• ಅಕ್ಷರ ಸಂಕ್ರಾಂತಿಯಾಗಲಿ ಎಂಬ ಹಾರೈಕೆಯೊಡನೆ ಬೊಗಳೆಯ ಎಲ್ಲ ಓದುಗರಿಗೆ ಸಂಕ್ರಾಂತಿಯ ಶುಭಾಶಯಗಳು

 • (ಬೊಗಳೂರು ಭಯಭೀತ ಬ್ಯುರೋದಿಂದ)
  ಬೊಗಳೂರು, ಜ.14- ಮಾಧ್ಯಮಗಳಿಗೆ ಅಸತ್ಯ ನಿಷಿದ್ಧವೇ ಎಂದು ನಾವು ವಾದ ಮಾಡಲೇಬೇಕಾದ ಕಾಲ ಇಂದು ಸನ್ನಿಹಿತವಾಗಿದೆ. ಮೊನ್ನೆಯೇ ಸನ್ನಿಹಿತವಾಗಿತ್ತಾದರೂ, ಬೇರೆ ಕೆಲಸಗಳಿದ್ದುದರಿಂದ ಇಂದು ಸನ್ನಿಹಿತವಾಗಿದೆ ಅಂತ ತಿಳಿದುಕೊಳ್ಳುತ್ತಿದ್ದೇವೆ.

  ಇಂಥದ್ದೊಂದು ಕಿರಿಕಿರಿ ಚರ್ಚೆಗೆ ಒಗ್ಗರಣೆ ಹಾಕಿದ್ದು ಇಲ್ಲಿ ಮೂಡಿ ಬಂದ ವರದಿ. ಇದನ್ನು ನಾವು ಇಲ್ಲಿ ವಾದಿಸಿ, ತುಂಡಿಸಿ, ತಿರುಚಿ ನಮ್ಮ ಅಪ-ವಾದವನ್ನು ಮಂಡಿಸುತ್ತಿದ್ದೇವೆ.

  ಹೌದು. ಯಾವುದೇ ಮಾಧ್ಯಮಗಳಲ್ಲಿ ಪರ-ವಿರೋಧಗಳಿರುವುದು ಸಹಜ. ಆದರೆ ಅಸತ್ಯವನ್ನು ನಿರ್ಲಕ್ಷಿಸುವುದು ಖಂಡಿತಾ ಸಲ್ಲದು. ಆದರೂ ಕೆಲವೊಂದು ಮಾಧ್ಯಮಗಳು ಅಸತ್ಯವನ್ನು ನಿರಾಕರಿಸುವ ಪರಿಪಾಠ ಬೆಳೆಸಿಕೊಂಡಿರುವುದು ಈ ಅಸತ್ಯದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿರುವ ನಮಗೆ ಶೋಚನೀಯ ಸಂಗತಿ. ಹಾಗಾಗಿ ನಾವೂ ಕೇಳುತ್ತಿದ್ದೇವೆ- ಮಾಧ್ಯಮಗಳಿಗೆ ಅಸತ್ಯ ನಿಷಿದ್ಧವೇ?

  ಜಾರಕಾರಣಿಗಳಿಗೆ ಸಾರ್ವತ್ರಿಕವಾಗಿ ಮತ್ತು ಸದಾಕಾಲ ಅಪ್ರಿಯವಾದ ಸತ್ಯವನ್ನು ನಾವೇಕೆ ಅನುಸರಿಸಬೇಕು? ಅಸತ್ಯವನ್ನೇ ಯಾವತ್ತೂ ನಾವೇಕೆ ಅನುಸರಿಸಬಾರದು? ಜಾರಕಾರಣಿಗಳ ಬಾಯಲ್ಲಿ ಯಾವತ್ತೂ ನಲಿದಾಡುತ್ತಿರುವ ಈ ಅಸತ್ಯವನ್ನು ನಾವೇಕೆ ನಿಷೇಧಿಸಬೇಕು?

  ಒಟ್ಟಿನಲ್ಲಿ ಈ ರೀತಿ ಅಸತ್ಯ ನಿಷಿದ್ಧವೇ ಎಂದು ಪ್ರಶ್ನೆ ಹುಟ್ಟುಹಾಕುವ ಮೂಲಕ ಅಸತ್ಯಾನ್ವೇಷಣೆಯಲ್ಲಿರುವ ಬೊಗಳೆ ರಗಳೆಯ ಅಸ್ತಿತ್ವವನ್ನೇ ನಾಶ ಪಡಿಸುವ ಸಂಚುಗಳ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. "ಅಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು" ಅಂತ ಹಿರಿಯರೇ ಹೇಳಿದ್ದಾರೆಂಬುದನ್ನು ಹೇಳಿಕೊಳ್ಳುತ್ತಾ ತಿರುಗಾಡುತ್ತಿರುವ ಬ್ಯುರೋ ಸಿಬ್ಬಂದಿಯನ್ನು ಅಲುಗಾಡಿಸಿ ಲಗಾಡಿ ತೆಗೆಯುವ ಪ್ರಯತ್ನವೇ ಇದು?

