ಬೊಗಳೆ ರಗಳೆ

header ads

ಸ್ವಯಂ ಸುಧಾರಣಾ ಆಯೋಗ ಅವಧಿ 1001ನೇ ಬಾರಿ ವಿಸ್ತರಣೆ

(ಬೊಗಳೂರು ವಿಶೇಷ ವಾಹ್-ರದ್ದಿಗಾರರಿಂದ)
ಬೊಗಳೂರು, ಜ.31- ಕಳೆದ ಸಾವಿರಾರು ವರ್ಷಗಳಿಂದ ಆಡಳಿತ ಸುಧಾರಣೆಗಾಗಿ ಹೆಣಗಾಡುತ್ತಾ, ದೇಶವು ಸಂಪದ್ಭರಿತವಾಗಬೇಕು, ಎಲ್ಲರೂ ಸಿರಿವಂತರಾಗಬೇಕು ಎಂಬಿತ್ಯಾದಿ ಕನಸಿನೊಂದಿಗೆ ಆಡಳಿತ ಸುಧಾರಣೆಯ ವರದಿ ತಯಾರಿಸುತ್ತಲೇ ಇರುವ ಆಯೋಗದ ಅವಧಿಯನ್ನು ಸಾವಿರದ ಒಂದನೇ ಸಲ ವಿಸ್ತರಿಸಲಾಗಿದೆ.

ಕೇಂದ್ರದಲ್ಲಿ ಸಂಪುಟ ರಚಿಸಿಯೂ ತಮ್ಮ ಪಕ್ಷದವರಿಗೆಲ್ಲರಿಗೂ ಬೇಕಾಬಿಟ್ಟಿ ಖಾತೆಗಳು ದೊರೆಯುವುದು ಸಾಧ್ಯವಿಲ್ಲ. ಹಾಗಾಗಿ ವಿದೇಶ ಯಾತ್ರೆ ಸಮಿತಿ, ಸಮನ್ವಯ ಸಮಿತಿ, ಆತ್ಮಹತ್ಯೆ ಅಧ್ಯಯನ ಸಮಿತಿ, ಪ್ರೇಮಿಗಳ ಪರಾರಿ ಸ್ಟಡಿ ಸಮಿತಿ, ಮಾತ್ರವಲ್ಲದೇ ಕೇಂದ್ರ ಸರಕಾರಕ್ಕೂ ಮೇಲಿನ, ವಿದೇಶೀ ಮೂಲದ ನಾರೀ ಮಣಿಗೆ ಸರ್ವ ಅಧಿಕಾರಗಳನ್ನು ನೀಡಬಲ್ಲ ಯುಪಿಎ ಸಮಿತಿ ಮುಂತಾದ ಅದೆಷ್ಟೋ ಮಿತಿಯಿಲ್ಲದ ಸಮಿತಿಗಳನ್ನು ಮಿತಿ ಮೀರಿ ಹುಟ್ಟು ಹಾಕಿರುವ ಕೇಂದ್ರ ಸರಕಾರವು, ತಮ್ಮ ಆಡಳಿತ ಸರಿ ಇಲ್ಲ ಎಂಬುದನ್ನೂ ಮನಗಂಡಿತ್ತು. ತತ್ಫಲವಾಗಿ, ಇದರ ಸುಧಾರಣೆಗಾಗಿಯೇ ಈ ದುರಾಡಳಿತ ಸುಧಾರಣಾ ಆಯೋಗವನ್ನು ರೂಪಿಸಿರುವುದು ಏನಾದರೂ ಸ್ಥಾನಮಾನಕ್ಕಾಗಿ ಹಾತೊರೆಯುತ್ತಿದ್ದವರ ಸುಯೋಗವಾಗಿತ್ತು.

ಇದರಿಂದ ಪಕ್ಷದಲ್ಲಿ ಸೂಕ್ತ ಮಾನವಿಲ್ಲದಿದ್ದರೂ, ಸ್ಥಾನ ಸಿಗದೇ ಅಸಮಾಧಾನಗೊಂಡವರೆಲ್ಲರೂ ಚೆನ್ನಾಗಿ ಸುಧಾರಣೆಯಾಗುತ್ತಿದ್ದಾರೆ ಎಂಬುದನ್ನು ಬೊಗಳೆ ಬ್ಯುರೋ ಪತ್ತೆ ಹಚ್ಚುವಲ್ಲಿ ಅಯಶಸ್ವಿಯಾಗಿದೆ.

