ಬೊಗಳೆ ರಗಳೆ

header ads

ಧುತ್ತನೆ ಕಾಣಿಸ್ಕೊಂಡ ಪ್ರಾಣಿಯ ನಿಗೂಢತೆ ಬಯಲು

(ಬೊಗಳೂರು ಸ್ಟಿಂಗ್ ಬ್ಯುರೋದಿಂದ)
ಬೊಗಳೂರು, ನ.26- ರಾಜ್ಯದಲ್ಲಿ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿರುವಂತೆಯೇ, ಚಿತ್ರ ವಿಚಿತ್ರ ಅಚ್ಚರಿಗಳು ಜನರನ್ನು ಬೆಚ್ಚಿ ಬೀಳಿಸತೊಡಗಿವೆ ಎಂದು ತಿಳಿದುಬಂದಿದೆ.

ಮೊದಲನೆಯದಾಗಿ, ಸದಾ ಕೆಸರೆರಚಾಟ, ಗದ್ದಲದ ಗೂಡಾಗಿರುವ ವಿಧಾನ ಸೌಧವು ಈಗ ಖಾಲಿ ಖಾಲಿಯಾಗಿ ಶಾಂತ ಸ್ಥಿತಿಯಲ್ಲಿರುವುದು. ಎರಡನೇ ಅಚ್ಚರಿಯೆಂದರೆ ರಾಜ್ಯದ ಮೂಲೆ ಮೂಲೆಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಶ್ವೇತವಸ್ತ್ರ ತೊಟ್ಟ ಪ್ರಾಣಿಗಳೋ, ಅನ್ಯಗ್ರಹ ಜೀವಿಗಳೋ ಎಂಬ ಶಂಕೆ ಮೂಡಿಸುವ ಆಕಾರಗಳು ಧುತ್ತನೆ ಕಾಣಿಸಿಕೊಳ್ಳುತ್ತಿರುವುದು.

ಇವರು ಮುಖಕ್ಕೂ ವಸ್ತ್ರ ಮುಚ್ಚಿಕೊಂಡಿದ್ದರು. ಬೆನ್ನಿಗೆ ಗುರಾಣಿ ಥರಾ ಏನನ್ನೋ ಕಟ್ಟಿಕೊಂಡಿದ್ದರು. ಸರಿಯಾಗಿ ನೋಡಿದರೆ ಅನ್ಯಗ್ರಹ ಜೀವಿಗಳಂತೆಯೇ ಇದ್ದಾರೆ!!! ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಬೊಗಳೆ ಬ್ಯುರೋ, ಬೊಗಳೂರಿನಲ್ಲಿ ಕಂಡು ಬಂದ ಅಧಿಕವಾದ ಪ್ರಸಂಗವನ್ನು ಉದಾಹರಣೆ ರೂಪದಲ್ಲಿ ವಿವರಿಸಿದೆ. ಕರುನಾಟಕದ ಬಹುತೇಕ ಎಲ್ಲಾ ಕಡೆ ಇದೇ ಪರಿಸ್ಥಿತಿ ಕಂಡುಬಂದಿದೆ ಎಂದು ಓದುಗ ಪ್ರಭುಗಳು ತಿಳಿದುಕೊಳ್ಳತಕ್ಕದ್ದು.

ಬೊಗಳೂರಿನಲ್ಲಿ ನಡೆದ ಗುಂಡ್ಅಣ್ಣ ರಮ್ಅಣ್ಣ ನಡುವೆ ನಡೆದ ಸಂಭಾಷಣೆ ಹೀಗಿತ್ತು:

"ಅರರೆ... ಗುಂಡಣ್ಣಾ... ಅಲ್ಲಿ ಏನೋ ಬರಾಕತ್ತೈತಲ್ಲಾ... ಅದನ್ನ ಎಲ್ಲೋ ನೋಡ್ದಂಗಿದೆ... ಯಾರೂಂತ ಎಷ್ಟು ತಲೆ ಕೆರ್ಕೊಂಡ್ರೂ ನೆಂಪೇ ಆಗವೊಲ್ದು...!!"

