ಬೊಗಳೆ ರಗಳೆ

header ads

ಬೊಗಳೆಗೆ 1 ಲಕ್ಷ ರೂ ದಂಡ!

(ಬೊಗಳೂರು ಬೊಗಳೆ ಬ್ಯುರೋದಿಂದ)
ಬೊಗಳೂರು, ಜ.30- ನಮ್ಮ ಪತ್ರಿಕೆಯ ಉಲ್ಲೇಖವಿರುವ ಸಾರ್ವಧನಿಕ ಹಿತಾಸಕ್ತಿ ಅರ್ಜಿಗಳಿಗೆ ಹಾಗೂ ಸಾರ್ವಜನಿಕ ಅನಾಸಕ್ತಿ ಅರ್ಜಿಗಳಿಗೆ 1 ಲಕ್ಷ ರೂ. ದಂಡ ವಿಧಿಸುವ ಕಾಲ ಬಂದಿರುವುದರಿಂದ ಬೊಗಳೂರು ಬೊಗಳೆ ಬ್ಯುರೋ ಹರ್ಷಚಿತ್ತವಾಗಿದ್ದು, ಬೊಗಳೆ ಹೆಸರಿನಲ್ಲಿ ದೇಶಕ್ಕೆ ಸಾಕಷ್ಟು ಆದಾಯ ಬರುತ್ತದೆ ಎಂದು ಕುಣಿದು ಕುಪ್ಪಳಿಸಲಾರಂಭಿಸಿದೆ.

ಈಗಾಗಲೇ ಕ್ರಿಮಿನಲ್ ಲಾಯರುಗಳಿಂದಾಗಿ ಕ್ರಿಮಿಗಳು-ನಲ್ ಆಗುತ್ತಾ, ಸಾವಕಾಶವಾಗಿ ಜೈಲಿನಿಂದ ಹೊರಬರುತ್ತಿರುವುದರಿಂದ, ಕಲಾಪ ನೋಡಲು ಯಾರಿಗೂ ಆಸಕ್ತಿ ಇರಲಿಲ್ಲ. ಇದೀಗ ಕೆಲಸಕ್ಕೆ ಬಾರದ ವಿಷಯಗಳನ್ನೆಲ್ಲಾ ಚರ್ಚೆ ಮಾಡಿದಲ್ಲಿ ಸ್ವಲ್ಪ ಮನರಂಜನಾತ್ಮಕ ಸಂಗತಿಗಳು ಹೊರಬರುತ್ತವೆ ಎಂಬ ಕಾರಣಕ್ಕೆ ಹೆಚ್ಚಿನವರು ಇಂಥ ಸಾರ್ವಧನಿಕ ಹಿತಾಸಕ್ತಿ ಅರ್ಜಿಗಳನ್ನು ಹಾಕುತ್ತಿದ್ದರು.

ಇದೀಗ ಈ ಸಾರ್ವ-ಧನಿಕರೆಲ್ಲರೂ ಒಂದೊಂದು ಲಕ್ಷ ರೂಪಾಯಿ ಕಟ್ಟಬೇಕಿರುವುದರಿಂದ ಬೊಗಳೆಗೆ ಸಂಚಕಾರ ಬಂದಿದೆಯಾದರೂ, ಬೊಗಳೆಯ ಬೆಲೆ ಕನಿಷ್ಠ 1 ಲಕ್ಷವಾದರೂ ಇದೆಯಲ್ಲ ಎಂದು ನಮ್ಮ ಸೊಂಪಾದ-ಕರು ಸಮಾಧಾನ ಪಟ್ಟುಕೊಂಡಿದ್ದಾರೆ. ಇನ್ನು ಮುಂದೆ ಎಲ್ಲರೂ ತಮಗಾಗದವರ ವಿರುದ್ಧ ಸಾರ್ವಧನಿಕ ಹಿತಾಸಕ್ತಿಯನ್ನು ಪ್ರಕಟಿಸಿ ಅರ್ಜಿ ಸಲ್ಲಿಸಬಹುದು. ಇದರಿಂದ ಬೊಗಳೆ ಎಂಬ ಪದವೂ ಉದ್ಧಾರವಾಗುತ್ತದೆ, ದೇಶದ ಅಭಿವೃದ್ಧಿಗೂ ಹಣ ಒಟ್ಟಾಗುತ್ತದೆ ಎಂದು ತಿಳಿಸಲಾಗಿದೆ.

