ಬೊಗಳೆ ರಗಳೆ

header ads

ಮಂಗ-ಳ ವಿವಾಹವಿದು... ಬಂಧನ ಅಲ್ಲ!

(ಬೊಗಳೂರು ವಿವಾದ ಕಾಯಿಲೆ ಬ್ಯುರೋದಿಂದ)
ಬೊಗಳೂರು, ಫೆ.26- ಏಕಸದಸ್ಯ ಬೊಗಳೆ ರಗಳೆ ಬ್ಯುರೋದಲ್ಲಿ ನಿನ್ನೆ ಎಲ್ಲವೂ ಖಾಲಿ ಖಾಲಿ. ಹಾಗಾಗಿ ಎಲ್ಲರೂ ಎಲ್ಲಿ ಹೋದರು ಅಂತ ತನಿಖೆ ನಡೆಸಿದಾಗ ತಿಳಿದುಬಂದ ಅಂಶವೆಂದರೆ, ಏಕಸದಸ್ಯ ಬ್ಯುರೋದಲ್ಲಿ ಒಬ್ಬರನ್ನು ಬಿಟ್ಟು ಉಳಿದವರೆಲ್ಲರೂ ತಮ್ಮ ಸ್ವಜಾತಿ ಬಾಂಧವರ ಮದುವೆಗೆ ಹೋಗಿದ್ದರು!

ಈ ಕುರಿತಾಗಿ ನಮ್ಮ ರದ್ದಿಗಾರರನ್ನು ಅದುಹೇಗೋ ಕಾಡುಮೇಡು ಅಲೆದು ಸಂಪರ್ಕಿಸಿ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಯಿತು. ಅದಕ್ಕೆ ಸುದೀರ್ಘ ಉತ್ತರವೊಂದನ್ನು ಅವರು ಮಂಗನ ಕೈಯಲ್ಲಿ ಕೊಟ್ಟು ಕಳುಹಿಸಿದ್ದಾರೆ ಎಂದು ತಿಳಿಸಲು ಹರ್ಷಿಸುತ್ತೇವೆ. ಅದರಲ್ಲಿ ಬರೆದ ಒಕ್ಕಣೆ ಏನಿತ್ತೆಂದರೆ:

"ಮಾನವೀಯ ಸಮಾಜದಲ್ಲಿ ಮದುವೆಯಾದವರು ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೆ, ಹೇಗೂ ಅವರಿಗೆ ಕಂಕಣ-ಬಂಧ ತೊಡಿಸಲಾಗುತ್ತದೆ, ಅವರು ವಿವಾಹ ಬಂಧನದಲ್ಲಿ ಸಿಲುಕಿ ವಿವಾದಕ್ಕೀಡಾಗುತ್ತಾರೆ, ಸಂಸಾರವೆಂಬ ನೊಗವನ್ನು ಅವರ ಕುತ್ತಿಗೆಗೆ ಕಟ್ಟಲಾಗುತ್ತದೆ ಎಂಬಿತ್ಯಾದಿ ಹೇಳಿಕೆಗಳಿದ್ದರೂ ಇಲ್ಲಿ ವಿವಾಹದ ಗಂಟು ಹಾಕಿಕೊಂಡು ಮಾನವೀಯ ಬಂಧನದಿಂದ ಪರಾರಿಯಾಗುವಲ್ಲಿ ಈ ಕೋತಿಗಳು ಯಶಸ್ವಿಯಾಗಿವೆ ಎಂಬುದರ ಕುರಿತು ತನಿಖೆ ನಡೆಸಲು ಬಂದಿದ್ದೇವೆ" ಅಂತ ನಮ್ಮ ಒದರಿಗಾರರು ನಮಗೇ ಕಾರಣ ನೀಡಿದ್ದಾರೆ.

ಅವರು ನಡೆಸಿದ ತನಿಖೆ ಪ್ರಕಾರ ಇನ್ನೂ ಕೆಲವು ವಿಷಯಗಳು ಹೊರಬಿದ್ದಿವೆ. ಮದುವೆಯಾದ ತಕ್ಷಣವೇ ಈ ಕೋತಿಗಳು ಮರದಿಂದ ಮರಕ್ಕೆ ಹಾರುತ್ತಾ ಹನಿಮೂನ್‌ಗೆ (ಅಂದರೆ ಕೆಲವು ಮರಗಳಲ್ಲಿ honey ಗೂಡುಗಳಿದ್ದವು, ಮರದ ಮೇಲೆ ನೋಡಿದರೆ moon ಕಾಣಿಸುತ್ತಿತ್ತು.) ಹೊರಟಿದ್ದವು.

