ಬೊಗಳೆ ರಗಳೆ

header ads

ಭಜ್ಜಿಗೆ ಶಿಕ್ಷೆ ಪೂರ್ವಜರನ್ನು ನೆನಪಿಸಿದ್ದಕ್ಕಾಗಿಯೇ?

(ಬೊಗಳೂರು ಶಂಕಾಸ್ಪದ ಬ್ಯುರೋದಿಂದ)
ಬೊಗಳೂರು, ಜ.10- ಮಂಗನಿಂದ ಮಾನವ ಎಂದು ಗೊತ್ತಿದ್ದೂ, ಮಾನವನಿಂದಲೇ ಮಂಗ ಎಂದುಕೊಳ್ಳುವವರಿಗೇನೂ ಕೊರತೆಯಿಲ್ಲ. ಆದರೆ ಈ ಮಂಗವೇ ವಿವಾದಕ್ಕೆ ಕಾರಣವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಪ್ರಾಣಿಗೇನೋ ಅನ್ಯಾಯವಾಗ್ಬಿಟ್ಟಿದೆ ಅಂತ ಸಿಡ್ನಿಗೆ ತೆರಳಿದಾಗ ಅಸತ್ಯ ವಿಷಯ ಬಹಿರಂಗವಾಗಿತ್ತು.

ಭಜ್ಜಿಯು ಯಾರನ್ನು ಮಂಗ ಮಾಡಿದ್ದು ಮತ್ತು ಮಂಗನು ಯಾವುದನ್ನು ಜಜ್ಜಿ ಜಜ್ಜಿ ಬಜ್ಜಿ ಮಾಡಿದ್ದು ಅಂತ ಗೊಂದಲದಲ್ಲಿ ಸಿಲುಕಿರುವ ಓದುಗರ ಗೊಂದಲ ಮತ್ತಷ್ಟು ಹೆಚ್ಚಿಸುವ ಪ್ರಯತ್ನವೇ ಈ ವರದಿ ಎಂದು ಬೊಗಳೆ ರಗಳೆ ಬ್ಯುರೋ ಸ್ಪಷ್ಟಪಡಿಸುತ್ತಿದೆ.

ಆದರೆ ಇಲ್ಲಿ ಮಂಗ ಯಾರು ಎಂಬುದೇ ಗೊಂದಲಕ್ಕೆ ಕಾರಣವಾದ ಪ್ರಧಾನ ಅಂಶ. ಹಲವು ಶಂಕೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಔಟಾಗದಿದ್ದರೂ ತೋರ್‌ಬೆರಳು ಎತ್ತದೇ ಇರುವವರೋ ಅಥವಾ ಔಟಾಗಿಯೂ ಬೆರಳೆತ್ತದವರೋ... ಅಥವಾ ಹಿಡಿದ ಚೆಂಡನ್ನು ನೆಲಕ್ಕೆ ತಾಗಿಸಿಯೂ ಔಟ್ ಅಂದವರೋ, ಅಂಪೈರಿಗೆ ಒಂದು ಬೆರಳೆತ್ತಿ ಸೂಚನೆ ನೀಡಿ ನಮ್ಮ ಕ್ಲರ್ಕು ಮಾಡಿದ್ದೇ ಸರಿ ಅಂತಂದವರೋ...ಔಟಾಗಿದ್ದು ಗೊತ್ತಾದರೂ ಅಂಪೈರು ಕೊಡಲಿಲ್ಲ ಅಂತ ಆಟ ಮುಂದುವರಿಸಿ ಸೆಂಚುರಿ ಗಡಿ ದಾಟಿದವರೋ,. ಮಾತನಾಡಿದ್ದಕ್ಕೇ ವಿನಾಕಾರಣ, ತಮ್ಮ ಜನಾಂಗವನ್ನೇ ನಿಂದಿಸಿದರು ಅಂತ ದೂರಿತ್ತವರೋ...