ಆದರೂ, ಬೊಗಳೆ ಬೆಲೆಯನ್ನು ಕೇವಲ ಒಂದು ಲಕ್ಷ ಅಂತ ನಿರ್ಧರಿಸಿದ್ದು ಸರಿಯಲ್ಲ ಎಂಬ ನೋವು ಕೂಡ ಎಲ್ಲೋ ಒಂದು ಕಡೆಯಿಂದ ಹೊರಬಿದ್ದಿದೆ. ಇನ್ನು ಕೆಲವರನ್ನು ಬಲವಂತವಾಗಿ ಹಿಡಿದು ನಿಲ್ಲಿಸಿ ಸಮೀಕ್ಷೆಗೊಳಪಡಿಸಿದಾಗ, ಬೊಗಳೆಯ ಬೆಲೆ ಒಂದು ಲಕ್ಷ ಇರಬಹುದು, ಆದರೆ ಅದು ಖಂಡಿತಾ "ರೂಪಾಯಿ"ಯಲ್ಲ, "ನಯಾ ಪೈಸೆ"ಯಾಗಿರಬಹುದು ಎಂದು ಅದನ್ನೂ ತುಸು ಸಂದೇಹದಿಂದಲೇ ಹೇಳಿದರು.

ಈ ಮಧ್ಯೆ, ಬೊಗಳೆಯೇ ದಂಡ ಅನ್ನೋದು ಈ ನಿರ್ಧಾರದ ಹಿಂದಿರುವ ಸತ್ಯವೇ ಎಂಬುದನ್ನು ಸಂಶೋಧನೆ ನಡೆಸಲು ಜಗತ್ತಿನ ಖ್ಯಾತ ನಾಮ ಸಂಶೋಧಕರಿಗೆಲ್ಲಾ ಬೊಗಳೆ ನೋಟಿಸ್ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. ಪ್ರತಿದಿನ ಒಂದೊಂದು ವಿಷಯದ ಮೇಲೆ ಬೊಗಳೆಬಿಡೋ ನಿಮ್ಮ ರೀತಿ ತುಂಬಾ ಚೆನ್ನಾಗಿದೆ... ನೀವು ಯಾರು ಅಂತ ಗೊತ್ತಾಗಿಲ್ಲ.... ಆದರೆ ಒಂದು ಅಂದಾಜಿದೆ........ ಒಮ್ಮೆ ಮೈಲ್ ಮಾಡಿ....
    mshivakeshava@baanuli.com or mshivakeshava@yahoo.co.in
    thank you

    ಪ್ರತ್ಯುತ್ತರಅಳಿಸಿ
  2. ಬೊಗಳೇಶರೇ
    ನಿಮ್ಮ ರಗಳೆ ಚೆನ್ನಾಗಿದೆ. ಹುಷಾರ್, ನಿಮ್ಮ ಮೇಲೆ ನಾಯ-ನಿಂದನೆ ಅಪವಾದ ಹೇರಿಬಿಟ್ಟಾರು , ಸತ್ತೇ ಹೋಗ್ಬೇಕಾಗುತ್ತೆ.
    ಅಂದ ಹಾಗೆ ನಿಮ್ಮ ನಿತ್ಯದ ರಗಳೆ ಹಿತವಾಗಿದೆ. ದಿನಾ ಸಾಯೋರಿಗೆ ಅಳೋರಿಲ್ಲದಿದ್ದರೂ ನಿಮ್ಮ ನಿತ್ಯದ ರಗಳೆಗೆ ನಗೋರು ಇದ್ದಾರೆ,ಮರೀಬೇಡಿ.

