ಬೊಗಳೆ ರಗಳೆ

header ads

ಅನ್‌ಹ್ಯಾಪೀ Violentine's ಡೇ!

(ಬೊಗಳೂರು ವೈಲೆನ್ಸ್ -ಸೈಲೆನ್ಸ್ ಬ್ಯುರೋದಿಂದ)
ಬೊಗಳೂರು, ಫೆ.14- ದೇಶದಲ್ಲಿ ಎಲ್ಲರೂ ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿರುವಾಗ, ಎಲ್ಲರಿಂದಲೂ ನಿರ್ಲಕ್ಷಿತರಾದ, ಭಾವನಾತ್ಮಕವಾಗಿ ಅತ್ಯಂತ ಹಿಂದುಳಿದ, ಎಲ್ಲರಿಂದಲೂ ತುಳಿಯಲ್ಪಟ್ಟ ಒಂದು ವರ್ಗದವರಿಗಾಗಿ ಬೊಗಳೂರು ಬ್ಯುರೋ ಅಶುಭಾಶಯಗಳನ್ನು ಕೋರುತ್ತಿದ್ದು, ಈಗಾಗಲೇ ದೇಶಾದ್ಯಂತ ಅನ್ ಹ್ಯಾಪೀ ವಯಲೈಂಟೈನ್ಸ್ ದಿನವನ್ನು ಅವರು ತಮ್ಮ ತಮ್ಮೊಳಗೇ ಆಚರಿಸುತ್ತಿದ್ದಾರೆ.

ಈ ರೀತಿ ಅಶುಭಾಶಯ ಕೋರಿದ್ದಕ್ಕೆ ಯಾರೂ ಕೂಡ ಏನೂ ಕೂಡ ಪ್ರತಿಭಟನೆ ನಡೆಸಬೇಕಾಗಿಲ್ಲ, ಹಿಂಸಾಚಾರ ಮಾಡಬೇಕಾಗಿಲ್ಲ. ನಮ್ ದೇಶದಲ್ಲಿರುವ ಒಂದು ವರ್ಗವಂತೂ ಪ್ರತಿದಿನವೂ Unhappy Violentines ದಿನವನ್ನಾಗಿ ಭರ್ಜರಿಯಾಗಿಯೇ ಆಚರಿಸುತ್ತಿದೆ. ಇಂಥವರಿಗೂ ಭಾವನೆಗಳಿವೆ, ಅವರಿಗೂ ತಲೆ ಇದೆ, ಅವರಿಗೂ ಕೆಲವೊಮ್ಮೆ ಮನುಷ್ಯತ್ವ ಇರುತ್ತದೆ ಎಂಬುದರ ಬಗ್ಗೆ ಸಂಶಯಗಳಿದ್ದರೂ ಅದನ್ನು ಸಾಬೀತುಪಡಿಸಲು ಬೊಗಳೂರು ಬ್ಯುರೋ ಹೆಣಗಾಡುತ್ತಿದೆ.

ಈಗ ಮುಂಬಯಿಯನ್ನೇ ತೆಗೆದುಕೊಳ್ಳಿ. ಹಾಗಂತ ಅಕ್ಷರಶಃ ತೆಗೆದುಕೊಳ್ಳಲು ಹೋಗಬೇಡಿ. ವನ ನಿರ್ನಾಮ ಸೇನೆಯ ವನಚರರು ನಿಮ್ಮನ್ನು ಅಟ್ಟಿಸಿಕೊಂಡು ಹೋಗಬಹುದು. ಆಮ್ಚಿ ಮುಂಬಯಿ ಎನ್ನುತ್ತಾ, ಮುಂಬಯಿ ಅನ್ನೋದು ನಮ್ಮದೇ ಸ್ವಂತದ್ದು, ಪೂರ್ವಜರ ಸೊತ್ತು, ಅದಕ್ಕಾಗಿ ನಾವು ಪೂರ್ವಜರಂತೆಯೇ ವರ್ತಿಸುತ್ತಿದ್ದೇವೆ ಎನ್ನುತ್ತಾ ಮುಂಬಯಿಯಲ್ಲಿ ಬೊಂ-ಬಾಯಿಯಂತೆ ಅರಚಾಡುತ್ತಾ, ವಯಲೆನ್ಸ್ ಸೃಷ್ಟಿಸುತ್ತಿರುವ ವನ ನಿರ್ನಾಮ ಸೇನೆಯವರಿಗೆ Very Very Unhappy Violentines Day!