ಈಗ ನಮ್ಮ ಹಿರಿಯರ ಪ್ರಾಚೀನ ಕಾಲದಲ್ಲಿ ರಚಿಸಲಾಗಿದ್ದ ಈ ಆಯೋಗದ ಅವಧಿಯನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ಈ ಬಾರಿ ಕನಿಷ್ಠ ಒಂದು ಸಾವಿರ ವರ್ಷ ವಿಸ್ತರಿಸುವ ಪ್ರಸ್ತಾಪವಿದ್ದರೂ, ಅಷ್ಟೆಲ್ಲಾ ಸಮಯ ನಾವಿರೋದು ಗ್ಯಾರಂಟಿ ಇಲ್ಲ ಎಂಬ ಬಗ್ಗೆ ಎಲ್ಲೋ ಒಂದು ಕಡೆಯಿಂದ ವಿರೋಧದ ಅತ್ಯಂತ ಕ್ಷೀಣ ದನಿ ಕೇಳಿ ಬಂದ ಹಿನ್ನೆಲೆಯಲ್ಲಿ ಸದ್ಯಕ್ಕೆ ಆರು ತಿಂಗಳು ವಿಸ್ತರಿಸೋಣ ಎಂದು ತೀರ್ಮಾನಿಸಲಾಗಿದೆ.

ಈಗಾಗಲೇ ಸಮಿತಿಯು ಹತ್ತು ಹಲವು ಬಾರಿ ವರದಿಗಳನ್ನು ಸಲ್ಲಿಸಿದ್ದು, ಆ ವರದಿಯಲ್ಲಿ ಏನಿದೆ ಎಂಬುದನ್ನು ಭಗವಂತನೊಬ್ಬನೇ ಓದಿ ತಿಳಿದುಕೊಳ್ಳುತ್ತಿದ್ದಾನೆ ಎಂದು ಅಲೌಕಿಕ ಲೋಕದಿಂದ ನಮ್ಮ ವಾಹ್-ರದ್ದಿಗಾರರು ಒದರಿದ್ದಾರೆ.

ಪ್ರಾಥಮಿಕ ವರದಿ, ದ್ವಿತೀಯಕ, ತೃತೀಯಕ, ತಾತ್ಕಾಲಿಕ, ಅಂದಾಜು ವರದಿ, ಮಧ್ಯಂತರ ವರದಿಗಳನ್ನೆಲ್ಲಾ ಸಲ್ಲಿಸುತ್ತಿದ್ದ ಈ ಸ್ವಯಮಾಡಳಿತ ಸುಧಾರಣಾ ಸಮಿತಿಯು, ಎಲ್ಲರೂ ಚೆನ್ನಾಗಿ ಸುಧಾರಣೆಯಾದ ಬಳಿಕವಷ್ಟೇ ಅಂತಿಮ ವರದಿ ಸಲ್ಲಿಸಲಿದೆ ಎಂಬುದನ್ನು ನಮ್ಮ ರದ್ದಿಗಾರರು ಪತ್ತೆ ಹಚ್ಚಿದರೂ ಆ ವರದಿಯನ್ನು ಕಳುಹಿಸದೆ ಸುಮ್ಮನೇ ಕುಳಿತಿದ್ದಾರೆ. ಯಾಕೆಂದರೆ, ಈ ವರದಿಯನ್ನು ಬ್ಯುರೋಗೆ ಕಳುಹಿಸಿಬಿಟ್ಟರೆ, ಅದನ್ನು ಅವರು ಬೊಗಳೆ ರಗಳೆಯಲ್ಲಿ ಪ್ರಕಟಿಸುತ್ತಾರೆ, ಆ ಮೇಲೆ ರದ್ದಿಗಾರರಿಗೆ ಕೆಲಸವೇ ಇರುವುದಿಲ್ಲ ಎಂಬ ದುರಾಡಳಿತ ಸುಧಾರಣಾ ಆಯೋಗದ "ಸಹವಾಸ ದೋಷ"ದ ಫಲ!

ಇದರೊಂದಿಗೆ ಅಂತಿಮ ವರದಿಗಾಗಿ ಕಾಯುವಿಕೆಗಿಂತನ್ಯ ತಪವು ಇಲ್ಲ ಎಂಬ ದಾಸರ ಪದಗಳನ್ನು ಕೇಂದ್ರವು ಭಜ್ಜಿಸುತ್ತಾ ಇರುತ್ತದೆ ಎಂದು ತಿಳಿದುಬಂದಿದೆ. ಅದು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಮರಣೋತ್ತರ ವರದಿಯಾದರೂ ಲಭ್ಯವಾಗಲಿದೆ ಎಂಬುದನ್ನು ನಿರೀಕ್ಷಿಸಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ದುರಾಡಳಿತ ಸುಧಾರಣೆ ಆಯೋಗದವರು ಅಯೋಧ್ಯಾವಾಸನ ಅನ್ವೇಷಣೆ ಗ್ರಂಥವನ್ನೂ ಸಾಲಾಗಿ ರಚಿಸಿ ಸಾಹಿತಿಗಳೇ ಹುಬ್ಬೇರುವಂತೆ ಮಾಡುತ್ತಿದ್ದಾರಲ್ಲ...

