(ಬೊಗಳೂರು ಪೋಲಿ-ಟ್ರಿಕ್ಸ್ ಬ್ಯುರೋದಿಂದ)
ಬೊಗಳೂರು, ಡಿ.12- ದೇಶದಲ್ಲಿರುವ ಎಲ್ಲಾ ಹುಡುಗರು, ರಾಮ ಇಲ್ಲ ಎಂದು ವಾದ ಮಾಡುತ್ತಿರುವ ಮತ್ತು (ವಸ್ತುಶಃ con-guess ಅಧ್ಯಕ್ಷರ ತಾಯ್ನಾಡು) "ರೋಮ್"ದಾಸ್ ಆಗಿ ಬದಲಾಗಿರುವ ಕೇಂದ್ರದ ಅನಾರೋಗ್ಯ ಸಚಿವರ ಮನೆಬಾಗಿಲಲ್ಲಿ ಕಾದು ಕುಳಿತಿದ್ದಾರೆ ಎಂದು ವರದಿಯಾಗಿದೆ.

ಈ ರಾದ್ಧಾಂತಕ್ಕೆ ಕಾರಣ, ನಮ್ಮ ವಿರೋಧಿ ಪತ್ರಿಕೆಯೊಂದು ಇಲ್ಲಿ ಪ್ರಕಟಿಸಿದ ವರದಿ. ಹಾಗಾಗಿ ತಾವೂ ರೋಮ್ ದಾಸಾನುದಾಸರಾಗುವ ನಿಟ್ಟಿನಲ್ಲಿ ಯಾವೆಲ್ಲಾ "ಕಲ್ಯಾಣ" ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಈ ಹುಡುಗರು "ಪೋಲಿ ಟ್ರಿಕ್ಸ್" ಪ್ರವೀಣ ಎಂಬ ಹೆಗ್ಗಳಿಕೆ ಪಡೆದಿರುವ ರೋಮ್ ದಾಸ್‌ರಲ್ಲಿ ಶಿಕ್ಷಣ ಪಡೆಯಲು ನಿರ್ಧರಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಇನ್ನು ಕೆಲವರು ಅನಾರೋಗ್ಯ ಸಚಿವರ ಬಗ್ಗೆ ಗಂಭೀರ ಮತ್ತು ಚಿಂತಾಜನಕ ರೀತಿಯಲ್ಲಿ ಮತ್ಸರ ವ್ಯಕ್ತಪಡಿಸಿದ್ದು, ರೋಮ್ ದಾಸರನ್ನೇ AIIMSನ ಮಾನಸಿಕ ವಿಭಾಗದ ಅತ್ಯಂತ ಐಷಾರಾಮಿ ಕೊಠಡಿಯಲ್ಲಿ ದಾಖಲಿಸಿ ಕೈತೊಳೆದುಕೊಳ್ಳಲು ದೃಢ ನಿಶ್ಚಯಭರಿತ ಸಂಚು ರೂಪಿಸುತ್ತಿದ್ದಾರೆ.

ರೋಮ್ ದಾಸರಿಂದ ಶಿಕ್ಷಣ ಪಡೆಯಲು ಉದ್ದೇಶಿಸಿರುವ ಹುಡುಗರು, ತಮ್ಮ ಪ್ರತಿಷ್ಠೆಗಾಗಿ ಯಾವ ರೀತಿ ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ಮಟ್ಟ ಹಾಕಬಹುದು, ಸುಪ್ರೀಂ ಕೋರ್ಟು ತಡೆದರೂ ಕೂಡ, ಅವರನ್ನು ಕಿತ್ತು ಹಾಕಲು ಯಾವ ರೀತಿ ಶಾಸನಗಳನ್ನು ರೂಪಿಸಬೇಕು, ಅವರಿಗೆ ಬೆಂಬಲ ನೀಡುವವರನ್ನೆಲ್ಲಾ ನೀರಿಲ್ಲದ ಊರಿಗೆ ಹೇಗೆ ಅಟ್ಟುವುದು, ಸತ್ಯ ಬಹಿರಂಗಪಡಿಸುವವರ ಮೇಲೆಯೇ ಒಂದು ಗೂಬೆಯನ್ನು ತಂದು ಕೂರಿಸುವುದು ಹೇಗೆ ಎಂಬುದೇ ಮುಂತಾಗಿ ಪಾಠಗಳನ್ನು ಕಲಿತುಕೊಳ್ಳಲು ನಿರ್ಧರಿಸಿದ್ದಾರೆ.