ಮತ್ತೊಂದು ವರ್ಗವಿದೆ. ಅವರು ಬೇರೆಯವರನ್ನು ತುಂಬಾ ತುಂಬಾ ಪ್ರೀತಿಸುತ್ತಾರೆ. ಆದರೆ ಅವರಿಗೆ ದೈಹಿಕ ಆಕರ್ಷಣೆ ಅಗತ್ಯವಿರುವುದಿಲ್ಲ. ಏನಿದ್ದರೂ ಕಟ್ಟಾ ಹೃದಯಗಳ ಮಾತಿದು. ನಾವೆಲ್ಲರೂ ನಮ್ಮ ಜೀವವನ್ನು ಬಚ್ಚಿಡುವುದು, ಬಿಚ್ಚಿಡುವುದು ಹೃದಯಗಳಲ್ಲೇ. ಆದುದರಿಂದಾಗಿ ಅವರಿಗೆ ಈ ಜೀವಗಳೆಂದರೆ ತುಂಬಾ ಇಷ್ಟ. ಅದಕ್ಕಾಗಿಯೇ ಅವರು ಜೀವ ತೆಗೆಯುವ ಕಾಯಕದಲ್ಲಿ ನಿತ್ಯ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಅವರೇ ದೇಶದ ಮೂಲೆ ಮೂಲೆಯಲ್ಲಿ, ಬೊಗಳೂರಿನ ಕೋಣೆ ಕೋಣೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಉಗ್ರಪ್ರೇಮಿಗಳು. ಅಲ್ಲಲ್ಲಿ ಬಾಂಬ್ ಇರಿಸುವುದು, ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿರಿಸುವುದು, ಐಎಸ್ಐ ಸಹಾಯ ಪಡೆಯುವುದು... ಇತ್ಯಾದಿ ಕೃತ್ಯಗಳಲ್ಲಿ ಅವರು ತುಂಬಾ ಬಿಸಿ. ಅವರಿಗೆ ಈ ಅಶುಭ ದಿನವನ್ನು ಆಚರಿಸಲು ಸಮಯವಿರುವುದಿಲ್ಲ, ಬಾಂಬ್ ತಯಾರಿ ಅಥವಾ ಪ್ಲೇನ್ ಹೈಜಾಕ್ ಯೋಜನೆಗಳಲ್ಲೇ ಅವರು ಮಗ್ನರಾಗಿರುತ್ತಾರೆ. ಅಂಥ ಅ-ಮಾನವೀಯ ಹೃದಯವುಳ್ಳವರಿಗೆಲ್ಲಾ Very Very Unhappy Violentines Day!

ಮಗದೊಂದು ವರ್ಗವಿದೆ. ದೇಶದ ಕಣ ಕಣದಲ್ಲಿ ಬೇರು ಬಿಟ್ಟಿರುವ ಉಗ್ರರ ವಿರುದ್ಧ ಹೋರಾಡುವ ಬದಲು, ಉಗ್ರಗಾಮಿಗಳ ಪರವಾಗಿ ಧೋರಣೆ ತಳೆಯುತ್ತಿರುವುದು ನೀವು, ಉಗ್ರರನ್ನು ಬಿಡುಗಡೆ ಮಾಡಿದ್ದು ನೀವು, ಉಗ್ರರನ್ನು ರಕ್ಷಿಸುತ್ತಿರುವುದು ನೀವು, ಉಗ್ರರಿಗೆ ಗಲ್ಲುಶಿಕ್ಷೆ ವಿಧಿಸದೆ ತುಷ್ಟೀಕರಣ ಮಾಡುತ್ತಿರುವುದು ನೀವು... ಎಂಬಿತ್ಯಾದಿ ಆರೋಪ-ಪ್ರತ್ಯಾರೋಪಗಳ ಹೂವುಗಳನ್ನು ಪರಸ್ಪರ ಎಸೆಯುತ್ತಾ, ತಮ್ಮ ತಮ್ಮೊಳಗೆ ಹೋರಾಡುತ್ತಿರುವವರು. ಇವರು ಇದೇ ತಮ್ಮ ಶಕ್ತಿ ಸಾಮರ್ಥ್ಯವನ್ನು ಉಗ್ರರ ವಿರುದ್ಧ ಹೋರಾಡಲು ಬಳಸುವ ಬದಲು, ತಮ್ಮ ತಮ್ಮೊಳಗೆ ಕಚ್ಚಾಡಲು ಬಳಸುತ್ತಾರೆ. ಅವರಿಗೂ ಪುರುಸೊತ್ತಿಲ್ಲ. ಅಂಥವರಿಗೂ Very Very Unhappy Violentines Day!

ಉಗ್ರ ಭಾವನೆಗಳನ್ನು ಹತ್ತಿಕ್ಕಿಕೊಳ್ಳಲಾರದೆ ಆತ್ಮಹತ್ಯೆಗೆ ಮೊರೆ ಹೋಗುವವರಿಗೂ ಛೆ... ಪಾಪ... ಎನ್ನುತ್ತಾ... Very Very Unhappy Violentines Day!