    ನಾವಡ (www.chendemaddale.wordpress.com)

    ಪ್ರತ್ಯುತ್ತರಅಳಿಸಿ
  3. ದಂಡವನ್ನು 1 ಲಕ್ಷ ರೂಪಾಯಿ ಎಂದು ನಿಗದಿಪಡಿಸಿದ್ದರ ಹಿಂದೆ ’ನ್ಯಾನೊ’ ಕಾರ್ ಉತ್ಪಾದಕರ ಕೈವಾಡ ಇದೆಯಂತೆ! ಬೊಗಳೆಗೆ ಗೊತ್ತಾಗಿಲ್ಲವೇ ಇದು?

    ಪ್ರತ್ಯುತ್ತರಅಳಿಸಿ
  4. ಬೊಗಳೆಯಲ್ಲಿ ತಮ್ಮ ಹೆಸರು ನಮೂದಾಗುವದು ತಮ್ಮ ಅಯೋಗ್ಯತೆಯ ಕುರುಹು; ಕಾಲಾಂತರದಲ್ಲಿ ತಮಗೆ ಅನಾಗರಿಕ ರತ್ನ ಪದವಿ ದೊರೆಯಬಹುದೆನ್ನುವ ಆಸೆ ಕೆಲವರದು. ಅಂಥವರು ತಮ್ಮ ಅಯೋಗ್ಯತೆಗೆ ಪ್ರಸಿದ್ಧಿ ಕೊಡಲು ಸಾರ್ವಧನಿಕ ಅಹಿತಾಸಕ್ತಿ ಕೇಸುಗಳನ್ನು ಜಡಿಸುವದು ಸಹಜವಾದದ್ದೇ. ಇದು ನಾವೆಲ್ಲ ಹೆಮ್ಮೆ ಪಡುವ ವಿಷಯ. "ಜೈ ಬೊಗಳೆ!"

    ಪ್ರತ್ಯುತ್ತರಅಳಿಸಿ
  5. ಬೊಗಳೆ ಅರ್ಜಿಗಳಿಗೆ ಲಕ್ಷ ರುಪಾಯಿ ಬೆಲೆ ಅಂತ ಕಣ್ಣಿಂದ ಕೇಳಿ, ಕಿವಿಯಿಂದ ನೋಡಿ ತಿಳಿದು ಸಖತ್ ಆಶ್ಚರ್ಯದಿಂದ ಕೂಡಿದ ಗಾಬರಿ ಉಂಟಾಗಿದೆ. ಈ ತೀರ್ಪಿನ ಹಿಂದೆ ಯಾವುದೋ ಕಾಣದ ಕೈಯ ಕೈವಾಡ ನಡೆದಿದ್ದು ಅದನ್ನು ಪತ್ತೆ ಹಚ್ಚಲು ನಮ್ಮ ಒದರಿಗಾರರನ್ನು ಅಟ್ಟಿದ್ದೇವೆ. ನಮಗೆ ಸಿಗಬೇಕಾಗಿದ್ದ ಬಹುಮಾನ ಬೊಗಳೆಯ ಪಾಲಾಗಿರುವುದು ರಗಳೆಯಾಗುವ ಎಲ್ಲಾ ಸಾಧ್ಯತೆಯಿದೆ.
    ಇದಕ್ಕಾಗಿ ಹೆಚ್ಚಿನ ಸಲಹೆ ಪಡೆಯಲು ನಾವು ಗೋಮಳ್ಳಿ ಣಗೇಶ್ ರವರನ್ನು ಸಂಪರ್ಕಿಸಲು ಮನಸ್ಸು ಮಾಡಿದ್ದೇವೆ. 'ನವ' ಟಿವಿಯವರನ್ನೂ ಕರೆದು ಕೆರೆಯುವ ಉದ್ದೇಶವಿದೆ.

    ಸುಪ್ರೀತ್

    ಪ್ರತ್ಯುತ್ತರಅಳಿಸಿ
  6. ಕ್ಲೋಸಪ್‌ನಿಂದ ಸಾರು ಮಾಡುವವರೆ,

    ಬೊಗಳೋ ನಾಯಿ ಕಚ್ಚೋದಿಲ್ಲ ಅನ್ನೋದನ್ನು ಚೆನ್ನಾಗಿಯೇ ತಿಳಿದುಕೊಂಡಂತಿದೆ. ನಾವು ಬಿಟ್ಟದ್ದೆಲ್ಲಾ ಬೊಗಳೆ ಅಂತ ಒಪ್ಪಿಕೊಂಡು ನಮಗೆ ಅವಮರ್ಯಾದೆ ಮಾಡಿದ್ದೀರಿ. ಧನ್ಯವಾದ.