ಇದಲ್ಲದೆ ಭಾರತ ಸರಕಾರದ ಹಿಂದೂ ವಿವಾದ ಕಾಯಿದೆ-1947ರ ಅಡಿಯಲ್ಲೇ ಈ ವಿವಾಹ ಸಮಾರಂಭ ನಡೆದಿದ್ದು, ಎಲ್ಲರಿಗೂ ಊಟ ನೀಡಲಾಗಿತ್ತು.

ಇದರೊಂದಿಗೆ ಮಂಗ-ಮಾನವ ಸಂಬಂಧಕ್ಕೆ ಹೊಸ ಅರ್ಥವೊಂದನ್ನು ಕಲ್ಪಿಸಲಾಗುತ್ತಿದ್ದು, ಮಂಗನಿಂದ ಮಾನವ ಎಂದಿದ್ದದ್ದನ್ನು ಮಾನವನಿಂದ ಮಂಗ ಎಂದು ತಿರುಗಿಸಲು ಮಂಗ ಸಮುದಾಯವು ಪಣ ತೊಟ್ಟಿರುವುದು ಶಾಂತಿಯ ಭಂಗಕ್ಕೆ ಕಾರಣವಾಗಬಹುದೇ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಈ ಮೊದಲು, ಶ್ವಾನಕ್ಕೆ ತಾಳಿ ಕಟ್ಟಿದ ಬಗೆಗೂ ಬಿಡದೆ ಬೊಗಳೆ ಬ್ಯುರೋ ವರದಿ ಮಾಡಿತ್ತು. ಅಂತೆಯೇ ಮಾನವ ಬುದ್ಧಿ ತೋರಿಸಿದ ಶ್ವಾನವನ್ನು ಸಮುದಾಯದಿಂದಲೇ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿರುವುದರ ಬಗ್ಗೆಯೂ ಒದರಿತ್ತು. ಇದೀಗ ವಿವಾಹಿತ ಮಂಗ ದಂಪತಿಯನ್ನು ಮಂಗ ಸಮುದಾಯವು ಬಹಿಷ್ಕರಿಸಲಿದೆಯೇ ಎಂದು ಕಾದು ನೋಡಲಾಗುತ್ತಿದೆ.

ಜಾರಕಾರಣಿಗಳಿಗೆ ಕೋಟಿ ಕೋಟಿ ನೀಡಿದರೆ ಮಾನವರ ವಿವಾಹವನ್ನೂ ಅದ್ದೂರಿಯಾಗಿಸಬಹುದು, ಉಗ್ರರೂ, ಅಗ್ರರಾಗಬಹುದು ಎಂಬುದು ಇಲ್ಲಿ ಶ್ರುತಪಟ್ಟಿದ್ದು, ಕೂಪ ಮಂಡೂಕಗಳ ವಿವಾಹ ಮಹೋತ್ಸವದ ಬೊಗಳೂರು ಬ್ಯುರೋದ ವರದಿ ಎಲ್ಲರ ಕಣ್ಣು ಮುಚದ್ದುದನ್ನು ಇಲ್ಲಿ ಚಿರ-ಸ್ಮರಿಸಿಕೊಳ್ಳಬಹುದು.