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

 1. ಅಸತ್ಯಿಗಳೇ,

  ಈ ಎಲ್ಲಾ ಅನ್ ಹ್ಯಾಪೇ ಕೇಸ್‍ಗಳನ್ನು ಬಿಡಿ..
  ನಿಮಗೆ ಹ್ಯಾಪೀ ವ್ಯಾಲೆಂಟೆನ್ ಡೆ

  ಪ್ರತ್ಯುತ್ತರಅಳಿಸಿ
 2. ’ಶಿವ’ರ ಜೊತೆಗೇ ನನ್ನದೂ ಶುಭಾಶಯಗಳನ್ನು ಸೇರಿಸಿಕೊಳ್ಳಿ.

  ಪ್ರತ್ಯುತ್ತರಅಳಿಸಿ
 3. "ಆದುದರಿಂದಾಗಿ ಅವರಿಗೆ ಈ ಜೀವಗಳೆಂದರೆ ತುಂಬಾ ಇಷ್ಟ."

  ಅನ್ವೇಷಿಗಳೇ,ನಿಮ್ಮ ಈ ಮಾತು ಕೇಳಿ ನಮ್ಮಂತಹ ಬಡಪಾಯಿಗಳಿಗೆ ಜೀವ ಹೋಗುವಷ್ಟು ಖುಷಿಯಾಗುತ್ತಿದೆಯಂತೆ.

  ಅಂದ ಹಾಗೆ ನಿಮ್ಮ ವ್ಯಾಲೆಂಟೆನ್ ಹ್ಯಾಪಿನೋ ಅನ್‍ಹ್ಯಾಪಿನೋ ಗೊತ್ತಾಗಲಿಲ್ಲ.

  ಪ್ರತ್ಯುತ್ತರಅಳಿಸಿ
 4. ಹ್ಯಾಪಿ ವ್ಯಾಲಂಟೈನ್ ಅನ್ವೇಷಿಗಳೇ, ಗುಲಾಬಿ ಕೊಡ್ತಾ ಇರೋರು ಯಾರು ;)

  ಪ್ರತ್ಯುತ್ತರಅಳಿಸಿ
 5. ಶಿವ್ ಅವರೆ,
  ನಿಮಗೂ ವ್ಯಾಲೆಂಟೈನ್ ದಿನದ ಶುಭಾಶಯಗಳು.

  ಸುನಾಥರೆ,
  ನಿಮ್ಮದನ್ನೂ ಸೇರಿಸಿಕೊಂಡಿದ್ದೇವೆ.

  ಪ್ರತ್ಯುತ್ತರಅಳಿಸಿ
 6. ಶ್ರೀತ್ರೀ ಅವರೆ,
  ನಿಮ್ಮಂತಹ ಬಡಪಾಯಿಗಳಿಗೆ ಖುಷಿಯಾದರೆ ಪರವಾಗಿಲ್ಲ, ಆದರೆ ಬಡಾ ಬಾಯಿ ಇರೋವರಿಗೆ ಖುಷಿಯಾದ್ರೆ ಮಾತ್ರ ಜೀವ ಹೋಗುವುದು ಯಾರದ್ದು ಅಂತ ಯೋಚನೆ ಮಾಡಬೇಕಾದ ವಿಚಾರ.

  ನಮ್ಮ ವ್ಯಾಲೆಂಟೈನ್ ಡೇ ತುಂಬಾ ತುಂಬಾ ಹ್ಯಾಪ್ ಆಗಿತ್ತು.

  ಪ್ರತ್ಯುತ್ತರಅಳಿಸಿ
 7. ನೀಲಗಿರಿಯವರೆ,
  ನಾವು ವ್ಯಾಲೆಂಟೈನ್ ಅನ್ವೇಷಿ ಅಲ್ಲದಿದ್ದರೂ... ನಿಮಗೂ ಶುಭಾಶಯ.

  ಯಾರೋ ಕಳೆದ ಹಲವಾರು ವರ್ಷಗಳಿಂದ ಗುಲಾಬಿ ಕೊಡಲು ಪ್ರಯತ್ನಿಸ್ತಾ ಇರೋ ಚಿತ್ರವದು. ಕಾಲವೇ ಸ್ಥಗಿತಗೊಂಡಿದ್ದರಿಂದ ಮುಂದಿನ ಕಥೆ ಏನೆಂಬುದು ಗೊತ್ತಾಗಲಿಲ್ಲ, ಯಾರು ಎಂಬುದೂ ತಿಳಿಯಲಿಲ್ಲ. ;)

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D