ಬೊಗಳೆ ರಗಳೆ

header ads

ವಿಸ್ಡನ್ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ಅಂಪೈರಿಗೆ!

(ಬೊಗಳೂರು ಇಲೈಟ್ ಅಂಪೈರು ಬ್ಯುರೋದಿಂದ)
ಬೊಗಳೂರು, ಜ.7- ಆಸ್ಟ್ರೇಲಿಯಾ ತಂಡದಲ್ಲಿರುವ 12 ಮತ್ತು 13ನೇ ಆಟಗಾರರೇ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಶ್ವಚಾಂಪಿಯನ್ನರಿಗೆ ವಿಜಯ ದೊರಕಿಸಿಕೊಟ್ಟಿದ್ದು, ಅವರು ವಿಶ್ವ ಚಾಂಪಿಯನ್ನರೇ ಆಗಿರುತ್ತಾರೆ ಏಕೆಂಬುದು ಮತ್ತೊಮ್ಮೆ ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ, ಅಂಪೈರಿಂಗು ಮಾಡುತ್ತಲೇ ಉತ್ತಮ ಪೈರು ತೆಗೆಯುತ್ತಾ, ಕಾಂಗರೂ ತಂಡದ 12ನೇ ಆಟಗಾರರಾಗಿರುವ ಬೀವ್ ಸ್ಟಕ್ನರ್ ಅವರನ್ನು ಬೊಗಳೆ ರಗಳೆ ಮಾತನಾಡಿಸಿದಾಗ ಅವರು ತಮ್ಮದೇ ಯೋಚನಾ ಲಹರಿಯನ್ನು ಹರಿಯಬಿಟ್ಟರು. ಅವರದೇ ಮಾತುಗಳಲ್ಲಿ ಕೇಳಿ:

ಅಂಪೈರುಗಳಿಗೂ ಆಟವಾಡಲು ದೊರೆಯುವ ಅವಕಾಶವನ್ನು ಅಧಿಕೃತಗೊಳಿಸಬೇಕು. ಭಾರತ ತಂಡದವರು ಆಡುತ್ತಿರುವಾಗ ನಮಗೆ ಕೈ ಎತ್ತಿ ಎತ್ತಿ ಸಾಕಾಗಿ ಹೋಗುತ್ತದೆ. ಹಾಗಾಗಿ ಕೆಲವೊಮ್ಮೆ ಬೆರಳು ಎತ್ತುವುದು ಕಷ್ಟವಾಗುತ್ತದೆ ಎಂದು ಅವರು ಒದರಿದ್ದಾರೆ.

ನಾನು ಕಾಂಗರೋದ್ಧಾರ!

ಅಂತೆಯೇ, ಶ್ರೀಕೃಷ್ಣ ಪರಮಾತ್ಮನು ಕಿರುಬೆರಳಿನಲ್ಲಿ ಮಂದರಗಿರಿಯನ್ನು ಎತ್ತಿದನಂತೆ. ನಾವೀಗ ವಿಶ್ವಚಾಂಪಿಯನ್ನರನ್ನೇ ಎತ್ತಿಬಿಟ್ಟಿದ್ದೇವೆ. ಕೃಷ್ಣನಿಗೆ ಮಂದರೋದ್ಧಾರ ಎಂಬ ಹೆಸರು ದೊರೆತರೆ, ಸೋಲಿನ ಅಂಚಿನಲ್ಲಿ ಚಡಪಡಿಸುತ್ತಿದ್ದ ನಮ್ಮ ಭಕ್ತರನ್ನು ನಾವು ರಕ್ಷಿಸಿ, ಕಾಂಗರೋದ್ಧಾರ ಎಂಬ ಬಿರುದಿಗೆ ಪಾತ್ರರಾಗಿದ್ದೇವೆ ಎಂದು ಅವರು ಸಮರ್ಥಿಸಿಕೊಂಡರು.

ಕಣ್ಣು ಪರೀಕ್ಷೆಗೆ ನಿರಾಕರಣೆ

ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬುದಾಗಿ ವಿಶ್ವಾದ್ಯಂತ ಬಂದಿರುವ ಆಗ್ರಹಗಳನ್ನು ಖಡಾಖಂಡಿತವಾಗಿ, ಕಡ್ಡಿ ಮುರಿದಂತೆ ತುಂಡು ಮಾಡುತ್ತಾ ನಿರಾಕರಿಸಿರುವ ಬೀವ್ ಸ್ಟಕ್ನರ್ ಅವರು, ನಮ್ಮ ಕಣ್ಣು ಸರಿಯಾಗಿಯೇ ಇದೆ. ರಿಕಿ ಪಾಂಟಿಂಗಿಗೆ, ಮೈಕ್ ಹಸ್ಸೇಗೆ ನಾವು ಔಟ್ ಕೊಟ್ಟಿದ್ದೇವೆಯೇ? ಚೆಂಡು ಇಬ್ಬರ ಬ್ಯಾಟಿಗೂ ತಗುಲಿ, ಅದನ್ನು ಭಾರತೀಯರು ಕ್ಯಾಚ್ ಹಿಡಿದಿದ್ದರು. ಆಗ ನಾನು ಔಟ್ ಕೊಟ್ಟಿರಲಿಲ್ಲವಲ್ಲ. ಹಾಗಾಗಿ ನನ್ನ ಕಣ್ಣು ಸರಿಯಾಗಿಯೇ ಇದೆ ಎಂದು ಸಮರ್ಥಿಸಿಕೊಂಡರು.