ಇಂಥ ಶಂಕೆಗಳಿಗೆ ಕಾರಣರಾದವರನ್ನು ಮಂಗ ಎಂದು ಹೇಳಿದರೆ ಮಂಗ ಜಾತಿಗೇ ಅವಮಾನವಾಗುತ್ತದೆ ಎಂಬುದಾಗಿ ಕಾಂಗರೂ ನಾಡಿಗೆ ಪ್ರವಾಸ ತೆರಳುವ ಮುನ್ನವೇ ಮಂಗ ಜಾತಿಯವರು ಈ ಮೊದಲೇ ನಮ್ಮ ಬ್ಯುರೋಗೆ ಅನಧಿಕೃತ ಮತ್ತು ಅನೌಪಚಾರಿಕ ಭೇಟಿ ಎಚ್ಚರಿಸಿಹೋಗಿದ್ದವು. ಹಾಗಾಗಿ ನಾವು ಇದುವರೆಗೆ ಬಾಯಿ ಮುಚ್ಚಿಕೊಂಡಿರಬೇಕಾಗಿತ್ತು.

ಅಂತೆಯೇ, ಭಜ್ಜಿಯು ಪೂಜ್ಯಭಾವದಿಂದಲೇ ಮಂಗ ಅಂತ ಹೇಳಿದ್ದಾರೆ. ಇದು ಜನಾಂಗೀಯ ನಿಂದನೆಯಲ್ಲ. ಅದು ಅವರ ಪೂರ್ವಜರನ್ನು ನೆನಪಿಸುವುದು ಅಷ್ಟೇ ಎಂಬುದನ್ನು ಕಂಡುಕೊಳ್ಳಲಾಗಿದೆ. ಪೂರ್ವಜರ ಸ್ಮರಣೆ ಯಾವತ್ತೂ ಅತ್ಯಂತ ಮುಖ್ಯ. ಆದರೆ ಸುಮ್ಮನೇ ಮಾತನಾಡಿದಾಗ, ಒಮ್ಮೆಲೇ ಆಕ್ರೋಶಗೊಂಡು "ಟೀಚರ್... ಇಂವ ನನ್ನನ್ನು ಚಿವುಟಿದ... ಇಂವ ನನಗೆ ಬೈದ" ಅಂತ ಮೇಷ್ಟ್ರಲ್ಲಿ ದೂರು ಕೊಟ್ಟು, ಅವನನ್ನು ಶಾಲೆಯಿಂದಲೇ ಹೊರಗೆ ಹಾಕಿಸುವ ಪ್ರಯತ್ನದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕಿರಿಕಿರಿಕೆಟ್ಟಾಟದ ಪ್ರೇಮಿಗಳು, ತಮ್ಮನ್ನು ತಾವೇ ಆ ರೀತಿ ತಿಳಿದುಕೊಳ್ಳುವ ಭ್ರಾಂತಿ ರೋಗವೇ ಇದಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

ಏನೇ ಆದರೂ, ಭಜ್ಜಿ ಮಂಗನ ಸುದ್ದಿ ತೆಗೆಯದೇ ಇದ್ದರೆ ಒಳ್ಳೆಯದೇ. ಆದರೆ ಎಲ್ಲಾದರೂ ಭಜ್ಜಿಯ ಬಾಯಿಂದ ಈ ಮಾತು ಉದುರಿದ್ದರೆ ಅದೇನೂ ಜನಾಂಗೀಯ ನಿಂದನೆಯಲ್ಲ, ತಮ್ಮದೇ ಜನಾಂಗದ ಬಗ್ಗೆ ನಾವು ಮಾತನಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದೂ, ದೇವರ ನಾಮಸ್ಮರಣೆಯಿಂದ ಮತ್ತಷ್ಟು ಭಯ, ಭಕುತಿ, ಶಕುತಿ, ಯುಕುತಿ ಎಲ್ಲವೂ ದೊರೆಯುತ್ತದೆಯೆಂದೂ ಬ್ಯುರೋ ತೀರ್ಪು ನೀಡಿದೆ.

