ಬೊಗಳೆ ರಗಳೆ

header ads

ಬೊಗಳೆಗೆ ಅರ್ಜಿ ಗುಜರಾಯಿಸಿದ ಪ್ರಿನ್ಸ್ ವಿಲಿಯಂ!

(ಬೊಗಳೂರು ಶಾಕಿಂಗ್ ನ್ಯೂಸ್ ಬ್ಯುರೋದಿಂದ)
ಬೊಗಳೂರು, ಫೆ. 4- ಬ್ರಿಟನ್ ರಾಜಕುಮಾರ ವಿಲಿಯಂ ಕೂಡ ಬೊಗಳೆಯಿಂದ ಪ್ರಭಾವಿತರಾಗಿದ್ದು, ಇದೀಗ ಅವರೇ ಕೆಲಸಕ್ಕಾಗಿ ಹಾಕಿದ ಅರ್ಜಿಯು ಬೊಗಳೆ ರಗಳೆ ಕೈ ಸೇರಿರುವುದಾಗಿ ನಂಬಲನರ್ಹ ಮೂಲಗಳು ಖಚಿತಪಡಿಸಿವೆ.

ಈಗಾಗಲೇ ಸೈನ್ಯದಲ್ಲೆಲ್ಲಾ ಕೆಲಸ ಮಾಡಿ ಉತ್ತಮ ಅನುಭವವಿರುವ ಅವರು ಪಾಪರಾಝಿ ಕಾಟದಿಂದ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಆದರೆ ಈ ಪಾಪರಾಝಿಗಳು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಕಲಿಯುವುದು ತಮ್ಮ ಉದ್ದೇಶ ಎಂದವರು ಒಂದೂವರೆ ಸಾಲಿನ ತಮ್ಮ ಅರ್ಜಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಈಗಿನ ಪಾಪರಾಝಿಗಳು ಪಾಪಿಗಳ ಬೆನ್ನು ಬೀಳಲಿದ್ದಾರೆಯೇ? ಎಂಬ ನಮ್ಮ ಅರ್ಧ ಸಾಲಿನ ಪ್ರಶ್ನೆಗೆ ಮರುತ್ತರಿಸುತ್ತಾ ತತ್ತರಿಸಿದ ಅವರು, ಖಂಡಿತವಾಗಿ, ಅಮ್ಮನ ಬೆನ್ನಟ್ಟಿದಂತೆಯೇ ಅವರ ಸಾವಿಗೆ ಕಾರಣರಾದವರನ್ನೂ ಬೆನ್ನಟ್ಟುತ್ತೇವೆ ಎಂದರು.

ಹಾಗಿದ್ದರೆ, ಬೊಗಳೆಗೇ ಏಕೆ ಅರ್ಜಿ ಗುಜರಾಯಿಸಿದಿರಿ? ಎಂಬ ಪ್ರಶ್ನೆಗೆ ಇರಿಸುಮುರಿಸಿಗೊಳಗಾದಂತೆ ಮುಖ ಸಿಂಡರಿಸಿದ ಅವರು, ಈ ಬಾರಿ ಸುದೀರ್ಘ ಉತ್ತರ ನೀಡತೊಡಗಿದರು.

