(ಬೊಗಳೂರು ಬೀದಿಪಾಲು ಬ್ಯುರೋದಿಂದ)
ಬೊಗಳೂರು, ಮಾ. 26- ದೇಶದಲ್ಲಿರುವ ರಸ್ತೆಗಳ ಅಗಲೀಕರಣಕ್ಕೆ ತೀವ್ರ ಸಿದ್ಧತೆ ನಡೆಯುತ್ತಿದ್ದು, ಬೀದಿ ಬೀದಿಯನ್ನು ಅಗಲಗೊಳಿಸಲು ಆದೇಶ ನೀಡಲಾಗುತ್ತಿದೆ. ಇದಕ್ಕೆ ಕಾರಣವೆಂದರೆ ಇಲ್ಲಿ ಪ್ರಕಟವಾಗಿರುವ ಈ ವರದಿ.

ವಿಶ್ವಾದ್ಯಂತ 10 ಕೋಟಿ ಮಕ್ಕಳು ಬೀದಿಯಲ್ಲಿರುತ್ತಾರೆ ಎಂದು ಯುನಿಸೆಫ್ ವರದಿ ಮಾಡಿರುವುದರಿಂದ ಎಚ್ಚೆತ್ತುಕೊಂಡಿರುವ ಸರಕಾರ, ಈ ಮಕ್ಕಳಿಗೆ ನಿಲ್ಲಲು ಜಾಗ, ನಿಂತು ನಿಂತು ಮತ್ತು ಬೀದಿ ಸುತ್ತಿ ತಿರುಗಾಡಿ ಸುಸ್ತಾದರೆ ಮಲಗಿಕೊಳ್ಳಲು ಜಾಗದ ವ್ಯವಸ್ಥೆ ಮಾಡುವುದಕ್ಕಾಗಿ ಇರುವ ಬೀದಿಗಳನ್ನೆಲ್ಲಾ ಹೆದ್ದಾರಿಗಳಷ್ಟು ಅಗಲ ಮಾಡುವ ಪಣ ತೊಟ್ಟಿದೆ.

ಕೆಲವು ಬೆಳೆದ ಮಕ್ಕಳು ಮನೆಯಿಂದ ಶಾಲೆಗೆ ಹೊರಡುವ ಮಧ್ಯದಲ್ಲಿ ಬೀದಿಯಲ್ಲೇ ತಿರುಗಾಡುತ್ತಿರುತ್ತಾರೆ. ಈ ತಿರುಗಾಟದ ಅಂಕಿ ಅಂಶಗಳು ಪರಮಾವಧಿ ತಲುಪುತ್ತಿರುವುದು ಕಾಲೇಜು ಸುತ್ತಮುತ್ತಲಿನ ಬೀದಿಗಳಲ್ಲಿ.

ಹೀಗೆ ಬೀದಿ ಪಾಲಾಗುವ ದೊಡ್ಡ ಮಕ್ಕಳು ಕೆಲವೆಡೆ ಬೀದಿ ಕಾಮಣ್ಣರೆಂದೂ, (ಶಾಲೆಯ ಮೆಟ್ಟಿಲು ಹತ್ತಲು ಕಷ್ಟಪಡುವವರು) ಹಲವೆಡೆ ಬಾಲ ಕಾಮುಕರೆಂದೂ, ಮತ್ತೆ ಕೆಲವೆಡೆ ಕಾಲೇಜು ವಿದ್ಯಾರ್ಥಿಗಳೆಂದೂ, ಇನ್ನು ಕೆಲವೆಡೆ ಎಂಬಿಬಿಎಸ್ (ಮನೆ ಬಿಟ್ಟು ಬೀದಿ ಸುತ್ತುವಿಕೆ) ಅಂತಲೂ ವಿಭಿನ್ನ ನಾಮಧೇಯಗಳನ್ನು ಹೊಂದಿರುತ್ತಿದ್ದಾರೆ.