ದ್ರಾವಿಡ್ ಮತ್ತು ಗಂಗೂಲಿ ಅವರ ಬ್ಯಾಟಿಗೆ ಚೆಂಡು ತಗುಲಿರಲೇ ಇಲ್ಲವಾದರೂ, ಅದನ್ನು ನಾನೀಗ ಚೆಂಡು ಬ್ಯಾಟಿಗೆ ತಗುಲಿದೆ ಎಂದೇ ಸಮರ್ಥಿಸಿಕೊಳ್ಳಬೇಕಾಗಿದೆ ಎಂದು ಪರದಾಡಿದ ಅವರು, ನಾನು ಐಸಿಸಿ ಇಲೈಟ್ ಪ್ಯಾನೆಲ್ ಸದಸ್ಯ. ಏನು ಮಾಡಿದರೂ ನಡೆಯುತ್ತದೆ ಎಂದು ಕಪ್ಪು ಹಾಗೂ ಹ್ಯಾಪು ಮೋರೆಯಲ್ಲಿ ಕಾಣಿಸುತ್ತಿದ್ದ ಏಕೈಕ ವಸ್ತುಸಮೂಹವಾದ ಹಲ್ಲುಗಳನ್ನು ತೋರಿಸುತ್ತಾ ನುಡಿದರು.

12, 13ನೇ ಆಟಗಾರರಿಗೂ ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ

ತಮ್ಮ ಆಟವನ್ನು ಮೆಚ್ಚಿ ತಮಗೇ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ನೀಡುವಂತೆ ಆಗ್ರಹಿಸಿದ ಅವರು, ಅಂಪೈರುಗಳನ್ನು ಇವರೆಲ್ಲಾ ಏನೂಂತ ತಿಳಿದಿದ್ದಾರೆ. ನಾವು ಕೂಡ ಪಂದ್ಯ ಗೆಲ್ಲಿಸಿಕೊಡಬಲ್ಲೆವು ಎಂಬುದು ಇದರಿಂದ ಸಾಬೀತಾಗಲಿಲ್ಲವೇ ಎಂದು ಪ್ರಶ್ನಿಸಿದರು.

ಅಂಪೈರುಗಳಿಗೆ ಶ್ರೇಷ್ಠ ಕ್ರಿಕೆಟಿಗ ವಿಸ್ಡನ್ ಪುರಸ್ಕಾರ

ಈ ಹಿನ್ನೆಲೆಯಲ್ಲಿ, ಅಂಪೈರು ಬೀವ್ ಸ್ಟಕ್ನರ್ ಮೇಲೆ ಕಣ್ಣಿಟ್ಟಿರುವ ಬೊಗಳೆ ರಗಳೆ ಬ್ಯುರೋ, ಮುಂದಿನ ದಿನದ ಪಂದ್ಯಗಳಲ್ಲೂ ಇವರು ತಮ್ಮ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲಿ. ಅವರಿಗೆ ವಿಸ್ಡನ್ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಯನ್ನು ದೊರಕಿಸಿಕೊಡಲು ತೀವ್ರ ಹೆಣ-ಗಾಟ ನಡೆಸುವುದಾಗಿ ಶಪಥ ತೊಟ್ಟಿದೆ. ಈ ಮೂಲಕ, ಕಣ್ಣು ಕಾಣಿಸದ, ಅಕ್ಷರಶಃ ವಿಕಲಾಂಗ ಅಂಪೈರುಗಳು ಕೂಡ ಜೀವಮಾನ ಶ್ರೇಷ್ಠ ಪುರಸ್ಕಾರ ಪಡೆಯುವಂತಾಗಬೇಕು ಎಂಬುದು ನಮ್ಮ ಬ್ಯುರೋದ ಕಳಕಳಿ.