ಕೆಟ್ಟದ್ದನ್ನು ಸುಟ್ಟು ಬಿಡಬೇಕು ಅಂತ ಹಿರಿಯರು ಹೇಳಿದ್ದಾರೆ. ಬೇಡವಾದದ್ದನ್ನು ಬೇರು ಸಹಿತ ಕಿತ್ತೊಗೆಯಬೇಕು ಅಂತನೂ ಹೇಳಿದ್ದಾರೆ. ಹಾಗಾಗಿ ಬೊಗಳೆ ಸೇರಿಕೊಂಡರೆ ಅದನ್ನು ಸುಡುವುದು, ಅದರ ಮೂಲ ಬೇರನ್ನೇ ಕಿತ್ತೊಗೆಯುವುದು ಹೇಗೆ ಅಂತ ಲೆಕ್ಕಾಚಾರ ಹಾಕುತ್ತಾ ಕಾಲ ಕಳೆಯಬಹುದು. ಹೇಗೂ ರಾಯಲ್ ಆರ್ಮಿ, ರಾಯಲ್ ನೇವಿ, ರಾಯಲ್ ಏರ್‌ಫೋರ್ಸ್‌ಗಳಲ್ಲಿ ಸೇರಿಕೊಂಡು ಫೈರಿಂಗ್, ಬ್ಲಾಸ್ಟಿಂಗ್ ಎಲ್ಲಾ ಕಲಿತಿದ್ದೇನೆ. ದಯವಿಟ್ಟು ನಿಮ್ಮನ್ನು ಮುಳುಗಿಸಲು ನೆರವಾಗಿ ಅಂತ ಸುದೀರ್ಘವಾಗಿ ಬರೆಯದ ಪತ್ರವೊಂದು ಬೊಗಳೆಯ ಏಕಸದಸ್ಯ ಬ್ಯುರೋದ ಪ್ರತಿಯೊಬ್ಬರಿಗೂ ಒಂದೊಂದರಂತೆ ಲಭಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ’ಬೊಗಳೆ’ಯ ಖ್ಯಾತಿ ಬ್ರಿಟನ್‌‍ವರೆಗೂ ಹಬ್ಬಿತೆ? ವಾಹ್!ವಾಹ್!

  ಪ್ರತ್ಯುತ್ತರಅಳಿಸಿ
 2. ಸುನಾಥರೆ,
  ನೀವು ವಾಹ್ ವಾಹ್ ಅಂದಿದ್ದು ನಮ್ಮ ವಾಹ್-ರದ್ದಿಗಾರರಿಗೂ ಕೇಳಿಸಿಬಿಟ್ಟಿತಲ್ಲಾ...

  ಪ್ರತ್ಯುತ್ತರಅಳಿಸಿ
 3. ಬ್ರಿಟನ್ನಿನ ರಾಜಕುಮಾರ ಪ್ರಿನ್ಸ್ ಇಲಿಯಮ್ಸ್ ನನ್ನು ಹುಲಿಯಮ್ಸ್ ನನ್ನಾಗಿಸಿ ಆತನನ್ನು ಬೊಗಳೆಯ ವಾಹ್ ರದ್ದಿಗಾರರ ಬಳಿಗೆ ಅಟ್ಟಿದ ಕೀರ್ತಿಗೆ ನಾವು ಭಾಜನರಾಗಬೇಕಾದ್ದು ಸ್ವಾಭಾವಿಕವೇ ಆದರೂ ಅಸ್ವಾಭಾವಿಕ ಕಾರಣಗಳಿಂದಾಗಿ ಅದು ಸ್ವಾಭಾವಿಕವಾಗಿ ಅಸ್ವಾಭಾವಿಕವಾಗುತ್ತಿದೆ.
  ಪಾಪರ್ ಆಜಿ ಪತ್ರಕರ್ತರು ಲೇಡಿಗಳ ಬೆನ್ನು ಹತ್ತಿದರೆ ಅವರ ತಾನು ಪಾಪ ರಾಜಿಗಳ ಏನನ್ನು ಹತ್ತಬೇಕು ಎಂಬ ಗೊಂದಲದಲ್ಲಿರುವ ಪ್ರಿನ್ಸ್ ನಲಿಯಮ್ಸ್ ಗೆ ಸೂಕ್ತ ಮಾರ್ ಗದ ರ್‌ಶನಕ್ಕಾಗಿ ಬೊಗಳೆಗೆ ರವಾನಿಸಿದ್ದೇವೆ.

  ಪ್ರತ್ಯುತ್ತರಅಳಿಸಿ
 4. ಸುಪ್ರೀತರೆ,
  ತಲೆ ಮೇಲೆ ಹತ್ತಬೇಕು ಎಂಬ ಈ ಮಾರ್- ಗದಾ-ರ್ಶನವನ್ನು ಬಹಿರಂಗವಾಗಿ ನೀಡುವಂತಿಲ್ಲ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D