(ಬೊಗಳೂರು ಪ.ಪೀ. ಸಂಘದಿಂದ)
ಬೊಗಳೂರು, ಫೆ.25- ಅಡುಗೆ ಮಾಡದಿರುವುದೇ ವಿಚ್ಛೇದನಕ್ಕೆ ಸಕಾರಣವಾಗಲಾರದು ಎಂಬ ನ್ಯಾಯಾಲಯದ ತೀರ್ಪಿನಿಂದ ಆಘಾತಗೊಂಡಿರುವ ಪ.ಪೀ.ಸಂಘವು, ಇನ್ನು ಮುಂದೆ ವಿಚ್ಛೇದನೆಗೆ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬಹುದು ಎಂಬುದರ ಕುರಿತು ಲೆಕ್ಕಾಚಾರ ಹಾಕತೊಡಗಿದೆ.ತಮ್ಮನ್ನು ಮದುವೆಯಾದವರು ಅಡುಗೆ ಮಾಡಲೇಬೇಕು. ಮಾಡದೇ ಇದ್ದವರು ಅಥವಾ ಅಡುಗೆ ಮಾಡಲು ಗೊತ್ತಿಲ್ಲದವರು ಮದುವೆಯಾಗಲು ಅನರ್ಹರು. ತಾವು ಹೇಳಿದಂತೆ ಕೇಳದಿದ್ದರೆ ವಿಚ್ಛೇದನೆ ಪಡೆಯಬಹುದು ಎಂಬುದು ಇದುವರೆಗೆ ಈ ಪ.ಪೀ.ಸಂಘದ ಸದಸ್ಯರಲ್ಲಿ ಇದ್ದ ಸಾಮಾನ್ಯ ಜನಾಭಿಪ್ರಾಯವಾಗಿತ್ತು.
ಮದುವೆಯಾದ ಮೇಲೆ ಬಟ್ಟೆ ಒಗೆಯಲು ಬಾರದಿರುವುದು, ಪಾತ್ರೆ ತೊಳೆಯಲು ಬಾರದಿರುವುದು, ನೀರು ಸೇದಿ ಹಾಕಲು ಆಗದಿರುವುದು, ಮಗುವನ್ನು ಸ್ನಾನ ಮಾಡಿಸಲು ಆಗದಿರುವುದು... ಇವೆಲ್ಲವನ್ನೂ ನೆಪ ಎಂದು ಇನ್ನು ಮುಂದೆ ನ್ಯಾಯಾಲಯಕ್ಕೆ ತಿಳಿಹೇಳುವುದು ಸಾಧ್ಯವಾಗದ ಮಾತು ಎಂಬುದನ್ನು ಗಂಭೀರವಾಗಿ ಪರಿಗಣಿಸಿರುವ ಪಪೀ ಸಂಘ, ಇನ್ನೇನು ಮಾಡಲಿ ಎಂದು ತಲೆ ಮೇಲೆ ಕೈಹೊತ್ತು ಕುಳಿತಿರುವುದಾಗಿ ವರದಿಯಾಗಿದೆ.
ಇದಲ್ಲದೆ, ಮದುವೆಯಾದ ಮೇಲೂ ಉದ್ಯೋಗಕ್ಕೆ ತೆರಳಬೇಕು ಎಂಬ ಕಂಡಿಶನ್ನನ್ನೂ ಹಾಕುವ ಸಾಧ್ಯತೆಗಳಿಗೆ ಕೂಡ ಕಲ್ಲು ಬಿದ್ದಂತೆ ಭಾಸವಾಗಿದೆ ಎಂದು ಪ.ಪೀ.ಸಂಘ ಆರೋಪಿಸಿದೆ.
