ಬೊಗಳೆ ರಗಳೆ

header ads

ಸಾಲ ಬೇಕಿದ್ದರೆ ಆತ್ಮ ಇರುವಿಕೆ ಸಾಬೀತುಪಡಿಸಿ!

ಬೊಗಳೂರು, ಫೆ.6- ಸತ್ತ ಮೇಲೂ ಬ್ಯಾಂಕಿನವರ ಕಾಟ ಮುಗಿಯುವುದಿಲ್ಲ ಎಂಬುದು ಇಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ, ಇನ್ನು ಮುಂದೆ ಸಾಲ ಮಾಡದಿರಲು ಹಾಗೂ ಮಾಡಿದರೂ ಸತ್ತ ಮೇಲೆ ಮಾಡಲು ಒಬ್ಬನೇ ಪ್ರಜೆಯಿರುವ ಊರಾದ ಬೊಗಳೂರಿನ ಸಮಸ್ತ ಸಮುದಾಯವು ನಿರ್ಧರಿಸಿದೆ.

ಹೇಗಿದ್ದರೂ ಐಸೀ ಐಸೀ ಹೈ ಬ್ಯಾಂಕಿನ ಕಿರುಕುಳ ಇದ್ದೇ ಇರುತ್ತದೆ. ಹಾಗಾಗಿ ಜೀವಂತವಾಗಿರುವಾಗ ಸಾಲದ ಉಸಾಬರಿ ಬೇಡ, ಸತ್ತ ಮೇಲೆಯೇ ಸಾಲ ಮಾಡುವುದಾಗಿ ಬೊಗಳೂರಿನ ಏಕ ಪ್ರಜಾ ಪರಿವಾರವು ತುರ್ತು ಸಭೆ ಸೇರಿ ಈ ನಿರ್ಣಯ ಕೈಗೊಂಡಿದೆ.

ಬೇರೆ ಯಾರೂ ಇಲ್ಲದ ಕಾರಣ, ಸಭೆಯಲ್ಲಿ ಹಾಜರಿದ್ದ ಒಬ್ಬನೇ ಸದಸ್ಯ ಮಾತನಾಡಲೆಂದು ಎದ್ದು ನಿಂತಾಗ, ಇದುವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದವರ ಆತ್ಮಗಳು ಮಾತ್ರವೇ ಹೂಂಗುಟ್ಟುತ್ತಿದ್ದವು.

ಈ ಬಗ್ಗೆ ಐಸೀ ಐಸೀ ಹೈ ಬ್ಯಾಂಕ್ ಅಧಿಖಾರಿಗಳನ್ನು ಬೊಗಳೂರು ಬ್ಯುರೋ ಪ್ರಶ್ನಿಸಿತು. ರೈತನ ಆತ್ಮಕ್ಕೆ ನೋಟಿಸ್ ಕಳುಹಿಸಿದ್ದಕ್ಕೆ ಸಮಜಾಯಿಷಿ ನೀಡಿದ ಅವರು, ಅವರು ಜೀವಂತವಾಗಿರುವಾಗ ನೋಟೀಸ್ ಕಳುಹಿಸಿದರೆ ಧರಣಿಯಲ್ಲಿರುವವರೆಲ್ಲರೂ ಧರಣಿ ಮಾಡುತ್ತಾರೆ. ಸತ್ತ ಮೇಲಾದರೆ ಅಲ್ಲಿ ಧರಣಿ ಅಂತ ನಡೆಸಲು ಧರಣಿಯೇ ಇರುವುದಿಲ್ಲ. ಅದೇನಿದ್ದರೂ ಭೂಮಿ ಮೇಲೆ ತಾನೇ ಇರೋದು ಅಂತ ಪ್ರಶ್ನಿಸಿದ್ದಾರೆ.