ಕೆಲವರು ಬೀದಿಯಲ್ಲೇ ಬಿದ್ದಿರುತ್ತಾರೆ ಯಾಕೆ ಎಂಬುದನ್ನೂ ಪತ್ತೆ ಹಚ್ಚಲಾಗಿದೆ. ಮನೆಯಲ್ಲಿ ಹಾಲು ಕುಡಿಯುವುದು ಕಷ್ಟವಾದವರು ಪಕ್ಕದ ಅಂಗಡಿಗೆ ತೆರಳಿ ಆಲ್ಕೋಹಾಲು ಸೇವಿಸಿ, ರಾತ್ರಿ ಪೂರ್ತಿ ಯಾಪಾಟಿ ಪಾರ್ಟಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆಂದರೆ, ಬೆಳಗ್ಗೆದ್ದು ನೋಡುವಾಗ ಈ ಆಲ್ಕೋಹಾಲು ಸೇವಿಸಿದವರು ಬೀದಿಪಾಲು ಆಗಿರುತ್ತಾರೆ.

ಹೀಗೆ, ಬೊಗಳೂರಿನ ಬೀದಿಗೆ ಬಿದ್ದ ದೊಡ್ಡ ದೊಡ್ಡ ಮಕ್ಕಳುಗಳನ್ನು ತಟ್ಟಿಸಿ, ಮುಖಕ್ಕೆ ನೀರು ಹಾಕಿ, ಎದ್ದೂ ಬಿದ್ದು ಎಬ್ಬಿಸಿ ಮಾತನಾಡಿಸಿದಾಗ, ಅವರದು ಒಂದೇ ಮಾತು:

"ಸ್ವಾಮೀ... ನಮ್ಮಂತಹ ಮಕ್ಕಳನ್ನು ಶೋಷಿಸಲಾಗುತ್ತಿದೆ. ನಮಗೆ ಮದಿರೆ ಕುಡಿಯಲು, ಅಮಲು ಪದಾರ್ಥ ಸೇವಿಸಲು ಯಾರು ಕೂಡ ಬೆಂಬಲ ನೀಡುತ್ತಿಲ್ಲ. ಆದರೂ ಅದು ಹೇಗೋ ಜೀವಿಸುತ್ತಿದ್ದೇವೆ. ನಮ್ಮಂತಹ ಬೀದಿ ಮಕ್ಕಳ ಶೋಷಣೆ ನಿಲ್ಲಿಸಬೇಕು. ಆಗಾಗ್ಗೆ ನಮಗೆ ಕಲ್ಯಾಣ ಮಾಡುತ್ತಿರಬೇಕು"!!

2 Comments

ಏನಾದ್ರೂ ಹೇಳ್ರಪಾ :-D

 1. ನಮ್ಮ ಕಲರವದಲ್ಲಿ ಕೋಲಾಹಲವೆಬ್ಬಿಸಲು ನೀವು ಓಡಿಸಿದ ರದ್ದಿಗಾರನನ್ನು ನಾವು ಹೆಚ್ಚಿನ ಅವಿದ್ಯಾಭ್ಯಾಸಕ್ಕಾಗಿ ಪರದೇಶಕ್ಕೆ ಅಟ್ಟಿದ್ದೇವೆ.

  ಬೀದಿ ಅಗಲೀಕರಣದ ಬಗ್ಗೆ ಭಾವಿ ನಿಧಾನ ಮಂತ್ರಿ ಚಿರಯುವಕ ರಾಹುಳ ಹೇಳಿರುವುದು ಅತ್ಯಂತ ಸೂಕ್ತವಾಗಿದೆ. ಆದರೆ ಅವರ ಹೇಳಿಕೆಗೆ ಬೀದಿಪಾಲಾದ ಬೊಗಳೆ ಬ್ಯೂರೋದ ವರದ್ದಿಗಾರನಿಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ ಎಂದು ತಿಳಿಸಲು ಹೆಮ್ಮೆ ಪಡುತ್ತೇವೆ.