  ಇದೀಗ ಕರುನಾಟಕ ದೇಶದೊಳ್ ಚುನಾವಣೆಗಳು ಕೂಡ ಹತ್ತಿರ ಬರುತ್ತಾ ಇದೆ. ಇಂಥ ಸಂದರ್ಭದಲ್ಲಿ ಅಸತ್ಯ ನಿಷೇಧಿಸಿದಲ್ಲಿ ಒಬ್ಬೇ ಒಬ್ಬ ಜಾರಕಾರಣಿಯೂ ಆರಿಸಿ ಬರುವುದು ಸಾಧ್ಯವಿಲ್ಲ. ಜಾರಕಾರಣಿಗಳ ಬಾಯಿಂದ ಪುಂಖಾನುಪುಂಖವಾಗಿ ಉದುರುವ ಅಸತ್ಯ ವಾಕ್ಯಗಳನ್ನು ಹೆಕ್ಕಿಕೊಂಡು ಪ್ರಕಟಿಸದಿದ್ದರೆ, ಅವರ ಗತಿ ಏನಾಗಬೇಡ? ನಮಗೊಂದು ಅಸತ್ಯಮೇವ ಜಯತೇ ಎಂಬ ಲೋಗೋವುಳ್ಳ ಸರಕಾರವಾದರೂ ಬೇಡವೇ? ಇದನ್ನೆಲ್ಲಾ ಯಾರೂ ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದು ಕಳವಳದ ಸಂಗತಿ.

  "...ಸತ್ಯಮಪ್ರಿಯಂ" ಅಂತಲೂ ನಮ್ಮ ಹಿರಿಯರು ಹೇಳಿದ್ದಾರೆ. ಸತ್ಯ ಯಾವಾಗಲೂ ಅಪ್ರಿಯವಾಗಿರುತ್ತದೆ. ಹಾಗಾಗಿ ಅಪ್ರಿಯವಾದುದನ್ನು ಪ್ರಕಟಿಸಿ ಜನರ ಮನಸ್ಸನ್ನೇಕೆ ಕೆಡಿಸಬೇಕು? ಇಲ್ಲಿ ಕೆಲವು ಮಾಧ್ಯಮಗಳು ಸತ್ಯವನ್ನು ನಿರಾಕರಿಸುವ ಪರಿಪಾಠ ಬೆಳೆಸಿಕೊಂಡಿದೆ ಎಂದು ಹೇಳಿರುವುದು ಬೊಗಳೆರಗಳೆಯನ್ನು ಉದ್ದೇಶಿಸಿಯೇ ಹೇಳಿರಬಹುದಾಗಿದೆ ಎಂದು ನಾವು ಹೆಗಲು ಮುಟ್ಟಿ ತಟ್ಟಿಕೊಳ್ಳುತ್ತಿದ್ದೇವೆ. ಇದು ಬೊಗಳೆ ರಗಳೆ ವಿರುದ್ಧ ಷಡ್ಯಂತ್ರವಾಗಿದ್ದು, ಈ ಬಗ್ಗೆ ಅಸತ್ಯಪ್ರಿಯರೆಲ್ಲರೂ ಎಷ್ಟೇ ಜೋರು ನಿದ್ದೆ ಬಂದರೂ ಎಚ್ಚರಿಕೆಯಲ್ಲಿರಬೇಕು ಎಂದು ಕರೆ ನೀಡಲಾಗುತ್ತಿದೆ. ನಿದ್ದೆಗೆಟ್ಟವರೆಲ್ಲರೂ ಆ ನಿದ್ದೆಯನ್ನು ಮರುದಿನಕ್ಕೆ ಮುಂದೂಡಿಯಾದರೂ ಪ್ರತಿ ದಿನ ಎಚ್ಚರಿಕೆಯಲ್ಲಿರುವಂತೆ ಬ್ಯುರೋ ಕರೆ ನೀಡಿದೆ.