ಸೂಚನೆ: ಓದುಗರು ಪ.ಪೀ.ಸಂಘವನ್ನು ಪಪ್ಪೀ ಸಂಘವೆಂದು ತಪ್ಪಾಗಿ ಓದಿಕೊಳ್ಳುವಂತಿಲ್ಲ. 'ಪೀ' ಎಂದರೆ ಪೀಡಿತ ಎಂಬುದು ಸರಿಯಾದ ಊಹೆ. ಆದರೆ 'ಪ' ಎಂಬುದು ಪತಿ ಮತ್ತು ಪತ್ನಿ ಎರಡಕ್ಕೂ ಅನ್ವಯವಾಗುವುದರಿಂದ ಇದನ್ನು ತಮಗೆ ಬೇಕಾದಂತೆ ತಿರುಚಿಕೊಂಡು ಓದಬಹುದು ಎಂದು ಸೂಚಿಸಲಾಗಿದೆ. ಇಲ್ಲವಾದಲ್ಲಿ, ಅದನ್ನು ಒಂದು ಬಾರಿ ಓದುವಾಗ ಪತ್ನಿ ಪೀಡಿತರ ಸಂಘವೆಂತಲೂ, ಮತ್ತೊಮ್ಮೆ ಓದುವಾಗ ಪತಿ ಪೀಡಿತರ ಸಂಘವೆಂತಲೂ ಓದಬೇಕೆಂದು ಆಜ್ಞಾಪಿಸಲಾಗಿದೆ.
4 ಕಾಮೆಂಟ್‌ಗಳು
ಪತ್ನಿ ಮಾಡಿದ ಅಡಿಗೆಯನ್ನು ಪತಿ ಕಷ್ಟಪಟ್ಟಾದರೂ ಸರಿ, ತಿನ್ನದೆ ಇದ್ದರೆ, ಪತ್ನಿಗೆ ಮಾನಸಿಕ ಆಘಾತವಾಗಬಹುದು. ಅದು ಅವಳು ವಿಚ್ಚೇದನ ಪಡೆಯುವದಕ್ಕೆ ಸಕಾರಣವಾಗಬಹುದೆಂದು ನನ್ನ ನಮ್ರ ಅಭಿಪ್ರಾಯ.
ಪ್ರತ್ಯುತ್ತರಅಳಿಸಿಸೂಚನೆಯನ್ನೇನೋ ಗಂಭೀರವಾಗಿ ಪರಿಗಣಿಸಿದೆವು. ಆದರೆ ಒಂದು ಡೌಟು! " ನಂ ನೀಜಿಲೆಂಡನಾಗೆ, ಎಂಗುಸ್ರುನ್ ಎಂಗುಸ್ರೇ, ಗಂಡುಸ್ರುನ್ ಗಂಡುಸ್ರೇ ಮದ್ವ್ಯಾಗ್ಬೌದು, ಅಂತೋರ್ರು ನಿಂ ಸೂಚ್ನೆನಾ ಎಂಗೆ ಓದ್ಬೇಕು? ವಸಿ ಏಳಿ ಸ್ವಾಮೇರಾ...!"
ಪ್ರತ್ಯುತ್ತರಅಳಿಸಿಸುನಾಥರೆ,
ಪ್ರತ್ಯುತ್ತರಅಳಿಸಿನಿಮ್ಮ ತಲೆ ಹೋಗುವ... ಅಥವಾ ನಮ್ಮ ತಲೆ ಹೋಗುವ ಐಡಿಯಾ ನೀಡಿದ್ದಕ್ಕೆ ಧನ್ಯವಾದ. ಆದರೆ ಅದು ಪತಿ ಮಾಡಿದ ಅಡುಗೆ ಕೂಡಾ ಆಗಬಹುದಲ್ಲವೇ?
ವಾಯ್ ನೀಲ್ಗಿರಿಯೋರೇ.....
ಪ್ರತ್ಯುತ್ತರಅಳಿಸಿಏನ್ ಮಾಡ್ಬೇಕೂಂದ್ರೆ.... ಎಂಗುಸ್ರುನ್ ಗಂಡುಸ್ರು ಮದ್ವೆಯಾಗ್ಬೇಕು... ಆ ಮ್ಯಾಕಿ, ಗಂಡುಸ್ರುನ್ ಎಂಗುಸ್ರ್ ಮದ್ವೆಯಾಗ್ಬೇಕ್ರೀ... ಆವಾಗ್ ಹ್ಯಾಗ್ ಬೇಕಾದ್ರೂ ತಿರ್ ತಿರುಗ್ಸಿ ಈ ಸೂಚ್ನೆಗೋಳ್ನ ಪಾಲಿಸ್ಬೋದ್ ಕಣ್ರೀ....
ಏನಾದ್ರೂ ಹೇಳ್ರಪಾ :-D