(ಬೊಗಳೂರು ಕಿಡ್ನಿ ಮಾರ್ಕೆಟ್ ಸಮೀಕ್ಷಾ ಬ್ಯುರೋದಿಂದ)
ಬೊಗಳೂರು, ಫೆ.8- ತಲೆಯಲ್ಲಿ ಕಿಡ್ನಿ ಇರುವವರೇ ಈ ದಿ ಗ್ರೇಟ್ ಇಂಡಿಯನ್ ಕಿಡ್ನಿ ಮಾರ್ಕೆಟ್ ಪ್ರೈವೇಟ್ ಲಿ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ ಅಂತ ತಲೆಯಲ್ಲಿ ಏನನ್ನೂ ಇಟ್ಟುಕೊಳ್ಳದ ಬೊಗಳೆ ಬ್ಯುರೋದ ರದ್ದಿಗಾರರು ಪತ್ತೆ ಹಚ್ಚಿದ್ದಾರೆ.500ಕ್ಕೂ ಹೆಚ್ಚು ಕಿಡ್ನಿಗಳನ್ನು ಕಳವು ಮಾಡಿ ಮಾರಾಟ ಮಾಡಿದ್ದಾನೆ ಎಂದು ಯಾರ್ಯಾರೋ ಆರೋಪಿಸುತ್ತಿರುವ, ಗುರುಗುಟ್ಟುವ ಗಾಂವ್‌ನ ವೈದ್ಯ ಡಾ.ಅಪರಿಮಿತ ಕಿಡ್ನಿ ಕುಮಾರನನ್ನು ಬಂಧಿಸಿರುವ ಸುದ್ದಿ ಕೇಳಿದ ತಕ್ಷಣ ನೇಪಾಳಕ್ಕೆ ಪರಾರಿಯಾದ ಬೊಗಳೆ ಬ್ಯುರೋ ವಾ-ರದ್ದಿಗಾರರು, ಅಲ್ಲಿ ಕಿಡ್ನಿಗೆ ಚುಚ್ಚುವ (ಕಿಂಗ್)ಪಿನ್ನನ್ನು ಕೈಯಲ್ಲಿ ಹಿಡಿದುಕೊಂಡು ಮಾತನಾಡಿಸಿತು.
ಡಾ.ಕಿಡ್ನಿಕುಮಾರನಿಗೆ ಬೊಗಳೆ ಬ್ಯುರೋ ಏನೂ ತಿಳಿಯದವರಂತೆ ಕೇಳಿದ ಮೊದಲ ಪ್ರಶ್ನೆ ಎಂದರೆ "ಕಿಡ್ನಿ ಅಂದರೇನು?!!!".
ಅದಕ್ಕುತ್ತರಿಸಿದ ಕಿಡ್ನಿ ಕುಮಾರ್, ಕಿಡ್ನಿ ಅನ್ನೋದು ಬೇರೆಯವರ ದೇಹದಲ್ಲಿ ಸುಲಭವಾಗಿ ದೊರೆಯಬಹುದಾದ, ಅದನ್ನು ತೆಗೆದರೆ ನಮ್ಮ ಜೇಬು ತುಂಬಿಕೊಳ್ಳಬಹುದಾದ ಪುಟ್ಟದಾದ ನಿರುಪದ್ರವಿ ಅಂಗ. ಅದು ಕೆಲವು ಬಾರಿ ಕೆಲವರ ತಲೆಯಲ್ಲೂ ಇರುತ್ತದೆ. ಹಾಗಾಗಿ, ನಮ್ಮ ತಂತ್ರಗಳ ಅರಿವಿಲ್ಲದ, ಈ ತಲೆಯಲ್ಲಿ ಕಿಡ್ನಿ ಹೊಂದಿರುವವರ, ಉದರದ ಕೆಳಭಾಗದಲ್ಲಿರುವ ಗೇರುಬೀಜದ ಮಾದರಿಯ ಕಿಡ್ನಿಯನ್ನು ನಾವು ತೆಗೆಯುತ್ತಿದ್ದೆವು.
