(ಬೊಗಳೂರು ಒಡೆದ ಹೃದಯಗಳು ಬ್ಯುರೋದಿಂದ)
ಬೊಗಳೂರು, ಫೆ.13- ಹುಡುಗಿಯರ ಹೃದಯದಲ್ಲಿ 'ಚೆಲ್ಲಾಟ'ವಾಡಿ, ಅವರ ಮನಸ್ಸಿನಲ್ಲಿ 'ಗಾಳಿಪಟ' ಹಾರಿಸಿ, ಪ್ರಾಯಕ್ಕೆ ಬಂದ ಯುವತಿಯರ ಮನದಂಗಳದಲ್ಲಿ 'ಚೆಲುವಿನ ಚಿತ್ತಾರ' ಬರೆದುಬಿಟ್ಟು, ಗಣೇಶನ ಮದುವೆಯಾ? ಅದು ನಾಳೆ ನಾಳೆ ಎನ್ನುವ ಬದಲು 'ಕೃಷ್ಣ' ಆಗಿ ದಿಢೀರ್ ಮದುವೆಯಾಗಿ, ಕಾಯುತ್ತಿದ್ದ ಅಭಿಮಾನಿನಿಯರ ಕಣ್ಣಲ್ಲಿ 'ಮುಂಗಾರುಮಳೆ' ಸುರಿಸಿದ ಗಣೇಶ್ ಅವರನ್ನು ಬಂಧಿಸಲು ಬೊಗಳೂರು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ನಮ್ಮ ಸುದ್ದಿಯ ಮೂಲಗಳು ವರದಿ ಮಾಡಿಲ್ಲ.

ಇದಕ್ಕೆ ಪ್ರಧಾನ ಕಾರಣವೆಂದರೆ, ಮದುವೆಯಾಗದೆಯೂ ಹಲವು ಹೃದಯಗಳು ಒಡೆಯಲು ಕಾರಣವಾದ, ಮದುವೆಯಾದ ಬಳಿಕವಂತೂ ಆತ್ಮಹತ್ಯೆಯ ಸರಣಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಚಿನ್ನದ ತಾರೆಯನ್ನು ಬಂಧಿಸಲು ತೀವ್ರವಾಗಿ ಯತ್ನಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಬಂಧನ ಕಾರ್ಯಾಚರಣೆಗೆ ಪೊಲೀಸರು ಹಲವು ಕಾರಣಗಳನ್ನು ನೀಡುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾದವೆಂದರೆ:
 • ಹುಡುಗಿಯರ ಹೃದಯ ಒಡೆಯುವ ಹುನ್ನಾರ.
 • ದಿಢೀರ್ ಮದುವೆಯಾಗಿ ಕೆಲವರಿಗೆ ಹಾರ್ಟ್ ಅಟ್ಯಾಕ್ ಆಗಲು ಕಾರಣವಾಗಿದ್ದು ಹಾಗೂ ರಾಸ್ಕಲ್ ದೇವದಾಸನ ಪರಿಸ್ಥಿತಿ ತರಲು ಕಾರಣವಾಗಿದ್ದು.
 • ಫೆ.18ರಂದು ಮದುವೆಯಾಗುವುದಾಗಿ ಹೇಳಿ, ಮಣ್ಣಿನ ಅಪ್ಪ-ಮಕ್ಕಳಂತೆ ಕೊಟ್ಟ ಮಾತಿಗೆ ತಪ್ಪಿದ್ದು.
 • ಕಾದಿದ್ದವರಿಗೆಲ್ಲಾ ಕೈಕೊಟ್ಟು, ವಿಚ್ಛೇದಿತೆಗೆ ಬಾಳು ನೀಡಿದ ಚಿನ್ನದಂಥ ಗುಣ ಪ್ರದರ್ಶಿಸಿ ವಿಚ್ಛೇದನೆಗೆ ಪ್ರೋತ್ಸಾಹ.
 • ಹುಡುಗಿಯರ ಮನೆಯ ಟೆಲಿಫೋನ್ ಬಿಲ್ ಹೆಚ್ಚಿಸಿದ್ದು.
 • ಹೃದಯ ತಜ್ಞ ವೈದ್ಯರಿಗೆ ಸಂಪಾದನೆ ಹೆಚ್ಚಿಸಿದ್ದು.
ಮದುವೆ ಗಲಾಟೆಯ ಮಧ್ಯೆಯೇ, ಮದುವೆ ಮಂಟಪದಿಂದ ಮೂಗನ್ನು ಮಾತ್ರವೇ ಹೊರಗೆ ತಳ್ಳಿ, ಬೊಗಳೆ ರಗಳೆಗೆ ವಿಶೇಷ ಸಂದರ್ಶನ ನೀಡಿದ ಅವರು, ತರಾತುರಿಯ ಮದುವೆಯೇಕೆ ಎಂದು ಕೇಳಿದಾಗ, ಇನ್ನೂ ತಡ ಮಾಡಿದರೆ, ಮತ್ತಷ್ಟು ಮಂದಿ ಫೋನ್ ಕಾಲ್ ಮಾಡಲು, ಹಾಗೂ "ನಿನ್ನಿಂದಲೇ.... ನಿನ್ನಿಂದಲೇ... ಈ ಜೀವ ಸಾಕಾಗಿದೆ..." ಅಂತ ಹಾಡಲು ಹೆಚ್ಚು ಅವಕಾಶ ನೀಡಿದಂತಾಗುತ್ತದೆ. ಹಾಗಾಗಿ ಪ್ರೇಮಹತ್ಯಾ ದೋಷ ಹೆಚ್ಚಳವಾಗದಂತೆ ತಡೆಯುವುದಕ್ಕಾಗಿಯೇ ಅವಸರ ಮಾಡಬೇಕಾಯಿತು ಎಂದು ಹೇಳಿದರು.