"ಹೌದಲ್ಲಾ... ನಂಗೂ ಹಂಗೇ ಅನಿಸ್ತೈತಿ ಕಣಣ್ಣಾ.. ಹ್ಯಾಗೆ ಜಗಮಗ ಅಂತ ಬಿಳಿ ದಿರಿಸು ಇದೆ ನೋಡು. ಮಾಡೋದೆಲ್ಲಾ ಶುದ್ಧ ಕಪ್ಪು ವ್ಯವಹಾರವಾದ್ರೂ, ಇಸ್ತ್ರಿ ಮಾಡಿಸಿದ ಬೆಳ್ಳಂಬೆಳಗೋ ಷರ್ಟು ಧರಿಸಿ ಬರೋರು, ಮತ್ತು ಅವರ ಹಿಂದಿನ ಚೇಲಾಗಳೂ ಕೂಡ ಬಿಳಿ ಬಿಳಿಯಾಗೇ ಇರೋದು ನೋಡಿದ್ರೆ..."

"ಹೌದು.. ಕಣ್ಲಾ... ನಂಗೂ ಭಯವಾಗ್ತೈತಿ... ಇದೇನಾರ ದೆವ್ವ ಗಿವ್ವ ಇದ್ದೀತಾಂತ... ಅದೂ ಅಲ್ದೆ, ಸಿನಿಮಾದಲ್ಲಿ ಬೇರೆ ಗ್ರಹದ ಜೀವಿಗಳ್ನ ಇದೇ ಥರಾ ತೋರಿಸ್ತಾರೆ..."

"ದೆವ್ವಗಳ್ಗೆ ಕಾಲು ಕಾಣ್ಸಲ್ಲ... ಅದೇನೋ ಹಾವಿನ್ತರದ ಬಾಲವನ್ನೇ ಹೋಲೋ ಕಾಲು ಇರ್ತೈತೆ ಅಂತ ನಮ್ಮ ವ್ಯಂಗ್ರಚಿತ್ರಕಾರ್ರು ತೋರಿಸ್ತಾ ಇದ್ರಲ್ಲಾ... ಮುಖಕ್ಕೂ ಬಟ್ಟೆ ಮುಚ್ಕೊಂಡಿರೋದು ನೋಡಿದ್ರೆ... ಇದು ದೆವ್ವ ಆಗಿರ್ಲಾರ್ದು. ನಂಗೇನೋ ಈ ದೆವ್ವ ಗಿವ್ವಕ್ಕಿಂತಲೂ ಈ ವೇಷ ನೋಡಿದ್ರೆ... ರಾಜ್ಕಾರ್ಣಿ ನೆಂಪಾಗ್ತೈತಿ..."

"ಯಾಪ್ಪಾ... ಹಾಂಗನ್ನು ಮತ್ತೆ... ಈಗ ನೆಂಪಾತಾ... ನೀ ರಾಜ್ಕಾರ್ಣಿ ಅಂದತಕ್ಷಣ ಗ್ನಾಪ್ಕ ಬಂತು... ಅದು ರಾಜ್ಕಾರ್ಣೀನೇ... ಸರಿಯಾಗಿ ನೋಡ್ಲಾ... ಅವ್ರು ನಾವೇ ಓಟು ಕೊಟ್ಟು ಆರ್ಸಿದ ದೊರೆಯಲ್ವಾ... ಅದೇನೋ ವಿಧಾನಸೌಧದಲ್ಲಿ ಯಾವಾಗ್ಲೂ ಗಲಾಟೆ, ದ್ರೋಹ ಅಂತೆಲ್ಲಾ ಮಾಡ್ತಾ ಇರ್ತಾನಲ್ಲಾ... ಅವ್ನೇ ಕಣ್ಲಾ... "

"ಹೌದಲ್ಲಾ... ಛೆ... ಅಂವ ಇಲ್ಲಿ ಮುಖ ತೋರ್ಸದೆ ಮೂರು ವರ್ಷಕ್ಕೂ ಮೇಲಾಯ್ತು... ಅದ್ಕೇ ಕಾಣ್ಸುತ್ತೆ... ಎಲ್ಲೋssss ನೋಡ್ದಂಗೆ ಆಗಿದ್ದು... ಮುಖ ತೋರ್ಸೋಕೆ ನಾಚ್ಕೆಯಾದಂತೆ ಮುಚ್ಕೊಂಡಿರೋ ಅವ್ನ ಮುಖದಲ್ಲಿರೋ ಕಳೆ ನೋಡುದ್ರೆ... ನಮ್ಮೂರಿನ ಎಕ್ಕುಟ್ಟಿ ಹೋದ ರಸ್ತೆಗಳ ಥರಾ ಇದೆಯಲ್ಲಾ..."