ನಿಮಗೆ ಕಿಡ್ನಿಯೇ ಏಕೆ ಬೇಕು? ಎಂಬುದು ಬೊಗಳೆಯಿಂದ ಬಂದ ಮತ್ತೊಂದು ಪ್ರಶ್ನೆ.
ಅದಕ್ಕೆ ಮಂಗಪಿನ್‌ನಂತಾಗಿರುವ ಕಿಂಗ್‌ಪಿನ್ ಉತ್ತರ: ಮನುಷ್ಯನಿಗೆ ಹೆಚ್ಚಾಗಿ ಎರಡು ಕಿಡ್ನಿಗಳಿರುತ್ತವೆ. ಕೇವಲ ಒಂದು ಕಿಡ್ನಿ ಇದ್ದರೂ ಮಾನವ ಯಂತ್ರವು ಸರಾಗವಾಗಿ ಕೆಲಸ ಮಾಡುತ್ತದೆ. ಆದರೆ ಈಗೀಗ ಮನುಷ್ಯರು ಸ್ವಾರ್ಥಿಗಳಾಗುತ್ತಿದ್ದಾರೆ. ಎರಡೂ ಕಿಡ್ನಿ ಹಾಳಾಗಿರುವವರನ್ನು ಬದುಕಿಸುವುದಕ್ಕಾಗಿ ತಮ್ಮ ವ್ಯರ್ಥವಾಗಿರೋ ಮತ್ತೊಂದು ಕಿಡ್ನಿಯನ್ನು ನೀಡಲು ಹಿಂಜರಿಯುತ್ತಿದ್ದಾರೆ.
ಯಾರು ಕೂಡ ಕಿಡ್ನಿಯನ್ನು ಕೊಡಲು ನಿರಾಕರಿಸುತ್ತಿರುವುದರಿಂದ ನಾವು ಆ ಹೆಚ್ಚುವರಿಯಾಗಿರುವ ಎರಡನೇ ಕಿಡ್ನಿಯನ್ನು ಮಾತ್ರವೇ ತೆಗೆಯುತ್ತಿದ್ದೆವು. ಅರಿವಿಲ್ಲದಂತೆಯೇ ತೆಗೆಯುವುದಕ್ಕಾಗಿ ಇರುವ ಅರಿವಳಿಕೆ ಔಷಧಿಯನ್ನೂ ನಾವು ವ್ಯರ್ಥ ಮಾಡಬಾರದಲ್ಲ... ಹಾಗಾಗಿ ಅರಿವಳಿಸಿ ಕಿಡ್ನಿ ತೆಗೆದು ಅದನ್ನು ಅವಶ್ಯಕತೆಯಿರುವವರಿಗೆ ನೀಡುತ್ತಿದ್ದೆವು ಎಂದು ಸುದೀರ್ಘವಾಗಿ ಬಾಯಿ ಹರಿದುಕೊಂಡಿರುವ ಕಿಡ್ನಿಕುಮಾರ, ಅಬ್ಬಾ... ಮನುಷ್ಯ ಇಷ್ಟೊಂದು ಸ್ವಾರ್ಥಿಯಾಗಬಾರದು, ಒಂದು ಕಿಡ್ನಿ ಇಟ್ಟುಕೊಂಡೂ, ಮತ್ತೊಂದು ಕೂಡ ತನಗೇ ಬೇಕು ಅಂತ ಹಠ ಹಿಡಿಯುವುದು ಎಷ್ಟು ಸರಿ ಎಂದು ಸ-ಖೇದ-ಆಶ್ಚರ್ಯ ಪ್ರಕಟಿಸಿದ್ದಾನೆ.