  4 Comments

  ಏನಾದ್ರೂ ಹೇಳ್ರಪಾ :-D

  1. ಸತ್ಯಮೇವ ಜಯತೇ ಅಂದರು ಹಿರಿಯರು. ಹೌದು, ಸತ್ಯ ಜಯಿಸಬೇಕಾದರೆ ಅಲ್ಲಿ ಎದುರಾಳಿ ಪಕ್ಷಗಳು ಇರಲೇ ಬೇಕಲ್ಲವೇ? ಇಲ್ಲವಾದರೆ ಸತ್ಯದ ಜಯ ಅದೆಷ್ಟು ಬೋರಿಂಗು ಅಲ್ಲವೇ? ಅದಕ್ಕಾಗಿ ನಮ್ಮ ಏಕಸದಸ್ಯ ಲೋಕಮಾನ್ಯ ಸುದ್ದಿ ಸಂಸ್ಥೆಯು ನಿಮ್ಮ ಹೋರಾಟಕ್ಕೆ ಬೆನ್-ಬಲ, ತೋಳ್-ಬಲ ನೀಡುವ ಭರವಸೆ ನೀಡುತ್ತಿದೆ.
   “..ಸತ್ಯಮಪ್ರಿಂ” ಎಂದು ಹೇಳಿರುವಾಗ, ಸತ್ಯವನ್ನೇ ಹೇಳಹೊರಟರೆ ಅನೇಕ ಅನೇಕ ಮಂದಿಯ ಭಾವನೆಗಳಿಗೆ ಘಾಸಿಯಾಗುತ್ತದೆ ಎಂಬುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. “ಸುಳ್ಸುಳ್ಳೇ” ವಿವಾದವನ್ನು ಈ ಸಂದರ್ಭದಲ್ಲಿ ರೆಫರೆನ್ಸ್‌ಗೆ ಬಳಸಿಕೊಳ್ಳಬಹುದು.
   ಇನ್ನು ನಮ್ಮ ಕೇಂದ್ರ ಸಚಿವರೊಬ್ಬರು “ಅತಿಥಿಗಳಾಗಿ ಬಂದವರು ಅತಿಥಿಗಳಾಗಿ ನಡೆದುಕೊಳ್ಳಬೇಕು. ಇಲ್ಲಿನ ಮಂದಿಯ ಭಾವ(ಬಾ-ಮೈದುನ)ನೆಗಳಿಗೆ ನೋವುಂಟು ಮಾಡುವ ಕೆಲಸ ಮಾಡಬಾರದು” ಎಂದು ನಸ್ಲೀಮಾ ತಸ್ರೀನ್ ಎಂಬ ಸತ್ಯಸ್ಯ ಸತ್ಯ ಬರಹಗಾರ್ತಿಯ ಮೇಲೆ ಫರ್ಮಾನು ಹೊರಡಿಸಿದ್ದು ನಮ್ಮ ಗಮನ ಸೆಳೆದಿದೆ. ಒಂದು ಅರ್ಥದಲ್ಲಿ ನೋಡಿದರೆ ಇಡೀ ಭೂಮಿಯ ಮೇಲೆ ಇರುವವರೆಲ್ಲಾ ಅತಿಥಿಗಳೇ ಆಗಿದ್ದು ಎಲ್ಲರೂ ಒಂದಲ್ಲ ಒಂದು ದಿನ ಪ್ಯಾಕಪ್ ಮಾಡಬೇಕು ಎನ್ನುವುದು ಅನಿವಾರ್ಯವಾಗಿರುವಾಗ ಸಚಿವರ ಮಾತು ಎಷ್ಟು ಮಾರ್ಮಿಕ ಎಂಬುದು ಚಿಂತನಾರ್ಹ ಸತ್ಯ!

   ReplyDelete
  2. ಸುಪ್ರೀತರೆ,

   ನೀವು ಕೇಳಿದ್ದು ಸರಿ. ಹಂದಿ ಇಲ್ಲದಿದ್ದರೆ ಅದು ಕೇರಿ ಅಂತ ಅನ್ನಿಸಿಕೊಳ್ಳುತ್ತದೆಯೇ?

   ಎಲ್ಲರಿಗೂ ಒಂದಲ್ಲ ಒಂದು ದಿನ ತಿಥಿ ಮಾಡಬೇಕು ಎಂಬ ಅಪ್ರಿಯವಾದ ಮತ್ತು ನಿಷಿದ್ಧವಾದ ಸತ್ಯವನ್ನು ಬಳಿಯಲ್ಲಿರುವ ಕ.ಬು.ಗೆ ಹಾಕಬೇಕೆಂದು ಕೋರುತ್ತೇವೆ.

   ReplyDelete
  3. 'ಬೊಗಳೆ' ಇದು ಆರ್ಡರ್ರೋ ?
   'ರಗಳೆ' ಇದು ಯಾವುದಾದರೂ ಹೆಣ್ಣಿನ ಹೆಸರೋ?
   :-)

   ಸಂಕ್ರಾಂತಿಯ ಶುಭಾಷಯಗಳು

   ReplyDelete
  4. ಹೌದು ಎಂಡಿಯವರೆ,

   ನಾವು ರಗಳೆಗೆ ಬೊಗಳೇ... ಅಂತ ಆರ್ಡರ್ ಮಾಡ್ತಾ ಇದ್ದೀವಿ. ಒಳ್ಳೇ ಸಂಶೋಧನೆ ಮಾಡಿದ್ದೀರಿ. ನಿಮಗೆ ಭಾರತ-ರತ್ನಳನ್ನು ಕೊಡುತ್ತೇವೆ.

   ReplyDelete

  Post a Comment

  ಏನಾದ್ರೂ ಹೇಳ್ರಪಾ :-D

  Previous Post Next Post