ತಮ್ಮ ಬ್ಯಾಂಕಿನ ಭಾವೀ ಯೋಜನೆಗಳ ಬಗ್ಗೆ ವಿವರಿಸಿದ ಅವರು, ಇನ್ನು ಮುಂದೆ ಸಾಲ ಕೊಡಲು ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ. ಜಮೀನು ಅಡವಿಟ್ಟು ಸಾಲ ಪಡೆಯುವವರು ತಮಗೆ ಆತ್ಮ ಇದೆ ಅಂತ ಸಾಬೀತುಪಡಿಸಲು ಸಾಕ್ಷ್ಯಾಧಾರ ನೀಡಬೇಕು. ಎಲ್ಲಾ ಮುಗಿದ ಮೇಲೆ ನೋಟೀಸ್ ಕಳುಹಿಸಲು ಇದು ಅನುಕೂಲ ಮಾಡಿಕೊಡುತ್ತದೆ ಎಂದವರು ಹೆಮ್ಮೆಯಿಂದ ಕ್ಯಾಕರಿಸಿ ನಗುತ್ತಾ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

 1. ಐಸಿ ಕೈಸಿ ಹೈ ಬ್ಯಾಂಕಿನವರ ಈ ಪಾಟಿ ಸವಾಲಿನಿಂದ ನಾಡಿನ ರೈತ ಕಂಗಾಲಾಗಿರುವುದು ‘ಲಂಡನ್ನಿನಲ್ಲಿ ಕಣ್ ಬಿಟ್ಟ ಮಣ್ಣಿನ ಮೊಮ್ಮಗ’ನ ಆಣೆಗೂ ನಿಜ. ಇಷ್ಟು ದಿನ ತಮ್ಮ ಕಷ್ಟಗಳಿಗೆ ಯಾವುದಕ್ಕೂ ‘ಸಾಲದ’ ‘ಸಾಲ’ದ ಶೂಲಕ್ಕಾಗಿ ಮನೆ, ಗುಡಿಸಲು, ಎಮ್ಮೆ, ಆಕಳು, ಟ್ರಾಕ್ಟರ್ರು, ಹೆಂಡತಿಯ ಮಾಂಗಲ್ಯ ಎಲ್ಲವನ್ನೂ ಕೊಟ್ಟ ಮೇಲೂ ಕೊನೆಗೆ ಕನಿಷ್ಟ ಪಕ್ಷ ಬೇಕೆಂದಾಗ ನೀಗಿಕೊಳ್ಳಲು ಆತ್ಮವಾದರೂ ಇರುತ್ತದಲ್ಲ ಎಂಬ ನೆಮ್ಮದಿಯಲ್ಲಿದ್ದ ಉಳುವ ಯೋಗಿ ಈಗ ಗಾಬರಿಯಾಗಿದ್ದಾನೆ.
  ಈ ನಡುವೆ ನಮ್ಮ ಸುದ್ದಿ ಸಂಸ್ಥೆ ಮುದ್ದಿ ತಿಂದು ನಿದ್ದಿ ಹೊಡೆಯುತ್ತಿದ್ದ ‘ಬುದ್ಧಿ’ಯವರ ಬಳಿ ‘ಸದ್ದಿ’ಲ್ಲದ ಹಾಗೆ ಹೋಗಿ ಇದ್ಕ ‘ಮದ್ದಿ’ಲ್ಲೇನ್ರಿ ಅಂತ ಕೇಳ್ತು. ಅದ್ಕ ನಿದ್ದಿ ಗೌಡ್ರು ಅಲ್ರೀ ಅವರ ಆತ್ಮ ಅವರಿಗೆ ಕೊಡ್ಲೇ ಬೇಕು ಇಲ್ಲಾಂದ್ರೆ ಅವರು ಆತ್ಮ ಹತ್ಯೆ ಮಾಡಿಕೊಳ್ಳೋದಕ್ಕೆ ಹೇಗೆ ಸಾಧ್ಯವಾಗುತ್ತೆ? ಈ ನಿಟ್ಟಿನಲ್ಲಿ ನಾನು ಸಂಪೂರ್ಣ ಬೆಂಬಲವನ್ನು ಸೂಚಿಸ್ತೀನಿ ಎಂದರು ತೂಕಡಿಸುತ್ತ.

  ಪ್ರತ್ಯುತ್ತರಅಳಿಸಿ
 2. ಆತ್ಮ ಇದ್ದವರಿಗೆ ಮಾತ್ರ ಸಾಲ ಕೊಡಲಾಗುವದು ಎನ್ನುವ ನಿರ್ಧಾರ ದುರದೃಷ್ಟಕರ. ಆತ್ಮವಿಲ್ಲದ ಅನೇಕರು ಈಗಾಗಲೇ
  (ಅ)ಸಹಕಾರಿ ಬ್ಯಾಂಕುಗಳನ್ನು float ಮಾಡಿ, sink ಮಾಡಿ ಅಮರರಾಗಿದ್ದಾರೆ.ಇಂಥವರಿಗೆ ಸಾಲ ಕೊಡದಿದ್ದರೆ ಅದು ಐಸೀ ಕೈಸೀ ಬ್ಯಾಂಕ್?