ಹಾಗಿದ್ದರೆ, ನಿನ್ನನ್ನು ಪೊಲೀಸರು ಬಂಧಿಸಿದ್ದೇಕೆ? ಎಂಬ ಕೊಟ್ಟ ಕೊನೆಯ ಪ್ರಶ್ನೆಗೆ ಅಪರಿಮಿತ ಕಿಡ್ನಿ ರಾಕೆಟ್ ಹಿಡಿದು ಆಡುತ್ತಿದ್ದ ಕುಮಾರನ ಉತ್ತರ:
ಪೊಲೀಸರಿಗೆ ಕೂಡ ತಲೆಯಲ್ಲಿ ಕಿಡ್ನಿ ಇಲ್ಲ. ನೋಡಿ, ನಾನು ಮಾಡುತ್ತಿದ್ದುದು ದೇಶ ಸೇವೆ. ಜನರನ್ನು ರಕ್ಷಿಸುವುದಕ್ಕಾಗಿಯೇ ಒಬ್ಬರ ಕಿಡ್ನಿ ತೆಗೆದು ಮತ್ತೊಬ್ಬರಿಗೆ ಅಳವಡಿಸುತ್ತಾ ಸುಖವಾಗಿದ್ದೆ. ಮತ್ತೊಬ್ಬರ ಜೀವವುಳಿಸುವುದನ್ನೇ ಹಗರಣ ಅಂತ ಕೂಗಾಡುತ್ತಿರುವ ಈ ಮಾಧ್ಯಮದ ಮಂದಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಈಗ ನೋಡಿ, ನನಗೆ ದೊಡ್ಡ ದೊಡ್ಡ ಕುಳಗಳ ಸಂಪರ್ಕವಿದೆ ಅಂತೆಲ್ಲಾ ಬರೆಯುತ್ತಾರೆ, ಸ್ವತಃ ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ವಿಪ್ರಸಿಂಗರೇ ಧಾವಂತದಿಂದ, ಲಗುಬಗನೆ ನಾನಲ್ಲ, ನಾನಲ್ಲ ಅಂತ ಈ ಆರೋಪಗಳನ್ನು ನಿರಾಕರಿಸುತ್ತಿದ್ದರೂ ಕೇಳುತ್ತಿಲ್ಲ. ಅಂದ ಮೇಲೆ ಈ ಮಾಧ್ಯಮದವರಿಗೂ ತಲೇಲಿ ಕಿಡ್ನಿ ಇಲ್ಲ ಎಂದಾಯಿತು ಅಂತ ಕಿಡ್ನಿ ಕಿಂಗ್‌ಪಿನ್ ತೀರ್ಪು ನೀಡಿಬಿಟ್ಟ.
ಕೊನೆಯದಾಗಿ ಏನೋ ಹೇಳಲು ಬಾಯಿತೆರೆದ ಆತನ ಬಾಯಿಯಲ್ಲಿರೋ ಹಲ್ಲುಗಳು ಕೂಡ ಕಿಡ್ನಿಯಾಕಾರದಲ್ಲಿದ್ದುದನ್ನು ಬೊಗಳೆ ಬ್ಯುರೋ ಕಂಡುಕೊಂಡಿತು. ಮಾತು ಆಡಿಯೇ ಬಿಟ್ಟ ಆತ, ಇಷ್ಟು ಸಣ್ಣ ಒಂದು ಅಂಗವನ್ನು ತೆಗೆದುಹಾಕಿದರೆ ನೀವೇಕೆ ಇಷ್ಟೊಂದು ಗಲಾಟೆ ಮಾಡ್ತೀರಿ? ದೊಡ್ಡ ದೊಡ್ಡ ಗಡ್ಡೆಗಳನ್ನು ದೇಹದಿಂದ ಹೊರತೆಗೆಯುವ ಅಥವಾ ಸಿಸೇರಿಯನ್ ಮಾಡಿ ಮಗುವನ್ನೇ ದೇಹದಿಂದ ಹೊರತೆಗೆಯುವ ವೈದ್ಯರ ಮೇಲೇಕೆ ನೀವು ಹರಿಹಾಯುವುದಿಲ್ಲ? ಎಂದು ಆತ ನಮ್ಮ ಬ್ಯುರೋವನ್ನೇ ಸಂದರ್ಶನ ಆರಂಭಿಸಿದಾಗ, ರದ್ದಿಗಾರರು ಗಪ್‌ಚಿಪ್!