ಆದರೆ ವಿವಾಹವಾದ ಬಳಿಕ ವಿವಾದ ಇದ್ದದ್ದೇ ಎಂಬ ಅಲಿಖಿತ ನಿಯಮವು ಮಂಗಗಳ ಮಟ್ಟಿಗೆ ಇದುವರೆಗೆ ಅನ್ವಯವಾಗಿಲ್ಲ. ಕಾಲಾನಂತರದಲ್ಲಿ ಸಂಸಾರ ಸಾಗರದಲ್ಲಿ ಈಜುತ್ತಿರುವ ಹಂತದಲ್ಲಿ ಇದು ಗೋಚರಕ್ಕೆ ಬರಬಹುದು, ಅಂತೆಯೇ ಮಂಗಗಳ ಕಿರ್ರ್...ಕಿರ್ರ್... ಧ್ವನಿಯು ಊರವರ ನಿದ್ದೆ ಕೆಡಿಸಲಿದೆಯೇ ಎಂಬ ಬಗ್ಗೆ ಈಗಾಗಲೇ ಭರದಿಂದ ಯೋಚನೆ-ಯೋಜನೆಗಳನ್ನು ಲೆಕ್ಕಾಚಾರ ಹಾಕಲಾಗುತ್ತಿದೆ.
------
ಜಾಹೀರಾತು
ಬರಲಿದೆ ಬಜೆಟ್ ವಿಶೇಷ!
ಕೇಂದ್ರ ಪಿತ್ತ ಖಾತೆ ಸಚಿವ ಪೀಚಿ ದಂಬರಂ ಬಜೆಟ್ ಮಂಡಿಸುವ ಮುನ್ನವೇ ಲೀಕ್ ಆಗಿರುವ ಕೆಲವು ಯೋಜನೆಗಳು ನಿಮ್ಮ ಬೊಗಳೆ ರಗಳೆಯಲ್ಲಿ...
ಇದು ಆಯ ವ್ಯಯ ಪತ್ರ ಅಂತ ಪ್ರಸಿದ್ಧಿಯಾದರೂ, ಸರಕಾರಿ ನೌಕರರಿಗೆ ಆಯ ಮತ್ತು ಬಡಜನತೆಗೆ ವ್ಯಯ ಪತ್ರವಾಗಲಿದೆ...
ಈ ಯೋಜನೆ ಕಾರ್ಯಗತವಾದಲ್ಲಿ ದೇಶದ ತುಂಬಾ ಝಣ ಝಣ...

ಆ ದಿನಗಳಿಗಾಗಿ ಕಾಯಿರಿ.... ಬಜೆಟ್ ದಿನಗಳಿಗಾಗಿ ನಿರೀಕ್ಷಿಸಿ... ನಿಮ್ಮ ಪ್ರತಿಗಳನ್ನು ಈಗಲೇ ಕಾದಿರಿಸಿದರೆ ಕೊಳೆತು ಹೋಗುವುದು ಖಂಡಿತ...!!!! ಕಾಯಿರಿ... ಕಾಯಿರಿ...

ಸೂ: ಲಾಲೂ ಇಂದು ರೈಲು ಬಿಡುತ್ತಿರುವುದರಿಂದ ಕಳೆದ ಬಾರಿಯ ರೈಲ್ವೇ ಬಜೆಟ್ ಬೊಗಳೆ ಮಾಹಿತಿ ಇಲ್ಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ’ಮಂಗಮ್ಮಳ ಜೊತೆಗೆ ಮಾನವನ ವಿವಾಹ’ ಎನ್ನುವ ಸುದ್ದಿಯನ್ನೂ ಶೀಘ್ರದಲ್ಲೇ ಓದಲಿದ್ದೀರಿ. ಜಾರಕಾರಣಿಗಳಿಗೆ ದುಸ್ಸಲಹೆ ಕೊಡುವ ಜ್ಯೋತಿಷಿಗಳೊಬ್ಬರ ಪ್ರಕಾರ ಯಾವ ಜಾರಕಾರಣಿ ತನ್ನ ಕ್ಷೇತ್ರದಲ್ಲಿಯ ಮಂಗಮ್ಮಳ ಜೊತೆಗೆ ಮದುವೆ ಆಗುತ್ತಾನೊ, ಅವನಿಗೆ ಈ ಸಲದ ಚುನಾವಣೆಯಲ್ಲಿ ಆಕಾಶ ಕಾಣಿಸುವದು ಕಟ್ಟಿಟ್ಟ ಬುತ್ತಿ. ಹೀಗಾಗಿ ಮಂಗಮ್ಮಗಳಿಗೆ ಭಾರೀ ಬೇಡಿಕೆ ಬರ್ತಾ ಇದೆ. (೩೩% ರಿಜರ್ವೇಶನ್ ಮಂಗಪ್ಪಗಳಿಗೆ).