    ಪ್ರತ್ಯುತ್ತರಅಳಿಸಿ
  7. ಚೆಂಡೆ ಮದ್ದಳೆ ತೆಗೆದುಕೊಂಡೇ ಬಂದಿರುವ ನಾವಡರೆ, ಬೊಗಳೆ ಬ್ಯುರೋಗೆ ನಿಮಗೆ ಸ್ವಾಗತ.

    ನೀವು ಚೆನ್ನಾಗಿದೆ, ಹುಷಾರ್ ಅಂತ ಎಚ್ಚರಿಸಿದ್ದು ಕೇಳಿ ಬೆಚ್ಚಿ ಬಿದ್ದಿದ್ದೇವೆ. ಇನ್ನು ಮುಂದೆ ಹೀಗಾಗದಂತೆ ಅಸತ್ಯವಾಗಿಯೂ ಭರವಸೆ ನೀಡುತ್ತೇವೆ.

    ಬರ್ತಾ ಇರಿ, ಬರೀತಾ ಇರಿ.

    ಪ್ರತ್ಯುತ್ತರಅಳಿಸಿ
  8. ಜೋಶಿಯವರೆ,

    ದಂಡದ ಬೆಲೆಗೇ ಸಿಗುವ ನ್ಯಾನೋ ಕಾರೇ ದಂಡ ಎಂಬುದು ನಿಮ್ಮ ಮಾತಿನರ್ಥ ಅಂತ ಆಮಶಂಕಿಸಿದ್ದೇವೆ. ಆದರೆ ನಾನೋ... ನೀನೋ ಎಂಬ ತಕರಾರು ಇದ್ದ ಹಿನ್ನೆಲೆಯಲ್ಲಿ ಸ್ವಲ್ಪ ಗೊಂದಲದಿಂದ ಚಾ-ತರಿಸಿಕೊಂಡು ಕುಡಿಯುತ್ತಿದ್ದಾಗ ತಡವಾಯಿತು.

    ಪ್ರತ್ಯುತ್ತರಅಳಿಸಿ
  9. ಸುನಾಥರೆ,
    ನಮ್ಮ ಅಯೋಗ್ಯತೆಯನ್ನು ಎತ್ತಿ ತೋರಿಸಿದ್ದಕ್ಕೆ ಧನ್ಯವಾದ. ಇನ್ನಷ್ಟು ಕೇಸುಗಳನ್ನು ಜಡಿಯಲು, ಜಡಿಸಲು ತುಂಬಾ ತುಂಬಾ ಎಮ್ಮೆಗಳನ್ನು ಕಟ್ಟಲಾಗುತ್ತದೆಯಂತ ಕೇಳಿದ್ದೇವೆ. ಬೊಗಳೆ ಅಂದುಬಿಡಿ, 'ಜೈ' ಸೇರಿಸಿಬಿಟ್ಟರೆ ಎಮ್ಮೆಗಳೆಲ್ಲಾ ಓಡಿ ಹೋದಾವು.

    ಪ್ರತ್ಯುತ್ತರಅಳಿಸಿ
  10. ಸುಪರೀತರೆ,
    ನೀವು ಕೇಳಿದ್ದು ಮತ್ತು ನೋಡಿದ್ದು ಅದಲು ಬದಲಾಗಿರುವುದರಿಂದ ಸಣ್ಣದೊಂದು ಎಚ್ಚರಿಕೆ ನೀಡಲು ಬಯಸುತ್ತೇವೆ. ನವ ಟೀವಿಯವರನ್ನು ಕರೆದು ಕೆರೆಯುವಾಗ ಕೈ ಬದಲು ಕಾಲು ಕೆರೆಯಬಹುದು... ಎಚ್ಚರವಾಗಿರಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D