ಸಂದರ್ಶನ ಮುಗಿಸಿ ಹೊರಬರುವಾಗ, 'ಎಲ್ಲಾದರೂ ಕಿಡ್ನಿಯನ್ನು ಎಗರಿಸಿಬಿಟ್ಟಿದ್ದರೆ....?' ಅಂಬೋ ಸಂಶಯದಿಂದ ನಮ್ಮ ರದ್ದಿಗಾರರು ತಮ್ಮ ತಲೆಯ ಯಾವುದಾದರೂ ಒಂದು ಭಾಗದಲ್ಲಿ ಗಾಯವಾಗಿದೆಯೇ ಎಂದು ತೀವ್ರವಾಗಿ ತಪಾಸಣೆ ಮಾಡಿಕೊಂಡರು...
ಇತ್ತೀಚೆಗೆ ಬಂದಿರುವ ವರದ್ದಿ ಪ್ರಕಾರ, ಕಿಡ್ನಿ ಮಾರ್ಕೆಟ್‌ನಲ್ಲಿ ತೀವ್ರ ಕೋಲಾಹಲ ಉಂಟಾಗಿದ್ದು, ಕಿಡ್ನಿ ಕಂಪನಿಯ ಶೇರು ಸೂಚ್ಯಂಕಗಳೆಲ್ಲವೂ ಏರುಪೇರಾಗಿದೆ.
10 ಕಾಮೆಂಟ್‌ಗಳು
ತನಗಾಗಿ ಏನನ್ನೂ ಇಟ್ಟುಕೊಳ್ಳದೆ, ತೆಗೆದ ಕಿಡ್ನಿಗಳನ್ನೆಲ್ಲಾ ಮಾರಾಟ ಮಾಡಿ, ಬಂದ ದುಡ್ಡಿನಲ್ಲಿ ತಾನೂ ಖುಷಿಯಿಂದಿದ್ದು,ತನ್ನ ಅಕ್ಕ-ಪಕ್ಕದ ಮನೆಯವರಿಗೆಲ್ಲಾ ಉಡುಗೊರೆಗಳನ್ನು ಕೊಟ್ಟು ಖುಷಿ ಪಡಿಸಿ ಹಿರಿತನವನ್ನು ಸಾರಿದ ಕಿಡ್ನಿಕುಮಾರನಿಗೆ ಬೊ-ರ ಕಡೆಯಿಂದ " ಭಾರತ ರತ್ನ " ಕೊಡಿಸಿ ಅನ್ವೇಷಿಗಳೇ ;)
ಪ್ರತ್ಯುತ್ತರಅಳಿಸಿಕಿಂಗ್(ಪಿನ್)ಅನ್ನು ಕೈಯಲ್ಲೇ ಹಿಡಿದುಕೊಂಡು ಮಾತನಾಡಿಸಿದ ಬೊಗಳ ಬ್ಯೂರೋದವರಿಗೆ ಪಿನ್ನು ಚುಚ್ಚಿತೋ ಇಲ್ವೋ ಕೊನೆಗೆ ಗೊತ್ತಾಗ್ಲೇಇಲ್ವಲ್ಲಾ?
ಪ್ರತ್ಯುತ್ತರಅಳಿಸಿಕಿಡ್ನಿ ರಾಕೆಟ್‌ನ್ನು ಉಡಾಯಿಸಿದ ನಿಮ್ಮ ವಾಹ್ ರದ್ದಿಗಾರರ ಬೈಯ್ಯೋ ಡಾಟಾವನ್ನು ನಮಗೇ ಕೂಡಲೆ ರವಾನಿಸಿದಲ್ಲಿ ಅವರನ್ನು ಇಸ್ರೋದ ಉಡಾವಣಾ ಕೇಂದ್ರಕ್ಕೆ ಸೇರಿಸಿಕೊಳ್ಳಲು ನಾವು ಶಿಫಾರಸ್ಸು ಮಾಡಬಹುದು.
