ಬೊಗಳೆ ರಗಳೆ

header ads

ನಾಪತ್ತೆಯಾಗಿದ್ದ ಕತ್ತೆ 'ರಾಜಯೋಗ' ಸಹಿತ ಪತ್ತೆ !

(ಬೊಗಳೂರು ಕತ್ತಾನ್ವೇಷಣೆ ಬ್ಯುರೋದಿಂದ)
ಬೊಗಳೂರು, ಫೆ.18- ಕೆಲಸವಾಗಬೇಕಿದ್ರೆ ಕತ್ತೆ ಕಾಲು ಹಿಡಿ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡಿರುವವರೀಗ ಗಾರ್ದಭ ಪೂಜೆಗೆ ಹೊರಟಿರುವುದು, ಕತ್ತೆಗಳನ್ನೇ ಬಂಡವಾಳವಾಗಿಸಿಕೊಂಡಿರುವ ಬೊಗಳೆ ರಗಳೆ ಬ್ಯುರೋದಲ್ಲಿ ಸಂಚಲನ ಮೂಡಿಸಿದೆ.

ಈ ಮಧ್ಯೆ, ಕರುನಾಟಕದಲ್ಲಿ ಸರಕಾರ ಎಂಬುದೊಂದಿದ್ದಾಗ ತೀವ್ರವಾಗಿ ಕಚ್ಚಾಡುತ್ತಾ, ಕತ್ತೆಗಳಂತೆಯೇ ಅರಚಾಡುತ್ತಿದ್ದ, ಕತ್ತೆಯ ಮಾದರಿಯಲ್ಲಿ ಮನೋಬಲಕ್ಕಿಂತಲೂ ದೈಹಿಕ ಬಲಕ್ಕೇ ಹೆಚ್ಚು ಒತ್ತು ನೀಡುತ್ತಾ ಹೊಡೆದಾಡುತ್ತಿದ್ದವರ ಕಡೆಯಿಂದ ಇತ್ತೀಚೆಗೆ ಯಾವುದೇ ಧ್ವನಿ ಕೇಳುತ್ತಿಲ್ಲ. ಕರುನಾಟಕದ ಜಾರಕಾರಣಿಗಳು ನಾಪತ್ತೆಯಾಗಿದ್ದಾರೆ. ಈ ರೀತಿ ನಾಪತ್ತೆಯಾದವರು ಎಲ್ಲಿಯಾದರೂ ಸಿಕ್ಕಾರೇ ಎಂಬ ಆಶಾಭಾವದಿಂದ ಬೊಗಳೂರಿನ ಒಂದು ತಂಡವು ಈ ಊರಿಗೆ ಹೊರಟಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಚುನಾವಣೆಗಳು ಬರುತ್ತಿವೆ. ಓಟು ಕೇಳಲು ಹೋದಾಗ ಮತದಾರರಿಂದ ಒಳ್ಳೆಯ ಪೂಜೆಯಾಗುತ್ತದೆ. ಆದರೆ ಇಲ್ಲಿ ದೊರೆಯುತ್ತಿರುವ ಸಕಲ ಸವಲತ್ತುಗಳು ಮತದಾರರ ಪೂಜೆಗಿಂತ ವಾಸಿ ಎಂದು ತಿಳಿದುಕೊಂಡದ್ದರಿಂದಲೇ ಅವರೀಗ ಅಲ್ಲಿಗೆ ಪಲಾಯನ ಮಾಡಿದ್ದಾರೆ ಎಂಬುದನ್ನು ಶೋಧಿಸಲಾಗಿದೆ.

ಇದರ ನಡುವೆ, ಬೊಗಳೂರಿನ ಒಂದು ಭಾಗದ ಜನತೆ "ಕಾಲು ಹಿಡಿ" ಎಂಬ ಪದವನ್ನು "ಹಾಲು ಕುಡಿ" ಎಂದು ಅಕ್ಷರ ಅದಲುಬದಲಿಸಿ ಭಾವಿಸಿ ಅದರಂತೆ ಜೀವನ ಸಾಗಿಸುತ್ತಿರುವ ಅಂಶವೊಂದು ಹಠಾತ್ತನೆ ಹೊಳೆದಿದೆ. ಇದರೊಂದಿಗೆ ಕೆಲವರು ಗಾರ್ದಭ ಸದ್‌ಗುಣಗಳನ್ನು ಪ್ರದರ್ಶಿಸುತ್ತಿರುವುದೇಕೆ ಎಂಬ ನಿಗೂಢ ರಹಸ್ಯವೂ ಬಯಲಾಗಿಬಿಟ್ಟಿದೆ.