"ಅರೆ... ಅಂವ ಏನಾದ್ರೂ ದಾರಿ ತಪ್ಪಿ ಇಲ್ಲಿಗೆ ಬಂದ್ನಾಂತ ಕಾಣ್ಸುತ್ತೆ... ಆವತ್ತೇ ಆರ್ಸಿ ಕಳ್ಸಿದೀವಿ... ಇನ್ನೈದು ವರ್ಸ ಅಂವ ಇತ್ಲಾಗೆ ತಲೆ ಹಾಕಾಕಿಲ್ಲ ಅಂತ ಆರಾಮಾಗಿದ್ವಲ್ಲಾ..."

"ಇರ್ಬೋದು ಕಣ್ಲಾ... ಪಕ್ಕದ ಕ್ಷೇತ್ರದಾಗೆ ನಡೆಯೋ ಫಂಕ್ಷನ್‌ನ್ಯಾಗೆ ಮೆರೀಬೇಕೂ ಅಂತ ಬಂದಿದ್ದಾಂತ ಕಾಣ್ಸುತ್ತೆ... ದಾರಿ ತಪ್ಪಿ ಅವ್ನ ಖಾಸಾ ಕ್ಷೇತ್ರಕ್ಕೆ ಬಂದ್ಬಿಟ್ಟಿದ್ದಾನೆ."

"ಅದಿರ್ಲಿ... ಮಕ ಯಾಕ್ ಮುಚ್ಕೊಂಡವ್ನೆ?.. "

"ಅದೇ ಕಣ್ಲಾ... ಕುರ್ಚಿಗೋಸ್ಕರ ಅಂವ ಆಡ್ರೋ ಆಟಾ ಎಲ್ಲಾ ಟಿವಿಯೋರು ಇಡೀ ದೇಸ್ದಾಗೆ ಟಾಂ ಟಾಂ ಮಾಡವ್ರಲ್ಲಾ... ಅವ್ನು ಮಾಡಿದ್ದೆಲ್ಲಾ ಊರೋರಿಗೆ ಗೊತ್ತಾಗ್ಬಿಟ್ಟಿದೆ... ಅದ್ಕೆ ಮಕ ತೋರ್ಸೋಕೆ ನಾಚ್ಕೆ ಇರ್ಬೋದು. "

"ಥೂ... ಹೋಗಾ ನೀ... ನಾಚ್ಕೆ ಗೀಚ್ಕೆ ಎಲ್ಲಾ ಎಂತದ್ದು... ರಾಜ್ಕಾರ್ಣಿಗಳ್ಗೆ ನಾಚ್ಕೆ ಇರುತ್ತಾ? ನಾಚ್ಕೆ ಇಲ್ದೋರು ಮಾತ್ರಾ ರಾಜ್ಕಾರ್ಣಿ ಆಗ್ತಾನೆ ಅಂತ ನಿಂಗೊತ್ತಿಲ್ವಾ..."

"ಹಂಗಾ..."

"ಬೇಕಿದ್ರೆ ಪರೀಕ್ಸೆ ಮಾಡು... ಅವ್ನ ಮಕದ ಮೇಲಿನ ಬಟ್ಟೆ ತಗ್ದು ಬಿಡಂತೆ... ಎರಡೂ ಕೈಗೋಳು ತಾನಾಗೇ ಮೇಲ್ ಹೋಗಿ ಪರಸ್ಪರ ಕೂಡಿಕೊಳ್ತಾವೆ..."

"ಹಂಗಂತೀಯಾ... ಮತ್ತೆ ಬೆನ್ನು ಮ್ಯಾಕೆ ಏನೋ ಕಟ್ಕೊಂಡಂತಿದೆಯಲ್ಲಾ..."