ಪ್ರತ್ಯುತ್ತರಅಳಿಸಿಇನ್ನು ಕಿಂಗ್ ಪಿನ್ ಬಗ್ಗೆ, ಆತನ ಮನದಾಳದ ಮಾತು ಸತ್ಯಕ್ಕೆ ತೀರಾ ಅಂದರೆ ಕೆಲವೇ ಮೈಲುಗಳಷ್ಟು ಹತ್ತಿರದ್ದು ಎಂದು ನಮ್ಮ ಸಂ-ಶೋ-ಧನೆಯಿಂದ ಹೊರಬಿದ್ದಿದೆ. ಎಷ್ಟೋ ಮಂದಿ ಇನ್ನೊಬ್ಬರ ಮಾನವನ್ನೇ ಹೊರತೆಗೆದು ಹರಾಜು ಮಾಡುತ್ತಿರುವಾಗ, ಇನ್ನೆಷ್ಟೋ ಮಂದಿ ಹೆಣ್ಣು ಮಕ್ಕಳಿಗೆ ಕರವಸ್ತ್ರದಲ್ಲಿ ಬಟ್ಟೆ ಹೊಲಿಸಿ ಅವರ ಗೌರವವನ್ನೇ ಹರಾಜು ಹಾಕುತ್ತಿರುವಾಗ ಕೇವಲ ಒಂದು ಗೋಡಂಬಿ ಗಾತ್ರದ ಅಂಗವನ್ನು ಹರಾಜು ಹಾಕಿದ್ದಕ್ಕೆ ಏಕೆ ಈ ಪರಿಯ ಶಿಕ್ಷೆ ಎಂಬುದರ ಬಗ್ಗೆ ಸಂಶೋಧನೆ ನಡೆಯುತ್ತಿದೆ.
ಹೃದಯಗಳನ್ನು ಕದಿಯುವ ನೂರಾರು ಕಿಲಾಡಿಗಳು ನಮ್ಮ ಸುತ್ತಲೂ ತುಂಬಿಕೊಂಡಿದ್ದಾರೆ.ಅಂಥವರನ್ನು ಬಿಟ್ಟು ಯಃಕಶ್ಚಿತ್ ಕಿಡ್ನಿಯನ್ನು (ತಾನು ಇಟ್ಟುಕೊಳ್ಳದೆ) ಪರಭಾರೆ ಮಾಡುವ ಸಜ್ಜನನನ್ನು ಹಿಡಿಯುವದು ತಪ್ಪು.ಹೆಚ್ಚಿಗೆ ಇದ್ದವರಿಂದ ಕಸಿದುಕೊಂಡು ಇಲ್ಲದವರಿಗೆ ಹಂಚುವದೇ ಸಮಾಜವಾದಿಗಳ ಕೆಲಸವಲ್ಲವೆ?
ಪ್ರತ್ಯುತ್ತರಅಳಿಸಿಅಸತ್ಯಿಗಳೇ,
ಪ್ರತ್ಯುತ್ತರಅಳಿಸಿಕಿಡ್ನಿ ತರ ಮೆದುಳನ್ನು ಕದಿಯಲು ಈ ಡಾಕ್ಟರ್ ಪ್ರಯತ್ನ ಪಟ್ಟನಂತೆ, ಆದರೆ ಯಾವ ತಲೆ ಬಿಚ್ಚಿದರೂ ಒಂದು ಮೆದುಳು ಇರಲಿಲ್ಲವಂತೆ..ಪಾಪ..ಎನು ಮಾಡಬೇಕು ಗೊತ್ತಾಗದೇ ಅಲ್ಲೇ ಇದ್ದ ಕಿಡ್ನಿ ತಗೊಂಡನಂತೆ..