ಸ್ಪಿನ್ನರುಗಳಿಗೆ ಶಾಶ್ವತ ನಿಷೇಧ: ಕಾಂಗರೂ ನಾಯಕ ಆಗ್ರಹ

ಈ ನಡುವೆ, ಭಾರತ ಉಪಖಂಡದ (ಭಾರತದ ಕುಂಬ್ಳೆ, ಹರಭಜನ್, ಶ್ರೀಲಂಕಾದ ಮುರಳೀಧರನ್, ಪಾಕಿಸ್ತಾನದ ಅಬ್ದುಲ್ ಖಾದಿರ್) ಸ್ಪಿನ್ನರುಗಳನ್ನು ಎದುರಿಸಲು ಯಾವತ್ತೂ ಹೆಣಗಾಡುತ್ತಿದ್ದ ಕಾಂಗರೂಗಳು, ಸ್ಪಿನ್ನರುಗಳನ್ನು ಎದುರಿಸಲು ಕಂಡುಕೊಂಡ ಮಾರ್ಗಕ್ಕೆ ವಿಶ್ವಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ. ಚೆನ್ನಾಗಿ ಸ್ಪಿನ್ ಬೌಲಿಂಗ್ ಮಾಡುತ್ತಿದ್ದರೆ ಅವರ ಮೇಲೆ ಚಕ್ಕಿಂಗ್ ಮಾಡುವ, ಜನಾಂಗೀಯ ನಿಂದನೆಯ ಆರೋಪ ಹೊರಿಸಿದಲ್ಲಿ, ಅವರು ಮುಂದಿನ ಯಾವುದೇ ಟೆಸ್ಟ್ ಪಂದ್ಯಗಳಿಗೆ ನಿಷೇಧಕ್ಕೊಳಗಾಗುತ್ತಾರೆ. ಇದರಿಂದ ಅವರ ತಂಡವನ್ನು ಎದುರಿಸುವುದು ಮತ್ತಷ್ಟು ಸುಲಭ ಎಂದು 9ನೇ ಬಾರಿಗೆ ಹರಭಜನ್ ಸ್ಪಿನ್‌ಗೇ ಬಲಿಯಾದ ಕಾಂಗರೂ ನಾಯಕ ಪಿಟಿ ರಾಂಕಿಂಗ್ ಹೇಳಿದ್ದಾರೆ.

ಅಲ್ಲದೆ, ಪಾಪದ ಕಾಂಗರೂಗಳನ್ನು ಕಾಡುವ ಸ್ಪಿನ್ನರುಗಳಿಗೆ ಆಜೀವ ನಿಷೇಧವಾಗಬೇಕು, ಅವರ ಮೇಲೆ "ಪಾಪ"ದ ಪ್ರಾಣಿಗಳಿಗೆ ಕಿರುಕುಳ ನೀಡುವ ಆರೋಪ ಹೊರಿಸಿ ಕೇಸು ಜಡಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. pontingne ICC mattu bucknar mUlak bajjige fitting iTTavane...
  16 satata test winge bucknar koDuge tumba udArawaagide....

  ಪ್ರತ್ಯುತ್ತರಅಳಿಸಿ
 2. ಕಾಂಗರೂ ತಂಡದಲ್ಲಿ ೧೧ ಕಾಂಗರೂಗಳು ಯಾಕೆ ಬೇಕು? ಇಬ್ಬರೇ ಆಟಗಾರರು ಹಾಗು ಇಬ್ಬರೇ ಅಂಪೈರುಗಳು ಓಕೆ!

  ಪ್ರತ್ಯುತ್ತರಅಳಿಸಿ
 3. ಮಹಾಂತೇಶರೆ,
  ವಿಶ್ವ ಚಾಂಪಿಯನ್ನರಾಗುವುದೆಂದರೆ ಸುಮ್ಮನೆಯಾ? ಬಕ್ ಬಕ್ ಬಕ್ವಾಸ್‌ನರ್‌ರಂಥವರು ಬೇಕೇ ಬೇಕು!

  ಪ್ರತ್ಯುತ್ತರಅಳಿಸಿ
 4. ಸುಧೀಂದ್ರರೆ,
  ಎಲ್ಲ ಕಾಂಗರೂಗಳೂ ಬಹುತೇಕ ಹೊಟ್ಟೆಯೊಳಗೊಂದನ್ನು ಬಚ್ಚಿಟ್ಟುಕೊಂಡೇ ಇರುತ್ತವೆ. ಆಗಾಗ್ಗೆ ಅವುಗಳೇ ಹೊರಬರುತ್ತಿರುತ್ತವಷ್ಟೇ. ಈಗ ಹಳೇ ಕಾಂಗರೂಗಳೆಲ್ಲಾ ಎಷ್ಟು ಚೆನ್ನಾಗಿ ಹೊಸ ಕಾಂಗರೂಗಳ ವರ್ತನೆಯನ್ನು ಉಗಿಯುತ್ತಿವೆ.... ಆದರೂ ಈ ಕಾಂಗರೂಗಳಿಗೆ ಬುದ್ಧಿ ಬರುವುದಿಲ್ಲ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D