ಇನ್ನೊಂದೆಡೆ, ಈ ಸುದ್ದಿ ಪ್ರಕಟವಾದಂದಿನಿಂದ ತೀವ್ರ ಸಂತಸಗೊಂಡಿರುವ ಅಖಿಲ ಭಾರತ ಗಾರ್ದಭ ಒಕ್ಕೂಟವು, ಬೊಗಳೂರನ್ನೇ ತನ್ನ ಕಾರಸ್ಥಾನವಾಗಿಸಿಕೊಳ್ಳಲು ಸಕಲ ಸಿದ್ಧತೆಗಳನ್ನೂ ನಡೆಸುತ್ತಿದೆ.

ಈ ವಿಷಯವನ್ನು ಇಲ್ಲಿ ಪತ್ರಿಕಾಗೋಷ್ಠಿ ಕರೆದು ಅರಚಾಡಿದ ಅಭಾಗಾಒ ಅಧ್ಯಕ್ಷ ಗಾರ್ದಭ್ ರಾಜ್ ಅವರು, ಮನುಷ್ಯ ಯಾವತ್ತೂ ಕತ್ತೆ ಕತ್ತೆ ಅಂತ ಪರಸ್ಪರ ಕರೆದುಕೊಂಡು ನಮ್ಮ ಕುಲಕ್ಕೆ ಅವಮಾನ ಮಾಡುತ್ತಿದ್ದ. ಈಗ ಇದೇ ಕತ್ತೆಗಳ ಹಾಲೇ ಅವನಿಗೆ ಬೇಕಾಗಿದೆ. ನಾವು ಹಾಲು ಕೊಡುವುದನ್ನು ನಿಲ್ಲಿಸಿದರೆ ಆತ ಬದುಕುವುದಾದರೂ ಹೇಗೆ ಎಂದು ವ್ಯಂಗ್ಯವಾಡಿದ್ದಾರೆ.

ನಮ್ಮ ಹಾಗೆ ಬೆನ್ನು ಬಗ್ಗಿಸಿ, ತಲೆ ಉಪಯೋಗಿಸದೆ ದುಡಿಯಲು ನಮ್ಮ ಹಾಲು ಅತ್ಯಂತ ಅವಶ್ಯಕ ಎಂಬುದನ್ನು ಕೊನೆಗೂ ಮನುಷ್ಯ ಪ್ರಾಣಿ ತಿಳಿದುಕೊಂಡಿದ್ದಾನೆ ಎಂದು ತೀವ್ರವಾಗಿ ಅರಚಾಡಿರುವ ಗಾರ್ದಭ್, ತಮಿಳುನಾಡಿನಲ್ಲಿ ತಮ್ಮವರ ಸಂತತಿ ಹೆಚ್ಚಿಸಿ ನಮ್ಮವರ ಜನಸಂಖ್ಯಾ ಸ್ಫೋಟ ಮಾಡಲು ತೀವ್ರ ಯತ್ನಗಳನ್ನು ಈಗಲೇ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಆದರೆ, ಬೊಗಳೆ ರಗಳೆ ಬ್ಯುರೋ ಯಾವತ್ತಿಗೂ ನಮ್ಮ ಬೆಂಬಲಕ್ಕಿರುವುದರಿಂದ ಮತ್ತು ನಮ್ಮಂತೆಯೇ ಅರಚಾಡುತ್ತಿರುವುದರಿಂದ ಇದರ ದ್ಯೋತಕವಾಗಿ ನಮ್ಮ ಮಹಾನ್ ನಾಯಕನ ಭಾವಚಿತ್ರವನ್ನು ಬ್ಯುರೋದ ಶೀರ್ಷಿಕೆಯಲ್ಲಿ ಹಾಕಿ ಗೌರವ ತೋರಿಸುತ್ತಿದೆ. ಈ ಕಾರಣಕ್ಕೆ ನಾವು ಅಲ್ಲಿಗೆ ಹಾಲು(ಳು) ಸರಬರಾಜು ಮಾಡುವುದಿಲ್ಲ ಎಂದೂ ಇದೇ ವೇಳೆ ಅವರು ಸ್ಪಷ್ಟೀಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಅದಕ್ಕೇ ಅಲ್ವೇ ಗಾದೆ ಮಾಡಿರೋದು: "ಕತ್ತೆಗೊಂದು ಕಾಲ, ಮತದಾರನಿಗೊಂದು ಕಾಲ!"

    ಪ್ರತ್ಯುತ್ತರಅಳಿಸಿ
  2. ಸುನಾಥರೆ,
    ಅದನ್ನೇ ಮತದಾರನ ಬದಲು 'ಲತ್ತೆ'ಗೊಂದು ಕಾಲ ಅಂತ ಬದಲಾಯಿಸಿಬಿಡಿಬಹುದಲ್ಲಾ... ಅದು ಬೈ ಡೀಫಾಲ್ಟ್!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D