    ಪ್ರತ್ಯುತ್ತರಅಳಿಸಿ
  2. ಮದುವೆಯೆಂಬುದು ಕೇವಲ ಹೆಣ್ಣು ಗಂಡಿನ ನಡುವಿನ ಫಿಸಿಕ್ಸು, ಮೆಕಾನಿಕ್ಸು, ಎಕನಾಮಿಕ್ಸು ಹಾಗೂ ಭರಪೂರವಾದ ಬಯಾಲಜಿ ಅಲ್ಲ. ಅದು ಎರಡು ಆತ್ಮಗಳ ಸಮ್ಮಿಲನ ಎಂಬ ಬಹುದೊಡ್ಡ ಚಿಂತಕರ ಮಾತನ್ನು ಉಲ್ಲೇಖಿಸುತ್ತಾ, ಆತ್ಮ ಅವಿನಾಶಿ, ಬೇರೆ ಬೇರೆ ದೇಹಗಳನ್ನು ಧರಿಸಿ ಅದು ಭೂಮಿಯ ಮೇಲೆ ಪಾಪವನ್ನು ಹೆಚ್ಚು ಮಾಡುವುದಕ್ಕಾಗಿ ಅವತರಿಸುತ್ತದೆ. ಹೀಗಾಗಿ ಅಂತರ ಕೋತಿ ವಿವಾಹಗಳು, ಮಾನವ-ಕೋತಿ ವಿವಾಹಗಳು, ಕತ್ತೆ- ಕೋತಿ ವಿವಾಹಗಳು ನಡೆಯಲೇ ಬೇಕು ಆಮೂಲಕ ಆತ್ಮಗಳ ಸಮ್ಮಿಲನ ನಡೆಯ ಬೇಕು ಎಂದು ನಮ್ಮ ಸಂಸ್ಥೆ ಹಕ್ಕೊತ್ತಾಯ ಮಂಡಿಸುತ್ತಿದೆ. ಈ ಮಧ್ಯೆ ಹುಲಿ ಹಾಗೂ ಸಿಂಹಗಳ ಅನೈತಿಕ ಸಂಬಂಧದಿಂದ ಹುಟ್ಟಿದ ಲೈಗರ್‌ಗಳ ಹಿಂಡು ನಮ್ಮ ಕಚೇರಿಯನ್ನು ಸಂಪರ್ಕಿಸಿ ಕೇವಲ ಮದುವೆಯಲ್ಲ, ಮದುವೆಯಾಚೆಗಿನ ಸಂಬಂಧಗಳಿಗೂ ಮಾನ್ಯತೆ ಕೊಡಬೇಕು ಎಂದು ಒತ್ತಾಯಪಡಿಸಿವೆ.

    ಪ್ರತ್ಯುತ್ತರಅಳಿಸಿ
  3. ಸುನಾಥರೆ,
    ಜಾರಕಾರಣಿಗಳು ಏನು ಮಾಡಲೂ ಸಿದ್ಧವಿದ್ದರೂ, ಜ್ಯೋತಿಷ್ಯರ ಬಾಯಲ್ಲಿ ಈ ರೀತಿ ಅಪ-ವಾದ ಮಂಡಿಸುವುದು ಸರಿಯಲ್ಲ. ಇಂಥದ್ದನ್ನು ಅವರು ಮಾಡುತ್ತಲೇ ಇದ್ದಾರೆ., ಮಾಡುತ್ತಲೇ ಇರುತ್ತಾರೆ...

    ಪ್ರತ್ಯುತ್ತರಅಳಿಸಿ
  4. ಸುಪ್ರೀತರೆ,
    ನಿಮ್ಮ ಪಟ್ಟಿಯಲ್ಲಿ ಕೆಮಿಸ್ಟ್ರಿ ಬಿಟ್ಟು ಹೋಗಿದೆ. ಯಾಕೆಂದರೆ ಮದುವೆಯಾಚೆಗಿನ ಸಂಬಂಧಗಳಿಗಾಗಿಯೇ ಕೆಮಿಸ್ಟ್ರಿಯಲ್ಲಿ ಉಪಯೋಗಿಸಲಾಗುವ ಆಸಿಡ್‌ಗಳನ್ನು ಆಗಾಗ್ಗೆ ಬಳಸಲಾಗುತ್ತದೆ. ಯಾರು ಯಾರಿಗೆ ಆಸಿಡ್ ದಾಳಿ ಮಾಡಬೇಕೆಂಬುದು ಇನ್ನೂ ತೀರ್ಮಾನವಾಗುತ್ತಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D