"ಹೂಂ... ಅಡಕೆ ಮರದ ಹಾಳೆ ಕಟ್ಕೊಂಡಿದ್ದಾರೆ. ಊರಿಗೆ ಮುಖ ತೋರ್ಸುದ್ರೆ... ಪಬ್ಲಿಕ್ನಾಗೆ ಯದ್ವಾ ತದ್ವಾ ಒದೆ ಬಿದ್ರೆ... ಅನ್ನೋ ಆತಂಕ ಅವ್ನಿಗೆ... ಪೂರ್ವ ಸಿದ್ಧತೆಯದು...."

"ಓಹೋ... ಈಗ ಗೊತ್ತಾತು ಕಣ್ಲಾ... ವೋಟು ಬಂದೈತಾಂತ ಕಾಣ್ಸುತ್ತೆ..."

"ಹೌದಪಾ... ಪಾಪ... ಅವ್ರಿಗೆ ಊರಾಗ್ ತಲೆ ಹಾಕೋಕೂ ಪುರ್ಸತ್ತೆಲ್ಲಿತ್ತು...? ಬರೇ ಕಾಲೆಳೆಯೋದು, ಕುರ್ಚಿ ಹಿಡಿಯೋದು,... ರೆಸಾರ್ಟ್‌ಗಳಿಗೆ ತಿರುಗೋದು... ಒಂದಲ್ಲಾ ಒಂದು ಪಕ್ಷದ ಬಾಲ ಹಿಡಿಯೋದು, ಕಾಲು ಹಿಡಿಯೋದು... ಪಕ್ಷದಿಂದ ಪಕ್ಷಕ್ಕೆ ಹಾರೋದು.. ಇದ್ರಲ್ಲೇ ಟೈಂ ಹೋತು.. ಇನ್ನು... ಕ್ಷೇತ್ರದಾಗೆ ಕೆಲ್ಸ ಮಾಡೋಕೆ ಟೈಮೆಲ್ಲಿತ್ತು.."

"ಅದೇ ಕಣಣ್ಣಾ... ಆದ್ರೆ ನಂಗೊಂದು ಡೌಟು.."

"ಏನ್ಲಾ ಅದು?"

"ಅಲ್ಲಾ... ಇಲ್ಲಿಗೆ ಬಂದಿರೋ ಆಯಪ್ಪಾ... ನಮ್ ಕ್ಷೇತ್ರದ ಶಾಸಕನಾ ಇಲ್ಲಾ... ಬೇರೆ ಕ್ಷೇತ್ರದೋನಾ?"

"ಯಾಕ್ಲಾ ಹಂಗ್ ಕೇಳ್ತೀ?"

"ಏನಿಲ್ಲಾ... ಅವ್ರು ಆರಿಸಿ ಹೋದ್ ನಂತ್ರ... ಕ್ಷೇತ್ರಾನೇ ಮರ್ತು ಬಿಟ್ಟವ್ರೆ... ಹಾಗಾಗಿ ಎಲ್ಲಿಂದ ಆರ್ಸಿ ಬಂದದ್ದು, ಯಾರು ಆರ್ಸಿರೋದು ಅಂತ ನೆನಪಿಲ್ದೆ ಎಲ್ಲೆಲ್ಲಿಗೆ ಹೋಗಿರ್ಲೂಬೌದು..."

"ಅಬ್ಬಾ... ನಿನ್ ಮಂಡೆ ಚಲೋ ಇದ್ದು ಕಣಣ್ಣಾ... ಸರಿಯಾಗೇ ಹೇಳ್ದೆ... ಈಗ್ ಗೊತ್ತಾತು ನೋಡು, ಓ ಅಲ್ಲಿ ಕೈ ಮೇಲೆ ಮಾಡಿ ಜೋಡ್ಸೋಕೆ ಶುರು ಮಾಡಿರೋದು... ಪಕ್ಕದ ಕ್ಷೇತ್ರದ ಸಾಸಕ ಕಣಯ್ಯಾ. ಅವ್ನಿಗೆ ಯಾವ ಕ್ಷೇತ್ರದಿಂದ ಆರ್ಸಿ ಹೋಗಿದ್ದೂಂತಾನೇ ಮರ್ತು ಹೋಗ್ಬಿಟ್ಟಿದೆ... ಅದ್ಕೇ ಇಲ್ಲಿ ಬಂದಿದ್ದು"