ತೀರಾ ಇತ್ತೀಚೆಗೆ ಆಸ್ಟ್ರೇಲಿಯಾದಿಂದ ಬಂದಿರುವ ಒದರಿಗಳ ಪ್ರಕಾರ, ಆಸ್ಟ್ರೇಲಿಯಾದಲ್ಲಿ ಕೆಲವು ಮಂದಿ ಪಾನಗೋಷ್ಠಿ ರಹಿತ ತುರ್ತು ಪತ್ರಿಕಾಗೋಷ್ಠಿ ಕರೆದು, ತಾವು ಮಂಗ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

 1. ಈ ಕ್ರಿಕೆಟ್ ಆಟ ಈ ಬಾರಿ ಬಹಳ ಕಿರಿಕೆಟ್'ಹೋಯ್ತಲ್ಲ ಅನ್ವೇಷಿಗಳೆ?

  ಪ್ರತ್ಯುತ್ತರಅಳಿಸಿ
 2. ಕಾಂಗರೂ ಟೀಮಿನ ’ಬಾಲ’ ಕತ್ತರಿಸುವದರಲ್ಲಿ ಈ ಭಜ್ಜಿ ಭಾಳಾ expert. ಅದಕ್ಕೆಂದೇ, ತಮ್ಮ ಬಾಲವನ್ನು ಹಿಂಭಾಗದಲ್ಲಿ ಮುಚ್ಚಿಕೊಂಡು, ’ನಮಗೇ ಬಾಲವೇ ಇಲ್ಲ, ನಾವು ಮಂಗಗಳೇ ಅಲ್ಲ’ ಅಂತ ಈ ಕಾಂಗರೂಗಳು ಕುಣಿದಾಡುವದು. ಆಯ್ತು, ಮುಂದಿನ ಪಂದ್ಯದಲ್ಲಿ ಕಾಂಗರೂಗಳ ಬಾಲ ಹಾಗೆಯೆ ಉಳಿದೀತೆ?

  ಪ್ರತ್ಯುತ್ತರಅಳಿಸಿ
 3. ತಮ್ಮ ಗುಣ ಸ್ವಭಾವವನ್ನು, ಕಿರಿಕೆಟ್ಟಿನ ಶೈಲಿಯನ್ನು, ಮೈದಾನದಲ್ಲಿನ ‘ಜಂಗಲ್’ಮನ್ ವರ್ತನೆಯನ್ನು ಗಮನಿಸಿದವರು ತಮಗೆ ‘ಕೋತಿಗಳು ಸಾರ್ ಇವ್ರು ಕೋತಿಗಳು’ ಎಂದು ಅನ್ವರ್ಥನಾಮದಿಂದ ಕರೆಯಬಾರದು ಎಂತಲೇ ತಮ್ಮನ್ನು ತಾವು ‘ಕಾಂಗರೂ’ಗಳು ಎಂದು ಕರೆದುಕೊಂಡಿರುವುದಾಗಿ ಪಂಟರ್ ಪಾಂಟಿಂಗರು ನಮ್ಮ ಪತ್ರಿಕೆಯ ಏಕೈಕ ಒದರಿಗಾರನನ್ನು ಖಾಸಗಿಯಾಗಿ ಕರೆದುಕೊಂಡು ಸಾರ್ವಜನಿಕ ಸುದ್ದಿಗೋಷ್ಟಿ ನಡೆಸಿದ್ದಾರೆ.

  ಈ ಸಂದರ್ಭದಲ್ಲಿ ನಡೆದ ಸತ್ಯಘಟನೆಯೊಂದಕ್ಕೆ ಸಾಕ್ಷಿಯಾದ ನಮ್ಮ ಒದರಿಗಾರ ಅದನ್ನು ಇಲ್ಲಿ ಒದರುತ್ತಿದ್ದಾನೆ. ಸುದ್ದಿ ಗೋಷ್ಟಿಯ ತುಂಬಾ ಕೈಲಿ ಹಿಡಿದಿದ್ದ ಮೈಕನ್ನು ಪಾಂಟಿಂಗ್ ಬಹು ಮೆಚ್ಚುಗೆಯಿಂದ, ಸ್ವಲ್ಪ ಕಕ್ಕುಲತೆಯಿಂದ ನೇವರಿಸುತ್ತಾ ಅದರ ನುಣುಪಾದ ಮೈಕಟ್ಟನ್ನು ಆಸ್ವಾದಿಸುತ್ತಾ, ಮಾತನಾಡುವ ನೆಪದಲ್ಲಿ ಯಾರ ಕಣ್ಣಿಗೂ ಬೀಳದಂತೆ ಚುಂಬಿಸುತ್ತಾ ಇದ್ದರು. ಗೋಷ್ಟಿ ಮುಗಿದ ಕೂಡಲೇ ಅವರ ಬಳಿಗೆ ಧಾವಿಸಿದ ಸೈ-ಮೊಂಡು, “ರಿಕಿ, ನಿನಗೆ ಅಭ್ಯಂತರವಿಲ್ಲ ಅಂದರೆ ನನ್ನ ಬಾಲವನ್ನು ಬಿಡುತ್ತೀಯಾ, ನನಗೆ ಬೇರೆ ಕೆಲಸವಿದೆ.” ಎಂದದ್ದನ್ನು ನಮ್ಮ ಒದರಿಗಾರ ಖುದ್ದು ಕಿವಿಗಳಿಂದ ವೀಕ್ಷಿಸಿ ಗಾಬರಿಬಿದ್ದು ಓಡಿಬಂದಿದ್ದು ವರದಿಯಾಗಿಲ್ಲ.