    ಪ್ರತ್ಯುತ್ತರಅಳಿಸಿ
  2. "ಎಲೈ ಅರ್ಜುನ(ಸಿಂಗ)ನೆ,
    ಆತ್ಮಗಳಂತೆ ಆಯೋಗಗಳಿಗೂ ಸಾವಿಲ್ಲ. ಆಯೋಗಗಳು ಯಾವಾಗಲೂ ಸಮಾಧಿ ಸ್ಥಿತಿಯಲ್ಲಿ ಇರುತ್ತವೆ. ಈ ರಹಸ್ಯವನ್ನು
    ನನ್ನ ಭಕ್ತರಿಗೆ ಮಾತ್ರ ತಿಳಿಸುವ ಉದ್ದೇಶದಿಂದ ’ಬೊಗಳೆ ರಗಳೆ’ಯಲ್ಲಿ ಪ್ರಕಾಶಿಸುತ್ತಿದ್ದೇನೆ. ಯಾರು ಆಯೋಗಗಳನ್ನು ಭಕ್ತಿಯಿಂದ ಪೂಜಿಸುತ್ತಾರೊ, ಅವರಿಗೆ ಐಶ್ವರ್ಯ ಹಾಗೂ ಅಧಿಕಾರ ದೊರೆಯುವವು.ಯಾರು ಆಯೋಗಗಳಲ್ಲಿ ಸಂಶಯ ಪಡುತ್ತಾರೊ, ಅವರು ಸಂಶಯಾತ್ಮಾ ವಿನಶ್ಯತಿ ಎಂದು ಹಾಳಾಗುವರು."
    -ಭಗವಾನ್ ಮನಮೋಹನ

    ಪ್ರತ್ಯುತ್ತರಅಳಿಸಿ
  3. ವೇಣು ವಿನೋದರೆ,

    ಗ್ರಂಥದಿಂದಾಗಿ ಸಾಹಿತಿಗಳ ಹುಬ್ಬೇರಿದ್ದಲ್ಲ, ಅದರ ಲೇಖಕರು ಯಾರು ಎಂಬುದರಿಂದಾಗಿಯೇ ಹುಬ್ಬು ಗಂಟಿಕ್ಕಿದ್ದು ಅಂತ ವಿವೇಕಿಗಳು ಹೇಳುತ್ತಿದ್ದಾರೈ.

    ಆದರೆ ಇಲ್ಲಿ ಸತ್ಯ ಹೇಳಬಾರದು ಎಂಬ ನಿಯಮವಿರುವುದರಿಂದಾಗಿ ನಾವು ಹೇಳುತ್ತಿಲ್ಲ...

    ಪ್ರತ್ಯುತ್ತರಅಳಿಸಿ
  4. ಸುನಾಥರೆ,
    ಈ ಭಗವಾನ್ ಮನಮೋಹನರ ಗೀತೆಯ ಹಿಂದೆ ಸೋನಿಯಾಗೀತೆಯ ಗುನುಗುನುವಿಕೆ ಕೇಳಿಸುತ್ತಿದೆ.

    ಪ್ರತ್ಯುತ್ತರಅಳಿಸಿ
  5. ಸ್ವಯಂ ಸುಧಾರಣಾ ಆಯೋಗದ ಸಾಧನೆಯನ್ನು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿಯೂ ಹಾಗೂ ಆರ್ಟ್ ಹಾಫ್ ಲಿವಿಂಘ್‌ನ ಬಿಟ್ಟಿ ಉಪದೇಶಗಳಲ್ಲಿಯೂ ಸೇರಿಸಬೇಕು ಎಂದು ಗಂಟಲು ಹರಿಯುವಂತೆ ಪಿಸುಗುಡುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ
  6. ಸುಪ್ರೀತರೆ,
    ಮೆಲ್ಲ ಪಿಸುಗುಡಿ. ಇಲ್ಲವಾದಲ್ಲಿ ಯಾರಿಗೂ ಕೇಳಿಸಲಾರದು...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D