ರಾತೋ ರಾತ್ರಿ ಮದುವೆಯಾಗಿದ್ದೇಕೆ ಎಂಬ ಪ್ರಶ್ನೆಗೆ ತ(ಉ)ತ್ತರಿಸಿದ ಅವರು, ದಿಢೀರ್ ಮದುವೆಯಾಗಿದ್ದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಮದುವೆಯಾದ ತಕ್ಷಣ ಈ ಒಂದು ರಾತ್ರಿಯಾದರೂ ಸುಖವಾಗಿ, ಗಡದ್ದಾಗಿ ನಿದ್ದೆ ಮಾಡಬಹುದು. ನಾಳೆಯಿಂದ ಹೇಗೂ ಫೋನ್ ಕರೆಗಳು ಇದ್ದೇ ಇವೆ, ಕಿರಿಕಿರಿ. ನಿದ್ದೆ ಮಾಡುವುದು ಸಾಧ್ಯವಾಗದು. ಅದಕ್ಕೇ ಈ ತರಾತುರಿ ಎಂದು ಸ್ಪಷ್ಟಪಡಿಸಿದರು.

ಅದೂ ಅಲ್ಲದೆ, ಫೆ.14 ವೆಲಂಟೈನ್ಸ್ ದಿನಕ್ಕೆ ಗಂಡು ಪ್ರೇಮಿಗಳಿಗೆ ಉಡುಗೊರೆ ರೂಪದಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಗುಣೇಶರು ಹೇಳಿದ್ದಾರೆ. ಅದು ಹೇಗೆ? ಮುಂದೆ ಓದಿ.

ಈ ನಡುವೆ, ಗಣೇಶನ ಗಲಾಟೆಯಿಂದಾಗಿ, ತಾವು ಇಷ್ಟಪಟ್ಟ ಹೆಣ್ಣುಗಳು ಸಿಗದೆ ನೊಂದಿದ್ದ ಮದುವೆ ಗಂಡುಗಳು, ಗಣೇಶನ ಮದುವೆಯಾದ ಬಳಿಕ ನಿಟ್ಟುಸಿರಿಟ್ಟ ಪ್ರಸಂಗವೂ ಅಲ್ಲಲ್ಲಿ ವರದಿಯಾಗಿದೆ.

ಇದುವರೆಗೆ ಈ ಗಂಡುಗಳು ನೋಡಿ ಬಂದ ಹೆಣ್ಣುಗಳೆಲ್ಲವೂ, ಗಣೇಶನ ಮದುವೆಯಾಗಲಿ, ಆಮೇಲೆ ನೋಡೋಣ ಅಂತ ಹೇಳಿ ಕಳುಹಿಸುತ್ತಿದ್ದರು. ಗಣೇಶನಿಗೆ ಮದುವೆ ಇಲ್ಲ ಎಂಬ ಲೋಕಪ್ರಿಯ ಮಾತೇ ಇರುವುದರಿಂದ ಈ ಗಂಡುಗಳು ಮದುವೆ ಸುದ್ದಿ ಬಿಟ್ಟಿದ್ದವು. ಈಗ ಗಣೇಶನಿಗೆ ಮದುವೆಯಾಗಿದೆ, ಕಾಯುತ್ತಿದ್ದವರೆಲ್ಲರನ್ನೂ ತಿರಸ್ಕರಿಸಿಯಾಗಿದೆ. ಹಾಗಾಗಿ ಇನ್ನಾದರೂ ಅವರು ನಮ್ಮತ್ತ ಕೃಪೆ ಬೀರಬಹುದು ಎಂಬುದು ಹೆಣ್ಣು ಹುಡುಕುತ್ತಿದ್ದ ಗಂಡುಗಳ ಆತ್ಮತೃಪ್ತಿ.

2 Comments

ಏನಾದ್ರೂ ಹೇಳ್ರಪಾ :-D

 1. ಇನ್ನೂ ಒಂದು ಆರೋಪವನ್ನು ಪಟ್ಟಿಯಲ್ಲಿ ಸೇರಿಸಿ ಅನ್ವೇಷಿಗಳೆ!

  * ಹೀಗೆಯೇ ಎಲ್ಲರೂ ಸರಳ ವಿವಾಹವಾದರೆ, ಛತ್ರದ ಮಾಲೀಕರು, ಹೂವಿನ ಅಲಂಕಾರದವರು, ಬ್ಯಾಂಡ್ ಸೆಟ್ಟಿನವರು, ಎಲ್ಲರೂ ಎಲ್ಲಿ ಹೋಗಬೇಕು??

  ReplyDelete
 2. ನೀಲಗಿರಿಯವರೆ,

  ಈ ನಿಮ್ಮ ಆರೋಪವನ್ನು ಸೇರಿಸಬೇಕಿದ್ದರೆ, ಅವರೆಲ್ಲರಿಂದ "ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ" ಅಂತ ಬರೆಸಿಕೊಂಡು ಬರಬೇಕಾಗುತ್ತೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post