  ಪ್ರತ್ಯುತ್ತರಅಳಿಸಿ
 3. ಇನ್ನು ಮುಂದೆ ಸಾಲ ಕೊಡಲು ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ. ಜಮೀನು ಅಡವಿಟ್ಟು ಸಾಲ ಪಡೆಯುವವರು ತಮಗೆ ಆತ್ಮ ಇದೆ ಅಂತ ಸಾಬೀತುಪಡಿಸಲು ಸಾಕ್ಷ್ಯಾಧಾರ ನೀಡಬೇಕು.

  ಈ ಕಾನ್ಸೆಪ್ಟೇ ತುಂಬಾ ಚೆನ್ನಾಗಿದೆ......... ತುಂಬ creative ನೀವು......... ಪ್ರಿಂಟ್ ಮೀಡಿಯಾದಲ್ಲಿ ಯಾಕೆ ಒಮ್ಮೆ ಟ್ರೈ ಮಾಡ್ಬಾರ್‍ದು?

  ಪ್ರತ್ಯುತ್ತರಅಳಿಸಿ
 4. ಸುಪ್ರೀತರೆ,
  ನೀವೂ ಹೇಳೋದು ಸರಿ. ಕನಿಷ್ಠವಾಗಿರೋ ಪಕ್ಷವು ಕೇಳಿದಾಗ ನೀಗಿಕೊಳ್ಳಲು ಒಂದು ಆತ್ಮ ಇರಬೇಕಾದದ್ದು ಅಗತ್ಯವೇ. ಹೇಗಿದ್ದರೂ ಮಣ್ಣಿನ ಮಕ್ಕಳ ಪಕ್ಷವಲ್ವಾ....

  ಪ್ರತ್ಯುತ್ತರಅಳಿಸಿ
 5. ಸುನಾಥರೆ,
  ಐಸೀ ಕೈಸೀ ಬ್ಯಾಂಕ್ ಹೆ? ಎಂಬ ನಿಮ್ಮ ಚಿಂತೆ ನಮಗೂ ಅರಿವಾಗುತ್ತಿದೆ. ಆದರೆ ಸಮಾಧಾನಕರ ಸಂಗತಿಯೆಂದರೆ, ಆತ್ಮವಿಲ್ಲದವರು ಏನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಶೋಧನೆ ನಡೆಯುತ್ತಿವೆ.

  ಪ್ರತ್ಯುತ್ತರಅಳಿಸಿ
 6. ವೀ ಮನಸಿನ ಮಾತಿನವರೆ,
  ಹೊಸ ಗಾದೆ ಹುಟ್ಟು ಹಾಕಿದ್ದೀರಿ. ಆದರೆ ಅದನ್ನು ಇನ್ನೂ ಎಡಿಟ್ ಮಾಡಿದರೆ, ಸಾಲ ಮಾಡಿದೋನು ಸೋತರೂ "ಸಾಲಸೋಲ" ಅಂತಾದರೆ ಎಲ್ಲವೂ ಅ(ನ)ರ್ಥವಾಗಬಹುದಲ್ಲಾ...

  ಪ್ರತ್ಯುತ್ತರಅಳಿಸಿ
 7. ಕ್ಲೋಸಪ್ ಸಾರಿನವರೆ,
  ನೀವು ಹೇಳಿದ ಹಾಗೆಯೇ, ಛಾಪಾ ಕಾಗದ ಪ್ರಿಂಟ್ ಅಥವಾ ನೋಟು ಪ್ರಿಂಟ್ ಮೀಡಿಯಾದಲ್ಲಿ ಕಸ ಗುಡಿಸೋ ಕೆಲಸಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಮರಳಿ ಯತ್ನವ ಮಾಡು ಅಂತ ಹಿರಿಯರು ಹೇಳಿದ ಕಾರಣ, ಮರಳಿ ಮರಳಿ ಯತ್ನಿಸುತ್ತಿದ್ದಾರೆ ನಮ್ಮ ರದ್ದಿಗಾರರು.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D