"ಶಿಕ್ಷಣದಲ್ಲಿ ಯಾವತ್ತೂ ಹುಡುಗಿಯರು ಮುಂದೆ, ಹುಡುಗರೆಲ್ಲಿ ಅಂತ ಕೇಳಿದರೆ ಬರುವ ಉತ್ತರ- ಅವರು ಈ ಹುಡುಗಿಯರ ಹಿಂದೆ" ಎಂಬ ಚಾಲ್ತಿಯಲ್ಲಿರುವ ಪ್ರಶಂಸಾತ್ಮಕ ನುಡಿಯನ್ನು ಉಲ್ಟಾ ಮಾಡಲು ಇದೊಂದು ಸದವಕಾಶ ಎಂದು ಬಲವಾಗಿ ನಂಬಿರುವ ಈ ಹುಡುಗರು, ರೋಮ್ ದಾಸರಿಂದ ಪಾಠ ಕಲಿತರೆ, ತಮ್ಮ ಹಿಂದೆ ಹುಡುಗಿಯರು ಬೀಳುತ್ತಾರೆ, "ವಿಲ್ ಯೂ ಮ್ಯಾರೀ ಮೀ" ಅಂತ ಕೇಳುತ್ತಾರೆ. ಅಂದರೆ ಹುಡುಗಿಯರು ಹಿಂದೆ ಬಿದ್ದಂತಾಗುತ್ತದೆ, ಹುಡುಗರು ಮುಂದೆ. ಹೇಗಿದೆ ನಮ್ ಐಡಿಯಾ ಅಂತ AIIMS ನಲ್ಲಿ ಯಾವತ್ತೂ "ಹಿಂದೆ ಬೀಳೋ" ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ್ದಾನೆ.

ಆದರೆ, ಹುಡುಗಿಯರು ಹಿಂದೆ ಬಿದ್ದರೂ, ಮುಂದೆ ಇರುವ ಹುಡುಗರು ಕೂಡ ಬೀಳುತ್ತಾ ಇರುತ್ತಾರೆಯೇ ಅಥವಾ ಮುಂದೆ ಹೋಗುತ್ತಾ ಇರುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ನಮ್ಮ ಪೋಲಿ-ಟ್ರಿಕ್ಸ್ ವಿಶ್ಲೇಷಣಾಕಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2 Comments

ಏನಾದ್ರೂ ಹೇಳ್ರಪಾ :-D

 1. "ರೋಮಾಂ"ಚಕಾರಿಯಾದ ವದರಿ! ಇನ್ನು ಮೇಲೆ "ವಂದೇ
  ರೋಮಾತರಮ್!" ಅಥವಾ "ರೋಮಾ! ತುಝೆ ಸಲಾಮ್!" ಎಂದು ರೋಮದಾಸರು ಹಾಡಲಡ್ಡಿಯಿಲ್ಲ.

  ReplyDelete
 2. ಸುಧೀಂದ್ರರೆ,

  ರೋ ಮಾ ತುಝೇ ಸಲಾಂ ಎನ್ನುತ್ತಾ ರೋ ರೋ (ಲಬೋ ಲಬೋ) ಅಂತ ಅಳುತ್ತಾ ಕೂರಬಹುದು.

  ರೋ ರೋಕೇ ಮರ್ ಗಯಾ! ಎನ್ನಲೂ ಅಡ್ಡಿಯಿಲ್ಲ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post