  ಪ್ರತ್ಯುತ್ತರಅಳಿಸಿ
 4. ಸುಪ್ತದೀಪ್ತಿಯವರೆ,
  ಹೌದು. ಜೆಂಟಲ್ ಮ್ಯಾನ್ ಆಟ ಈಗ ಜಂಗಲ್ ಮ್ಯಾನ್ ಆಗುವತ್ತ ದಾಪುಗಾಲಿಕ್ಕುತ್ತಿದೆ.

  ಪ್ರತ್ಯುತ್ತರಅಳಿಸಿ
 5. ಸುನಾಥರೆ,
  ಒಟ್ಟಿನಲ್ಲಿ ಬಿಸಿಬಿಸಿಯಾಗಿರುವ ಭಜ್ಜಿಯನ್ನು ತಿಂದು ಕಾಟ ಇಲ್ಲದಂತಾಗಿಸಲು ಕಾಂಗರೂಗಳು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡ್ತಾ ಇವೆ.

  ಪ್ರತ್ಯುತ್ತರಅಳಿಸಿ
 6. ಸುಪ್ರೀತರೆ,
  ನಿಮ್ಮ ಒದರಿಗಾರರ ಮೇಲೆ ನಮ್ಮ ಕಣ್ಣು ಬಿದ್ದಿದೆ. ಮೈಕನ್ನು ಬಾಲವಾಗಿಯೂ, ಬಾಲವನ್ನು ಮೈಕ್ ಆಗಿಯೂ ಬಳಸುತ್ತಿರುವುದನ್ನು ಸಮರ್ಪಕವಾಗಿಯೇ ಪತ್ತೆ ಹಚ್ಚಿದ್ದಾರೆ. ಅವರ ಬಾಲವನ್ನು ನಮ್ಮ ಕೈಗೆ ಕೊಡಿ, ಜುಟ್ಟು ಎಳೆಯುತ್ತೇವೆ.

  ಪ್ರತ್ಯುತ್ತರಅಳಿಸಿ
 7. ಸೈ-ಮೊಂಡನನ್ನು " ಮಂಗ " ಅಂದಿದಕ್ಕೆ ಅನ್ವೇಷಿಗಳು ಕೇಸು ಹಾಕುವುದಿಲ್ಲವಾ?? ;-)

  ಪ್ರತ್ಯುತ್ತರಅಳಿಸಿ
 8. ನೀಲಗಿರಿಯವರೆ,

  ಕಳೆದ ವರ್ಷ ನಾಪತ್ತೆಯಾದವರು ಈ ವರ್ಷ ಬಂದಿದ್ದೀರಿ. ಸ್ವಾಗತ.

  ಮಂಗ ಅಂದಿದ್ದಕ್ಕೆ ಕೇಸು ಹಾಕುವುದಿಲ್ಲ, ಆದರೆ ನಮ್ಮನ್ನೆಲ್ಲಾದರೂ ಸೈಮೊಂಡ ಅಂದಿದ್ದರೆ ಖಂಡಿತಾ ಅವಮಾನ ನಷ್ಟ ಕೇಸು ಹಾಕುತ್ತಿದ್ದೆವು.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D