ.

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post