  ನಮ್ಮ ನಡುವಿನ ಗನ ಗಂಭೀರ ವ್ಯಕ್ತಿಗಳ, ಸಾ-ಯಿತಿಗಳ, ನಾಯಿ-ಕರ ‘ಮಾನ’ಗಳು ಬೀದಿಗೆ ಬೀಳುತ್ತಿರುವ ಸಂಗತಿ ಹೆಚ್ಚಾಗುತ್ತಿರುವುದು ಜಾಗತೀಕಾರಣದ ಬಾಟಮ್ ಎಫಕ್ಟ್ ಎಂಬುದನ್ನು ನಮ್ಮ ಸುದ್ದಿ ಚೋರರು ರಾಹುಳನಿಗೆ ಭಾಷಣ ಬರೆಯುವ ಪಿಎಗೆ ತಿಳಿಸಿದ್ದಾರೆ. ಕ್ಯಾತೆ ಕಾದ-ಅಂಬರಿ ಪ್ರಕರಣದಲ್ಲಿ ಸಾಹಿತಿ, ಕಾದಂಬರಿಕಾರ, ಡಿಬೇಟರುಗಳ ಮಾನ, ‘ಬರ್ಡ್ ಸಾಂಗ್’ನಲ್ಲಿ ವಿಗ್ಗೇಶ್ವರ ಕೃಷ್ಣ ಭಗವಾನ್ ಮಾನ ಹಾಗೂ ಮೊನ್ನೆ ಮೊನ್ನೆಯ ನೈಪಾಲ್ ಪ್ರಹಸನದಲ್ಲಿನ ಮಣಗಟ್ಟಲೆ ಮಾನಗಳೆಲ್ಲವೂ ಸೇರಿದಂತೆ ದೇಶದಲ್ಲಿ ಹೆದ್ದೆಚ್ಚು ಜನರ ಮಾನ -ಮರ್ಯಾದೆಗಳು ಬೀದಿಗೆ ಬೀಳುತ್ತಿರುವುದರಿಂದಾಗಿ ರಸ್ತೆ ಅಗಲೀಕರಣ ಅನಿವಾರ್ಯ ಎಂಬ ಉಪಾಯವನ್ನು ನಾವೇ ಸೂಚಿಸಿದ್ದು ಎಂದು ಹೇಳಲು ಸಂತೋಷಿಸುತ್ತೇವೆ.

  ಈ ಮಾಹಿತಿಯಿಂದ ವಂಚಿತನಾದ ನಿಮ್ಮ ಬೀದಿಪಾಲು ಬ್ಯೂರೋದ ರದ್ದಿಗಾರನನ್ನು ಬೀದಿಪಾಲು ಮಾಡಿದರೆ ನಾವು ನಮ್ಮ ಸಂಸ್ಥೆಯ ಅಗಲೀಕೃತ ಬೀದಿಯಲ್ಲಿ ಅವರಿಗೆ ವಾಸ್ತವ್ಯ ಹೂಡಲು ಸಿದ್ಧರಿದ್ದೇವೆ.

  ReplyDelete
 2. ಸುಪ್ರೀತರೆ,
  ನಿಮ್ಮ ಕಲರವವನ್ನು ನಾವು ಕೋಲಾರವ ಅಂತ ನಾವು ಹೇಳಲು ಖಂಡಿತವಾಗಿಯೂ ಇಚ್ಛಿಸುವುದಿಲ್ಲ ಅಂತ ಮೊತ್ತ ಮೊದಲಾಗಿ ಕೊಟ್ಟ ಕೊನೆಯದಾಗಿ ಸ್ಪಷ್ಟೀಕರಿಸುತ್ತಿದ್ದೇವೆ.

  ಕರ್ನಾಟಕದಲ್ಲಿ ನಾಯಿ-ಕರುಗಳು ಈಗಾಗಲೇ ಬೀದಿಗೆ ಬೀಳಲು ಹೊರಟಿದ್ದಾರೆ. ಮೇ ಮೇ ಎನ್ನುತ್ತಾ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.

  ಇದೀಗ ನಿಮ್ಮ ಮಾನ ಬೀದಿಗೆ ಬೀಳುತ್ತಿದೆ ಎಂಬ ಸುದ್ದಿಯಿಂದ ಚಕಿತಗೊಂಡಿರುವ ನಾವು ರಸ್ತೆಯನ್ನು ಮತ್ತಷ್ಟು ಕುಗ್ಗಿಸಲು ಶಿಫಾರಸು ಮಾಡುತ್ತಿದ್ದೇವೆ ಎಂದು ಹೇಳಲಾಗುತ್ತಿದೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post