ನೀಲಗಿರಿಯವರೆ,
ಪ್ರತ್ಯುತ್ತರಅಳಿಸಿನಿಮ್ಮ ಸಲಹೆ ಸ್ವೀಕೃತವಾಗಿದೆ. ಆದರೆ ಅದನ್ನು ಬೊ.ರ.ತಾ ರತ್ನ ಎಂಬುದಾಗಿ ಬದಲಾಯಿಸಿದ್ದೇವೆ. ಕಿಡ್ನಿಯಾಕಾರದಲ್ಲಿರುವ ಈ ಪ್ರಶಸ್ತಿ ಫಲಕದ ತುಂಬಾ ಕಿಡ್ನಿಗಳ ಪ್ರತಿಕೃತಿಗಳಿರುತ್ತವೆ.
ಕ್ಲೋಸರ್ ಸಾಫ್ ಅವರೆ,
ಪ್ರತ್ಯುತ್ತರಅಳಿಸಿಬೊ.ರ.ದ ಬಲೂನ್ ಒಡೆದಿದ್ದರೆ ಪಿನ್ ಚುಚ್ಚಿದೆ ಅಂತ ಅರ್ಥ. ಪಿನ್ನೇ ಒಡೆದರೆ ಪಿನ್ನಿಗೇ ಬೊ.ರ. ಚುಚ್ಚಿದೆ ಅಂತ ಅನರ್ಥ.
ಸುಪ್ರೀತರೆ,
ಪ್ರತ್ಯುತ್ತರಅಳಿಸಿಬಯ್ಯೋ ಡಾಟವನ್ನು ರಹಸ್ಯವಾಗಿಡಲಾಗಿದೆ. ಆದರೂ ನೀವು ನಮ್ಮ ರದ್ದಿಗಾರರನ್ನು ಉಡಾಯಿಸುವುದಾಗಿ ಹೇಳಿದ್ದರೂ, ನಮಗೆ ಸಂಶಯ ಬರುತ್ತಿರುವುದು ಬ್ಯುರೋವನ್ನೇ ಉಡಾಯಿಸುತ್ತೀರೋ ಅಂತ. ಯಾಕಂದ್ರೆ ನಿಮ್ಮ ಶಿಫಾರಸಿನ ಓರೆಕೋರೆ ಅರ್ಥ ಅದೇ ಅಲ್ಲವೇ?
ಸುನಾಥರೆ,
ಪ್ರತ್ಯುತ್ತರಅಳಿಸಿನಿಮ್ಮ ಹೃದಯವನ್ನು ಕದ್ದವರ್ಯಾರು ಅಂತ ತನಿಖೆ ನಡೆಸಲಾಗುವುದು. ಆದರೆ ಈ ವಿಷಯದಲ್ಲಿ ಸಮಾಜವಾದವನ್ನು ಅನ್ವಯಿಸುವುದಿಲ್ಲ ಅಂತ ಭರವಸೆ ನೀಡುತ್ತೇವೆ.
ಶಿವ್ ಅವರೆ,
ಪ್ರತ್ಯುತ್ತರಅಳಿಸಿನಿಮ್ಮ ಸಂಶೋಧನೆ ಆತಂಕಕಾರಿಯಾಗಿದೆ. ತಲೆ ಇರುವವರಿಗೆ ಮಾತ್ರವೇ ಮತ್ತೊಬ್ಬರ ತಲೆ ಕಾಣಿಸುತ್ತದೆ. ಹಾಗಾಗಿ ಅವರು ಬೇರೆಯೇ ಕಡೆ ಕನ್ನ ಹಾಕಿದಾಗ, ಮೆದುಳಿನಂತೆಯೇ ನಯವಾಗಿದ್ದ ಈ ಅಂಗವನ್ನು ತೆಗೆದಿರಬಹುದು.
ಏನಾದ್ರೂ ಹೇಳ್ರಪಾ :-D