[ಇಲ್ಲಿಗೆ ನಮ್ಮ ನೇರ ಪ್ರಸಾರದ ಸಂಪರ್ಕ ಕಡಿದುಹೋಯಿತು. ಅಡಚಣೆಗಾಗಿ ವಿಷಾದಿಸುತ್ತಿದ್ದೇವೆ.- ಸಂ]

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಆ ಪ್ರಾಣಿ ಬಗ್ಗೆ ಬರ್ದ್ಯೇನ್ಲಾ ರಂಅಣ್ಣ - ಊಊಹ್!! ಇನ್ಯಾನೋ ಬರೀತಿ ಅಂತಿದ್ದೆ. ಓಗ್ಲಿ ಬುಡಣ್ಣ ನಂಗೂ ಒನ್ ಚಾನ್ಸ್ ಕೊಟ್ಟಿಯಲ್ಲ - ಸಂಜಿ ಒತ್ತೀಗೆ ನಿಂಗೆ ಬೇಟು ಚಾ ಕೊಡಿಸ್ತ್ವಿವ್ನಿ. ಅಂದಾಗೆ ಎಂಡ್ರು ಮಕ್ಳು ಎಂಗವ್ರಪ್ಪೋ! ನಾ ಕೇಳ್ದೆ ಅಂತ್ ಮಾತ್ರ ಯೋಳ್ಬೇಡಪ್ಪೋ

    ಪ್ರತ್ಯುತ್ತರಅಳಿಸಿ
  2. ಏನ್ಸಾರ್, ಲೈನ್ ಕಡಿದು ಹೋದರೆ "ನಮ್ಮ ಪ್ರತಿನಿಧಿ ಲಕ್ಷಣ ಹೋಗರ್ ಅವರಿಂದ ಹೆಚ್ಚಿನ ಮಾಹಿತಿ ಪಡೆಯೋಣ", ಲಕ್ಷಣ ಅವರೆ, ಓಟ್ಟಾರೆಯಾಗಿ ಇಂದಿನ ವಿಚಿತ್ರ ಪ್ರಾಣಿಗಳ ಆಗಮನದ ಬಗ್ಗೆ ಹೆಚ್ಚಿನ ಮಾಹಿತಿ ಏನಾದರೂ ಇದ್ಯಾ? ಅಲ್ಲದೆ ಈ ಗುಂಡಣ್ಣ, ರಂಅಣ್ಣಗಳು ಮತ್ತೆ ಸಾರಾಯಿ ಸಿಗ್ಬಹುದು ಅಂತ ಖುಷಿಯಾಗಿರ್ಬೇಕಿತ್ತಲ್ವ ಅಂತ.. ಹೇಗೆ ಕೇಳಿದ್ರೆ ನೀವು ಹೇಳಿದ್ದನ್ನೆಲ್ಲ ಮತ್ತೆ "ಲೈವ್" ಅಂತ ಬರೆದು ಹೇಳಿಸ್ಬಹುದು. ಅಲ್ಲಿಗೇ ಮುಗಿಸಿ ಬಿಟ್ರಲ್ಲ?

    ಪ್ರತ್ಯುತ್ತರಅಳಿಸಿ
  3. ಶ್ರೀನಿವಾಸ್ರೇ,

    ನಮ್ ಯಂಡ್ರು ಯಂಡ್ಕುಂಡ್ ರತ್ನನ್ ಪದಗೋಳ್ ಹಾಡೋಕ್ ಹೊಂಟಾವ್ರೆ ಬಿಡಿ. ನೀವ್ ಕೇಳಿದ್ರೂ ಕೊಡೋಂಗಿಲ್ಲದ್ ಕಾರ್ಣ ಯೋಳೋ ಪ್ರಮೇಯಾನೇ ಇಲ್ಲ...

    ಪ್ರತ್ಯುತ್ತರಅಳಿಸಿ
  4. ನಾರದರೇ,

    ನಾವು ಕೂಡ ಅಲ್ಲಿಗ್ ಹೋಗಿದ್ದು ಲೈವ್ ಕೋಡೋಕೇ... ಆದ್ರೆ ಅವ್ರು ನಮಗೆಲ್ಲಾ ಸಾರಾಯಿ ಕುಡ್ಸಿ "burnt" alive ಮಾಡ್ಬಿಟ್ರು... ಹಾಗಾಗಿ ಲೈನ್ ಕಟ್ಟಾಯ್ತು...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D